ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲೊಂದು ‘ಡೋಮ್‌ ಥಿಯೇಟರ್‌’: ಇಂದಿನಿಂದ ಸಿನಿಮಾ ಪ್ರದರ್ಶನ ಆರಂಭ

ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಯೋಗ
Last Updated 9 ಜೂನ್ 2022, 19:30 IST
ಅಕ್ಷರ ಗಾತ್ರ

ಹಾವೇರಿ: ಮುಂಬೈ ಮೂಲದ ಚೋಟು ಮಹಾರಾಜ್‌ ಸಿನಿ ಕೆಫೆಯವರು ರಾಜ್ಯದಲ್ಲೇ ಮೊದಲ ಗುಮ್ಮಟ ಮಾದರಿ ಚಿತ್ರಮಂದಿರವನ್ನು (Dome Cinema theatre) ಹಾವೇರಿ ನಗರದಲ್ಲಿ ನಿರ್ಮಾಣ ಮಾಡಿದ್ದು, ಸಿನಿ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ.

ನಗರದ ಹಳೇ ಪಿ.ಬಿ.ರಸ್ತೆಯ ಹೊರವಲಯದಲ್ಲಿ ನಿರ್ಮಾಣವಾಗಿರುವಅರ್ಧಗೋಳಾಕಾರದಲ್ಲಿರುವ ಈ ಚಿತ್ರಮಂದಿರ ವಿನ್ಯಾಸದಿಂದ ಗಮನಸೆಳೆಯುತ್ತಿದೆ. 42 ಅಡಿ ಸುತ್ತಳತೆ ಮತ್ತು 26 ಅಡಿ ಎತ್ತರವನ್ನೊಳಗೊಂಡಿದ್ದು, 100 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ.

ಬಹುಪರದೆಯ (ಮಲ್ಪಿಪ್ಲೆಕ್ಸ್‌) ಐಷಾರಾಮಿ ಚಿತ್ರಮಂದಿರಗಳು ಸಿನಿರಸಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ವೇಳೆಯಲ್ಲಿ, ಹವಾನಿಯಂತ್ರಿತ ಮತ್ತು ಡಿಟಿಎಸ್‌ ಸೌಲಭ್ಯಗಳನ್ನೊಳಗೊಂಡ ಈ ಗುಮ್ಮಟ ಚಿತ್ರಮಂದಿರಏಕಪರದೆ (Single screen) ಒಳಗೊಂಡಿರುವುದು ವಿಶೇಷವಾಗಿದೆ.

ಮಹಾರಾಷ್ಟ್ರ, ಗುಜರಾತ್‌, ಉತ್ತರಪ್ರದೇಶ, ಪಂಜಾಬ್‌, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಈ ಮಾದರಿಯ ಸಿನಿ ರೆಸ್ಟೋರೆಂಟ್‌ಗಳು ಕಾರ್ಯಗತಗೊಂಡಿವೆ. ಬಾಗಲಕೋಟೆ, ದಾವಣಗೆರೆ ಮುಂತಾದ ಕಡೆ ಪ್ರಾಂಚೈಸಿಗಳನ್ನು ಪಡೆಯಲಾಗಿದೆ. ಮೊದಲ ಬಾರಿಗೆ ಹಾವೇರಿಯಲ್ಲೇ ಚಿತ್ರಮಂದಿರ ನಿರ್ಮಾಣ ಪೂರ್ಣಗೊಂಡಿದ್ದು, ಜೂನ್‌ 10ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.

ಮಲ್ಟಿಪ್ಲೆಕ್ಸ್‌ಗಳ ಆಕರ್ಷಣೆ:‘ಏಕಪರದೆಯ ಚಿತ್ರಮಂದಿರಗಳು ಕಾಲಕ್ಕೆ ತಕ್ಕ ಹಾಗೆ ತಮ್ಮ ಗುಣಮಟ್ಟವನ್ನು ಸುಧಾರಿಸಿಕೊಳ್ಳಲಿಲ್ಲ. ಸೌಕರ್ಯವಂಚಿತ ಸಾಂಪ್ರದಾಯಿಕ ಚಿತ್ರಮಂದಿರಗಳತ್ತ ಬೆನ್ನು ಹಾಕಿದ ಪ್ರೇಕ್ಷಕರು ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡಿದರು. ಕಾರಣ, ಮಲ್ಟಿಪ್ಲೆಕ್ಸ್‌ಗಳು ಮತ್ತು ಮಿನಿಪ್ಲೆಕ್ಸ್‌ಗಳು ಐಷಾರಾಮಿ ಸೇವೆಯಿಂದ ಆಕರ್ಷಿಸಿದವು. ಜತೆಗೆ ಟಿಕೆಟ್‌ ದರಗಳನ್ನು ದುಬಾರಿಗೊಳಿಸಿದವು. ಕೈಗೆಟಕುವ ದರದಲ್ಲಿ ಏಕಪರದೆಯಲ್ಲೇ ಗುಣಮಟ್ಟದ ಪ್ರದರ್ಶನ ನೀಡುವುದು ನಮ್ಮ ಆದ್ಯತೆಯಾಗಿದೆ’ ಎನ್ನುತ್ತಾರೆ ಚೋಟು ಮಹಾರಾಜ್‌ ಸಂಸ್ಥೆಯ ಚೇರ್ಮನ್‌ ಸತೀಶ್‌ ಪಂಚಾರಿಯಾ.

₹35 ಲಕ್ಷ ಬಂಡವಾಳ:‘ಮಹಾರಾಷ್ಟ್ರದ ಸಂಗಮ್‌ನೇರ್‌ನಲ್ಲಿ ‘ಡೋಮ್‌ ಥಿಯೇಟರ್‌’ನಲ್ಲಿ ಸಿನಿಮಾ ವೀಕ್ಷಿಸಿ ಆಕರ್ಷಿತನಾದೆ. ನಮ್ಮ ಜಿಲ್ಲೆ ಹಾವೇರಿಯಲ್ಲೇಕೆ ಇಂಥದ್ದೊಂದು ಸಿನಿಮಾ ಮಂದಿರ ನಿರ್ಮಾಣ ಮಾಡಬಾರದು ಎಂದು ಯೋಚಿಸಿ ಕಾರ್ಯಗತಗೊಳಿಸಿದೆ. 5 ವರ್ಷಗಳ ಪ್ರಾಂಚೈಸಿ ಪಡೆದಿದ್ದು, ಅಂದಾಜು ₹35 ಲಕ್ಷ ಬಂಡವಾಳ ಹೂಡಿದ್ದೇವೆ. ಚೋಟು ಮಹಾರಾಜ್ ಸಂಸ್ಥೆಯವರೇ ಸ್ಕ್ರೀನ್‌, ಪ್ರೊಜೆಕ್ಟರ್‌, ಸೌಂಡ್‌ ಸಿಸ್ಟಮ್‌ ಎಲ್ಲವನ್ನೂ ತಂದು ಅಳವಡಿಸಿದ್ದಾರೆ’ ಎಂದು ಹಾವೇರಿಯ ಪಿಎಸ್‌ಆರ್‌ ಸಿನಿಮಾ ಸಂಸ್ಥೆಯ ಮಾಲೀಕ ಡಾ.ಪ್ರಶಾಂತ್‌ ಬಿ.ಕೆ. ತಿಳಿಸಿದರು.

ನಿತ್ಯ 4 ಪ್ರದರ್ಶನ:‘ಹಾವೇರಿ ಜನ ಪಿವಿಆರ್‌ನಲ್ಲಿ ಸಿನಿಮಾ ನೋಡಲು ದಾವಣಗೆರೆ, ಹುಬ್ಬಳ್ಳಿಗೆ ಹೋಗುತ್ತಿದ್ದರು. ಇನ್ನು ಮುಂದೆ ಹಾವೇರಿ ನಗರದಲ್ಲೇ ಕಣ್ತುಂಬಿಕೊಳ್ಳಬಹುದು.ನಿತ್ಯ 4 ಪ್ರದರ್ಶನಗಳು ನಡೆಯುತ್ತವೆ. ಟಿಕೆಟ್‌ ದರ ₹150ರಿಂದ 200 ಇರುತ್ತದೆ. ಗುಣಮಟ್ಟದ ಆಹಾರ ಪೂರೈಸುತ್ತೇವೆ. ಜೂನ್‌ 10ರಿಂದ ‘777 ಚಾರ್ಲಿ’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಬುಕ್‌ಮೈಷೋ ಮೂಲಕವೂ ಟಿಕೆಟ್‌ಗಳನ್ನು ಬುಕ್‌ ಮಾಡಿಕೊಳ್ಳಬಹುದು’ ಎನ್ನುತ್ತಾರೆ ಡಾ.ಪ್ರಶಾಂತ್‌.

***

ಬೆಂಕಿ ಮತ್ತು ಜಲ ನಿರೋಧಕವಾಗಿರುವ ಎಫ್‌ಆರ್‌ಪಿ ಸಾಮಗ್ರಿಯಿಂದ ಗುಮ್ಮಟ ಚಿತ್ರಮಂದಿರ ನಿರ್ಮಿಸಿದ್ದು, ಸಿನಿಪ್ರೇಕ್ಷಕರನ್ನು ಸೆಳೆಯುತ್ತಿದೆ.
– ಡಾ.ಪ್ರಶಾಂತ್‌ ಬಿ.ಕೆ, ಪಿಎಸ್‌ಆರ್‌ ಸಿನಿಮಾ ಸಂಸ್ಥೆ ಮಾಲೀಕ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT