ಬುಧವಾರ, ಜೂನ್ 3, 2020
27 °C

ಕರಣ್ ಜೋಹರ್ ತೆರೆದಿಟ್ಟ ಗುಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2001ರಲ್ಲಿ ತೆರೆಗೆ ಬಂದ ಸೂಪರ್‌ ಹಿಟ್ ಚಿತ್ರಗಳ ಸಾಲಿನಲ್ಲಿ ಎದ್ದು ಕಾಣುವ ಹೆಸರು ‘ಕಭಿ ಖುಷಿ ಕಭಿ ಗಮ್’. ನಿರ್ದೇಶಕ ಕರಣ್ ಜೋಹರ್ ಅವರಿಗೆ ‘ಕುಚ್ ಕುಚ್ ಹೋತಾ ಹೈ’ ನಂತರ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾ ಕೂಡ ಹೌದು ಇದು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶಾರೂಖ್ ಖಾನ್, ಕಾಜಲ್, ಹೃತಿಕ್ ರೋಷನ್, ಕರೀನಾ ಕಪೂರ್ ಈ ಚಿತ್ರದ ತಾರಾಬಳದಲ್ಲಿ ಇದ್ದರು.

ಕೌಟುಂಬಿಕ ಸಂಬಂಧಗಳ ಬೆಲೆಯನ್ನು ಹೇಳುವ ಸಿನಿಮಾ ಇದು. ತೆರೆಯ ಮೇಲೆ ಒಬ್ಬರಿಗಾಗಿ ಒಬ್ಬರು ಕಂಬನಿ ಮಿಡಿಯುತ್ತಿದ್ದ ಕಲಾವಿದರು, ಸಿನಿಮಾ ಸೆಟ್‌ನಲ್ಲಿ ಮುಖ ತಿರುಗಿಸಿಕೊಂಡು ಕುಳಿತಿರುತ್ತಿದ್ದ ಸಂದರ್ಭಗಳೂ ಇದ್ದವು ಎಂಬುದನ್ನು ಕರಣ್ ಈಗ ಬಹಿರಂಗಪಡಿಸಿರುವುದು ಬಾಲಿವುಡ್‌ ಅಂಗಳದಲ್ಲಿ ದೊಡ್ಡ ಸುದ್ದಿ ಮಾಡಿದೆ.

ಈ ಚಿತ್ರದ ಸೆಟ್‌ನಲ್ಲಿ ಹಿರಿಯ ಕಲಾವಿದರಿಂದ ಉಪೇಕ್ಷೆಗೆ ಒಳಗಾದ ವ್ಯಕ್ತಿ ಹೃತಿಕ್ ಎಂಬ ಸಂಗತಿಯನ್ನು ಕರಣ್ ತಮ್ಮ ಪುಸ್ತಕ ‘ಎನ್ ಅನ್‌ಸೂಟಬಲ್ ಬಾಯ್’ನಲ್ಲಿ ಬರೆದಿದ್ದಾರೆ. ಹೃತಿಕ್ ಅವರನ್ನು ಹಿರಿಯ ಕಲಾವಿದರು ಮಾತನಾಡಿಸದೆ ಇರಲು ಕಾರಣ, ಕಹೋನಾ ಪ್ಯಾರ್‌ ಹೈ ಚಿತ್ರದಲ್ಲಿ ಹೃತಿಕ್‌ಗೆ ದಕ್ಕಿದ ಯಶಸ್ಸು! ಆ ಸಂದರ್ಭದಲ್ಲಿ, ಶಾರೂಖ್ ಅವರ ಕೆಲವು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿದ್ದವು. ಹಾಗಾಗಿ, ಕೆಲವರು ಹೃತಿಕ್ ಅವರನ್ನು ‘ಬಾಲಿವುಡ್‌ನ ಮುಂದಿನ ಬಾದ್‌ಶಾ’ ಎಂದು ಕರೆದಿದ್ದೂ ಇತ್ತು.

ಇವೆಲ್ಲವೂ, ಚಿತ್ರದ ಸೆಟ್‌ನಲ್ಲಿ ಹೃತಿಕ್ ಅವರು ಹಿರಿಯ ಕಲಾವಿದರಿಂದ ಕಡೆಗಣನೆಗೆ ಒಳಗಾಗಲು ಕಾರಣವಾದವು. ‘ಹೃತಿಕ್ ಅವರು ಬಹಳ ಕಿರಿಯ ಕಲಾವಿದರಾಗಿದ್ದರು. ಶಾರೂಖ್‌ ಆ ವೇಳೆಗಾಗಲೇ ಬಹುದೊಡ್ಡ ಸ್ಟಾರ್‌ ಆಗಿದ್ದರು. ಆದರೆ, ಆ ಸಂದರ್ಭದಲ್ಲಿ ಶಾರೂಖ್ ಅವರ ಒಂದೆರಡು ಸಿನಿಮಾಗಳು ಸೋಲು ಕಂಡಿದ್ದವು. ಮಾಧ್ಯಮಗಳು ಶಾರೂಖ್ ಜಾಗದಲ್ಲಿ ಹೃತಿಕ್ ಅವರನ್ನು ತೋರಿಸಲು ಶುರು ಮಾಡಿದ್ದವು’ ಎಂದು ಕರಣ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರಂತೆ.

‘ಸೆಟ್‌ನಲ್ಲಿ ಕಂಡುಬಂದ ನಕಾರಾತ್ಮಕ ವಾತಾವರಣಕ್ಕೆ ಸಮರ್ಥನೆ ಇಲ್ಲ. ಆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಹೃತಿಕ್ ಅವರ ಕೈಹಿಡಿದು ನಡೆಸಬೇಕಿತ್ತು. ಅಮಿತಾಭ್ ಮತ್ತು ಜಯಾ ಬಚ್ಚನ್ ಅವರು ಹೃತಿಕ್ ಜೊತೆ ಅಷ್ಟೇನೂ ಒಳ್ಳೆಯ ಹೊಂದಾಣಿಕೆ ಹೊಂದಿರಲಿಲ್ಲ. ಆ ಹೊತ್ತಿನಲ್ಲಿ ನಡೆಯುತ್ತಿದ್ದ ಇತರ ವಿದ್ಯಮಾನಗಳ ಕಾರಣದಿಂದಾಗಿ ಶಾರೂಖ್ ಕೂಡ ಅಂತರ ಕಾಯ್ದುಕೊಳ್ಳುತ್ತಿದ್ದರು. ಕಾಜಲ್ ಅವರು ಯಾವಾಗಲೂ ಶಾರೂಖ್ ಜೊತೆ ಇರುತ್ತಿದ್ದರು’ ಎಂದೂ ಕರಣ್ ಬರೆದಿದ್ದಾರಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು