ಸೋಮವಾರ, ಸೆಪ್ಟೆಂಬರ್ 28, 2020
29 °C

ಕೆಜಿಎಫ್‌ ದೂಳಿನಲ್ಲಿ ಖಳನ ಹೊಳಪು

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

Deccan Herald

ಗಡುಸು ಮುಖ, ಕೆಂಡಕಾರುವ ಕಣ್ಣುಗಳು, ಕಟ್ಟುಮಸ್ತು ದೇಹ, ಕ್ರೌರ್ಯದ ಶಾರೀರರೂಪದಂತೆ ಭಾಸವಾಗುವ ಧ್ವನಿ... ‘ಆ್ಯಕ್ಷನ್’ ಎಂಬ ಸದ್ದು ಕೇಳಿದಾಕ್ಷಣ ಆ ವ್ಯಕ್ತಿ ಅಕ್ಷರಶಃ ರಾಕ್ಷಸನಾಗಿಬಿಡುತ್ತಾನೆ. ಅವನ ಅಬ್ಬರಕ್ಕೆ ದೂಳೇಳುತ್ತದೆ, ನೆಲ ನಡುಗುತ್ತದೆ. ಎದುರಿನವರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಶಬ್ದ ಕೇಳಲಾರಂಭಿಸುತ್ತದೆ. ‘ಕಟ್‌’ ಎಂಬ ಶಬ್ದ ಕೇಳಿ ಕ್ಯಾಮೆರಾ ಎದುರಿಂದ ಆಚೆ ಬಂದರೆ ಸಾಕು. ಕಣ್ಣಲ್ಲಿನ ಬೆಂಕಿ ಆರಿ ಮೃದು ಭಾವವೊಂದು ಮುಖವನ್ನು ಆವರಿಸಿಕೊಳ್ಳುತ್ತದೆ. ಅಲ್ಲಿಂದ ಮುಂದೆ ಅವರು ಒಳ್ಳೆಯ ಸ್ನೇಹಿತ, ಭಾವಜೀವಿ, ಕಲಿಕೆಯ ವಿದ್ಯಾರ್ಥಿ.

ಜಾನ್‌ ಕೊಕೇನ್‌!
ಬಹುನಿರೀಕ್ಷಿತ ‘ಕೆಜಿಎಫ್‌’ ಚಿತ್ರದಲ್ಲಿ ಯಶ್‌ ಎದುರು ಅಬ್ಬರಿಸಲು ಸಜ್ಜಾಗಿರುವ ಈ ಜಾನ್‌ ಮೂಲತಃ ಮಲಯಾಳಿ. ಹುಟ್ಟಿದ್ದು ಬೆಳೆದಿದ್ದೆಲ್ಲ ಮುಂಬೈ, ನಂತರ ನಟಿಯೂ ಆಗಿರುವ ತಮ್ಮ ಪತ್ನಿ ಮೀರಾ ವಾಸುದೇವ್‌ ಅವರ ಜತೆ ಗೋವಾದಲ್ಲಿ ವಾಸವಾಗಿದ್ದರು. ಈಗ ಚೆನ್ನೈ ನಿವಾಸಿ. 

ಮಾಡೆಲಿಂಗ್‌ ಕ್ಷೇತ್ರದಲ್ಲಿ ದೊಡ್ಡ ಹೆಸರು ಗಳಿಸಿದ್ದ ಜಾನ್‌ ನಟನೆಗ ಅಂಗಳಕ್ಕಿಳಿದಿದ್ದು ಮಲಯಾಳಂ ಸಿನಿಮಾ ಮೂಲಕವೇ. ಮಲಯಾಳಂನಲ್ಲಿಯೇ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದ ಅವರು ನಂತರ ಪುನೀತ್‌ ರಾಜ್‌ಕುಮಾರ್‌ ಅಭಿನಯದ, ಜೇಕಬ್‌ ವರ್ಗೀಸ್‌ ನಿರ್ದೇಶನದ ‘ಪೃಥ್ವಿ’ ಸಿನಿಮಾ ಮೂಲಕ ಕನ್ನಡದ ಕಡೆಗೂ ಹೊರಳಿಕೊಂಡರು. ನಂತರ ದರ್ಶನ್‌ ಅಭಿನಯದ ‘ಶೌರ್ಯ’, ಶಿವಣ್ಣ ಅವರ ಜತೆಗೆ ‘ಮೈಲಾರಿ’, ಸೂರಿ ನಿರ್ದೇಶನದ ‘ಅಣ್ಣಾಬಾಂಡ್‌’, ಶಿವಣ್ಣ ಅವರ ‘ಶಿವು’ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಭಾಷೆಯ ಗಡಿಯನ್ನು ದಾಟಲು ಅವಕಾಶ ಮಾಡಿಕೊಟ್ಟ ಕನ್ನಡ ಚಿತ್ರರಂಗದ ಬಗ್ಗೆ ಜಾನ್‌ಗೆ ಅಪಾರ ಗೌರವವಿದೆ. 

ಈಗ ಜಾನ್‌ ದಕ್ಷಿಣ ಭಾರತದ ಬೇಡಿಕೆ ಖಳನಟ. ಮಲಯಾಳಂ, ಕನ್ನಡ ಜತೆಗೆ ತೆಲುಗು, ತಮಿಳು ಭಾಷೆಗಳ ಸ್ಟಾರ್‌ ನಟರ ಎದುರು ದೂಳೆಬ್ಬಿಸಿ ಅಬ್ಬರಿಸಿದ ಹೆಗ್ಗಳಿಕೆ ಅವರದ್ದು. ಹಿಂದಿಗೂ ಹೋಗಿ ಬಂದಿದ್ದಾರೆ. 

ಖಳನಟನಾಗಬೇಕು ಎಂದು ಮೊದಲೇ ನಿರ್ಧರಿಸಿಕೊಂಡು ನಟನೆಗೆ ಇಳಿದವರಲ್ಲ ಜಾನ್‌. ‘ನಾನು ಏನನ್ನೂ ನಿರ್ಧರಿಸಿಕೊಂಡು ನಟನೆಗೆ ಇಳಿದವನಲ್ಲ. ಆದರೆ ಮೊದಲಿನಿಂದಲೂ ನನಗೆ ನೆಗೆಟೀವ್ ಪಾತ್ರಗಳಲ್ಲಿಯೇ ನಟಿಸುವ ಅವಕಾಶ ಬರುತ್ತ ಹೋಯ್ತು. ಹಾಗಾಗಿ ಖಳನಟನಾಗಿಯೇ ಗುರ್ತಿಸಿಕೊಂಡೆ’ ಎನ್ನುವ ಅವರಿಗೆ ಈ ಕುರಿತು ಯಾವ ಬೇಸರವೂ ಇಲ್ಲ. ‘ಬೇರೆ ಬಗೆಯ ಪಾತ್ರಗಳಿಗೂ ನಾನು ತೆರೆದುಕೊಂಡಿದ್ದೇನೆ. ಸಕಾರಾತ್ಮಕ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ ನನಗಿದೆ’ ಎಂದೂ ಹೇಳುತ್ತಾರೆ.

‘ಖಳನ ಪಾತ್ರದಲ್ಲಿಯೂ ವೈವಿಧ್ಯವಿದೆ’ ಎನ್ನುವ ಜಾನ್‌ಗೆ ‘ಕೆಜಿಎಫ್‌’ ಸಿನಿಮಾ ಕುರಿತು ಅಪಾರ ನಿರೀಕ್ಷೆ ಇದೆ. ‘ಮೊದಲ ಬಾರಿಗೆ ಇಷ್ಟು ದೊಡ್ಡ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನಿರ್ದೇಶಕ ಪ್ರಶಾಂತ್‌ ನೀಲ್‌ ನನ್ನನ್ನು ಕರೆದು ಈ ಪಾತ್ರಕ್ಕೆ ಕೊಟ್ಟಾಗ ತುಂಬ ಖುಷಿಪಟ್ಟೆ. ಯಶ್‌ ಕೂಡ ನನ್ನನ್ನು ತುಂಬ ಪ್ರೀತಿಯಿಂದ ಗೌರವದಿಂದ ನಡೆಸಿಕೊಂಡರು. ನಾನು ಅವರನ್ನು ಮೊದಲ ಬಾರಿಗೆ ಭೇಟಿ ಆಗುತ್ತಿದ್ದದ್ದಾದರೂ ಮೊದಲೇ ನನ್ನ ಬಗ್ಗೆ ತಿಳಿದುಕೊಂಡಿದ್ದರು’ ಎಂದು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿಯೂ ಕೆಜಿಎಫ್‌ ಸಖತ್ ಹವಾ ಎಬ್ಬಿಸಿದೆ ಎನ್ನುವುದನ್ನೂ ಜಾನ್‌ ಗ್ರಹಿಸಿದ್ದಾರೆ. ‘ಕೆಜಿಎಫ್‌ ಎಲ್ಲ ಭಾಷೆಗಳಲ್ಲಿಯೂ ಒಂದು ಬೆಂಚ್‌ಮಾರ್ಕ್‌ ಆಗುವ ಎಲ್ಲ ಲಕ್ಷಣಗಳೂ ಇವೆ. ಬಾಹುಬಲಿ ಸಿನಿಮಾದಲ್ಲಿ ಬಹುತೇಕ ಗ್ರಾಫಿಕ್‌ಗಳೇ ಇದ್ದವು. ಆದರೆ ಕೆಜಿಎಫ್‌ ಹಾಗಲ್ಲ, ಇಲ್ಲಿ ನೈಜ ಚಿತ್ರಣ ಇದೆ. ಇದು ಕೋಲಾರ ಚಿನ್ನದಗಣಿಯ ಕುರಿತಾದ ಕಥೆ. ನಾಯಕ ಮತ್ತು ಅವನ ಬದುಕಿನ ಪ್ರಯಾಣವೇ ತುಂಬ ಅದ್ಭುತವಾಗಿದೆ. ಇದು ಸ್ಟೈಲಿಷ್‌ ಸಿನಿಮಾ. ವಿಶೇಷವಾಗಿ ಛಾಯಾಗ್ರಾಹಕ ಭುವನ್ ಗೌಡ ಈ ಚಿತ್ರವನ್ನು ಸ್ಟೈಲಿಷ್ ಆಗಿ ಚಿತ್ರೀಕರಿಸಿದ್ದಾರೆ. ಇದೊಂದು ಹಾಲಿವುಡ್‌ ಸ್ಟೈಲ್ ಸಿನಿಮಾ. ಯೂ ಟ್ಯೂಬ್‌, ಸೋಷಿಯಲ್ ಮೀಡಿಯಾ ಎಲ್ಲ ಕಡೆಗಳಲ್ಲಿಯೂ ಕೆಜಿಎಫ್‌ ಟ್ರೈಲರ್‌ ಬಗ್ಗೆಯೇ ಮಾತನಾಡುತ್ತಿದ್ದಾರೆ. ಬರಿಯ ಟ್ರೈಲರ್ ಈ ಪರಿಯ ಪ್ರಚಾರ ಗಳಿಸಿದೆ ಎಂದರೆ ಸಿನಿಮಾಗೆ ಯಶಸ್ಸೂ ಕಟ್ಟಿಟ್ಟ ಬುತ್ತಿ’ ಎನ್ನುವುದು ಅವರ ಅಭಿಮತ.

ಮುಂದೆ ಎಂದಾದರೂ ನಾಯಕನಾಗಿ ನಟಿಸಬೇಕು ಎಂಬ ಆಸೆ ಇಲ್ಲವೇ? ಎಂದು ಕೇಳಿದರೆ ರಾಜ್‌ಕುಮಾರ್‌ ಅವರ ಮಾತನ್ನು ನೆನಪಿಸಿಕೊಳ್ಳುತ್ತಾರೆ ಅವರು.

‘ಅಪ್ಪಾಜಿ, ಅಭಿಮಾನಿಗಳೇ ದೇವರು ಎಂದು ಹೇಳಿಲ್ಲವೇ? ಅದೇ ನನ್ನ ನಂಬಿಕೆ ಕೂಡ. ಅವರೇ ನನ್ನನ್ನು ಖಳನಟನಾಗಿ ಜನಪ್ರಿಯಗೊಳಿಸಿದ್ದು. ಒಂದೊಮ್ಮೆ ಅವರು ಮನಸ್ಸು ಮಾಡಿದರೆ, ನಾಯಕನಟನನ್ನಾಗಿ ಮಾಡಲೂ ಬಹುದು. ನನ್ನ ಕೈಲೇನಿದೆ. ಎಲ್ಲವೂ ಅಭಿಮಾನಿಗಳ ಚಿತ್ತ’ ಎಂದು ರಾಜ್‌ಕುಮಾರ್‌ ಮಾತುಗಳನ್ನು ಕೈದೀವಿಗೆಯಾಗಿ ಹಿಡಿದು ನಿಲ್ಲುವ ಜಾನ್‌, ಕೆಜಿಎಫ್‌ನ ದೂಳಿನಲ್ಲಿ ಪ್ರೇಕ್ಷಕರನ್ನು ಎದುರುಗೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. 

ಜಾನ್‌ ಕನ್ನಡ ಕಲಿತಿದ್ದು
ಮಲಯಾಳಂನ ಜಾನ್‌ ಕೊಕೆನ್‌ಗೆ ಕನ್ನಡ ಕಲಿಸಿದ್ದು ರಾಜ್‌ಕುಮಾರ್ ಅಂತೆ! ಅದ್ಹೇಗೆ ಸಾಧ್ಯ ಎಂದು ಅಚ್ಚರಿಪಡಬೇಡಿ. ಸ್ವತಃ ಜಾನ್‌ ಅವರೇ ಈ ಕುರಿತು ಹೇಳಿಕೊಳ್ಳುತ್ತಾರೆ.

‘ನಾನು ಪೃಥ್ವಿ ಸಿನಿಮಾದಲ್ಲಿ ನಟಿಸುವಾಗ ಕನ್ನಡ ಬರುತ್ತಿರಲಿಲ್ಲ. ನಾನು ಯಾವ ಭಾಷೆಯನ್ನು ಕಲಿಯುತ್ತೇನೋ ಆ ಭಾಷೆಯನ್ನು ತಿಳಿದುಕೊಂಡಿರಬೇಕು ಎನ್ನುವುದು ನನ್ನ ನಿಲುವು. ಕನ್ನಡ ಗೊತ್ತಾಗದೆ ಪರದಾಡುತ್ತಿದ್ದಾಗ ಪುನೀತ್‌ ಅವರು ನನ್ನ ಕೈಲಿ ರಾಜ್‌ಕುಮಾರ್ ಅವರ 20 ಸಿನಿಮಾಗಳ ಡಿವಿಡಿಗಳನ್ನು ಕೊಟ್ಟರು. ‘ಈ ಸಿನಿಮಾಗಳನ್ನು ನೋಡಿ ನಿಮಗೆ ಕನ್ನಡ ಭಾಷೆ ಪ್ರಿಯವಾಗುತ್ತದೆ’ ಎಂದೂ ಹೇಳಿದ್ದರು. ಹೀಗೆ ನಾನು ಅಪ್ಪಾಜಿ ಸಿನಿಮಾಗಳನ್ನು ನೋಡಲು ಶುರುಮಾಡಿದೆ. ಭಕ್ತ ಕುಂಬಾರ, ಮಯೂರ, ಶಂಕರ್‌ಗುರು, ಕಿಲಾಡಿ ರಂಗ, ದೇವರ ಮಕ್ಕಳು, ಭಕ್ತ ವಿಜಯ ಈ ಎಲ್ಲ ಸಿನಿಮಾಗಳನ್ನು ನೋಡ ನೋಡುತ್ತ ನಾನು ಕನ್ನಡ ಭಾಷೆಯ ಸೊಗಸನ್ನು ಅರ್ಥಮಾಡಿಕೊಂಡೆ’ ಎಂದು ವಿವರಿಸುತ್ತಾರೆ ಜಾನ್‌.

‘ಈಗ ನನಗೆ ಸಲಪ ಸಲಪ ಕನ್ನಡ ಬರ್ತದೆ. ಆದರೆ ನಿಮ್ಮಷ್ಟು ಫ್ಲೂಯಂಟ್ ಇಲ್ಲ’ ಎಂದು ತೊದಲುತ್ತಲೇ ಹೇಳುತ್ತಾರೆ ಜಾನ್‌. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು