ಬುಧವಾರ, ಆಗಸ್ಟ್ 4, 2021
22 °C

ಸುಶಾಂತ್‌ ಸಿಂಗ್‌ ರಜಪೂತ್‌ ಜೀವನ ತೆರೆಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಸುಸೈಡ್‌ ಆರ್‌ ಮರ್ಡರ್‌? ಸಿನಿಮಾ ಮೋಶನ್‌ ಪೋಸ್ಟರ್

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಅವರ ಸಾವಿಗೆ ನಿಖರ ಕಾರಣ ಗೊತ್ತಾಗದಿದ್ದರೂ, ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತ ಮತ್ತು ಪ್ರೇಮವೈಫಲ್ಯದಿಂದ ಖಿನ್ನತೆ ಒಳಗಾಗಿದ್ದೇ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿವೆ. 

ಈ ನಡುವೆಯೇ ಬಾಲಿವುಡ್‌ನಲ್ಲಿ ಸುಶಾಂತ್‌ ಜೀವನದ ಘಟನೆಗಳನ್ನಾಧರಿಸಿದ ಸಿನಿಮಾ ಸೆಟ್ಟೇರಲಿದ್ದು, ಅದಕ್ಕೆ ‘ಸುಸೈಡ್‌ ಆರ್‌ ಮರ್ಡರ್‌ ? (Sucide or Murder)’ ಎಂದು ಶೀರ್ಷಿಕೆ ನೀಡಲಾಗಿದೆ. 

ಸುಶಾಂತ್‌ ಜೀವನದ ಮಹತ್ವದ ಘಟನೆಗಳನ್ನು ಮೂಲವಾಗಿಟ್ಟುಕೊಂಡು ವಿಜಯ್‌ ಶೇಖರ್‌ ಗುಪ್ತಾ ‘ಸುಸೈಡ್‌ ಆರ್‌ ಮರ್ಡರ್‌?’ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. 

‘ಬಾಲಿವುಡ್‌ನ ಸ್ಟಾರ್‌ ನಟರು ಹಾಗೂ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಗಳ ಏಕಸ್ವಾಮ್ಯವನ್ನು ತೊಡೆದುಹಾಕುವುದು ಈ ಸಿನಿಮಾದ ಹಿಂದಿನ ಉದ್ದೇಶ’ ಎಂದು ವಿಜಯ್‌ ಶೇಖರ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

‘ಈ ಸಿನಿಮಾ ಮೂಲಕ ಬಾಲಿವುಡ್‌ನ ಕೆಟ್ಟ ರಾಜಕೀಯ, ಒಳಸಂಚನ್ನು ತೋರಿಸುತ್ತೇನೆ. ಇವತ್ತು ಹೊರಗಿನಿಂದ ಬಂದ ನಟ– ನಟಿಯರಿಗೆ ಪ್ರತಿಭೆಯಿದ್ದರೂ ಸರಿಯಾದ ಅವಕಾಶ ಸಿಗುವುದಿಲ್ಲ. ಅದಕ್ಕೆ ಕಾರಣ ಇಂಡಸ್ಟ್ರಿಯಲ್ಲಿ ಒಳಗೆ ಮಾಡಿಕೊಂಡಿರುವ ಗುಂಪುಗಾರಿಕೆ‌. ಅದನ್ನು ಒಡೆಯಬೇಕು ಎಂಬುದು ನನ್ನ ಉದ್ದೇಶ. ಸುಶಾಂತ್‌ ವಿಷಯದಲ್ಲಿ ಯಾವೆಲ್ಲ ತಪ್ಪುಗಳು ನಡೆದಿದೆಯೋ ಅವುಗಳನ್ನೆಲ್ಲ ನನ್ನ ಸಿನಿಮಾದಲ್ಲಿ ತೋರಿಸಲಿದ್ದೇನೆ. ಜನರು ಅವನನ್ನು ಮೆಚ್ಚಿಕೊಂಡರು. ಆದರೆ ಒಳಗಿನ ಗುಂಪುಗಾರಿಕೆಯಿಂದ ಅವನು ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಕಳೆದುಕೊಳ್ಳಬೇಕಾಯಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

‘ಈ ಸಿನಿಮಾದಲ್ಲಿ ಸುಶಾಂತ್‌ ಕತೆಯಷ್ಟೇ ಅಲ್ಲ, ಬಾಲಿವುಡ್‌ ಇಂಡಸ್ಟ್ರಿಯಲ್ಲಿ ನೆಲೆಯೂರಲು ಕಷ್ಟಪಟ್ಟ ಇತರ ಕೆಲ ನಟ– ನಟಿಯರ ಕತೆಗಳೂ ಇರಲಿವೆ‘ ಎಂದು ಅವರು ಮಾಹಿತಿ ನೀಡಿದ್ದಾರೆ. 

‘ಇದು ಸುಶಾಂತ್‌ ಜೀವನಚರಿತ್ರೆಯಲ್ಲ, ಆದರೆ ಸುಶಾಂತ್‌ ಜೀವನದಲ್ಲಿ ನಡೆದ ಘಟನೆಗಳನ್ನು ಮೂಲವಾಗಿರಿಸಿಕೊಂಡು ಸಿನಿಮಾ ಮಾಡಲಾಗುತ್ತದೆ. ಬಾಲಿವುಡ್ ಸೇರಿದಂತೆ ಎಲ್ಲ ಸಿನಿಮಾ ಕ್ಷೇತ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇರಬೇಕು. ಪ್ರತಿಭೆ ಮಾನದಂಡವಾಗಬೇಕು. ಅವನು/ಳು ಬಾಲಿವುಡ್‌ನ ಕುಟುಂಬಕ್ಕೆ ಸೇರಿದವರಾಗಿರಲಿ ಅಥವಾ ಹೊರಗಿನಿಂದ ಬಂದ ಹೊಸಬರಾಗಿದ್ದರೂ ತಮ್ಮ ಪ್ರತಿಭೆ, ಸಾಮರ್ಥ್ಯದ ಮೂಲಕ ಇಲ್ಲಿ ತಳವೂರಬೇಕು’ ಎಂದು ಅವರು ಒತ್ತಿ ಹೇಳಿದ್ದಾರೆ. 

ಈ ಸಿನಿಮಾವನ್ನು ವಿಎಸ್‌ಜಿಬಿಎಂ ನಿರ್ಮಾಣ ಮಾಡಲಿದೆ. ಹೊಸ ಸಿನಿಮಾಕ್ಕೆ ಸಂಬಂಧಿಸಿದ ಮೋಶನ್‌ ಪೋಸ್ಟರ್‌ವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

https://twitter.com/VijayShekhar9

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು