ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸತ್ಯವನ್ನೇ' ಹೇಳಿದ್ದಾರೆ ರಾಮಾ ರಾಮಾ ರೇ ಸತ್ಯ ಪ್ರಕಾಶ್

Last Updated 1 ಮೇ 2020, 3:29 IST
ಅಕ್ಷರ ಗಾತ್ರ

‘ರಾಮಾ ರಾಮಾ ರೇ...’ ಮತ್ತು‘ಒಂದಲ್ಲಾ ಎರಡಲ್ಲಾ...’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ನಿರ್ದೇಶಕ ಡಿ. ಸತ್ಯಪ್ರಕಾಶ್ ಲಾಕ್‌ಡೌನ್ ಸಮಯದಲ್ಲಿ ಸತ್ಯವನ್ನು ಹೇಳುವ ಮನಸು ಮಾಡಿದ್ದಾರೆ. ಅವರು ಇಷ್ಟು ದಿನ ಸುಳ್ಳು ಹೇಳಿದ್ದಾರೆ ಎಂದಲ್ಲ. ‘ಸತ್ಯವನ್ನೆ ಹೇಳುತ್ತೇನೆ’ ಎಂಬುದು ಅವರ ಹೊಸ ಕಿರುಚಿತ್ರ.

ಧರ್ಮಣ್ಣ ಕಡೂರು ಇಲ್ಲಿನ ಏಕೈಕ ಪಾತ್ರಧಾರಿ. ಒಂದು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಅವರಿಗೆ ಮನೆಯ ಮೂಲೆ ಮೂಲೆಯೂ ಚಿರಪರಿಚಿತವಾಗಿದೆ. ಮನೆಯಲ್ಲೇ ಇದ್ದು ಬೇಸರಗೊಂಡ ಅವರಿಗೆ ಈಗ ಭ್ರಮೆ ಶುರುವಾಗಿದೆ. ಹಾಗೆ ನೋಡಿದರೆ ಮಾತನಾಡದೇ ಇರುವ ಇನ್ನೂ ಕೆಲವು ಪಾತ್ರಗಳು ಇವೆ.

ಸದ್ದು ಮಾಡುತ್ತ ಬಿಟ್ಟು ಬಿಟ್ಟು ನೀರು ಬರುವ ನಲ್ಲಿ, ಪಿಕ್ ಪಿಕ್ ಎನ್ನುವ ವಿದ್ಯುದ್ದೀಪ, ಅಲ್ಲಾಡುತ್ತಲೇ ಹಾರಿ ಸೀಟಿ ಹೊಡೆಯುವ ಕುಕ್ಕರ್‌ನ ವಿಷಲ್ ಎಲ್ಲವೂ ಈಗ ಕೆಮ್ಮುತ್ತಿವೆ ಎಂಬಂತೇ ಭಾಸವಾಗುತ್ತಿವೆ. ಏನೆಲ್ಲ ಮಾಡಿದ್ದೇನೆ ಎನ್ನುವ ಮನುಷ್ಯನನ್ನು ಕಣ್ಣಿಗೆ ಕಾಣದ ವೈರಸ್‌ ಒಂದು ಮನೆಯಲ್ಲೇ ಅವಿತು ಕುಳಿತುಕೊಳ್ಳುವಂತೆ ಮಾಡಿದೆ. ಈಗ ಇವೆಲ್ಲವೂ ಅವನನ್ನು ಅಣಕಿಸುವಂತಿವೆ.

ಮೊಬೈಲ್ ಕ್ಯಾಮೆರಾದಲ್ಲೇ ಚಿತ್ರೀಕರಣ

ಸತ್ಯಪ್ರಕಾಶ್ ಒಂದು ತಿಂಗಳಿಂದ ಕಡೂರಿನ ತಮ್ಮ ಮನೆಯಲ್ಲೇ ಲಾಕ್ ಆಗಿದ್ದಾರೆ. ಸದ್ಯಕ್ಕೆ ಲಾಕ್‌ಡೌನ್ ಅವರ ಜೀವನವನ್ನು ತೀರಾ ಬದಲಾವಣೆ ಮಾಡಿಲ್ಲ. ‘ಬೆಂಗಳೂರಿನಲ್ಲಿ ಇದ್ದಿದ್ದರೆ ಕಚೇರಿಯಲ್ಲಿ ಕೂತು ಸ್ನೇಹಿತರೊಂದಿಗೆ ಚರ್ಚಿಸುವುದು, ಚಿತ್ರಕಥೆ ತಿದ್ದುವುದು ಮಾಡುತ್ತಿದ್ದೆ. ಅಲ್ಲಿ ಕಚೇರಿಯಲ್ಲಿ ಲಾಕ್ ಆಗಿರುತ್ತಿದ್ದೆ. ಇಲ್ಲಿ ನಮ್ಮ ಮನೆಯಲ್ಲಿ ಲಾಕ್ ಆಗಿದ್ದೇನೆ’ ಎನ್ನುತ್ತಾರೆ ಅವರು.

‘ಕೊರೊನಾ ಎಂಬುದು ಎಲ್ಲರಿಗೂ ಹಿಂಸೆ ಆಗಿಬಿಟ್ಟಿದೆ. ಇದೇ ವಿಷಯವನ್ನಿಟ್ಟುಕೊಂಡು ಹಾಸ್ಯ ಸನ್ನಿವೇಶದ ಸ್ಕ್ರಿಪ್ಟ್ ಮಾಡಿದೆ. ನಮ್ಮ ಮನೆ ಪಕ್ಕದಲ್ಲೇ ಧರ್ಮಣ್ಣನ ಮನೆ. ಅವನನ್ನು ಇಟ್ಟುಕೊಂಡು ಚಿತ್ರೀಕರಿಸಿದೆ’ ಎಂದು ಅವರು ಕಿರುಚಿತ್ರ ಆದ ಬಗೆಯನ್ನು ವಿವರಿಸುತ್ತಾರೆ.

ವಿಶೇಷ ಎಂದರೆ ಈ ಕಿರುಚಿತ್ರವನ್ನು ಸತ್ಯ ಅವರ ಮೊಬೈಲ್‌ನಲ್ಲೇ ಚಿತ್ರೀಕರಿಸಲಾಗಿದೆ. ನಂತರ ಅದನ್ನು ಬೆಂಗಳೂರಿನಲ್ಲಿರುವ ಬಿ.ಎಸ್. ಕೆಂಪರಾಜು ಅವರು ಸಂಕಲನ ಮಾಡಿದ್ದಾರೆ. ಅದಕ್ಕೆ ವಾಸುಕಿ ವೈಭವ್ ಅವರು ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT