‘ಹೊಂದಿಸಿ ಬರೆಯಿರಿ’ ಫೆ.10ಕ್ಕೆ ಬಿಡುಗಡೆ

ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರುವ, ರಾಮೇನಹಳ್ಳಿ ಜಗನ್ನಾಥ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ‘ಹೊಂದಿಸಿ ಬರೆಯಿರಿ’ ಫೆಬ್ರುವರಿ 10ರಂದು ಬಿಡುಗಡೆಯಾಗಲಿದೆ.
ಬಹುತಾರಾಗಣದ ಈ ಚಿತ್ರದ ‘ಸೋಲ್ ಆಫ್ ಹೊಂದಿಸಿ ಬರೆಯಿರಿ’ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಹಾಡಿಗೆ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಐಶ್ವರ್ಯ ರಂಗರಾಜನ್ ದನಿಯಾಗಿದ್ದಾರೆ. ಇಡೀ ಸಿನಿಮಾದ ಆಶಯವನ್ನು ಕಟ್ಟಿಕೊಡುವ ಈ ಹಾಡು ಚಿತ್ರದ ಹೈಲೈಟ್ ಎಂದಿದೆ ಚಿತ್ರತಂಡ. ಜೋ ಕೋಸ್ಟ ಸಂಗೀತ ಸಂಯೋಜನೆ ಈ ಹಾಡಿಗಿದೆ.
ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎಂಬ ಎಳೆಯ ಸುತ್ತ ಹೆಣೆಯಲಾದ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಐದು ಜನ ಸ್ನೇಹಿತರ ಬದುಕಿನ ಕಥೆ ಹಾಗೂ ಭಾವನಾತ್ಮಕ ಪಯಣವನ್ನು ಒಳಗೊಂಡ ಈ ಚಿತ್ರದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಎಂಟು ಹಾಡುಗಳಿದ್ದು ಈಗಾಗಲೇ ನಾಲ್ಕು ಹಾಡುಗಳು ಬಿಡುಗಡೆಯಾಗಿವೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ. ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ಶಾಂತಿ ಸಾಗರ್ ಹೆಚ್. ಜಿ. ಛಾಯಾಗ್ರಹಣ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.