ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಗಳಿಗೆ ಸದಾ ಒಡ್ಡಿಕೊಳ್ಳುವೆ: ಶಿವರಾಜ್‌ಕುಮಾರ್‌

Last Updated 28 ಜೂನ್ 2018, 15:52 IST
ಅಕ್ಷರ ಗಾತ್ರ

‘ಟಗರು’ ಸಿನಿಮಾದಲ್ಲಿ ನಿಮಗೆ ಇಷ್ಟವಾದ ಸಂಗತಿ ಯಾವುದು?
ಇದು ಸಾಮಾನ್ಯವಾದ ಕಥೆಯೇ. ಒಂದೇ ಸಾಲಿನಲ್ಲಿ ಹೇಳಬೇಕು ಎಂದರೆ ಇದು ಕಳ್ಳ ಮತ್ತು ಪೊಲೀಸ್ ಮಧ್ಯ ನಡೆಯುವ ಜಟಾಪಟಿ. ಆದರೆ ಈ ಸರಳ ಕಥೆಯಲ್ಲಿಯೇ ಸೂರಿ ಹಲವು ಮಹತ್ವದ ವಿಷಯ ಹೇಳಿದ್ದಾರೆ. ‘ಹುಷಾರು’ ಎಂಬ ಶಬ್ದವನ್ನು ನಾವು ದಿನನಿತ್ಯ ಮತ್ತೆ ಮತ್ತೆ ಬಳಸುತ್ತಿರುತ್ತೇವೆ. ಇಂದಿನ ಸಮಾಜದಲ್ಲಿ ಎಲ್ಲರೂ ಹುಷಾರಾಗಿರಬೇಕು. ನಾನು ಹೊರಗಡೆ ಹೋಗಬೇಕಾದರೂ ನನ್ನ ಮನೆಯವರು ‘ಹುಷಾರು’ ಎಂದು ಹೇಳುತ್ತಾರೆ. ಮಕ್ಕಳನ್ನು ಹೊರಗೆ ಕಳಿಸುವಾಗಲೂ ಹುಷಾರು ಎಂದು ಹೇಳಿಯೇ ಕಳಿಸುತ್ತೇವೆ. ಆ ಒಂದು ಶಬ್ದದಲ್ಲಿ ಎಷ್ಟು ಆಯಾಮಗಳಿವೆ ನೋಡಿ.

ಸಮಾಜ ‘ಹುಷಾರು’ ಆಗಿರುವಲ್ಲಿ ಪೊಲೀಸ್‌ ವ್ಯವಸ್ಥೆಯ ಪಾತ್ರವೇನು? ಸಾರ್ವಜನಿಕರು ಈ ವಿಷಯದಲ್ಲಿ ವ್ಯವಸ್ಥೆಗೆ ಹೇಗೆ ಬೆಂಬಲ ಕೊಡಬೇಕು? ಸರ್ಕಾರ ಪೊಲೀಸ್‌ ವ್ಯವಸ್ಥೆಗೆ ಹೇಗೆ ಬೆಂಬಲ ಕೊಡಬೇಕು ಎನ್ನುವ ವಿಷಯಗಳನ್ನು ಅನನುಕ್ರಮ ನಿರೂಪಣಾ ವಿಧಾನದಲ್ಲಿ (ನಾನ್‌ ಲೀನಿಯರ್) ತುಂಬ ಚೆನ್ನಾಗಿ ಹೆಣೆದಿದ್ದಾರೆ ಸೂರಿ. ಅದು ನನಗೆ ಖುಷಿಯಾಗಿದ್ದು. ಇದು ಸುಲಭವಲ್ಲ. ಇಂಥ ಪ್ರಯೋಗವನ್ನು ಸೂರಿ ಜನರಿಗೆ ಇಷ್ಟವಾಗುವ ಹಾಗೆ ಮಾಡಿದ್ದಾರೆ. ಜನರು ಒಪ್ಪಿಕೊಳ್ಳುವಂಥ ಪ್ರಯೋಗಗಳನ್ನು ಮಾಡುವುದು ತುಂಬ ಮಹತ್ವದ ಸಂಗತಿ.

ಇಂಥ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಸ್ಟಾರ್‌ ನಟನಾಗಿ ರಿಸ್ಕ್‌ ಅನಿಸಲಿಲ್ಲವೆ?
ನಿಜ, ಇದು ರಿಸ್ಕ್‌. ಆದರೆ ರಿಸ್ಕ್‌ ತೆಗೆದುಕೊಳ್ಳದಿದ್ದರೆ ಕಷ್ಟ. ನಾವು ಚಿತ್ರರಂಗದ ಹೊಸ ಗಾಳಿಯೊಟ್ಟಿಗೇ ಚಲಿಸುತ್ತಿರಬೇಕು. ನಮ್ಮ ದಾರಿಯಲ್ಲಿ ಏನೇನು ಬರುತ್ತದೆಯೋ ಅದನ್ನು ಒಪ್ಪಿಕೊಳ್ಳುತ್ತ ಹೋಗುತ್ತಿರಬೇಕು. ಬೇರೆ ಭಾಷೆಗಳಲ್ಲಿ ಎಷ್ಟು ಪ್ರಯೋಗಗಳು ನಡೆಯುತ್ತಿವೆ ನೋಡಿ, ನಾವೂ ಅದೇ ರೀತಿ ಪ್ರಯತ್ನಗಳನ್ನು ಮಾಡಬೇಕಲ್ಲ...

‘ಟಗರು’ವಿನಷ್ಟೇ ‘ಡಾಲಿ’ ಪಾತ್ರವನ್ನು ಜನ ಇಷ್ಟಪಟ್ಟರು...

ಅಂಥ ಪ್ಯಾಟರ್ನ್‌ ಇದ್ದಾಗಲೇ ಒಳ್ಳೆಯ ಸಿನಿಮಾ ಆಗುವುದು. ಯಾಕೆಂದರೆ ಎದುರಾಳಿ ದುರ್ಬಲ ಆಗಿಬಿಟ್ಟರೆ ನಾಯಕನೂ ವಿಜೃಂಭಿಸಲಾಗುವುದಿಲ್ಲ. ಚಾಣಾಕ್ಷ ಕಳ್ಳ ಇದ್ದಾಗಲೇ ದಕ್ಷ ಪೊಲೀಸ್ ಅಧಿಕಾರಿಗೆ ಬೆಲೆ ಬರುವುದು. ಆ ಥರ ಇದ್ರೇನೆ ಮಜಾ ಅದು.

ಒಂದು ಸಿನಿಮಾ ಯಾರಿಂದ ರೂಪುಗೊಂಡಿತು ಎನ್ನುವುದು ಮುಖ್ಯವಲ್ಲ, ಹೇಗೆ ರೂಪುಗೊಂಡಿತು ಎನ್ನುವುದು ಮುಖ್ಯ. ಎಲ್ಲ ಪಾತ್ರಗಳೂ ಇಷ್ಟವಾಗಬೇಕು ಅಂದರೆ ಎಲ್ಲದಕ್ಕೂ ಮಹತ್ವ ಇರಲೇಬೇಕಲ್ಲವೇ? ‘ಟಗರು’ ಚಿತ್ರದಲ್ಲಿ ಸಣ್ಣ ಸಣ್ಣ ಪಾತ್ರಗಳು ಜನರಿಗೆ ಇಷ್ಟವಾದವು. ಅದು ನಮಗೆ ಖುಷಿ ಕೊಟ್ಟ ವಿಷಯ. ಡಾಲಿ ಹಾಗೆ ಇದ್ದರೇನೇ ಟಗರು ಶಿವ ಹೀಗಿರೋದು. ಡಾಲಿ ಇಲ್ದೆ ಟಗರು ಶಿವ ಇಲ್ಲ; ಟಗರು ಶಿವ ಇಲ್ದೆ ಡಾಲಿ ಇಲ್ಲ.

‘ಟಗರು’ ಚಿತ್ರದ ಈ ಯಶಸ್ಸು ನಿಮಗೆ ಕೊಟ್ಟ ಸೂಚನೆಗಳೇನು?
ಈ ಯಶಸ್ಸು ಜನರಿಂದ ದೊರೆತ ಪ್ರೋತ್ಸಾಹ. ಮುಂದೆ ಮಾಮೂಲಿಗಿಂತ ಭಿನ್ನವಾದ ಬೇರೆ ವಿನ್ಯಾಸದ ಸಿನಿಮಾ ಮಾಡಲು ಈ ಯಶಸ್ಸು ನಾಂದಿ. ಇನ್ನಷ್ಟು ಇಂಥ ಪ್ರಯತ್ನಗಳು ಆಗಬೇಕು, ಜನರು ಗೆಲ್ಲಿಸುತ್ತಾರೆ ಎಂಬ ಸೂಚನೆಯನ್ನು ಈ ಗೆಲುವು ನಮಗೆ ನೀಡಿದೆ.

ನಟನಾಗಿ ಇಂಥ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಯಾಕೆ ಮುಖ್ಯ ಅನಿಸುತ್ತದೆ?
ಇಂದು ಕನ್ನಡದಲ್ಲಿ ನಡೆಯುತ್ತಿರುವ ಹೊಸ ಬಗೆಯ ಪ್ರಯೋಗಗಳಲ್ಲಿ ಭಾಗಿಯಾಗಲು ನನಗೂ ಅವಕಾಶ ಸಿಗುತ್ತಿದೆಯಲ್ಲ, ಅದು ತುಂಬ ಖುಷಿಯ ವಿಷಯ. ಯಾಕೆಂದರೆ ಸಾಮಾನ್ಯ ಮಾದರಿ ಸಿನಿಮಾ ಮಾಡುವುದು ಬೇರೆ. ಆದರೆ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ತೃಪ್ತಿಯೇ ಬೇರೆ. ಅದು ವಿಶೇಷವಾದದ್ದು.

ಕನ್ನಡ ಚಿತ್ರರಂಗದ ಹೊಸಪೀಳಿಗೆಯ ಕುರಿತು ಏನು ಹೇಳಲು ಇಷ್ಟಪಡುತ್ತೀರಿ?
ಇಂದು ಕನ್ನಡದಲ್ಲಿ ಸಿನಿಮಾ ಮೇಕಿಂಗ್, ಸಂಗೀತ, ಭೂಮಿಕೆ ಎಲ್ಲದರಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಹೊಸ ಹೊಸ ಬಗೆಗಳು ಬರುತ್ತಿವೆ. ಹೊಸ ಹೊಸ ನಟರು, ನಿರ್ದೇಶಕರು ಬರುತ್ತಿದ್ದಾರೆ. ನಾನೂ ಅದರ ಭಾಗವಾಗಲು ಇಷ್ಟಪಡುತ್ತೇನೆ. ಮುಂದಿನ ವರ್ಷದಿಂದ ನಾನೂ ಸಿನಿಮಾ ನಿರ್ಮಾಣ ಕೆಲಸವನ್ನು ಆರಂಭಿಸುತ್ತಿದ್ದೇನೆ. ಈ ಮೂಲಕ ಹೊಸ ಪ್ರಯೋಗಶೀಲ ಪ್ರತಿಭೆಗಳ ಸಿನಿಮಾಗಳನ್ನು ನಿರ್ಮಿಸುತ್ತೇನೆ.

ಸ್ಟಾರ್ ವಾರ್‌ ಅನ್ನು ನೀವು ಹೇಗೆ ನೋಡುತ್ತೀರಿ? ಇದರಿಂದ ಚಿತ್ರರಂಗದ ಮೇಲೆ ಆಗುವ ಪರಿಣಾಮಗಳೇನು?
ಸ್ಟಾರ್ ವಾರ್‌ ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ನಾವು ನಟರೆಲ್ಲ ಚೆನ್ನಾಗಿಯೇ ಇದ್ದೀವಿ. ನಾನು ಯಾವಾಗಲೂ ಹೇಳುತ್ತಲೂ ಇರುತ್ತೇನೆ. ಯಾಕೆ ಈ ರೀತಿಯ ಗುಂಪುಗಳು ಬೇಕು? ಯಾರಿಗೆ ಯಾರು ಇಷ್ಟವಾಗುತ್ತಾರೋ ಅವರ ಸಿನಿಮಾಗಳನ್ನು ನೋಡಲಿ. ಅಷ್ಟಕ್ಕೆ ಬಿಟ್ಟುಬಿಡಿ ಅಷ್ಟೆ. ಅದಕ್ಕೆ ಕಮೆಂಟ್ ಮಾಡುವುದಕ್ಕೆಲ್ಲ ಹೋಗಬಾರದು. ಒಬ್ಬ ಸುಮ್ಮನಾದರೆ ಎಲ್ಲರೂ ಸುಮ್ಮನಾಗುತ್ತಾರೆ. ಸ್ಟಾರ್ ವಾರ್‌ ಎನ್ನುವುದು ಅನಗತ್ಯ.

ಕನ್ನಡಕ್ಕೆ ಒಳ್ಳೆಯ ಸಿನಿಮಾ ಬೇಕು. ಅದನ್ನು ದರ್ಶನ್ ಕೊಟ್ಟರೂ ಸಂತೋಷ, ಯಶ್ ಕೊಟ್ಟರೂ ಸಂತೋಷ, ಶಿವಣ್ಣ, ಸುದೀಪ್ ಯಾರು ಕೊಟ್ಟರೂ ಸಂತೋಷವೇ. ಒಟ್ಟಿನಲ್ಲಿ ನಮ್ಮ ಚಿತ್ರರಂಗಕ್ಕೆ ಒಳ್ಳೆಯದಾಗಬೇಕು. ಆ ರೀತಿಯಲ್ಲಿ ಸಿನಿಮಾಗಳನ್ನು ನೋಡಬೇಕು ಅಷ್ಟೆ.

ಅಭಿಮಾನಿಗಳು ಹೀಗೆ ಕಿತ್ತಾಡುವುದರಿಂದ ಚಿತ್ರರಂಗಕ್ಕೆ ಹಾನಿಯಾಗುತ್ತದೆ. ನಿಮಗೆ ಯಾವ ನಟ ಇಷ್ಟವೋ ಅವನ ಸಿನಿಮಾ ನೋಡಿ. ಹಾಗೆಯೇ ಬೇರೆ ನಟರ ಕುರಿತೂ ಪ್ರೀತಿ ಇಟ್ಟುಕೊಳ್ಳಿ. ಎಲ್ಲ ನಟರೂ ಸೇರಿಯೇ ಚಿತ್ರರಂಗ ಬೆಳೆಯುವುದು.

***
ಟಗರಿನ ಪೊಗರಿಗೆ 125ರ ಸಂಭ್ರಮ
‘ಚಂದನವನ’ದಲ್ಲಿ ಈ ವರ್ಷ ತೆರೆ ಕಂಡಿರುವ ಚಿತ್ರಗಳ ಪೈಕಿ ಫುಲ್‌ ಜೋಶ್‌ನಿಂದ ಮುನ್ನುಗ್ಗುತ್ತಿರುವುದು ‘ಟಗರು’. ಮೈಯೆಲ್ಲಾ ಪೊಗರು ತುಂಬಿಕೊಂಡಿರುವ ಟಗರು ಈಗ 125 ದಿನಗಳನ್ನು ಪೂರೈಸಿದೆ. ಈ ಕಾರಣಕ್ಕಾಗಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ಬೆಂಗಳೂರಿನಲ್ಲಿ ಸಂತೋಷ ಕೂಟವನ್ನು ಭರ್ಜರಿಯಾಗಿ ಆಯೋಜಿಸಿದ್ದರು.

‘ಟಗರು’ ಚಿತ್ರ ರೂಪುಗೊಳ್ಳಲು ಕಾರಣರಾದ ಎಲ್ಲರನ್ನೂ ಅಲ್ಲಿ ವೇದಿಕೆ ಮೇಲೆ ಕರೆದು ಸನ್ಮಾನಿಸಿದರು. ಈ ಸಮಾರಂಭದಲ್ಲಿ ಶಿವಣ್ಣ (ಶಿವರಾಜ್‌ ಕುಮಾರ್‌), ಪುನೀತ್ ರಾಜ್‌ಕುಮಾರ್‌, ಉಪೇಂದ್ರ, ಅಂಬರೀಷ್, ದೇವರಾಜ್‌, ವಸಿಷ್ಠ ಸಿಂಹ, ಧನಂಜಯ್, ಯೋಗರಾಜ್ ಭಟ್, ನಟಿಯರಾದ ಭಾವನಾ, ಮಾನ್ವಿತಾ ಹರೀಶ್ ಸೇರಿದಂತೆ ಹಲವರು ‍ಭಾಗಿಯಾಗಿದ್ದರು. ಶಿವಣ್ಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಾತ್ರವೇ ಅಲ್ಲ, ಚಿತ್ರತಂಡದವರ ಜೊತೆ ಕೆಲವು ಹಾಡುಗಳಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು.

ಒಂದಲ್ಲ, ಎರಡಲ್ಲ ಮೂರು ಬಾರಿ ಹೆಜ್ಜೆ ಹಾಕಿದರು ಶಿವಣ್ಣ. ಇದೇ ಕಾರ್ಯಕ್ರಮದಲ್ಲಿ ಕುತೂಹಲದ ಪ್ರಶ್ನೆಯೊಂದು ಎದುರಾಯಿತು. ಶಿವಣ್ಣ ದಿನಕ್ಕೆ ಎಷ್ಟು ಬಾರಿ ಚಹಾ ಕುಡಿಯುತ್ತಾರೆ ಎಂಬುದು ಆ ಪ್ರಶ್ನೆ! ‘ಶಿವಣ್ಣ ಚಹಾ ಜಾಸ್ತಿ ಕುಡಿಯುವುದಿಲ್ಲ. ದಿನಕ್ಕೆ ಒಂದೆರಡು ಬಾರಿ ಕುಡಿಯುತ್ತಾರೆ’ ಎಂದರು ‘ಟಗರು’ ಚಿತ್ರತಂಡದ ಸದಸ್ಯರೊಬ್ಬರು. ‘ಆದರೆ, ನಿರ್ದೇಶಕ ಸೂರಿ ಅವರು ಹಲವು ಬಾರಿ ಚಹಾ ಕುಡಿಯುತ್ತಾರೆ’ ಎಂದೂ ಅವರು ಬಹಿರಂಗಪ‍ಡಿಸಿದರು.

ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್ ಅವರ ಹುಟ್ಟುಹಬ್ಬವನ್ನೂ ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಒಂದಿಷ್ಟು ಪುಟಾಣಿಗಳ ಜೊತೆ ಕೇಕ್ ಕತ್ತರಿಸಿ, ಅವರು ಜನ್ಮದಿನದ ಸಂಭ್ರಮ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT