ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಂ ಸಿಟಿ ಮೈಸೂರಿನಲ್ಲೇ ಆಗಲಿ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

Last Updated 21 ಜನವರಿ 2020, 22:10 IST
ಅಕ್ಷರ ಗಾತ್ರ

ಬೆಂಗಳೂರು: ಫಿಲಂ ಸಿಟಿ ಯೋಜನೆಯನ್ನು ಮೈಸೂರಿನಲ್ಲೇ ಮುಂದುವರಿಸಬೇಕು ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಅವರು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

‘ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆ ಆಗಬೇಕೆಂಬುದು ಚಲನ ಚಿತ್ರರಂಗದವರ ಬಹುದಿನಗಳ ಕನಸು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ,ಫಿಲಂ ಸಿಟಿ ನಿರ್ಮಿಸಲು ಮೈಸೂರಿನಲ್ಲಿ 124 ಎಕರೆ ನೀಡಿದ್ದರು. ಇದಕ್ಕಾಗಿ ಸರ್ಕಾರಿ ಆದೇಶವೂ ಆಗಿದೆ’ ಎಂದು ಬಾಬು ಹೇಳಿದ್ದಾರೆ.

‘ಬೆಂಗಳೂರಿನಲ್ಲಿ ಫಿಲಂ ಸಿಟಿ ಸ್ಥಾಪಿಸುವುದಕ್ಕೆ ವಿರೋಧವಿಲ್ಲ. ಅದನ್ನೂ ಸ್ವಾಗತಿಸುತ್ತೇವೆ. ಎರಡೂ ನಗರಗಳಲ್ಲಿ ಎರಡು ಫಿಲಂ ಸಿಟಿ ಸ್ಥಾಪಿಸಿದರೆ ಕನ್ನಡ ಚಿತ್ರೋದ್ಯಮಕ್ಕೂ ಬಹಳ ಅನುಕೂಲವಾಗುತ್ತದೆ. ಆದರೆ, ಎಲ್ಲ ರೀತಿಯಿಂದಲೂ ಫಿಲಂ ಸಿಟಿ ಸ್ಥಾಪನೆಗೆ ಮೈಸೂರು ನಗರವೇ ಸೂಕ್ತವಾಗಿದೆ. ಈಗಾಗಲೇ ಚಲನಚಿತ್ರ ಚಟುವಟಿಕೆಗಳಿಗೆ ಕೇಂದ್ರವಾಗಿರುವುದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಆದ್ದರಿಂದ ಅಲ್ಲಿಯೇ ಫಿಲಂ ಸಿಟಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅಂದಿನ ಚಿತ್ರರಂಗದ ನಾಯಕರು ನೆರವಿಗಾಗಿ ಮನವಿ ಸಲ್ಲಿಸಿದರು. ಅದಕ್ಕೆ ಸ್ಪಂದಿಸಿದ ನಿಜಲಿಂಗಪ್ಪ ಅವರು ಕನ್ನಡ ಚಿತ್ರಗಳಿಗೆ ₹50,000 ಸಹಾಯಧನ ಪ್ರಕಟಿಸಿದರು. ಅಂದಿನಿಂದ ಮೈಸೂರಿನ ಪ್ರೀಮಿಯರ್‌ ಸ್ಟುಡಿಯೋದಲ್ಲಿ ಹಲವು ಚಿತ್ರಗಳು ತಯಾರಾದವು. ಆ ಬಳಿಕ ಒಂದು ಅತ್ಯುತ್ತಮ ಚಿತ್ರ ನಗರಿಯಾಗಿ ರೂಪುಗೊಂಡಿತು’ ಎಂದು ಬಾಬು ನೆನಪಿಸಿಕೊಂಡಿದ್ದಾರೆ.

‘1946 ರಲ್ಲಿ ಹಾಲಿವುಡ್‌ನ ‘ಹ್ಯಾರಿ ಬ್ಲಾಕ್‌ ಟೈಗರ್‌’ ಚಿತ್ರೀಕರಣ ಅಲ್ಲಿ ನಡೆಯಿತು. ಶ್ರೇಷ್ಠ ನಿರ್ದೇಶಕ ಅಲೆಕ್ಸಾಂಡರ್‌ ಕೊರ್ಡ್‌ ಅವರು ಚಿತ್ರ ನಿರ್ಮಾಣಕ್ಕೆ ಮೈಸೂರು ಅತ್ಯುತ್ತಮ ಸ್ಥಳ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT