ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎನ್‌ಎ: ಸಂಬಂಧಗಳ ಕಥಾನಕ

Last Updated 3 ಸೆಪ್ಟೆಂಬರ್ 2020, 8:27 IST
ಅಕ್ಷರ ಗಾತ್ರ

ಪ್ರಸಕ್ತ ದಿನಮಾನಗಳಲ್ಲಿ ಜಾತಿ ಮತ್ತು ಧರ್ಮಗಳ ಹೆಸರಿನಡಿ ಮನುಷ್ಯರ ನಡುವಿನ ಗೋಡೆಗಳು ಭದ್ರಗೊಳ್ಳುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಿಜವಾದ ಸಂಬಂಧ ಯಾವುದು, ರಕ್ತ ಸಂಬಂಧವೆ ಅಥವಾ ಭಾವನಾತ್ಮಕ ಸಂಬಂಧವೆ ಎಂಬುದು ‘ಡಿಎನ್‌ಎ’ ಚಿತ್ರದ ಕಥಾಹಂದರ. ಸಾಹಿತಿ ದೇವನೂರ ಮಹಾದೇವ ಅವರ ‘ಸಂಬಂಜ ಅನ್ನೋದು ದೊಡ್ಡದು ಕನಾ...’ ಎಂಬ ಟ್ಯಾಗ್‌ಲೈನ್ ಈ ಚಿತ್ರಕ್ಕಿದೆ.

ಮಾತೃಶ್ರೀ ಎಂಟರ್‌ಪ್ರೈಸಸ್ ಬ್ಯಾನರ್‌ನಡಿ ಮೈಲಾರಿ ಎಂ. ನಿರ್ಮಿಸಿರುವ ಈ ಸಿನಿಮಾಕ್ಕೆ ಪ್ರಕಾಶರಾಜ್ ಮೇಹು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕಥೆ, ಚಿತ್ರಕಥೆಯ ನೊಗವನ್ನು ಅವರೇ ಹೊತ್ತಿದ್ದಾರೆ. ಪ್ರಕಾಶರಾಜ್ ರಂಗಭೂಮಿಯ ಹಿನ್ನೆಲೆಯವರು. ಟಿ.ಎಸ್. ನಾಗಾಭರಣ, ಗಿರೀಶ ಕಾಸರವಳ್ಳಿ, ಸಿಂಗೀತಂ ಶ್ರೀನಿವಾಸರಾವ್, ಯೋಗರಾಜ್ ಭಟ್ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರ ಬೆನ್ನಿಗಿದೆ. ವಜ್ರೇಶ್ವರಿ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಸಹ ನಿರ್ದೇಶಕರಾಗಿ ದುಡಿದಿದ್ದಾರೆ. ‘ಡಿಎನ್ಎ’ ಅವರ ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ.

ಈ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ‘ಯು’ ಪ್ರಮಾಣ ಪತ್ರ ನೀಡಿದೆ.ನಟ ಪುನೀತ್ ರಾಜಕುಮಾರ್ ಅವರ ‘ರಾಜಕುಮಾರ’ ಸಿನಿಮಾದ ಬಳಿಕ ಆ ಬ್ಯಾನರ್‌ನಲ್ಲಿ ಬಂದಿರುವ ಕುತೂಹಲಭರಿತ ಭಾವನಾತ್ಮಕ ಚಿತ್ರ ಇದಾಗಿದೆ ಎಂದು ಮಂಡಳಿಯು ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

ಅಚ್ಯುತಕುಮಾರ್ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಯೂ ಟರ್ನ್‌’ ಖ್ಯಾತಿಯ ರೋಜರ್ ನಾರಾಯಣ್, ಎಸ್ತರ್ ನರೋನ, ಯಮುನಾ, ಮಾಸ್ಟರ್‌ ಕೃಷ್ಣ ಚೈತನ್ಯ, ಮಾಸ್ಟರ್‌ ಧೃವ ಮೇಹು, ಅನಿತಾ ಭಟ್, ನಿಹಾರಿಕಾ, ನೀನಾಸಂ ಶ್ವೇತಾ, ಶೋಭಾ ಮೈಸೂರು ತಾರಾಗಣದಲ್ಲಿದ್ದಾರೆ.

ಜಯಂತ ಕಾಯ್ಕಿಣಿ, ಯೋಗರಾಜ್ ಭಟ್, ಡಾ.ಕೆ.ವೈ. ನಾರಾಯಣಸ್ವಾಮಿ, ಪ್ರಕಾಶರಾಜ್ ಮೇಹು ಅವರ ಸಾಹಿತ್ಯವಿದೆ. ಎಸ್. ಮಂಜುನಾಥ್ ಸಂಭಾಷಣೆ ಬರೆದಿದ್ದಾರೆ. ಸಂಕಲನ ನಿರ್ವಹಣೆ ಶಿವರಾಜ್ ಮೇಹು ಅವರದ್ದು. ರವಿಕುಮಾರ್ ಸಾನಾ ಅವರ ಛಾಯಾಗ್ರಹಣವಿದೆ. ಕೃಷ್ಣ ಚೈತನ್ಯ ಸಂಗೀತ ಸಂಯೋಜಿಸಿದ್ದಾರೆ.

ಕೋವಿಡ್‌ –19 ಪರಿಣಾಮ ರಾಜ್ಯದಲ್ಲಿ ಚಿತ್ರಮಂದಿರಗಳ ಪ್ರದರ್ಶನಕ್ಕೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ ಬಳಿಕ ಥಿಯೇಟರ್‌ನಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT