ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ 2019| ಕನ್ನಡ ಸಿನಿಮಾ: ದೊಡ್ಡಿ ಬಾಗಿಲಲ್ಲಿ ಕಂಡ ಅಡ್ಡಾದಿಡ್ಡಿ ಚಿತ್ರಗಳು

ಮರೆಯುವ ಮುನ್ನ ‘ಕನ್ನಡ ಸಿನಿಮಾ 2019’
Last Updated 1 ಜನವರಿ 2020, 4:58 IST
ಅಕ್ಷರ ಗಾತ್ರ

ಐವತ್ತು ಚಿತ್ರಗಳ ಕಡಿತದೊಂದಿಗೆ ಸ್ಲಿಮ್‌ ಆಗಿರುವ ಸ್ಯಾಂಡಲ್‌ವುಡ್‌, ಗುಣಮಟ್ಟದಲ್ಲಾದರೂ ಬ್ರೈಟ್‌ ಆಗಿದೆಯಾ ಎಂದು ನೋಡಿದರೆ ಮತ್ತೆ ಅದೇ ರಾಗ, ಅದೇ ಹಾಡು!

‘ಆಡುವ ಗೊಂಬೆ’ 2019ರ ಮೊದಲ ವಾರದಲ್ಲಿ ಬಿಡುಗಡೆಯಾದ ಚಿತ್ರಗಳಲ್ಲೊಂದು. ‘ದೊರೈ–ಭಗವಾನ್‌’ ಖ್ಯಾತಿಯ ಭಗವಾನ್‌ ಈ ಚಿತ್ರದ ನಿರ್ದೇಶಕರು. ಇದೇ ನಿರ್ದೇಶಕರ ‘ಕಸ್ತೂರಿ ನಿವಾಸ’ ಚಿತ್ರದಲ್ಲಿ ‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ’ ಎನ್ನುವ ವಿಷಾದಗೀತೆಯೊಂದಿದೆ. ಆ ವಿಷಾದ 2019ರ ಕನ್ನಡ ಚಿತ್ರಗಳ ಬೆಳೆಯನ್ನು ನೋಡಿದಾಗಲೂ ಉಂಟಾಗುತ್ತದೆ. ಗೊಂಬೆ ಗೆಲ್ಲಲಿಲ್ಲ; ನಂತರದ ಆಟದಲ್ಲೂ ಹುಮ್ಮಸ್ಸಿರಲಿಲ್ಲ.

2018ರಲ್ಲಿ ಸುಮಾರು 225 ಚಿತ್ರಗಳು ತೆರೆಕಾಣುವ ಮೂಲಕ ‘ಕನ್ನಡ ಸಿನಿಮಾ ಕಾರ್ಖಾನೆ’ ದೇಶದ ಗಮನಸೆಳೆದಿತ್ತು. ಈ ವರ್ಷ ಸರಕಿನ ಪ್ರಮಾಣ ಕುಸಿದಿದೆ; ತೆರೆಕಂಡ ಚಿತ್ರಗಳ ಸಂಖ್ಯೆ 175ರ ಆಸುಪಾಸಿನಲ್ಲಿದೆ. ಐವತ್ತು ಚಿತ್ರಗಳ ಕಡಿತದೊಂದಿಗೆ ಸ್ಲಿಮ್‌ ಆಗಿರುವ ಸ್ಯಾಂಡಲ್‌ವುಡ್‌, ಗುಣಮಟ್ಟದಲ್ಲಾದರೂ ಬ್ರೈಟ್‌ ಆಗಿದೆಯಾ ಎಂದು ನೋಡಿದರೆ ಮತ್ತೆ ಅದೇ ರಾಗ, ಅದೇ ಹಾಡು!

ಭರವಸೆಗೆ ಬರ

ಕಳೆದೊಂದು ದಶಕದಿಂದ ಬೀಜರೂಪದಲ್ಲೇ ಇರುವ ‘ಹೊಸ ಅಲೆ’ಯ ನಿರೀಕ್ಷೆ 2019ರಲ್ಲಿ ಮುಕ್ಕಾಗಿದೆ. ಹೊಸ ಅಲೆಯ ಭಾಗವಾಗಿದ್ದ ಜಯತೀರ್ಥರ ‘ಬೆಲ್‌ ಬಾಟಂ’ ಹಾಗೂ ಹೇಮಂತ ರಾವ್‌ ನಿರ್ದೇಶನದ ಎರಡನೇ ಸಿನಿಮಾ ‘ಕವಲುದಾರಿ’ ಹೊರತುಪಡಿಸಿದರೆ ಇಡೀ ವರ್ಷ ಕಣ್ಣರಳಿಸಿ ನೋಡಬಹುದಾದ ಮತ್ತೊಂದು ಸಿನಿಮಾ ಕಾಣುವುದಿಲ್ಲ.

‘ಬೆಲ್‌ ಬಾಟಂ’ ಚಿತ್ರದ ಗೆಲುವನ್ನು ಕನ್ನಡ ಚಿತ್ರ ನಿರ್ಮಾತೃಗಳು ಪಠ್ಯದ ರೀತಿ ಗಮನಿಸಬೇಕಾಗಿದೆ. ಸ್ಟಾರ್‌ಗಳ ಹಂಗಿಲ್ಲದ, ಅದ್ದೂರಿತನ ಮೋಜಿಗೆ ಬೀಳದ, ಮುಖ್ಯವಾಗಿ ಕಥೆ ಹಾಗೂ ನಿರ್ದೇಶಕನ ಶಕ್ತಿಯನ್ನು ನೆಚ್ಚಿಕೊಂಡ ಸಿನಿಮಾ ‘ಬೆಲ್‌ ಬಾಟಂ’. ಹೃದ್ಯ ಕಥೆಯೊಂದನ್ನು ನವಿರಾಗಿ ನಿರೂಪಿಸಿ ಗೆದ್ದ ಈ ಸಿನಿಮಾ, ಚಿತ್ರೋದ್ಯಮಕ್ಕೆ ಬೇಕಾದ ಚಿಕ್ಕ–ಚೊಕ್ಕ ಮಾದರಿಯನ್ನು ಸೂಚಿಸುವಂತಿದೆ. ಇದರ ಜೊತೆಗೆ, ‘ಬೆಲ್‌ ಬಾಟಂ’ನಲ್ಲಿ ಅಂತರ್ಜಲದಂತೆ ಪ್ರವಹಿಸುವ ಕನ್ನಡತನವಿದೆ. ‘ಸಿದ್ಧಯ್ಯಾ ಸ್ವಾಮಿ ಬನ್ನಿ...’ ಎನ್ನುವ ನೀಲಗಾರರ ಪದವನ್ನು ಚಿತ್ರದ ಧ್ವನಿಯ ರೂಪದಲ್ಲಿ ಬಳಸಿಕೊಂಡಿರುವ ನಿರ್ದೇಶಕರ ಜಾಣ್ಮೆ, ಚಿತ್ರವೊಂದು ತಾನು ರೂಪುಗೊಳ್ಳುವ ಮಣ್ಣಿನ ಗುಣವನ್ನು ಯಾವುದೋ ರೂಪದಲ್ಲಿ ಹೊಂದುವ ಹಂಬಲಕ್ಕೆ ಉದಾಹರಣೆಯಂತಿದೆ. ಇಂಥ ಹಂಬಲ ಹೊಸ ತಲೆಮಾರಿನ ಬಹುತೇಕ ನಿರ್ದೇಶಕರ ಸಿನಿಮಾಗಳಲ್ಲಿ ಕಾಣಿಸುವುದೇ ಇಲ್ಲ.

ದರ್ಶನ್ ನಂ.1

2019ರಲ್ಲಿ ಹೆಚ್ಚು ಸುದ್ದಿ ಮಾಡಿದ ಸಿನಿಮಾ ‘ಕುರುಕ್ಷೇತ್ರ’. ತೆಲುಗಿನ ‘ಬಾಹುಬಲಿ’ಯ ನಂತರ, ಅದಕ್ಕೆ ಹೆಗೆಲೆಣೆಯಾಗಿ ನಿಲ್ಲುವ ಸಿನಿಮಾ ಎನ್ನುವ ಪ್ರಚಾರದ ಪ್ರಭಾವಳಿ ‘ಕುರುಕ್ಷೇತ್ರ’ದ ಬೆನ್ನಿಗಿತ್ತು. ಬಹುಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾ ನಿರ್ಮಾಪಕರಿಗೆ ಬಂಡವಾಳವನ್ನು ಮರಳಿಸಿತು. ಆದರೆ, ಗುಣಮಟ್ಟದ ಮಸೂರದಲ್ಲಿ ನೋಡಿದರೆ, ‘ಕುರುಕ್ಷೇತ್ರ’ ಒಂದು ಪೇಲವ ಪೌರಾಣಿಕ ಸಿನಿಮಾ. ‘ಕುರುಕ್ಷೇತ್ರ’ದೊಂದಿಗೆ ‘ಮುನಿರತ್ನ’ ಎನ್ನುವ ಹೆಸರು ತಳಕು ಹಾಕಿಕೊಂಡು, ಶೀರ್ಷಿಕೆಯಲ್ಲಾದ ಆಭಾಸವೇ ಕಥೆಯಲ್ಲೂ ಚಿತ್ರಕಥೆಯಲ್ಲೂ ತಾರಾಗಣದಲ್ಲೂ ಇತ್ತು. ಚಿತ್ರದಲ್ಲಿನ ಸಮಾಧಾನಕರ ಅಂಶ ದರ್ಶನ್‌.

ಜನಪ್ರಿಯ ಸಿನಿಮಾ ವ್ಯಾಕರಣದ ದೃಷ್ಟಿಯಿಂದ ನೋಡುವುದಾದರೆ, ‘ಕುರುಕ್ಷೇತ್ರ’ಕ್ಕಿಂದಲೂ ‘ಯಜಮಾನ’ ಉತ್ತಮ ಚಿತ್ರ. ಒಳ್ಳೆಯ ವ್ಯಾಪಾರವನ್ನೂ ಮಾಡಿ ‘ಯಜಮಾನ’ 2019ರಲ್ಲಿ ದರ್ಶನ್‌ರ ಪ್ರಭಾವಳಿಗೆ ಹೊಳಪು ನೀಡಿತು. ಆದರೆ, ವರ್ಷದ ಕೊನೆಯಲ್ಲಿ ತೆರೆಕಂಡ ‘ಒಡೆಯ’ ಅಷ್ಟೇನೂ ಸುದ್ದಿಯಾಗಲಿಲ್ಲ ಎನ್ನುವುದನ್ನೂ ಗಮನಿಸಬೇಕು. ಸುದೀಪ್‌ರ ‘ಪೈಲ್ವಾನ್‌’ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ‘ನಟಸಾರ್ವಭೌಮ’ ನಿರ್ಮಾಪಕರ ಹೂಡಿಕೆಯನ್ನು ಮರಳಿಸಿದ ಸಿನಿಮಾಗಳು. ಯಶಸ್ಸಿನ ಹೊರತಾಗಿ ಎರಡೂ ಸಿನಿಮಾಗಳಲ್ಲಿ ಕನ್ನಡ ಚಿತ್ರೋದ್ಯಮದ ಹೆಮ್ಮೆಗೆ ಕಾರಣವಾದ ಯಾವ ಸಂಗತಿಗಳೂ ಇಲ್ಲ.

ಪೈಲ್ವಾನ್‌ ಚಿತ್ರದಲ್ಲಿ ಸುದೀ‍ಪ್‌
ಪೈಲ್ವಾನ್‌ ಚಿತ್ರದಲ್ಲಿ ಸುದೀ‍ಪ್‌

ದೊಡ್ಡಿಬಾಗಿಲು ತೆರೆಯಿತು

2018ರಲ್ಲಿ ತೆರೆಕಂಡ ‘ಕೆಜಿಎಫ್‌’ ಕನ್ನಡ ಚಿತ್ರರಂಗಕ್ಕೆ ಕೊಡಮಾಡಿದ ಪರಿಕಲ್ಪನೆ ‘ಪ್ಯಾನ್‌ ಇಂಡಿಯಾ’. ಕನ್ನಡ ಜೊತೆಗೆ ಬೇರೆ ಭಾಷೆಗಳಲ್ಲೂ ಚಿತ್ರಗಳನ್ನೂ ತೆರೆಕಾಣಿಸುವ ಮೂಲಕ ಮಾರುಕಟ್ಟೆಯನ್ನು ಹಿಗ್ಗಲಿಸಿಕೊಳ್ಳುವ ‘ಪ್ಯಾನ್‌ ಇಂಡಿಯಾ’ ಸೂತ್ರದಡಿ ‘ಕೆಜಿಎಫ್‌’ ಒಳ್ಳೆಯ ಗಳಿಕೆಯನ್ನೇ ಮಾಡಿತ್ತು. ಇದೇ ಮಂತ್ರ ಜಪಿಸಿದ ‘ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್‌’ ಸಿನಿಮಾಗಳಿಗೆ ಹೆಚ್ಚು ಗಿಟ್ಟಿದಂತಿಲ್ಲ. ಈಗ ವರ್ಷದ ಕೊನೆಯಲ್ಲಿ ‘ಶ್ರೀಮನ್ನಾರಾಯಣ’ ಚಿತ್ರದ ಮೂಲಕ ರಕ್ಷಿತ್‌ ಶೆಟ್ಟಿ ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ಸಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ. ನಾರಾಯಣ ಕೈ ಹಿಡಿಯುವನೋ ಇಲ್ಲವೋ ಒಂದೆರಡು ವಾರಗಳಲ್ಲಿ ಸ್ಪಷ್ಟವಾಗಲಿದೆ.

ಒಂದು ಕಡೆ ‘ಪ್ಯಾನ್‌ ಇಂಡಿಯಾ’ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಹಂಬಲದಲ್ಲಿರುವ ಕನ್ನಡ ಚಿತ್ರೋದ್ಯಮ, ಇನ್ನೊಂದೆಡೆ ಡಬ್ಬಿಂಗ್‌ ಚಿತ್ರಗಳಿಗೆ ದೊಡ್ಡಿಬಾಗಿಲು ತೆರೆದಿದೆ. ಕಳೆದ ವರ್ಷ ಮೂರು ಡಬ್ಬಿಂಗ್‌ ಸಿನಿಮಾಗಳು ತೆರೆಕಂಡಿದ್ದರೆ, ಈ ವರ್ಷ ಎಂಟು (ಕಿರಿಕ್‌ ಲವ್‌ ಸ್ಟೋರಿ, ಜಗಮಲ್ಲ, ಕಾಂಚನ 3, ರಂಗಸ್ಥಲ, ಡಿಯರ್‌ ಕಾಮ್ರೇಡ್‌, ಸೈರಾ ನರಸಿಂಹರೆಡ್ಡಿ, ಟರ್ಮಿನೇಟರ್‌ ಡಾರ್ಕ್‌ ಫೇಟ್‌, ದಬಾಂಗ್‌ 3) ಬಿಡುಗಡೆಯಾದವು. ಅವೆಲ್ಲವೂ ಮೂಲ ಭಾಷೆಗಳಲ್ಲಿ ದೊಡ್ಡ ಯಶಸ್ಸು ಕಂಡ ಚಿತ್ರಗಳೆನ್ನುವುದು ಗಮನಾರ್ಹ. ಕನ್ನಡದಲ್ಲಿನ ಇವುಗಳ ಸಂಪಾದನೆ ಅಷ್ಟಕ್ಕಷ್ಟೇ.

ಚಿರಂಜೀವಿ ನಟನೆಯ ‘ಸೈರಾ ನರಸಿಂಹರೆಡ್ಡಿ’ ಹಾಗೂ ಸಲ್ಮಾನ್‌ ಖಾನ್‌ ನಟನೆಯ ‘ದಬಾಂಗ್‌ 3’ ಡಬ್ಬಿಂಗ್‌ ಅವತರಣಿಕೆಗಳ ಮೂಲಕ, ನೆರೆಹೊರೆಯ ದೊಡ್ಡ ಸಿನಿಮಾಗಳು ಕನ್ನಡದಲ್ಲಿ ತೆರೆಕಾಣುವುದಿಲ್ಲ ಎನ್ನುವ ಆರೋಪ ಹುಸಿಯಾಯಿತು. ಈ ‘ಡಬ್ಬಿಂಗ್ ಕನ್ನಡ’ ಸಿನಿಮಾಗಳ ಜೊತೆಗೆ ಅವುಗಳ ಮೂಲ ಭಾಷೆಗಳ ಚಿತ್ರಗಳೂ ತೆರೆಕಂಡವು.

‘ಸೈರಾ...’, ‘ದಬಾಂಗ್‌ 3’ ಚಿತ್ರಗಳಲ್ಲಿನ ಸಾಮ್ಯತೆ – ಎರಡರಲ್ಲೂ ಕನ್ನಡದ ಸುದೀಪ್‌ ಇರುವುದು. ದೊಡ್ಡ ಬಜೆಟ್‌ನ ಡಬ್ಬಿಂಗ್‌ ಚಿತ್ರಗಳಿಗೆ ಕನ್ನಡ ಚಿತ್ರೋದ್ಯಮದ ದೊಡ್ಡಿಬಾಗಿಲು ತೆರೆದ ಇವೆರಡೂ ಚಿತ್ರಗಳಲ್ಲಿ ಸುದೀಪ್‌ ಖಳ ನಟನ ಪಾತ್ರದಲ್ಲಿ ಅಭಿನಯಿಸಿರುವುದು, ಡಬ್ಬಿಂಗ್‌ ವಿರೋಧಿಸುವವರ ಪಾಲಿಗೆ ಯಾವ ರೀತಿ ಕಾಣಬಹುದು?

ಡಬ್ಬಿಂಗ್‌ ಮೂಲಕ ಕನ್ನಡ ಚಿತ್ರರಂಗಕ್ಕೆ ಮೋಕ್ಷ ಕಾಣಿಸಲು ಹಂಬಲಿಸಿದವರ ವಾದದ ಪ್ರಮುಖ ಅಂಶ, ‘ಡಬ್ಬಿಂಗ್‌ ಮೂಲಕ ಕನ್ನಡ ಪ್ರೇಕ್ಷಕರಿಗೆ ವಿಶ್ವದ ಅತ್ಯುತ್ತಮ ಚಿತ್ರಗಳು ಲಭಿಸುತ್ತವೆ’ ಎನ್ನುವುದು. ವಿಪರ್ಯಾಸ ನೋಡಿ, ನಮ್ಮ ನೆರೆಯ ಭಾಷೆಗಳು ರೂಪಿಸಿದ ವಿಶಿಷ್ಟ ಯಶಸ್ವಿ ಚಿತ್ರಗಳಾದ ‘ಅಸುರನ್‌’, ‘ಜಲ್ಲಿಕಟ್ಟು’, ‘ಕೈದಿ’ ಕನ್ನಡಕ್ಕೆ ಬರಲಿಲ್ಲ; ಬಂದುದೆಲ್ಲ ಸೌಂಡು ಮಾಡುವ ಖಾಲಿ ಡಬ್ಬಾಗಳೇ.

ಗಮನಸೆಳೆದ ಕೆಲವು ಸಿನಿಮಾಗಳು
ಸೂಜಿದಾರ, ಅಮರ್‌, ರುಸ್ತುಂ, ಐ ಲವ್‌ ಯು, ಯಾನ, ಕೆಂಪೇಗೌಡ–2, ಗಿಮಿಕ್‌, ಗೀತಾ, ಭರಾಟೆ, ರಂಗನಾಯಕಿ, ಆಯುಷ್ಮಾನ್‌ಭವ, ಚಂಬಲ್‌, ಅಮ್ಮನ ಮನೆ, ಉದ್ಘರ್ಷ, ಪಂಚತಂತ್ರ, ಕವಚ, ಪ್ರೀಮಿಯರ್‌ ಪದ್ಮಿನಿ, ಅಳಿದು ಉಳಿದವರು, ಗಂಟು ಮೂಟೆ ಹಾಗೂ 99.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT