ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ದುನಿಯಾ ಸೂರಿ ಹೇಳಿದ ಮಂಕಿ ಸೀನನ ಕಥೆ

Last Updated 13 ಡಿಸೆಂಬರ್ 2019, 9:10 IST
ಅಕ್ಷರ ಗಾತ್ರ

‘ಆಯಾ ಕಾಲಘಟ್ಟದಲ್ಲಿ ಕಥೆ ಹೇಳುವ ವಿಧಾನ ಬದಲಾಗುತ್ತಾ ಹೋಗುತ್ತಿದೆ. ಪ್ರೇಕ್ಷಕರು ಸಿಕ್ಕಾಪಟ್ಟೆ ಫಾಸ್ಟ್‌ ಆಗಿದ್ದಾರೆ. ಈ ನಾಡಿನಲ್ಲಿ ದೊಡ್ಡ ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಅವರಿಂದ ಎಲ್ಲಾ ರೀತಿಯ ಪ್ರಯೋಗವೂ ನಡೆದಿದೆ. ನಾವು ಕಥೆ ಹೇಳುವ ರೀತಿಯಲ್ಲಿ ಇನ್ನೊಂದಿಷ್ಟು ಸುಧಾರಿಸಿಕೊಳ್ಳಬಹುದು ಅಷ್ಟೆ’

–ಒಂದೇ ಉಸಿರಿಗೆ ಇಷ್ಟನ್ನು ಹೇಳಿ ನಕ್ಕರು ನಿರ್ದೇಶಕ ಸೂರಿ. ಬಳಿಕ ಅವರ ಮಾತು ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರದತ್ತ ಹೊರಳಿತು.

‘ಇದರಲ್ಲಿ ಹೀರೊಯಿಸಂ ಇಲ್ಲ. ಕಥೆಯ ನಿರೂಪಣಾ ಶೈಲಿ ನೋಡುಗರಿಗೆ ಇಷ್ಟವಾಗಲಿದೆ. ‘ಟಗರು’ ಚಿತ್ರ ಮತ್ತು ಇದಕ್ಕೂ ಒಂದು ನಯಾಪೈಸೆಯಷ್ಟು ಸಂಬಂಧ ಇಲ್ಲ. ನನಗೆ ಕಥೆ ಹೇಳುವ ಒಂದಿಷ್ಟು ವಿಧಾನ ಗೊತ್ತು. ಪ್ರೇಕ್ಷಕರಿಗೆ ಸೂರಿ ಹೀಗೆಯೇ ಕಥೆ ಹೇಳುತ್ತಾನೆ ಎನ್ನುವುದು ಗೊತ್ತು. ನನಗೂ ಅವರ ನಾಡಿಮಿಡಿತದ ಅರಿವಿದೆ. ನಾನು ನಿಮಗೆ ಗೊತ್ತಲ್ಲವೇ ಎನ್ನುತ್ತಾ ಅವರ ಜೊತೆಯಲ್ಲಿಯೇ ಸಾಗುವುದು ನನಗಿಷ್ಟ’ ವಿವರಿಸಿದರು.

‘ಈ ಸಿನಿಮಾದಲ್ಲಿ ತೊಡಗಿಸಿಕೊಂಡು ಒಂದು ವರ್ಷ ಉರುಳಿತು. ಜನರಿಗೆ ನಿರಂತರವಾಗಿ ಕಥೆ ಹೇಳುವುದಷ್ಟೆ ನನ್ನ ಕಾಯಕ. ನಾನು ಈ ರೀತಿಯಲ್ಲಿಯೂ ಕಥೆ ಹೇಳುತ್ತೇನೆ ಎನ್ನುವುದಕ್ಕೆ ಈ ಚಿತ್ರವೊಂದು ನಿದರ್ಶನ. ಎರಡು ಗಂಟೆಯಲ್ಲಿ ಒಂದಷ್ಟು ವಿಷಯವನ್ನು ಪ್ರೇಕ್ಷಕರಿಗೆ ಹೇಳುವ ತವಕದಲ್ಲಿದ್ದೇನೆ’ ಎಂದು ಕಥೆಯ ಬಗ್ಗೆ ಕುತೂಹಲ ಹೆಚ್ಚಿಸಿದರು.

* ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರದ ಹೈಲೈಟ್ಸ್‌ ಏನು?

ಇದೊಂದು ಅದ್ಭುತ ಕಥೆ ಎಂದು ನಾನು ಹೇಳುವುದಿಲ್ಲ. ನಾವು ಬದುಕಿಗೆ ಒಂದು ಕನ್ನಡಿ ಹಿಡಿದುಕೊಂಡಿರುತ್ತೇವೆ. ಇಲ್ಲಿಯೂ ಬದುಕಿಗೆ ಕನ್ನಡಿ ಹಿಡಿದಿರುವೆ. ಎಲ್ಲರ ಬದುಕಿನಲ್ಲಿ ನಡೆದಿರುವ ವಿಚಾರ ಹೇಳುತ್ತಿದ್ದೇನೆ.

* ಈ ಸಿನಿಮಾದ ಕಥೆಯ ಎಳೆ ಎಂತಹದ್ದು?

ಮಾಫಿಯಾದ ಹಿನ್ನೆಲೆ ಮತ್ತು ಮನುಷ್ಯನ ಸಂಬಂಧ ಕುರಿತು ಚಿತ್ರ ಮಾತನಾಡುತ್ತದೆ. ನಾಯಕನ ವೃತ್ತಿ ಬಗ್ಗೆ ಹೇಳುವಾಗ ರೌಡಿಸಂ ಕಥೆ ಹೇಳುತ್ತೇನೆ. ಇನ್ನು ಉಳಿದದ್ದು ಮನುಷ್ಯ ಸಂಬಂಧ ಕುರಿತಾದ ಕಥನ. ಸಹಜವಾಗಿ ಆತ ಎದುರಿಸುವ ಹೆಣ್ಣು, ಸ್ನೇಹ, ಬದುಕುವಾಗ ಇರುವ ಭಯ, ಎಲ್ಲರೂ ಬಯಸುವಂತಹ ಪವರ್‌, ಅದನ್ನು ಪಡೆಯುವುದಕ್ಕಾಗಿ ನಡೆಯುವ ಹೊಡೆದಾಟ ಇದರ ಸುತ್ತವೇ ಕಥೆ ಹೆಣೆಯಲಾಗಿದೆ. ಮನುಷ್ಯನಲ್ಲಿ ಸಹಜವಾಗಿ ಇರುವಂತಹ ಸಮಸ್ಯೆಗಳನ್ನು ಯಾವ ರೀತಿ ಹೇಳುತ್ತೇವೆ ಎನ್ನುವುದೇ ಕಥೆ. ಎರಡು ಗಂಟೆಯಲ್ಲಿ ಒಬ್ಬ ಮನುಷ್ಯನ ಏಳು ವರ್ಷದ ಬದುಕನ್ನು ನಿರೂಪಿಸಲು ಹೊರಟಿದ್ದೇನೆ.

* ಮಂಕಿ ಸೀನನ ಪಾತ್ರ ಕುರಿತು ಹೇಳಿ.

ಧನಂಜಯ್‌ನಲ್ಲಿದ್ದ ಹತಾಶೆಯನ್ನು ‘ಡಾಲಿ’ ಪಾತ್ರದ ಮೂಲಕ ಆಚೆ ತೆಗೆದೆ. ಅಲ್ಲಿ ನಾನು ಹೊಸದೇನನ್ನೂ ಮಾಡಲಿಲ್ಲ. ಕಬ್ಬಿಣವನ್ನು ತುಂಬಾ ಕಾಯಿಸಿ ನಮಗೆ ಬೇಕಾದ ಆಕಾರಕ್ಕೆ ತಿರುಗಿಸಬಹುದು. ಧನಂಜಯ್‌ ಆಗ ಕಾಯಿದ್ದ. ನನ್ನಿಂದ ಏನೂ ಆಗುತ್ತಿಲ್ಲ; ಏನೇ ಮಾಡಿದರೂ ಫಲ ಸಿಗುತ್ತಿಲ್ಲ ಎನ್ನುವುದು ಅವನಲ್ಲಿತ್ತು. ಅದು ಡಾಲಿ. ಈ ಹುಡುಗನಲ್ಲಿ ಇನ್ನೊಂದಿಷ್ಟು ಏನೋ ಇದೆ. ಮತ್ತೇನನ್ನೋ ತೆಗೆಯಬಹುದು ಅನಿಸಿತು. ಆಗ ಹುಟ್ಟಿದ್ದೇ ಮಂಕಿ ಸೀನನ ಪಾತ್ರ. ಆತ ಇನ್ನೊಂದಿಷ್ಟು ಶರಣಾಗುತ್ತಾನೆ. ಅವನಿಗೆ ಮತ್ತೊಂದಿಷ್ಟು ಹೇಳಬಹುದು ಅನಿಸಿತು. ನನ್ನೊಳಗಿನ ಪ್ರಯೋಗಶಾಲೆಗೆ ಈತ ಒಗ್ಗಿಕೊಳ್ಳುತ್ತಾನೆ ಎಂದು ಅನಿಸಿತು. ಹಾಗಾಗಿಯೇ, ಸೀನನ ಪಾತ್ರಕ್ಕೆ ಆತನನ್ನು ಆಯ್ಕೆ ಮಾಡಿಕೊಂಡೆ.

* ‘ಡಾಲಿ’ ಪಾತ್ರ ಒಂದು ಬ್ರಾಂಡ್‌ ಆಯಿತು. ಇಂತಹ ಪಾತ್ರಗಳ ಡಿಸೈನ್‌ನ ಹಿಂದಿರುವ ಗುಟ್ಟೇನು?

ಒಂದಿಷ್ಟು ಪಾತ್ರಗಳ ಬಗ್ಗೆ ಬರೆದಿದ್ದೆ. ‘ಪಾಪ್‌ಕಾರ್ನ್‌...’ನಲ್ಲಿ ಡಾಲಿ ಪಾತ್ರದ ಮುಂದುವರಿಕೆ ಇಲ್ಲ. ‘ಟಗರು’ ಚಿತ್ರಕ್ಕೆ ಆ ಪಾತ್ರ ಕೊನೆಯಾಯಿತು. ಇಲ್ಲಿ ಮಂಕಿ ಸೀನ ಇದ್ದಾನೆ. ಅವನ ಬದುಕಿನಲ್ಲಿ ಏನೆಲ್ಲಾ ನಡೆಯಿತು ಎನ್ನುವುದನ್ನು ಬರೆಯುತ್ತಾ ಹೋಗಿದ್ದೇನೆ.

ಪಾತ್ರ ಹೊಸೆಯುವಾಗ ಒಂದಿಷ್ಟು ನೆನಪುಗಳು, ಆಲೋಚನೆಗಳ ಜೊತೆಗೆ ಹೊಸ ವಿಷಯಗಳು ಸೇರ್ಪಡೆಗೊಳ್ಳುತ್ತವೆ. ಅವು ಪಾತ್ರಗಳಾಗಿ ರೂಪ ತಾಳುತ್ತವೆ. ಸೀನನ ಮೂಲಕ ಒಂದಿಷ್ಟು ವಿಷಯ ತಲುಪಿಸಲು ಹೊರಟಿದ್ದೇನೆ. ಒಂದು ಗಂಡು ಮತ್ತು ಹೆಣ್ಣಿನ ಮೂಲಕ ವಿಷಯ ತಲುಪಿಸಲು ಹೊರಟಾಗ ಪಾತ್ರ ತಾನಾಗಿಯೇ ಹುಟ್ಟುತ್ತದೆ. ಆ ಪಾತ್ರಕ್ಕೆ ಒಂದಿಷ್ಟು ಕ್ವಾಲಿಟಿಗಳೂ ಹುಟ್ಟುತ್ತವೆ.

* ಕಥೆ ಹೊಸೆಯುವಾಗ ಯಾವುದಕ್ಕೆ ಒತ್ತು ನೀಡುತ್ತೀರಿ?

ದೊಡ್ಡ ವಿಷಯ ಎಷ್ಟು ಸರಳವಾಗಿದೆ ಎನ್ನುವುದು ಕಥೆ ಹೇಳುವಾಗ ಮುಖ್ಯವಾಗುತ್ತದೆ. ತುಂಬಾ ಜನರು ಬದುಕಿನ ದೊಡ್ಡ ವಿಷಯಗಳನ್ನು ಸರಳವಾಗಿ ಹೇಳಿಬಿಡುತ್ತಾರೆ. ನಾವು ಒಂದು ರೂಪಾಯಿ ಕಳೆದುಕೊಂಡಾಗ ಆಗುವ ನೋವು ಕೋಟಿ ರೂಪಾಯಿ ಕಳೆದುಕೊಂಡಾಗಲೂ ಆಗುತ್ತದೆ. ಈ ಸತ್ಯ ಸರಳವಲ್ಲವೇ? ಕಳೆದುಕೊಳ್ಳುವುದು ಒಂದೇ ಅಲ್ಲವೇ? ಅದಕ್ಕೆ ನಾವು ಮೌಲ್ಯ ಕೊಡುತ್ತೇವೆ ಅಷ್ಟೆ. ಇದೇ ಮಾದರಿಯಲ್ಲಿ ದೊಡ್ಡ ವಿಷಯವನ್ನು ಪರದೆ ಮೇಲೆ ಸರಳವಾಗಿಯೇ ಹೇಳುವುದೇ ನನ್ನಾಸೆ.

* ನಿಮ್ಮ ಪ್ರಕಾರ ಕಥೆ ಹೇಗೆ ಹುಟ್ಟುತ್ತದೆ?

ನನ್ನ ಪ್ರಕಾರ ಕಥೆ ಎಂಬುದೇ ಇರೋದಿಲ್ಲ. ನಾವು ಬದುಕಿನಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಸಾಕ್ಷಿಯಾಗಿರುತ್ತೇವೆ. ಬದುಕು ಏಕೆ ಹೀಗೆ ಎನ್ನುವ ಪ್ರಶ್ನೆಗಳು ಹುಟ್ಟುತ್ತವೆ. ಆ ‘ಪವರ್‌’ ನಮಗೇಕಿಲ್ಲ ಎಂದುಕೊಳ್ಳುತ್ತೇವೆ. ಇವೆಲ್ಲದರಿಂದ ಹುಟ್ಟುವ ಒಂದಷ್ಟು ವಿಷಯಗಳನ್ನು ತಲುಪಿಸುವಾಗ ಒಂದು ಕಥೆ ಜನಿಸುತ್ತದೆ. ಆ ಘಟನೆಗಳನ್ನು ಒಟ್ಟುಗೂಡಿಸಿಕೊಂಡು ಹೇಳಲು ಹೊರಟಾಗ ಕಥೆ ಹುಟ್ಟುತ್ತದೆ.ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕಥೆ ಹೇಳುತ್ತಾರೆ. ಕೆಲವರು ಅದೇ ಕಥೆಗೆ ಮಸಾಲೆ ಬೆರೆಸುತ್ತಾರೆ. ಕೆಲವರು ಮಸಾಲೆ ಬೆರೆಸುವುದಿಲ್ಲ. ಕೆಲವು ಏನನ್ನೋ ಹುಟ್ಟುಹಾಕಿಕೊಂಡು ಹೇಳುತ್ತಾರೆ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT