ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾದಾ ಜನ್ಮದಿನ: ಅಭಿಮಾನ್‌ ಸ್ಟುಡಿಯೊದಲ್ಲಿ ‘ಯಜಮಾನೋತ್ಸವ’; ರಾರಾಜಿಸಿದ ಕಟೌಟ್‌ಗಳು

ಫಾಲೋ ಮಾಡಿ
Comments

ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ, ಸಾಹಸಸಿಂಹ ದಿವಂಗತ ವಿಷ್ಣುವರ್ಧನ್‌ ಅವರ 72ನೇ ಜನ್ಮದಿನಾಚರಣೆ. ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅಭಿಮಾನಿಗಳು ಅದ್ಧೂರಿಯಿಂದ ಆಚರಿಸಿದ್ದಾರೆ.

ವಿಷ್ಣುವರ್ಧನ್‌ ಅವರ ಸಮಾಧಿಯಿರುವ ಬೆಂಗಳೂರಿನ ಅಭಿಮಾನ್‌ ಸ್ಟುಡಿಯೊ ಹೊರಭಾಗದಲ್ಲಿ ಸಾಲುಸಾಲು ಕಟೌಟ್‌ಗಳನ್ನು ನಿಲ್ಲಿಸುವ ಮೂಲಕ ವಿಜ್ರಂಭಣೆಯಿಂದ ವಿಷ್ಣುವರ್ಧನ್‌ ಅವರ ಜನ್ಮದಿನವನ್ನು ಆಚರಿಸಿದೆ.

ಯಜಮಾನೋತ್ಸವಕ್ಕೆ ಕಳೆದೊಂದು ವಾರದಿಂದಲೇ ಸಿದ್ಧತೆ ಆರಂಭಿಸಿದ್ದ ಅಭಿಮಾನಿಗಳು, ವಿಷ್ಣುವರ್ಧನ್‌ ಅವರ ಪ್ರಮುಖ ಸಿನಿಮಾಗಳಲ್ಲಿನ ಅವರ ಲುಕ್‌ ಇರುವ ಸುಮಾರು 38–40 ಅಡಿ ಎತ್ತರದ ಕಟೌಟ್‌ಗಳನ್ನು ರಸ್ತೆಯ ಪಕ್ಕದಲ್ಲೇ ನಿಲ್ಲಿಸಿದ್ದಾರೆ. ಸ್ಟುಡಿಯೊಗೆ ಬೆಳಿಗ್ಗೆಯಿಂದಲೇ ಭೇಟಿ ನೀಡಲು ಆರಂಭಿಸಿದ ಸಾವಿರಾರು ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಸಂಭ್ರಮವನ್ನು ಆಚರಿಸಿದ್ದಾರೆ. ಸುದೀಪ್‌, ಉಪೇಂದ್ರ, ಧ್ರುವ ಸರ್ಜಾ ಸೇರಿದಂತೆ ಚಿತ್ರರಂಗದ ಕಲಾವಿದರೂ ನೆಚ್ಚಿನ ನಟನನ್ನು ನೆನೆದಿದ್ದಾರೆ.

ಪುಟ್ಟಣ್ಣ ಕಣಗಾಲ್‌ ಅವರು ನಿರ್ದೇಶಿಸಿದ ‘ನಾಗರಹಾವು’ ಸಿನಿಮಾ ಮೂಲಕ ನಾಯಕ ನಟನಾಗಿ ವಿಷ್ಣುವರ್ಧನ್‌ ಅವರು ಬೆಳ್ಳಿತೆರೆ ಪ್ರವೇಶಿಸಿದ್ದರು. 2022 ಡಿ.29ಕ್ಕೆ ‘ನಾಗರಹಾವು’ ಬಿಡುಗಡೆಯಾಗಿ 50 ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ಹಾಗೂ ಹಲವು ಸಂಘ ಸಂಸ್ಥೆಗಳು ಪುಣ್ಯಭೂಮಿಯಲ್ಲಿ ವಿಷ್ಣುವರ್ಧನ್‌ ಅವರ ಪ್ರಮುಖ ಸಿನಿಮಾಗಳ 52 ಕಟೌಟ್ ನಿಲ್ಲಿಸಿ ದಾಖಲೆ ಬರೆದಿದೆ. ಇಲ್ಲಿವರೆಗೆ ಭಾರತೀಯ ಚಿತ್ರರಂಗದಲ್ಲಿ ಏಕಸ್ಥಳದಲ್ಲಿ ಯಾವುದೇ ಸ್ಟಾರ್‌ಗೆ ಈ ರೀತಿ ಇಷ್ಟು ಸಂಖ್ಯೆಯಲ್ಲಿ ಕಟೌಟ್ ನಿಲ್ಲಿಸಿಲ್ಲ ಎಂದು ವಿಷ್ಣು ಸೇನಾ ಸಮಿತಿ ತಿಳಿಸಿದೆ.

ಸುಮಾರು 220ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ವಿಷ್ಣುವರ್ಧನ್‌ ಅವರು ಕನ್ನಡದ ಮೊದಲ ಪಂಚಭಾಷಾ ನಟ. ಅವರು ನಟಿಸಿದ ಕೊನೆಯ ಚಿತ್ರ ‘ಆಪ್ತರಕ್ಷಕ’. ‘ನಾಗರಹಾವು’, ‘ಹೊಂಬಿಸಿಲು’, ‘ಬಂಧನ’, ‘ಲಯನ್ ಜಗಪತಿರಾವ್’, ‘ಲಾಲಿ’, ‘ವೀರಪ್ಪನಾಯ್ಕ’ ಹಾಗೂ ‘ಆಪ್ತರಕ್ಷಕ’ ಸಿನಿಮಾಗಳಲ್ಲಿನ ಅಭಿನಯಕ್ಕಾಗಿ ವಿಷ್ಣುವರ್ಧನ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT