ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಸಿನಿಮಾವೂ ವಿಭಿನ್ನ: ಶ್ರೇಯಸ್‌ ಸೂತ್ರ

Last Updated 31 ಡಿಸೆಂಬರ್ 2020, 12:37 IST
ಅಕ್ಷರ ಗಾತ್ರ

ನಟ ಶ್ರೇಯಸ್‌ ಕೆ. ಮಂಜು (ನಿರ್ಮಾಪಕ ಕೆ. ಮಂಜು ಪುತ್ರ) ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಪಡ್ಡೆಹುಲಿ ಮೂಲಕ ತೆರೆಯ ಮೇಲೆ ಬಂದ ಅವರ ಕೈಯಲ್ಲಿ ಈಗ ‘ವಿಷ್ಣುಪ್ರಿಯ’ ಸೇರಿ ಹಲವು ಚಿತ್ರಗಳಿವೆ. ಶ್ರೇಯಸ್‌ ತಮ್ಮ ಮುಂದಿನ ಸಿನಿಮಾ, ಪಾತ್ರದ ಆಯ್ಕೆ ಕುರಿತ ವಿವರಗಳನ್ನು ‘ಪ್ರಜಾಪ್ಲಸ್‌’ ಜೊತೆ ಹಂಚಿಕೊಂಡಿದ್ದಾರೆ.

ಸಿನಿಮಾಕ್ಕೆ ಬರಲು ಯಾವುದು ಕಾರಣ? ತಂದೆಯವರು ನಿರ್ಮಾಪಕರು ಅನ್ನುವುದೋ ಅಥವಾ ನಿಮ್ಮ ಆಸಕ್ತಿಯೋ?

ಮೊದಲ ಸಿನಿಮಾ ಬರುವವರೆಗೆ ‘ತಂದೆಯವರ ಕಾರಣಕ್ಕಾಗಿ ಸಿನಿಮಾಕ್ಕೆ ಬಂದೆ’ ಎನ್ನುತ್ತಿದ್ದರು. ಆದರೆ ಮೊದಲ ಸಿನಿಮಾ, ಟ್ರೇಲರ್‌, ಯೂಟ್ಯೂಬ್‌ ವಿಡಿಯೊಗಳನ್ನು ನೋಡಿದ ಬಳಿಕ ‘ಶ್ರೇಯಸ್‌ ಕಷ್ಟಪಟ್ಟು ದುಡಿಯುತ್ತಾನೆ. ಶ್ರಮ ಹಾಕುತ್ತಾನೆ’ ಎನ್ನುವ ನಂಬಿಕೆ ನಿರ್ಮಾ‍ಪಕರು, ನಿರ್ದೇಶಕರಲ್ಲಿ ಬಂದಿದೆ. ಒಂದು ಟ್ರೇಲರ್ ನೋಡಿದ ತಕ್ಷಣ ನಾನು ಕಷ್ಟಪಡ್ತೀನೋ ಇಲ್ವೋ ಎನ್ನುವುದನ್ನು ಅಳೆದುಬಿಡಬಹುದು. ಈಗಂತೂ ಈ ಕ್ಷೇತ್ರದಲ್ಲಿ ಹೊಸ ಪಾಠಗಳನ್ನು ಕಲಿಯುತ್ತಲೇ ಇದ್ದೇನೆ.

ಸಿನಿಮಾಕ್ಕೆ ಬರಬೇಕಾದರೆ ನಿಮ್ಮ ಸಿದ್ಧತೆ ಏನಿತ್ತು?

2012ರಲ್ಲಿ ಸಿನಿಮಾಕ್ಕೆ ಬರಬೇಕು ಎಂದು ನಿರ್ಧಾರ ಮಾಡಿದೆ. 2013ರಿಂದ ಜಿಮ್‌ಗೆ ಹೋಗಿ ದೇಹದಂಡನೆ ಶುರು ಮಾಡಿದೆ. ಆಗ ನನ್ನ ತಂದೆಯವರು ‘ಸಿನಿಮಾ ನಟನೆ ಎಂದರೆ ಕೇವಲ ದೇಹದಾರ್ಢ್ಯತೆ ತೋರಿಸುವುದಲ್ಲ. ಪಾತ್ರಕ್ಕೆ ಮುಖಭಾವ ಕೂಡಾ ಅತ್ಯಂತ ಮುಖ್ಯ’ ಎಂದರು. ಆ ಸಮಯದಲ್ಲಿ ರಂಗಾಯಣ ರಘು ಅವರ ಪತ್ನಿ ಮಂಗಳಾ ಮೇಡಂ ಅವರು ಪೂರ್ವರಂಗ ಅಂತ ಒಂದು ತಂಡ ಕಟ್ಟಿಕೊಂಡಿದ್ದರು. ಅಲ್ಲಿ ಸೇರಿದೆ. ನಂತರ ಸಂಚಾರಿ ಅಂತ ಒಂದು ತಂಡ ಇತ್ತು. ಅಲ್ಲಿ ಸುಮಾರು 5 ತಿಂಗಳು ಅಭಿನಯ ಕಲಿಸುತ್ತಿದ್ದರು. ಕೊನೆಯಲ್ಲಿ ಪ್ರದರ್ಶಿಸಿದ ನಾಟಕದಲ್ಲಿ ನನಗೆ ಮುಖ್ಯ ಪಾತ್ರ ಸಿಕ್ಕಿತು. ಆಮೇಲೆ ನನ್ನ ಬಿಬಿಎಂ ಶಿಕ್ಷಣ ಮುಗಿಸಿ ವಿಶಾಖಪಟ್ಟಣಕ್ಕೆ ಹೋದೆ. ಅಲ್ಲಿ ಸತ್ಯಾನಂದ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮೂರು ತಿಂಗಳು ಕಲಿಕೆ ಆಯಿತು. ಅದರ ನಂತರ ಪಾಂಡಿಚೇರಿಯಲ್ಲಿ ಆದಿಶಕ್ತಿ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸೇರಿ ಅಲ್ಲೊಂದಿಷ್ಟು ಕಾಲ ಕಲಿತೆ. ಅದು ಭಾರತದಲ್ಲಿರುವ ಅತ್ಯುತ್ತಮ ಸಿನಿಮಾ– ನಟನೆ– ತಂತ್ರಜ್ಞಾನ ಕಲಿಕಾ ಸಂಸ್ಥೆಗಳಲ್ಲಿ ಒಂದು. ಹಾಗೆಯೇ ಸಿನಿಮಾ ಸೆಟ್‌ಗಳಿಗೆ ಹೋಗಿ ನೋಡುತ್ತಿದ್ದೆ.

ಪಡ್ಡೆಹುಲಿ ಚಿತ್ರದ ನಿಮ್ಮ ಪಾತ್ರದಲ್ಲಿ ವಿಷ್ಣುವರ್ಧನ್‌ ಅವರ ಪ್ರಭಾವ ಕಾಣಿಸುತ್ತಿದೆಯಲ್ಲಾ?

ನನ್ನ ಸಿನಿಮಾ ಬದುಕಿಗೆ ಸ್ಫೂರ್ತಿ, ಪ್ರಭಾವ ಬೀರಿದವರು ವಿಷ್ಣುವರ್ಧನ್‌ ಅವರು. ಚಿಕ್ಕವಯಸ್ಸಿನಿಂದಲೂ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಅವರನ್ನು ನೋಡಿದಾಗ ನನ್ನ ಮುಖದಲ್ಲೊಂದು ಮಂದಹಾಸ ಮೂಡುತ್ತಿತ್ತು. ಹಾಗೆಯೇ ಒಂದು ರೀತಿ ಸಿನಿಮಾ ಹುಚ್ಚು ಹಿಡಿದಿತ್ತು. ನಟನೆ ಆಮೇಲೆ ಕಲಿತದ್ದು.

ಯಾರು ‘ವಿಷ್ಣುಪ್ರಿಯ’?

ಸಿನಿಮಾದಲ್ಲಿ ನನ್ನ ಹೆಸರು ವಿಷ್ಣು, ನಾಯಕಿ ಹೆಸರು ಪ್ರಿಯಾ (ಪ್ರಿಯಾ ವಾರಿಯರ್‌). 90ರ ದಶಕದಲ್ಲಿ ನಡೆದ ನೈಜ ಘಟನೆ ಆಧರಿಸಿ ಸಿನಿಮಾ ಮಾಡುತ್ತಿದ್ದೇವೆ. ಯಾಕೆ ಹೆಸರು ಎನ್ನುವುದು ಸಿನಿಮಾ ನೋಡಿದ ಬಳಿಕ ಗೊತ್ತಾಗಲಿದೆ. ಇದು ತುಂಬಾ ನೈಜತೆಯ ವಸ್ತು, ಸನ್ನಿವೇಶ ಒಳಗೊಂಡ ಸಿನಿಮಾ.

ಬೇರೆ ಬೇರೆ ಭಾಷೆಗಳಲ್ಲೂ ದಿಢೀರ್‌ ಅವಕಾಶಗಳು ಬಂದದ್ದರ ಗುಟ್ಟು?

ಮಲೆಯಾಳಂನಲ್ಲಿ ಒಂದು ಅವಕಾಶ ಬಂದಿದೆ. ಕೇರಳದಲ್ಲಿ ವಿಷ್ಣುಪ್ರಿಯ ಶೂಟಿಂಗ್‌ನಲ್ಲಿದ್ದೆ. ಅಲ್ಲಿಗೆ ನನ್ನ ತಂದೆಯ ಗೆಳೆಯರೊಬ್ಬರು ನಿರ್ಮಾಪಕ, ನಿರ್ದೇಶಕರು ಬಂದಿದ್ದರು. ಮೂರು ದಿನ ಶೂಟಿಂಗ್‌ ಸ್ಪಾಟ್‌ನಲ್ಲಿದ್ದು ನನ್ನ ಕೆಲಸ ನೋಡಿದರು. ಅದು ಇಷ್ಟವಾಗಿ ಅವರು ನನಗೆ ಮಲೆಯಾಳಂನ ‘ಪವರ್‌ಸ್ಟಾರ್‌’ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಬೇರೆ ಭಾಷೆಯ ಚಿತ್ರಗಳಲ್ಲಿ ಕಲಿಯುವ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡೆ.

ಪಾತ್ರ ಆಯ್ಕೆ ಮಾಡುವಾಗ ನಿಮ್ಮ ಸೂತ್ರ ಏನು?

ನಾನು ಮಾಡುವ ಪ್ರತಿ ಸಿನಿಮಾವೂ ವಿಭಿನ್ನವಾಗಿರಬೇಕು. ಒಂದು ಸ್ಕ್ರಿಪ್ಟ್‌ ಸಿಕ್ಕಾಗ ನನ್ನ ಕೆಲವು ರಂಗಭೂಮಿಯ ಗುರುಗಳೊಂದಿಗೆ ಚರ್ಚಿಸುತ್ತೇನೆ. ಇದರಲ್ಲೊಂದು ಹೊಸ ಪಾತ್ರ, ಭಿನ್ನವಾಗಿ ಸೃಷ್ಟಿಯಾಗಬೇಕು. ಹಿಂದಿನ ಸಿನಿಮಾದ ಪಾತ್ರದ ಛಾಯೆ ಇದರಲ್ಲಿ ಇರಬಾರದು ಎಂದೇ ಹೇಳುತ್ತೇನೆ.

ಪ್ರೇಕ್ಷಕರಿಗೇನು ಹೇಳುತ್ತೀರಿ?

ಹೊಸ ಪ್ರಯತ್ನಕ್ಕೆ ಬೆಂಬಲಿಸಿ. ಕಟ್ಟುವುದು ಬಹಳ ಕಷ್ಟ. ಕೆಡವುವುದು ಸುಲಭ. ಯಾರೂ ಕೆಡವುವ ಪ್ರಯತ್ನ ಮಾಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT