ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯದಿಂದ ಸಿನಿಮಾಕ್ಕೆ ಬಂದ ಅಮೃತಮತಿ

Last Updated 3 ಫೆಬ್ರುವರಿ 2020, 1:58 IST
ಅಕ್ಷರ ಗಾತ್ರ

ಪ್ರೊ.ಬರಗೂರು ರಾಮಚಂದ್ರಪ್ಪ ನಿರ್ದೇಶನ ಮತ್ತು ಹರಿಪ್ರಿಯ, ಕಿಶೋರ್ ನಟನೆಯ ‘ಅಮೃತಮತಿ’ ಚಿತ್ರದ ಹಾಡುಗಳು ಈಗ ಜನಾರ್ಪಣೆಯಾಗಿವೆ.

ಎರಡು ಜಾನಪದ ಹಾಡುಗಳು ಸೇರಿ ಒಟ್ಟು ಐದು ಹಾಡುಗಳು ಈ ಚಿತ್ರದಲ್ಲಿವೆ. ಹಾಡುಗಳ ಧ್ವನಿ ಸುರುಳಿಯನ್ನು ನಟ ರಾಘವೇಂದ್ರ ರಾಜ್‌ಕುಮಾರ್ ಬಿಡುಗಡೆ ಮಾಡಿದರು.

ಜನ್ನ ಕವಿಯ ಯಶೋಧರ ಚರಿತೆ ಕಾವ್ಯವನ್ನು ಬರಗೂರು ಮರು ಸೃಷ್ಟಿ ಮಾಡಿ, ಸಿನಿಮಾಕ್ಕೆ ಒಗ್ಗಿಸಿದ್ದಾರೆ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಗೀತೆ, ಸಂಭಾಷಣೆಯ ಹೊಣೆಯನ್ನೂ ನಿಭಾಯಿಸಿದ್ದಾರೆ.

ಶಮಿತಾ ಮಲ್ನಾಡ್ ಗಾಯನದ ಜತೆಗೆ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜೇಶ್ ಕೃಷ್ಣನ್, ಜೋಗಿ ಸುನೀತ, ಕನ್ನಡ ಕೋಗಿಲೆ ರಿಯಾಲಿಟಿ ಷೋ ಚಾಂಪಿಯನ್ ಖಾಸಿಂ ಈ ಚಿತ್ರಕ್ಕೆ ಹಾಡಿದ್ದಾರೆ.

ಬಹುಭಾಷಾ ತಾರೆ ಹರಿಪ್ರಿಯ ‘ಅಮೃತಮತಿ’ಯಾಗಿ ಕಾಣಿಸಿಕೊಂಡಿದ್ದಾರೆ. ಇವರ ನಟನೆ ಮೆಚ್ಚಿರುವ ಬರಗೂರು ‘ಅಮೃತಮತಿ ಇದಿದ್ದರೆ ಹರಿಪ್ರಿಯಾ ರೀತಿಯೆ ಇದ್ದಿರಬಹುದು’ ಎಂದು ಶೂಟಿಂಗ್ ಸೆಟ್‌ನಲ್ಲಿ ಮೆಚ್ಚುಗೆ ಮಾತು ಹೇಳಿದ್ದರಂತೆ.

‘ಪಾತ್ರಕ್ಕೆ ಕಲಾವಿದರನ್ನು ಆಯ್ಕೆ ಮಾಡುವಾಗಲೇ ನಿರ್ದೇಶಕನ ಜವಾಬ್ದಾರಿ ಮುಕ್ಕಾಲು ಮುಗಿದಂತೆ. ನಮ್ಮ ಚಿತ್ರಕ್ಕೆ ಹರಿಪ್ರಿಯಾನೇ ರಾಯಭಾರಿ ಇದ್ದಂತೆ. ಯಶೋಧರನ ಪಾತ್ರ ಮಾಡಿರುವ ಕಿಶೋರ್, ನನ್ನ ವಿದ್ಯಾರ್ಥಿ ಮತ್ತು ಒಳ್ಳೆಯ ನಟ. ಚಿತ್ರಕ್ಕೆ ಸೂಕ್ತ ಕಲಾವಿದರನ್ನು ಆಯ್ಕೆ ಮಾಡಿಕೊಂಡ ತೃಪ್ತಿ ಇದೆ’ ಎಂದು ಮಾತು ಸೇರಿಸಿದರು ಬರಗೂರು.

ಮೂಲ ಕಥೆಯಲ್ಲಿ ಅಮೃತಮತಿ ಎಲ್ಲರಿಗೂ ವಿಷ ನೀಡುತ್ತಾಳೆ. ಆದರೆ ಬರಗೂರವರು ಈ ಸಿನಿಮಾದಲ್ಲಿ ಅಮೃತಮತಿಯಿಂದ ಏನು ಮಾಡಿಸಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ‘ಹೆಣ್ಣಿನ ಘನತೆ ಹೆಚ್ಚಿಸುವ ದೃಷ್ಟಿಯಲ್ಲಿ ಅಮೃತಮತಿಗೆ ನನ್ನ ಈ ಸಿನಿಮಾ ಕಾವ್ಯದಲ್ಲಿ‌ ಮರುಹುಟ್ಟು ನೀಡಿದ್ದೇನೆ ಎಂದಷ್ಟೆ ಹೇಳಬಲ್ಲೆ’ ಎಂದು ಬರಗೂರು ಮಾತು ವಿಸ್ತರಿಸಿದರು.

‘ನಾನು ಇಂಥದ್ದೇ ಶೈಲಿಯ ಚಿತ್ರ ಮಾಡಬೇಕೆಂದು ಅಂಟಿಕೊಂಡವಳಲ್ಲ. ಕಥೆ ಚೆನ್ನಾಗಿರಬೇಕು, ಪಾತ್ರ ವಿಭಿನ್ನವಾಗಿ ರಬೇಕೆಂದು ಬಯಸುತ್ತೇನೆ. ಆರಂಭದಲ್ಲಿಅಮೃತಮತಿಯ ಪಾತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೊ ಎನ್ನುವ ಅಳುಕು ಇತ್ತು. ಆದರೆ, ಪಾತ್ರ ಒಪ್ಪಿಕೊಂಡು ಬರಗೂರು ಸರ್ ಎದುರಿಗೆ ಹೋದಾಗ ಒಂದು ಚಿಕ್ಕ ಮಗುವಿನಂತೆ ಇದ್ದೆ. ಅವರು ನನ್ನನ್ನು ತಿದ್ದಿದ್ದಾರೆ. ಸಾಕಷ್ಟು ಕಲಿಸಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಒಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿ ಸಿಕ್ಕಿದೆ’ ಎಂದರು ನಟಿ ಹರಿಪ್ರಿಯ.

ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಯಶೋಧರನ ತಂದೆ ತಾಯಿ ಪಾತ್ರ ನಿರ್ವಹಿಸಿದ್ದಾರೆ. ನಟಿ ಸುಪ್ರಿಯಾ ರಾವ್ ಪ್ರಮುಖ ಪಾತ್ರದಲ್ಲಿ ಮತ್ತು ತಿಲಕ್ ಅಷ್ಠವಂಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್, ಭೂಮಿಕಾ ಲಕ್ಷ್ಮಿನಾರಾಯಣ್ ಇದ್ದಾರೆ.
ಇಂಚರ ಪುಟ್ಟಣ್ಣ ಪ್ರೊಡಕ್ಷನ್‌ ಅಡಿ ಪುಟ್ಟಣ್ಣ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ನಾಗರಾಜ ಆದವಾನಿ, ಸಂಕಲನ ಸುರೇಶ್ ಅರಸು, ವಸ್ತ್ರ ವಿನ್ಯಾಸ ಲಕ್ಷ್ಮಿ ಕೃಷ್ಣ, ನೃತ್ಯ ಸಂಯೋಜನೆ ತ್ರಿಭುವನ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT