ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಫುಲ್‌ ಬ್ಯುಸಿ ಹರಿಪ್ರಿಯಾ!

Last Updated 1 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

‘ಅಮೃತಮತಿ’ ಚಿತ್ರದಲ್ಲಿನ ನಟನೆಗಾಗಿ ಇತ್ತೀಚೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಹರಿಪ್ರಿಯಾ ಈ ವರ್ಷ ಚಂದನವನದಲ್ಲೇ ಹಲವು ವಿಭಿನ್ನ ಪಾತ್ರಗಳಿಗೆ ಬಣ್ಣಹಚ್ಚುತ್ತಿದ್ದಾರೆ. ಉಪೇಂದ್ರ ಜೊತೆಗೂ ಮೊದಲ ಬಾರಿ ನಟಿಸಲು ಸಜ್ಜಾಗಿರುವ ಅವರು ‘ಸಿನಿಮಾ ಪುರವಣಿ’ಯ ಸಂದರ್ಶನ ವೇಳೆ ತಮ್ಮ ಮುಂದಿನ ಪಯಣದ ಬಗ್ಗೆ ಮಾತಿಗಿಳಿದರು.

* 2019ರಲ್ಲಿ ಸಾಲು ಸಾಲು ಚಿತ್ರ, ಸಣ್ಣ ಬಿಡುವಿನ ಬಳಿಕ ಮತ್ತೆ ಹರಿಪ್ರಿಯಾ ಬ್ಯುಸಿಯಾಗಿದ್ದಾರೆ?

2017ರಿಂದ ಹಿಡಿದು 2019ರವರೆಗೆ ಸತತವಾಗಿ ಚಿತ್ರೀಕರಣದಲ್ಲಿ ನಾನು ತಲ್ಲೀನಳಾಗಿದ್ದೆ. 2019ರಲ್ಲಿ ನನ್ನ ಏಳು ಸಿನಿಮಾಗಳು ತೆರೆ ಮೇಲೆ ಬಂದವು. ಪೊಲೀಸ್‌ ಅಧಿಕಾರಿ, ಕಾಲ್‌ಗರ್ಲ್‌, ರೆಟ್ರೊ, ಗೃಹಿಣಿ ಹೀಗೆ ಎಲ್ಲ ಚಿತ್ರಗಳೂ ವಿಭಿನ್ನ ಪಾತ್ರಗಳನ್ನು ಹೊಂದಿದ್ದವು. ಬೆಲ್‌ಬಾಟಂ ಚಿತ್ರವೂ ದೊಡ್ಡ ಯಶಸ್ಸು ಕಂಡ ವರ್ಷ 2019. ಮರುವರ್ಷ ಕುಟುಂಬಕ್ಕೆ ಸಮಯ ನೀಡುವ ಸಲುವಾಗಿ ಚಿತ್ರೀಕರಣದಿಂದ ಬಿಡುವು ಪಡೆದು ರಣ್‌ ಆಫ್‌ ಕಛ್‌ಗೆ ಹೋಗಿದ್ದೆ. ಪ್ರವಾಸ ನನಗೆ ಬಹಳ ಇಷ್ಟ. ಇದನ್ನು ಮುಗಿಸಿ ಇನ್ನೇನು ಚಿತ್ರೀಕರಣದಲ್ಲಿ ಭಾಗವಹಿಸಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಬಹಳ ಬೇಜಾರಾಗಿತ್ತು. ಬಿಡುವು ಬೇಡ ಎಂದರೂ ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಇರುವುದು ಅನಿವಾರ್ಯವಾಗಿತ್ತು. ಸತತ 14 ವರ್ಷದಿಂದ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಲೇ ಬಂದಿದ್ದೇನೆ. ನಾನಾಗಿ ನಾನೇ ಚಿತ್ರೀಕರಣದಿಂದ ಬಿಡುವು ಪಡೆದಿದ್ದೇನೇ ಹೊರತು ಅವಕಾಶಗಳು ಕೈತುಂಬಾ ಬರುತ್ತಲಿವೆ.

* ಹರಿಪ್ರಿಯಾ ಬರಹಗಾರ್ತಿಯಾಗಿದ್ದು ಹೇಗೆ?

ಲಾಕ್‌ಡೌನ್‌ ಸಮಯವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಂಡೆ. ಸುಮ್ಮನೆ ಕೂರದೆ ನನ್ನೊಳಗಿದ್ದ ಬರೆಯುವ ಹವ್ಯಾಸವನ್ನು ಮತ್ತೆ ಪ್ರಾರಂಭಿಸಿದೆ. ಬ್ಲಾಗ್‌ ಮೂಲಕ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನನ್ನ ಜೀವನದ ಕಥೆ ಬರೆದೆ. ನಾನೇನು ಖ್ಯಾತ ಬರಹಗಾರ್ತಿ ಅಲ್ಲ. ನನ್ನ ಅನುಭವಗಳನ್ನು ಬರೆದೆ. ಕಲಾವಿದ ಎಂದಮೇಲೆ ಜನರಿಗೆ ಮನರಂಜನೆ ನೀಡುವುದು ನಮ್ಮ ಕರ್ತವ್ಯ. ಅವರಿಗೆ ಹೊಸ ಸಂದೇಶ ನೀಡುವುದು, ಯುವಜನತೆಗೆ ಕಿವಿಮಾತು, ಪ್ರೇಕ್ಷಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುವುದು ಮುಖ್ಯ. ಲಾಕ್‌ಡೌನ್‌ ಸಂದರ್ಭದಲ್ಲಿ ಬರವಣಿಗೆ ಮುಖಾಂತರ ಹೊಸ ಪ್ರೇಕ್ಷಕರನ್ನು ಸೆಳೆದೆ, ಅವರಿಗೆ ಹತ್ತಿರವಾದೆ. ಹರಿಪ್ರಿಯಾ ಬರೆಯುತ್ತಾಳೆ ಎನ್ನುವುದು ಆವಾಗ ಜನರಿಗೆ ಗೊತ್ತಾಯಿತು. ಸಾಮಾನ್ಯ ದಿನಗಳಲ್ಲಿ ಶೂಟಿಂಗ್‌ಗೆ ಎಷ್ಟು ಸಮಯ ನೀಡುತ್ತಿದ್ದೆನೋ ಅಷ್ಟೇ ಸಮಯವನ್ನು ಬರವಣಿಗೆಗೆ ನೀಡುತ್ತಿದ್ದೆ. ಈಗ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ಕಾರಣ ಬರೆಯಲು ಆಗುತ್ತಿಲ್ಲ.

*‘ಹೀರೋ’ಗೂ ನೀವೇ ಹೀರೊಯಿನ್‌ ಆಗ್ತಿದ್ರಂತೆ?

ರಿಷಬ್‌ ಶೆಟ್ಟಿ ಹಾಗೂ ನಾನು ಒಳ್ಳೆಯ ಸ್ನೇಹಿತರು. ಅವರ ಮೊದಲ ನಿರ್ದೇಶನದ ಚಿತ್ರ ರಿಕ್ಕಿಯಲ್ಲಿ ನಾನು ನಾಯಕಿಯಾಗಿದ್ದೆ. ಕಥಾಸಂಗಮದಲ್ಲೂ ಒಂದು ಕಥೆಗೆ ನಾನು ನಾಯಕಿ. ಅವರು ಹೀರೋ ಆಗಿ ನಟಿಸಿದ ಬೆಲ್‌ಬಾಟಂನಲ್ಲೂ ನಾನು ನಾಯಕಿಯಾಗಿದ್ದೆ. ‘ವಿ ಬೋತ್‌ ಆರ್‌ ಲಕ್ಕಿ ಟು ಈಚ್‌ ಅದರ್‌’. ಇಬ್ಬರಿಗೂ ಸಿನಿಮಾದ ಕೆಲಸ ಇಷ್ಟ. ನಾನು ಕೆಲಸವನ್ನು ಎಷ್ಟು ಇಷ್ಟಪಡುತ್ತೇನೋ ಅದಕ್ಕಿಂತ ಹೆಚ್ಚು ಕೆಲಸ ಮಾಡುವವರು ರಿಷಬ್‌ ಶೆಟ್ಟಿ. ಬೆಲ್‌ಬಾಟಂ–2 ಮಾಡುತ್ತೇವೆ ಎಂದು ಮೊದಲೇ ನಿರ್ಧಾರವಾಗಿತ್ತು. ಹೀಗಾಗಿ ಸತತವಾಗಿ ಅವರ ಚಿತ್ರಗಳಿಗೆ ನಾನೇ ನಾಯಕಿಯಾಗಿದ್ದರೆ ಚೆನ್ನಾಗಿರುವುದಿಲ್ಲ. ಬೆಲ್‌ಬಾಟಂ–2 ಆದ ನಂತರ ನಾನು, ರಿಷಬ್‌ ಶೆಟ್ಟಿ ಅವರ ಮತ್ತಷ್ಟು ಸಿನಿಮಾ ಮಾಡಲಿದ್ದೇವೆ.

* ಅಮೃತಮತಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಬಂದ ಅನುಭವ

ನಾನು ಯಾವತ್ತೂ ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ. ನಮ್ಮ ನಟನೆಯನ್ನು ಗುರುತಿಸಿ ನೀಡುವ ಪ್ರಶಸ್ತಿ ಖುಷಿಯ ವಿಚಾರ. ಹಲವು ದೇಶದ ಪ್ರತಿಸ್ಪರ್ಧಿಗಳ ನಡುವೆ ನಾವು ಗೆದ್ದಿದ್ದೇವೆ ಎನ್ನುವುದು ಹೆಮ್ಮೆ. ಆದರೆ, ವಿಭಿನ್ನ ಪಾತ್ರಗಳಿಗೆ ನಿರ್ದೇಶಕರು ನಮ್ಮನ್ನು ಆಯ್ಕೆ ಮಾಡುವುದೇ ಅದಕ್ಕಿಂತ ದೊಡ್ಡ ಪ್ರಶಸ್ತಿ. ಅವರು ನಮ್ಮ ಮೇಲೆ ಇಡುವ ನಂಬಿಕೆ ಹೆಚ್ಚಿನ ಖುಷಿ ನೀಡುತ್ತದೆ. ಪ್ರಸ್ತುತ ಚಂದನವನದಲ್ಲಿ ಇರುವ ನಟಿಯರಲ್ಲಿ ಇಷ್ಟು ವಿಭಿನ್ನವಾದ ಪಾತ್ರಗಳು ಸಿಕ್ಕಿರುವುದು ನನಗೆ. ಜನರೂ ವಿಭಿನ್ನ ಪಾತ್ರಗಳನ್ನು ಮೆಚ್ಚುತ್ತಿದ್ದಾರೆ.

*ಪ್ರಸ್ತುತ ಯಾವ ಚಿತ್ರದಲ್ಲಿ ತಲ್ಲೀನರಾಗಿದ್ದೀರಿ?

ಲಾಕ್‌ಡೌನ್‌ ಮುಗಿದ ಕೂಡಲೇ ನೀನಾಸಂ ಸತೀಶ್‌ ನಾಯಕರಾಗಿ ನಟಿಸುತ್ತಿರುವ, ವಿಜಯ್‌ ಪ್ರಸಾದ್‌ ನಿರ್ದೇಶನದ ‘ಪೆಟ್ರೋಮ್ಯಾಕ್ಸ್‌’ ಚಿತ್ರೀಕರಣ ಮುಗಿಸಿಯೇ ಬಿಟ್ಟೆವು. ತೆಲುಗಿನಲ್ಲಿ ಸೂಪರ್‌ಹಿಟ್‌ ಆದ ಕ್ರೈಮ್‌ ಥ್ರಿಲ್ಲರ್‌ ‘ಎವರು’ ರಿಮೇಕ್‌ ಚಿತ್ರೀಕರಣ ಪ್ರಸ್ತುತ ನಡೆಯುತ್ತಿದೆ. ತೆಲುಗಿನ ಚಿತ್ರತಂಡವೇ ಇದನ್ನು ರಿಮೇಕ್‌ ಮಾಡುತ್ತಿದೆ. ರಿಷಬ್‌ ಶೆಟ್ಟಿ ಅವರ ಬೆಲ್‌ಬಾಟಂ–2 ಮುಹೂರ್ತ ಆಗಿದೆ. ಇದು ಬಿಗ್‌ಬಜೆಟ್‌ ಹಾಗೂ ಹೆಚ್ಚಿನ ಕಲಾವಿದರು ಇರುವ ಚಿತ್ರ. ಉಪೇಂದ್ರ ಅವರ ಜೊತೆ ನಟಿಸುವ ಆಸೆ ಎಲ್ಲರಿಗೂ ಇರುತ್ತದೆ. ನಾನೂ ಕೂಡಾ ಬಹಳ ಕಾತುರದಿಂದ ಇದಕ್ಕಾಗಿ ಕಾಯುತ್ತಿದ್ದೇನೆ. ಶಶಾಂಕ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಕೂಡಾ ಶೀಘ್ರದಲ್ಲೇ ಸೆಟ್ಟೇರಲಿದೆ. ಮತ್ತಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಶೀಘ್ರದಲ್ಲೇ ಅವುಗಳ ಮಾಹಿತಿಯನ್ನೂ ನೀಡುತ್ತೇನೆ.

*ಹಾಗಿದ್ದರೆ ಈ ವರ್ಷ ಹರಿಪ್ರಿಯಾ ಫುಲ್‌ ಬ್ಯುಸಿಯಾರ್ಗಿತಾರೆ?

ಲಾಕ್‌ಡೌನ್‌ ಮುಂಚಿತವಾಗಿ ಹಾಗೂ ನಂತರ ಒಪ್ಪಿಕೊಂಡ ಹಲವು ಸಿನಿಮಾಗಳು ಹಲವಾರಿವೆ. ಹೀಗಾಗಿ ನಿರ್ದಿಷ್ಟವಾಗಿ ಈ ವರ್ಷ ಇಷ್ಟೇ ಸಿನಿಮಾಗಳಲ್ಲಿ ನಟಿಸುತ್ತೇನೆ, ಇಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ ಎನ್ನುವುದು ಕಷ್ಟ. ಕೋವಿಡ್‌ ಎರಡನೇ ಅಲೆಯೂ ಪ್ರಾರಂಭವಾಗಿದ್ದು, ಮುಂದೆ ಏನಾಗುತ್ತದೆಯೋ ತಿಳಿದಿಲ್ಲ. ಕೋವಿಡ್‌ ನಮ್ಮನ್ನು ಸ್ವಲ್ಪ ತಡೆದಿತ್ತು, ಉಳಿದಂತೆ ಯಾವುದೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ಹರಿಪ್ರಿಯಾ ಈ ವರ್ಷ ಫುಲ್‌ ಬ್ಯುಸಿಯಾಗಿರ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT