ಮಂಗಳವಾರ, ಡಿಸೆಂಬರ್ 6, 2022
24 °C

ಕಾಂತಾರಕ್ಕೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾಕ್ಕೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಸದ್ಯಕ್ಕೆ ಕಾಂತಾರದ್ದೆ ಟ್ರೆಂಡ್‌. ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ಗಳಲ್ಲಿ ಅಭಿಮಾನಿಗಳಿಂದ ಕಾಂತಾರಕ್ಕೆ ಮೆಚ್ಚುಗೆಯ ಹೊಳೆಯೇ ಹರಿದಿದೆ.

ಉಡುಪಿ–ದಕ್ಷಿಣ ಕನ್ನಡದ ದೈವಾರಾಧನೆಯನ್ನು ಮೂಲವಾಗಿಟ್ಟುಕೊಂಡು ಬಂದಿರುವ ಕಾಂತಾರದಂತಹ ಅದ್ಬುತವಾದ ಚಿತ್ರವನ್ನು ನಾವು ಇಲ್ಲಿಯವರೆಗೆ ಕನ್ನಡದಲ್ಲಿ ನೋಡಿಲ್ಲ ಎಂಬ ರೀತಿಯಲ್ಲಿ ಅನೇಕರು ಬರೆದಿದ್ದಾರೆ. ಇದು ನಮ್ಮ ನೆಲದ ಸೊಗಡು ಎಂದು ಕೆಲವರು ಹಾಡಿ ಹೊಗಳಿದ್ದಾರೆ.

 

ರಿಷಭ್‌ ಶೆಟ್ಟಿಯವರ ಆಲೋಚನೆಗೆ ಹೊಂಬಾಳೆಯಂತಹ ದೊಡ್ಡ ನಿರ್ಮಾಣ ಸಂಸ್ಥೆ ಬೆನ್ನೆಲುಬಾಗಿ ನಿಂತಿದ್ದರಿಂದ ಕನ್ನಡದಲ್ಲಿ ಇಂತಹ ಅದ್ಬುತವಾದ ಕೃತಿ ರಚನೆಯಾಗಿದೆ ಎಂದು ರಿಷಭ್‌ ಹಾಗೂ ಹೊಂಬಾಳೆಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಕಾಂತಾರವೇ ಕನ್ನಡ ದಂತಕಥೆ. ಯಾವ ಭಾಷೆಯ ಸಿನಿಮಾ ಬಂದರೂ ಕಾಂತಾರವನ್ನು ಸೋಲಿಸಲು ಸಾಧ್ಯವಿಲ್ಲ. ಈ ವರ್ಷದ ಎಲ್ಲ ಪ್ರಶಸ್ತಿಗಳು ಈ ಸಿನಿಮಾಕ್ಕೆ ಸಲ್ಲಬೇಕು ಎಂಬಿತ್ಯಾದಿ ರೀತಿಯ ಸಾಕಷ್ಟು ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಿದೆ.

ಬಹುತೇಕರು ಮೆಚ್ಚಿದ್ದು ಚಿತ್ರದ ಕ್ಲೈಮ್ಯಾಕ್ಸ್‌ ಹಾಗೂ ರಿಷಭ್‌ ಶೆಟ್ಟಿಯವರ ನಟನೆಯನ್ನು. ಬಾಲ್ಯದಿಂದಲೂ ಭೂತ, ಕೋಲ, ದೈವಗಳು, ಅವುಗಳ ಕಾರ್ಣಿಕ, ಗಗ್ಗರದ ಸದ್ದು ನೋಡಿಕೊಂಡು ಬೆಳೆದ ನಮಗೆ ಇದೊಂದು ವಿಶುವಲ್‌ ಟ್ರೀಟ್‌ ಎಂದು ಬಹುತೇಕ ದಕ್ಷಿಣ ಕನ್ನಡಿಗರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾಂತಾರ ಸಿನಿಮಾ ವಿಮರ್ಶೆ: ಮಣ್ಣಿನ ಘಮಲಿನಲ್ಲಿ ಸಂಘರ್ಷ–ಸೌಹಾರ್ದ

ರಮ್ಯಾ, ರಕ್ಷಿತ್ ಶೆಟ್ಟಿ, ಅಮೂಲ್ಯ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕರಾವಳಿ ಭಾಗದ ವಿಶಿಷ್ಟ ಆಚರಣೆ ಭೂತ ಕೋಲಾವನ್ನು ಕಟ್ಟಿಕೊಟ್ಟಿರುವ ರೀತಿ, ಕ್ಲೈಮ್ಯಾಕ್ಸ್‌ನಲ್ಲಿ ರಿಷಭ್ ಶೆಟ್ಟಿ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಹುತೇಕರು 5ಕ್ಕೆ 4.5 ರೇಟಿಂಗ್‌ ನೀಡಿದ್ದಾರೆ. ಹುಡುಕಿದರೂ ಸಿನಿಮಾದ ಕುರಿತು ನೆಗೆಟಿವ್‌ ವಿಮರ್ಶೆಗಳು ಸಿಗುವುದು ಕಷ್ಟ ಎಂಬಷ್ಟರ ಮಟ್ಟಿಗೆ ಯಶಸ್ವಿ ಸಿನಿಮಾ ಕಾಂತಾರ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು