ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ | ‘ಹೊಯ್ಸಳ’ನ ಸಿಂಹಾವಲೋಕನ

Last Updated 23 ಮಾರ್ಚ್ 2023, 23:45 IST
ಅಕ್ಷರ ಗಾತ್ರ

ರಂಗಭೂಮಿಯಿಂದ ಡಾಲಿ ಪಿಕ್ಚರ್ಸ್‌ವರೆಗೆ ‘ಹೊಯ್ಸಳ’ನ ಸಿಂಹಾವಲೋಕನ?

ತುಂಬಾ ನೆನಪುಗಳು ಇವೆ. ಒಳ್ಳೆಯದು, ಕೆಟ್ಟದ್ದು ಎರಡೂ ಇವೆ. ಒಳ್ಳೆಯದನ್ನಷ್ಟೇ ನೆನಪಿಟ್ಟುಕೊಂಡು, ಕೆಟ್ಟದ್ದನ್ನು ಮುಂದಕ್ಕೆ ದಾಟಿಸದೇ ನಮ್ಮದೇ ಆದ ಹಾದಿಯಲ್ಲಿ ಮುಂದುವರಿಯಬೇಕು. ಎಂಜಿನಿಯರ್‌ ಆಗಿದ್ದವನು ಒಂದು ಭಂಡ ಧೈರ್ಯದ ಮೇಲೆ ಕಲಾಕ್ಷೇತ್ರದಲ್ಲಿ ಕನಸು ಕಟ್ಟಿಕೊಂಡು ಬಂದೆ. ಅದು ಕೈ ಹಿಡಿದಿದೆ. ಜನ ನನ್ನ ಪ್ರತಿಯೊಂದು ಪಾತ್ರವನ್ನೂ ಆನಂದಿಸಿದ್ದಾರೆ. ಅವರದ್ದೇ ಆದ ಹೆಸರು ಕೊಟ್ಟು ಪ್ರೀತಿಯಿಂದ ಕಂಡಿದ್ದಾರೆ. ಹೀಗೆ ಈ ಕ್ಷೇತ್ರದಿಂದ, ಜನರಿಂದ ಸಾಕಷ್ಟು ಪಡೆದಿದ್ದೇನೆ. ಅದೇ ರೀತಿ ಒಳ್ಳೆಯದನ್ನೇ ಕೊಡಬೇಕು. ಡಾಲಿ ಪಿಕ್ಚರ್ಸ್‌ ಮೂಲಕ ಹೊಸ ಬರಹಗಾರರಿಗೆ ಅವಕಾಶ ಕೊಟ್ಟಿದ್ದೇವೆ. ಈ ಕ್ಷೇತ್ರಕ್ಕೆ ಹೊಸಬರು ಬರಬೇಕು. ಹೊಸ ಪ್ರತಿಭೆಗಳು ಬರುತ್ತಿವೆ ಕೂಡ. ಸಿನಿಮಾ ಕ್ಷೇತ್ರದಲ್ಲಿ ಅದು ನಿರಂತರವಾಗಿ ಆಗಬೇಕು. ಆ ಕೆಲಸವನ್ನು ನನ್ನ ನಿರ್ಮಾಣ ಸಂಸ್ಥೆ ಮಾಡುತ್ತಿದೆ.

ನಿಮ್ಮ ಹೆಸರಿಗೆ ಅಂಟಿಕೊಂಡ ‘ಡಾಲಿ’ ಚಿತ್ರದ ಬಗ್ಗೆ?

– ಎಲ್ಲಿ ಹೋದರೂ ಜನ ನನ್ನನ್ನು ಆ ಪಾತ್ರದ ಹೆಸರಿನಲ್ಲೇ ಕರೆಯುತ್ತಾರೆ. ಬಹುಶಃ ನನ್ನ ಹೆಸರು ಬರೀ ಧನಂಜಯ ಅಂದರೆ ಗೊತ್ತಾಗಲಿಕ್ಕಿಲ್ಲ. ನಾನು ನನ್ನದೇ ಆದ ಪಾತ್ರದ ಹೆಸರನ್ನು ಛಾಪು ಮೂಡಿಸಲು ಸಾಕಷ್ಟು ಪ್ರಯತ್ನಿಸಿದೆ. ಸಾಧ್ಯವಾಗಲೇ ಇಲ್ಲ. ಆದರೆ, ‘ಡಾಲಿ’ಯನ್ನು ಜನರೇ ತಮ್ಮ ಮಾತುಗಳಲ್ಲಿಟ್ಟುಕೊಂಡರು. ಮನಸ್ಸಿನಲ್ಲಿ ಜಾಗ ಕೊಟ್ಟರು. ಇದಕ್ಕಿಂತ ಖುಷಿ ಇನ್ನೇನಿದೆ ಹೇಳಿ. ಅದೆಷ್ಟೋ ಖ್ಯಾತನಾಮ ನಟರಿಗೆ ಅವರ ಪಾತ್ರದ ಮೂಲಕ ಗೌರವ ಸಿಕ್ಕಿದೆ. ಅದೇ ಗೌರವ ನನಗೂ ಸಿಕ್ಕಿದೆ ಎಂಬ ಸಂತೋಷವಿದೆ.

ಬಹುತೇಕ ಸಿನಿಮಾಗಳಲ್ಲಿ ತೀರಾ ಶ್ರೀಸಾಮಾನ್ಯನನ್ನೇ ಕೇಂದ್ರೀಕರಿಸಿದ ಪಾತ್ರ ಮಾಡಿದ್ದೀರಿ.

– ಹೌದು, ನಾನೂ ಮಧ್ಯಮ ವರ್ಗದಿಂದ ಬಂದವನೇ. ಸಮಾಜದಲ್ಲಿ ಅವರೇ ಹೆಚ್ಚು ಇರುವುದೂ ಹೌದು. ಅಂಥ ಕಥೆಗಳನ್ನು ಕೇಳಿದಾಗ ನನಗೆ ಇಷ್ಟವಾಗುತ್ತದೆ. ಹಾಗಾಗಿ ಪಾತ್ರಗಳು ಸಹಜವಾಗಿ ಹೆಚ್ಚು ಹತ್ತಿರವಾಗುತ್ತವೆ. ಬಡವ ರ‍್ಯಾಸ್ಕಲ್‌, ರತ್ನನ್‌ ಪ್ರಪಂಚ, ಮಾನ್ಸೂನ್‌ ರಾಗ ಇವೆಲ್ಲವುಗಳಲ್ಲಿ ‘ಕಾಮನ್‌ ಮ್ಯಾನ್‌’ ಆಗಿ ಕಾಣಿಸಿಕೊಂಡಿದ್ದೇನೆ. ಜೀವನ ಮೌಲ್ಯಗಳನ್ನು ಹೇಳಿದ್ದೇನೆ. ನಾವು ಸಹಜವಾಗಿದ್ದಷ್ಟೂ ಜನರಿಗೆ ಹತ್ತಿರವಾಗುತ್ತೇವೆ. ನನ್ನ ವ್ಯಕ್ತಿತ್ವವೂ ಹಾಗೆಯೇ. ನಮ್ಮ ಚಿತ್ರಗಳನ್ನೂ ಹೆಚ್ಚು ಆಡಂಬರವಿಲ್ಲದೇ ಸಹಜವಾಗಿ ಪ್ರಚಾರ ಮಾಡಿದ್ದೇವೆ. ಶ್ರೀಸಾಮಾನ್ಯನ ಸಹಜ ಕಥೆಗಳನ್ನು ತೋರಿಸಬೇಕಲ್ವಾ?

ನಾಯಕ ಅಥವಾ ಖಳ ಯಾವ ಪಾತ್ರಕ್ಕೂ ಒಗ್ಗಿಕೊಳ್ಳುತ್ತೀರಲ್ಲಾ?

– ಒಬ್ಬ ಕಲಾವಿದನಾಗಿ ಅದು ನನ್ನ ಜವಾಬ್ದಾರಿಯೂ ಹೌದು. ನಾಯಕನೇ ಆಗಬೇಕು ಇಂಥದ್ದೇ ಪಾತ್ರ ಬೇಕು ಅನ್ನುವುದಕ್ಕಿಂತಲೂ ಇಂಥ ಸಿನಿಮಾದಲ್ಲಿ ಈ ತಂಡದೊಂದಿಗೆ ನಾನು ಕೆಲಸ ಮಾಡಬೇಕು ಎಂಬ ಆಸೆ ಮತ್ತು ಉತ್ಸಾಹ ಇರುತ್ತದೆ. ಸಹಜ ಆರಂಭದ ದಿನಗಳಲ್ಲಿ ನಾನಿನ್ನೂ ಪೋಷಕ ನಟನಾಗಿಯೇ ಇರಬೇಕಾ? ನೆಗೆಟಿವ್‌ ಪಾತ್ರಗಳನ್ನೇ ಮಾಡಬೇಕಾ ಎಂಬ ಸಣ್ಣ ಅಳುಕು ಇದ್ದದ್ದು ನಿಜ. ಆದರೆ, ಜನ ನನ್ನ ನೆಗೆಟಿವ್‌ ಪಾತ್ರಗಳನ್ನೂ ಅಷ್ಟೇ ಖುಷಿಯಿಂದ ಸ್ವೀಕರಿಸಿದರು. ಹಾಗಾಗಿ ಆ ಪಾತ್ರ ಈ ಪಾತ್ರ ಎಂದೇನಿಲ್ಲ. ಗಟ್ಟಿಯಾದ, ಒಳ್ಳೆಯ ಪಾತ್ರ ಒಬ್ಬ ಕಲಾವಿದನಿಗೆ ಸಿಗಬೇಕು. ಅದೇ ಖುಷಿ.

ಡಾಲಿಯೊಳಗಿನ ಕವಿ, ಕಥೆಗಾರನ ಬಗ್ಗೆ?

– ಬರಹ ಮೊದಲಿನಿಂದಲೂ ನನಗೆ ತುಂಬಾ ಇಷ್ಟ. ಇತ್ತೀಚೆಗೆ ಮೈಸೂರು ಆರ್ಕೆಸ್ಟ್ರಾ ಚಿತ್ರಕ್ಕೂ ಹಾಡುಗಳನ್ನು ಬರೆದೆ. ಕಾಲೇಜು ದಿನಗಳಿಂದಲೂ ಬರೆಯುತ್ತಿದ್ದೆ. ಅದನ್ನು ಇಷ್ಟಪಡುವ ಸ್ನೇಹಿತರು ತುಂಬಾ ಇದ್ದರು. ಈಗ ಸಿನಿಮಾ ಸಂಬಂಧಿಸಿದ ಒತ್ತಡಗಳ ಕಾರಣದಿಂದ ಸ್ವಲ್ಪ ಕಡಿಮೆ ಆಗಿದೆ. ಆಗೊಮ್ಮೆ ಈಗೊಮ್ಮೆ ಬರೆಯುತ್ತಿರುತ್ತೇನೆ.

ಹೆಡ್‌– ಬುಷ್‌ ಭಾಗ 2 ಯಾವಾಗ ಬರುತ್ತದೆ?

– ಸದ್ಯಕ್ಕಿಲ್ಲ. ಮುಂದೆ ಯಾವತ್ತಾದರೂ ಒಮ್ಮೆ ಮಾಡೋಣ ಎಂದು ನಾನು ಮತ್ತು ಅಗ್ನಿ ಶ್ರೀಧರ್‌ ಮಾತನಾಡಿದ್ದೇವೆ. ಈಗ ಬೇರೆ ಚಿತ್ರಗಳತ್ತ ಗಮನವಿದೆ.

ಯಾರಿವರು ಗುರುದೇವ್‌ ಹೊಯ್ಸಳ?

– ಪೊಲೀಸ್‌. ಶ್ರೀಸಾಮಾನ್ಯನ ಪರ ಇರುವ ದಕ್ಷ ಪೊಲೀಸ್‌ ಅಧಿಕಾರಿ. ನೈತಿಕ ಚೌಕಟ್ಟಿನ ಒಳಗೆ ಕೆಲಸ ಮಾಡಬೇಕು ಎಂದು ಒದ್ದಾಡುತ್ತಿರುತ್ತಾನೆ. ಆದರೆ ವ್ಯವಸ್ಥೆಯ ನಡುವೆ ಇದ್ದು ಆತ ಏಗಬೇಕು. ಪೊಲೀಸರೂ ಮನುಷ್ಯರಲ್ವಾ. ಅವರ ತೊಳಲಾಟ, ಅದರ ಮಧ್ಯೆಯೂ ಇರುವ ಸೇವಾ ಭಾವ, ಪ್ರಾಮಾಣಿಕತೆಯನ್ನು ತೋರಿಸಿದ್ದೇವೆ.

ಹೊಯ್ಸಳ ನಾವೇಕೆ ನೋಡಬೇಕು?

– ಒಳ್ಳೆಯ ಪೊಲೀಸ್‌ ಅಧಿಕಾರಿಯ ಕಥೆ. ಒಳ್ಳೆಯ ಸಂದೇಶ ಇರುವ ಸಾಮಾಜಿಕ ಕಳಕಳಿಯ ಚಿತ್ರವೂ ಹೌದು. ನಿಮ್ಮನ್ನು ಪೂರ್ತಿ ಮನರಂಜಿಸುತ್ತದೆ. ಈವರೆಗೆ ಎಷ್ಟೆಲ್ಲಾ ಪಾತ್ರಗಳನ್ನು ಆನಂದಿಸಿದ್ದೀರೋ ಅಂಥದ್ದೇ ಖುಷಿ ಹೊಯ್ಸಳ ಪಾತ್ರದ ಮೂಲಕ ನಿಮಗೆ ಸಿಗುತ್ತದೆ.

ಮುಂದಿನ ಯೋಜನೆಗಳು?

– ರಮ್ಯಾ ಪ್ರಧಾನ ಪಾತ್ರದಲ್ಲಿರುವ ಉತ್ತರಕಾಂಡ ಸ್ಕ್ರಿಪ್ಟ್‌ ಕೆಲಸ ನಡೆದಿದೆ. ಝೀಬ್ರಾ ಎಂಬ ತೆಲುಗು ಸಿನಿಮಾದಲ್ಲಿ ಸತ್ಯದೇವ್‌ ಅವರ ಜೊತೆ ನಟಿಸುತ್ತಿದ್ದೇನೆ. ಪುಷ್ಪ–2 ಶೂಟಿಂಗ್‌ ಶುರುವಾಗಿದೆ. ಜಾಲಿ ರೆಡ್ಡಿಯ (ಡಾಲಿ ಅವರ ಪಾತ್ರ) ಸರದಿ ಯಾವಾಗ ಬರುತ್ತದೋ ಗೊತ್ತಿಲ್ಲ. ಹೀಗೆ ಒಳ್ಳೆಯ ಚಿತ್ರಗಳನ್ನು ಕೊಡಬೇಕು ಎಂಬ ಕನಸಿನೊಂದಿಗೆ ಸಾಗಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT