ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಸಿಎಟಿ ರದ್ದುಗೊಳಿಸಿದ ಕೇಂದ್ರ: ದಿಢೀರ್‌ ಕ್ರಮಕ್ಕೆ ಚಿತ್ರರಂಗದ ಆಕ್ಷೇಪ

Last Updated 7 ಏಪ್ರಿಲ್ 2021, 11:23 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ನ್ಯಾಯ ಮತ್ತು ಕಾನೂನು ಸಚಿವಾಲಯವು ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಾಧಿಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಏಪ್ರಿಲ್‌ 5ರಂದು ಈ ಆದೇಶ ಹೊರಡಿಸಿದ್ದು ತಕ್ಷಣದಿಂದಲೇ ಜಾರಿಯಾಗುವಂತೆ ಸುಗ್ರೀವಾಜ್ಞೆ ಹೊರಡಿಸಿ ನ್ಯಾಯಾಧೀಕರಣವನ್ನು ರದ್ದುಗೊಳಿಸಲಾಗಿದೆ. ಕೇಂದ್ರದ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ)ಯಲ್ಲಿ ಚಿತ್ರಕ್ಕೆ ಪ್ರಮಾಣಪತ್ರ ಸಿಗದ ಸಂದರ್ಭದಲ್ಲಿ ನಿರ್ಮಾಪಕರು ಈ ಮೇಲ್ಮನವಿ ನ್ಯಾಯಾಧೀಕರಣದ ಮೊರೆ ಹೋಗುತ್ತಿದ್ದರು. ಸಿಬಿಎಫ್‌ಸಿಯಲ್ಲಿ ಪ್ರಮಾಣ ಪತ್ರ ನಿರಾಕರಿಸಲ್ಪಟ್ಟ ಚಿತ್ರಗಳಿಗೆ ನ್ಯಾಯಾಧೀಕರಣದಲ್ಲಿ ಮರುಪರಿಶೀಲನೆಗೆ ಅವಕಾಶ ಇತ್ತು. ಈಗ ಅಂಥ ಯಾವುದೇ ಅಹವಾಲುಗಳನ್ನು ಹೈಕೋರ್ಟ್‌ ಮುಂದೆ ಇಡಬೇಕಾಗುತ್ತದೆ.

ಈ ನ್ಯಾಯ ಮಂಡಳಿಯು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿ 1952ರ ಸಿನಿಮಾಟೋಗ್ರಫಿ ಕಾಯ್ದೆಯ ಸೆಕ್ಷನ್‌ 5ರ ಅಡಿ ರಚನೆಯಾದ ಸಂಸ್ಥೆ. 1983ರಲ್ಲಿ ಇದು ಸ್ಥಾಪನೆಯಾಗಿದೆ. ಅಧ್ಯಕ್ಷರು ಮತ್ತು ನಾಲ್ವರು ಸದಸ್ಯರು ಹಾಗೂ ಒಬ್ಬ ಕಾರ್ಯದರ್ಶಿಯನ್ನು ಒಳಗೊಂಡಿದೆ. ನವದೆಹಲಿಯಲ್ಲಿ ಇದರ ಕೇಂದ್ರ ಕಚೇರಿ ಇದೆ.

ಈ ನ್ಯಾಯಾಧೀಕರಣವನ್ನು ಬರಖಾಸ್ತುಗೊಳಿಸಿದ್ದರ ಕುರಿತು ಚಿತ್ರರಂಗದ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಚಿತ್ರಗಳ ಕುರಿತ ಅಹವಾಲುಗಳನ್ನು ಪರಿಹರಿಸಲು ಹೈಕೋರ್ಟ್‌ಗೆ ಸಮಯ ಇದೆಯೇ? ಎಷ್ಟು ಜನ ನಿರ್ಮಾಪಕರು ಹೈಕೋರ್ಟ್‌ ಸಂಪರ್ಕಿಸಲು ಸಾಧ್ಯ? ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯವೇ?’ ಎಂಬುದಾಗಿ ಪ್ರಶ್ನಿಸಿದ್ದಾರೆ.

ಎಫ್‌ಸಿಎಟಿ ಮರುಪರಿಶೀಲಿಸಿದ ಕೆಲವು ಚಿತ್ರಗಳು: ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ (2017). ಈ ಚಿತ್ರದ ಕೆಲವು ಭಾಗಗಳಿಗೆ ಕತ್ತರಿ ಹಾಕಿದ ಬಳಿಕ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡುವಂತೆ ನ್ಯಾಯಾಧೀಕರಣವು ಸಿಬಿಎಫ್‌ಸಿಗೆ ಸೂಚಿಸಿತ್ತು.

‘ಉಡ್ತಾ ಪಂಜಾಬ್‌’ (2016) ಬಿಡುಗಡೆಗೆ ಅವಕಾಶ ಸಿಗದಿದ್ದಾಗಲೂ ಎಫ್‌ಸಿಎಟಿಗೆ ಮನವಿ ಸಲ್ಲಿಸಿ ಪರಿಹರಿಸಲಾಗಿತ್ತು. ಹೀಗೆ ಹಲವು ಚಿತ್ರಗಳು ಎಫ್‌ಸಿಎಟಿ ಮಧ್ಯ ಪ್ರವೇಶದ ನಂತರ ಪ್ರದರ್ಶನ ಭಾಗ್ಯ ಕಂಡಿದ್ದವು.

ಚಿತ್ರರಂಗದ ಪ್ರಮುಖರಾದ ಹನ್ಸಾಲ್‌ ಮೆಹ್ತಾ, ವಿಶಾಲ್‌ ಭಾರಾಧ್ವಾಜ್‌, ಗುಣೀತ್‌ ಮೋಂಗಾ, ರಿಚಾ ಚಡ್ಡಾ ಮತ್ತಿತರರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT