ಗುರುವಾರ , ಆಗಸ್ಟ್ 18, 2022
25 °C

ಜೂ.ಎನ್‌ಟಿಆರ್ ಸಿಕ್ಸ್‌ಪ್ಯಾಕ್: ವೈರಲ್ ಆಗುತ್ತಿರುವುದು ಎಡಿಟೆಡ್ ಚಿತ್ರವೇ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಖ್ಯಾತ ನಿರ್ದೇಶಕ ರಾಜಮೌಳಿ ಆ್ಯಕ್ಷನ್‌ ಕಟ್‌ ಹೇಳಿದ್ದ 'ಆರ್‌ಆರ್‌ಆರ್‌' ಸಿನಿಮಾದಲ್ಲಿ ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ಜೋಡಿ ಕಮಾಲ್‌ ಮಾಡಿತ್ತು. ಈ ಸಿನಿಮಾ ದೇಶದಾದ್ಯಂತ ಉತ್ತಮ ಪ್ರದರ್ಶನ ಕಂಡು, ಗಳಿಕೆಯಲ್ಲಿಯೂ ದಾಖಲೆ ಬರೆದಿದೆ.

ನಟ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆದ ದಿವಂಗತ ಎನ್‌.ಟಿ. ರಾಮರಾವ್‌ ಅವರ ಮೊಮ್ಮಗನಾಗಿರುವ ಜೂ.ಎನ್‌ಟಿಆರ್‌ ಅವರ ಮನೋಜ್ಞ ಅಭಿನಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅವರು, 1991ರಲ್ಲಿ ಬಾಲ ನಟನಾಗಿ ಬಣ್ಣದ ಬದುಕಿಗೆ ಹೆಜ್ಜೆ ಇಟ್ಟವರು.

ಇದನ್ನೂ ಓದಿ: 

ಶುಕ್ರವಾರ ಅವರ ಚಿತ್ರವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಫೋಟೊ ಹಂಚಿಕೊಂಡ ಫೋಟೊಗ್ರಾಫರ್‌ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರಕ್ಕೆ ಆಕ್ರೋಶವೇಕೆ?
ಜೂ.ಎನ್‌ಟಿಆರ್‌ ಅವರು ಸಿಕ್ಸ್‌ಪ್ಯಾಕ್‌ ದೇಹ ಪ್ರದರ್ಶಿಸುತ್ತಿರುವ ಚಿತ್ರವೊಂದನ್ನು ಛಾಯಾಗ್ರಾಹಕ ದಬ್ಬೂ ರತ್ನಾನಿ ಅವರು ಶುಕ್ರವಾರ ಹಂಚಿಕೊಂಡಿದ್ದಾರೆ. ಚಿತ್ರದೊಂದಿಗೆ 'ಮನಸ್ಸು ಏನನ್ನು ನಂಬುತ್ತದೋ, ದೇಹ ಅದನ್ನು ಸಾಧಿಸುತ್ತದೆ' ಎಂದೂ ಬರೆದುಕೊಂಡಿದ್ದಾರೆ. 'ಕಪ್ಪು ಬಿಳುಪಿನ' ಈ ಚಿತ್ರವನ್ನು ಇದುವರೆಗೆ ಬರೋಬ್ಬರಿ 31 ಸಾವಿರ ಜನರು ಮೆಚ್ಚಿಕೊಂಡಿದ್ದಾರೆ. ಆದರೆ ಕೆಲವರು ರತ್ನಾನಿ ವಿರುದ್ಧ ಕಿಡಿ ಕಾರಿದ್ದಾರೆ.

'ಆರ್‌ಆರ್‌ಆರ್‌ ಚಿತ್ರಕ್ಕಾಗಿ ಜೂ.ಎನ್‌ಟಿಆರ್‌ ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ, ಇಷ್ಟು ಬೇಗ ತೂಕ ಕಡಿಮೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ' ಎಂಬುದು ಹಲವು ನೆಟ್ಟಿಗರ ವಾದ. ಹೀಗಾಗಿ 'ಇದು ಎಡಿಟ್‌ ಮಾಡಲಾದ ಚಿತ್ರ' ಎಂದು ರತ್ನಾನಿ ಅವರನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: 

'ಇದು ಹಳೇ ಚಿತ್ರವಿರಬಹುದು' ಎಂಬ ಗುಮಾನಿ ಕೆಲವರಲ್ಲಿದ್ದರೆ, ಇನ್ನೂ ಕೆಲವರು 'ಇದು 1,000 ಪರ್ಸೆಂಟ್ ಎಡಿಟೆಡ್‌ ಚಿತ್ರ' ಎಂದು ತೀರ್ಮಾನಿಸಿಯೇ ಕಾಮೆಂಟ್ ಮಾಡಿದ್ದಾರೆ.

ಹಾಗಿದ್ದರೆ ಇದು ಎಡಿಟೆಡ್‌ ಚಿತ್ರವೇ?
ಈ ಚಿತ್ರ ಇತ್ತೀಚಿಗೆ ತೆಗೆದಿರುವುದಲ್ಲ. ಕೆಲವು ವರ್ಷಗಳ ಹಿಂದೆ ಸೆರೆಹಿಡಿಯಲಾಗಿರುವ ಈ ಚಿತ್ರವನ್ನು, 2020ರ ಮೇ 19ರಂದು (ಜೂ.ಎನ್‌ಟಿಆರ್‌ ಅವರ ಹುಟ್ಟುಹಬ್ಬದಂದು) ರತ್ನಾನಿ ಅವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ಜೂ.ಎನ್‌ಟಿಆರ್‌ ಅವರು ಸದ್ಯ ಕೊರಟಾಲ ಶಿವ ನಿರ್ದೇಶನದ 'ಎನ್‌ಟಿಆರ್30' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಂದಮೂರಿ ಕಲ್ಯಾಣ್‌ ರಾಮ್‌ ಮತ್ತು ಸುಧಾಕರ್‌ ಮಿಕ್ಕಿಲ್ನೆನಿ ಹಣ ಹೂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು