ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯನ್‌ 2’ ಚಿತ್ರದ ಕ್ರೇನ್ ದುರಂತ: 5 ತಿಂಗಳ ನಂತರ ₹ 4 ಕೋಟಿ ಪರಿಹಾರ ವಿತರಣೆ

Last Updated 7 ಆಗಸ್ಟ್ 2020, 8:58 IST
ಅಕ್ಷರ ಗಾತ್ರ

ಕಾಲಿವುಡ್‌ನ ‘ಇಂಡಿಯನ್‌ 2’ ಸಿನಿಮಾದ ಶೂಟಿಂಗ್‌ ವೇಳೆ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ ನಟ ಕಮಲಹಾಸನ್‌, ನಿರ್ದೇಶಕ ಶಂಕರ್‌ ಹಾಗೂ ಲೈಕಾ ಪ್ರೊಡಕ್ಷನ್ಸ್‌ನಿಂದ ₹ 4 ಕೋಟಿ ಪರಿಹಾರ ವಿತರಿಸಲಾಗಿದೆ.

ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ಕಳೆದ ಫೆಬ್ರುವರಿಯಲ್ಲಿ ಶೂಟಿಂಗ್‌ ನಡೆಯುತ್ತಿದ್ದ ವೇಳೆ ಕ್ರೇನ್ ಉರುಳಿ ಬಿದ್ದು, ಸಹ ನಿರ್ದೇಶಕ ಕೃಷ್ಣ, ಸಹ ಕಲಾ ನಿರ್ದೇಶಕ ಚಂದ್ರನ್‌ ಮತ್ತು ಪ್ರೊಡಕ್ಷನ್‌ ಅಸಿಸ್ಟೆಂಟ್‌ ಮಧು ಮೃತಪಟ್ಟಿದ್ದರು. ಒಟ್ಟು 12 ಜನರು ಗಾಯಗೊಂಡಿದ್ದರು. ಸಂತ್ರಸ್ತ ಕುಟುಂಬಗಳಿಗೆ ಈ ಹಿಂದೆ ಪರಿಹಾರ ನೀಡುವುದಾಗಿ ಕಮಲಹಾಸನ್‌ ಘೋಷಿಸಿದ್ದರು. ಅಂತೆಯೇ, ಸಂತ್ರಸ್ತ ಮೂವರು ಕುಟುಂಬಗಳಿಗೆ ತಲಾ ₹ 1 ಕೋಟಿ ಹಾಗೂ ತೀವ್ರವಾಗಿ ಗಾಯಗೊಂಡಿರುವ ಇಬ್ಬರು ತಂತ್ರಜ್ಞರ ಕುಟುಂಬಗಳಿಗೆ ಉಳಿದ ₹ 1 ಕೋಟಿಯನ್ನು ವಿತರಿಸಲಾಗಿದೆ.

ಚೆನ್ನೈನಲ್ಲಿರುವ ದಕ್ಷಿಣ ಭಾರತ ಚಿತ್ರರಂಗದ ಕಾರ್ಮಿಕರ ಒಕ್ಕೂಟದ ಕಚೇರಿಯಲ್ಲಿ ಒಕ್ಕೂಟದ ಅಧ್ಯಕ್ಷ ಆರ್‌.ಕೆ. ಸೆಲ್ವಮಣಿ ಅವರ ಸಮ್ಮುಖದಲ್ಲಿ ಕುಟುಂಬಗಳಿಗೆ ಪರಿಹಾರ ವಿತರಿಸಲಾಯಿತು.

ಈ ಅವಘಡವು ಶೂಟಿಂಗ್‌ ವೇಳೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ವೈಫಲ್ಯದ ಮೇಲೆ ಬೆಳಕು ಚೆಲ್ಲಿತ್ತು. ದುರಂತ ಸಂಭವಿಸಿದ ಒಂದು ತಿಂಗಳ ನಂತರ ಕಮಲಹಾಸನ್‌ ಕೂಡ ಘಟನೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಲೈಕಾ ಪ್ರೊಡಕ್ಷನ್ಸ್‌ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ಇದು ನಿರ್ಮಾಪಕರು ಮತ್ತು ಸ್ಟಾರ್‌ ನಟರ ನಡುವಿನ ಹೊಂದಾಣಿಕೆಯ ಕೊರತೆಯನ್ನೂ ಬಹಿರಂಗಪಡಿಸಿತ್ತು.

1996ರಲ್ಲಿ ತೆರೆಕಂಡ ಸೂಪರ್‌ ಹಿಟ್‌ ಚಿತ್ರ ‘ಇಂಡಿಯನ್‌’ನ ಸ್ವೀಕೆಲ್‌ ಇದಾಗಿದೆ. ಪೊಲಿಟಿಕಲ್‌ ಥ್ರಿಲ್ಲರ್‌ ಕಥನ ಇದು. ಸಿದ್ಧಾರ್ಥ್‌, ಕಾಜಲ್‌ ಅಗರ್‌ವಾಲ್‌, ರಕುಲ್‌ ಪ್ರೀತ್‌ ಸಿಂಗ್‌, ಭವಾನಿ ಶಂಕರ್‌, ವಿವೇಕ್‌ ಪ್ರಧಾನ ಪಾತ್ರದಲ್ಲಿದ್ದಾರೆ. ಈಗಾಗಲೇ, ಇದರ ಚಿತ್ರೀಕರಣ ಶೇಕಡ 60ರಷ್ಟು ಪೂರ್ಣಗೊಂಡಿದೆ. ಕೋವಿಡ್‌–19 ಸೋಂಕು ತಹಬಂದಿಗೆ ಬಂದ ಬಳಿಕ ಮತ್ತೆ ಶೂಟಿಂಗ್‌ ಆರಂಭಿಸಲು ಚಿತ್ರತಂಡ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT