ಶನಿವಾರ, ಅಕ್ಟೋಬರ್ 31, 2020
22 °C

ಮೆಲ್ಲುಸಿರಿನ ಸವಿಗಾನದ ಕು.ರ.ಸೀ.

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ಕುಮಾರಸ್ವಾಮಿ ರವಿ ಸೀತಾರಾಮ ಶಾಸ್ತ್ರಿ ಎನ್ನುವ ಉದ್ದ ಹೆಸರಿನ ‘ಕು.ರ.ಸೀ’ ಕನ್ನಡ ಚಿತ್ರರಂಗದ ಆಲ್‌ರೌಂಡರ್‌ಗಳಲ್ಲೊಬ್ಬರು. ಗೀತರಚನೆ, ಚಿತ್ರಕಥೆ, ಸಂಭಾಷಣೆ, ನಟನೆ, ನಿರ್ದೇಶನ – ಹೀಗೆ ಅವರ ಪ್ರತಿಭಾ ವಿಲಾಸಕ್ಕೆ ಹಲವು ಚಾಚುಗಳಿದ್ದರೂ ಕನ್ನಡ ಸಿನಿಮಾಪ್ರೇಮಿಗಳ ಮನಸ್ಸಿನಲ್ಲಿ ಅವರು ಅಚ್ಚಳಿಯದೆ ಉಳಿದಿರುವುದು ರಾಮನ ಅವತಾರ ಹಾಗೂ ಮೆಲ್ಲುಸಿರಿನ ಸವಿಗಾನದ ರಚನಕಾರರಾಗಿ.

ಬೆಂಗಳೂರಿನ ನಗರ್ತಪೇಟೆಯ ಕುಮಾರಸ್ವಾಮಿ ಶಾಸ್ತ್ರಿ, ಸುಬ್ಬಮ್ಮ ದಂಪತಿಯ ಪುತ್ರ ಕು.ರ. ಸೀತಾರಾಮ ಶಾಸ್ತ್ರಿ (ಸೆೆ.22, 1920 – ನ.12, 1977). ಕುಮಾರಸ್ವಾಮಿ ಶಾಸ್ತ್ರಿಗಳು ಮೈಸೂರು ಸಂಸ್ಥಾನದ ರಾಜಪುರೋಹಿತರು. ಅವರ ತಂದೆ ಸೀತಾರಾಮ ಶಾಸ್ತ್ರಿ ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಕರಣಶಾಸ್ತ್ರದ ಪ್ರಾಧ್ಯಾಪಕರಾಗಿದ್ದವರು. ತಾತನ ಭಾಷಾಸಂಪತ್ತಿನೊಂದಿಗೆ ಹೆಸರೂ ಮೊಮ್ಮಗನದಾಯಿತು. 

ಶಾಲಾ ದಿನಗಳಲ್ಲಿಯೇ ಕು.ರ.ಸೀ. ಮೊದಲ ಕವಿತೆ ಬರೆದರು, ರಂಗಭೂಮಿಗೆ ಮನಸೋತರು. ಗಮಕ ವಾಚನ ಕಲಿಕೆಯಲ್ಲೂ ತೊಡಗಿಕೊಂಡಿದ್ದರು. ಕಲೆಯ ಸೆಳೆತ ಮುಂದಾಗಿ, ಕಾಲೇಜು ಹಿಂದಾಯಿತು. ರಂಗಭೂಮಿಯೇ ವಿಶ್ವವಿದ್ಯಾಲಯವಾಯಿತು. ಗೆಳೆಯರೊಂದಿಗೆ ‘ಯುನೈಟೆಡ್‌ ಜಾಲಿ ಅಮೆಚೂರ್ಸ್‌‘ ಎನ್ನುವ ಹವ್ಯಾಸಿ ನಾಟಕ ತಂಡ ರಚಿಸಿದರು. ಪರದೆಯ ಮುಂದೆ ನಟಿಸುತ್ತ, ಪರದೆಯ ಹಿಂದೆ ಸೂತ್ರಧಾರನ ಪಾತ್ರ ನಿರ್ವಹಿಸುತ್ತ ರಂಗಭೂಮಿಯ ಪಟ್ಟುಗಳನ್ನು ಕಲಿಯತೊಡಗಿದರು.

ರಂಗಭೂಮಿಯೊಂದಿಗೆ ಬರವಣಿಗೆಯ ಆಸಕ್ತಿಯೂ ಶಾಸ್ತ್ರಿಗಳಿಗಿತ್ತು. ಪತ್ರಿಕೆಗಳಿಗೆ ಲೇಖನ, ಕವಿತೆ ಬರೆಯುತ್ತಿದ್ದರು. ರವಿ ಎನ್ನುವ ಹೆಸರಿನಲ್ಲಿ ನಾಟಕಗಳಿಗೆ ವಿಡಂಬನಾ ಪದ್ಯಗಳನ್ನು ಬರೆಯುತ್ತಿದ್ದರು. ಸಂಗೀತದಲ್ಲಿ ಅಭಿರುಚಿಯಿದ್ದುದರಿಂದ ಪ್ರಸಿದ್ಧ ಕವಿಗಳ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುತ್ತಿದ್ದರು. ಕಾಲೇಜು ವಲಯದಲ್ಲಿ ಗಾಯಕರಾಗಿ ಅವರು ಸೂಪರ್‌ ಸ್ಟಾರ್‌. ಮಹಾತ್ಮ ಗಾಂಧಿ ಹತ್ಯೆಯಾದಾಗ ಅವರು ರಚಿಸಿದ ‘ಭಾರತ ಭಾಸ್ಕರ’ ಮತ್ತು ‘ಸತ್ಯ ಪ್ರೇಮ ಅಹಿಂಸೆಗಳ ಕಲ್ಪತರು ಗಾಂಧಿ’ ಎನ್ನುವ ಗೀತೆಗಳನ್ನು ಪ್ರಸಿದ್ಧ ರಂಗನಟಿ ಬಿ. ಜಯಮ್ಮ ಹಾಡಿದ್ದರು; ಆ ಗೀತೆಗಳನ್ನು ಕೊಲಂಬಿಯಾ ರೆಕಾರ್ಡಿಂಗ್‌ ಕಂಪನಿ ಧ್ವನಿಮುದ್ರಿಸಿತ್ತು. ಶಾಸ್ತ್ರಿಗಳ ಗಾಂಧಿ ಗೀತೆಗಳನ್ನು ಅಂದಿನ ಪ್ರಸಿದ್ಧ ನಟ ಹೊನ್ನಪ್ಪ ಭಾಗವತರ್‌ ಹಾಡಿದ್ದರು; ಅವುಗಳನ್ನು ಎಚ್‌ಎಂವಿ ಸಂಸ್ಥೆ ಪ್ರಕಟಿಸಿತ್ತು.

ಕು.ರ.ಸೀ. ಅವರ ಮೊದಲ ಉದ್ಯೋಗ ಹಿಂದೂಸ್ತಾನ್‌ ಏರೋನಾಟಿಕ್ಸ್ ಸಂಸ್ಥೆಯಲ್ಲಿ. ಅಲ್ಲಿನ ಮೆಕ್ಯಾನಿಕ್‌ ಕೆಲಸದ ಏಕತಾನತೆ ಸಾಕೆನ್ನಿಸಿ, ಮಿಲಿಟರಿ ಡಿಪೊದಲ್ಲಿ ಕಾರಕೂನರಾಗಿ ಸೇರಿಕೊಂಡರು. ಕಾರಕೂನಿಕೆಯ ಕೆಲಸವೂ ಬೇಸರವೆನ್ನಿಸಿದಾಗ, ಆರ್ಯ ವಿದ್ಯಾಶಾಲೆಯಲ್ಲಿ ಉಪಾಧ್ಯಾಯರಾದರು. ಅಲ್ಲಿಯೂ ಮನಸ್ಸು ನಿಲ್ಲಲಿಲ್ಲ. ವಕೀಲನಾಗುವ ಹಂಬಲದಿಂದ ಬೆಳಗಾವಿಯ ಕಾನೂನು ಕಾಲೇಜು ಸೇರಿಕೊಂಡರು. ಆ ಸಮಯದಲ್ಲಿ ಅವರಿಗೆ ಒದಗಿಬಂದದ್ದು ಗುಬ್ಬಿ ಕಂಪನಿಯ ಸಖ್ಯ. ವೀರಣ್ಣನವರ ಗರಡಿ ಸೇರಿಕೊಂಡ ಮೇಲೆ ಕಾನೂನು ಕಲಿಕೆಗೆ ಬಿಡುವಾದರೂ ಎಲ್ಲಿ? ಗುಬ್ಬಿ ಕಂಪನಿಯ ನಟರಾಗಿ ಜನಪ್ರಿಯತೆ ದೊರೆಯಿತು. ಅವರು ನಾಯಕ ಪಾತ್ರ ವಹಿಸುತ್ತಿದ್ದ ‘ಬೇಡರ ಕಣ್ಣಪ್ಪ’ ನಾಟಕದ ನೂರಾರು ಪ್ರಯೋಗಗಳು ನಡೆದವು. ಗುಬ್ಬಿ ಕಂಪನಿ ಒಂದು ಕಾಲನ್ನು ರಂಗಭೂಮಿಯಲ್ಲೂ ಮತ್ತೊಂದು ಕಾಲನ್ನು ಸಿನಿಮಾದಲ್ಲೂ ಇಟ್ಟಿದ್ದ ದಿನಗಳವು. ವೀರಣ್ಣನವರ ‘ಹೇಮರೆಡ್ಡಿ ಮಲ್ಲಮ್ಮ’ (1945) ಸಿನಿಮಾ ಸೆಟ್ಟೇರಿತು. ಆ ಚಿತ್ರದಲ್ಲಿ ಪಾತ್ರವೊಂದು ದೊರೆಯುವುದರ ಜೊತೆಗೆ – ಸಾಹಿತ್ಯ ರಚನೆ ಹಾಗೂ ಸಹ ನಿರ್ದೇಶನದ ಜವಾಬ್ದಾರಿಯೂ ಶಾಸ್ತ್ರಿಗಳ ಹೆಗಲಿಗೇರಿತು. ಅಲ್ಲಿಂದ ಮುಂದೆಲ್ಲ ಅವರದು ಬೆಳ್ಳಿತೊರೆಯಲ್ಲಿನ ಈಜು.

ಮದ್ರಾಸ್‌ನಲ್ಲಿ ಚಿತ್ರೀಕರಣ ನಡೆೆಸುತ್ತಿದ್ದ  ಗುಬ್ಬಿ ವೀರಣ್ಣನವರ ‘ಗುಣಸಾಗರಿ’ ಸಿನಿಮಾ ಸೆಟ್‌ನಲ್ಲಿ ಸಹಾಯಕ ನಿರ್ದೇಶಕನಾಗಿ ಚಿನಕುರಳಿಯಂತೆ ಓಡಾಡುತ್ತಿದ್ದ ಕು.ರ.ಸೀ. ಅವರು ಹಾಲಿವುಡ್‌ನ ನಿರ್ಮಾಪಕರಾದ ಷಹಾ ಸೋದರರ ಕಣ್ಣಿಗೆ ಬಿದ್ದರು. ಹಾಂಗ್‌ಕಾಂಗ್‌ನಲ್ಲಿನ ತಮ್ಮ ಚಿತ್ರ ತಯಾರಿಕೆ ಘಟಕದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುವ ಆಹ್ವಾನ ನೀಡಿದರು. ಆಹ್ವಾನವೇನೊ ಆಕರ್ಷಕವಾಗಿತ್ತು. ಆದರೆ, ತವರಿನಲ್ಲೂ ಸುಂದರ ಸ್ವಪ್ನವೊಂದು ಕಣ್ಣಮುಂದಿತ್ತು. ವೀರಣ್ಣನವರು ತಮ್ಮ ಮುಂದಿನ ಸಿನಿಮಾ ‘ಬೇಡರ ಕಣ್ಣಪ್ಪ’ದಲ್ಲಿನ ನಾಯಕಪಾತ್ರ ನೀಡುವುದಾಗಿ ಭರವಸೆ ನೀಡಿದ್ದರು. ಕಣ್ಣಪ್ಪನೋ ವಿದೇಶಪ್ರಯಾಣವೋ ಎನ್ನುವ ಗೊಂದಲದಲ್ಲಿದ್ದಾಗ, ಅಲ್ಲಿಗೆ ಹೋಗಿ ಮಲ್ಲಿಗೆಯನು ತಾ ಎಂದು ವೀರಣ್ಣನವರೇ ಹರಸಿದರು. ಶಾಸ್ತ್ರಿಗಳು ವಿಮಾನ ಹತ್ತಿದರು. ಕಣ್ಣಪ್ಪನ ಪಾತ್ರಕ್ಕೆ ಮುತ್ತುರಾಜ್ (ರಾಜ್‌ಕುಮಾರ್) ಆಯ್ಕೆಯಾದರು. ಮುತ್ತಿನ ಜಾಗಕ್ಕೆ ಮುತ್ತೇ ಬಂದಿತ್ತು.

ಹಾಂಕಾಂಗ್‌ನಲ್ಲಿ ಮಲಯ ಚಿತ್ರರಂಗದೊಂದಿಗೆ ಕೆಲಸಮಾಡುವ ಅವಕಾಶ ಅವರಿಗೆ ದೊರೆಯಿತು. ಆ ಕಾಲಕ್ಕೆ ಭಾರತೀಯ ಸಿನಿಮಾಕ್ಕೆ ಹೋಲಿಸಿದರೆ, ಮಲಯ ಚಿತ್ರೋದ್ಯಮ ಸಾಕಷ್ಟು ಮುಂದಿತ್ತು. ತಿಂಗಳಿಗೆರಡು ಮಲಯ ಸಿನಿಮಾಗಳು ತೆರೆಕಾಣುತ್ತಿದ್ದವು. 

‘ಕುರಾನ ಕಾವ್’ ಹಾಗೂ ‘ಇಮಾನ್’ ಎನ್ನುವ ಎರಡು ಮಲಯ ಚಿತ್ರಗಳನ್ನು ಕು.ರ.ಸೀ. ನಿರ್ದೇಶಿಸಿದರು. ಎರಡೂ ಚಿತ್ರಗಳು ಯಶಸ್ವಿಯಾದವು; ಜಪಾನಿನಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡವು. ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಚಿತ್ರ ನಿರ್ಮಾತೃವೊಬ್ಬರ ಹೆಸರು ಮೊದಲ ಬಾರಿಗೆ ಪ್ರಸ್ತಾಪವಾಯಿತು. ಸಿಂಗಪುರದಲ್ಲಿ ಶಾಶ್ವತವಾಗಿ ನೆಲೆಸಿ ಮತ್ತಷ್ಟು ಸಾಧನೆ ಮಾಡುವ ಅವಕಾಶವಿದ್ದರೂ ಅಮ್ಮನ ಅಪೇಕ್ಷೆಯ ಮೇರೆಗೆ ಶಾಸ್ತ್ರಿಗಳು ತವರಿಗೆ ಮರಳಿದರು.

ಹೊನ್ನಪ್ಪ ಭಾಗವತರ ‘ಮಹಾಕವಿ ಕಾಳಿದಾಸ’ ಚಿತ್ರದ ನಿರ್ದೇಶನದೊಂದಿಗೆ ಕನ್ನಡ ಚಿತ್ರೋದ್ಯಮದಲ್ಲಿನ ಕು.ರ.ಸೀ. ಅವರ ಸೆಕೆಂಡ್ ಇನಿಂಗ್ಸ್ ಆರಂಭವಾಯಿತು. ಅಪಾರ ಜನಪ್ರಿಯತೆ ಗಳಿಸಿದ ಆ ಸಿನಿಮಾ ‘ಅತ್ಯುತ್ತಮ ಕನ್ನಡ ಚಿತ್ರ’ ರಾಷ್ಟ್ರಪ್ರಶಸ್ತಿ ಪಡೆಯಿತು. ಪ್ರಸಿದ್ಧ ಅಭಿನೇತ್ರಿ ಬಿ. ಸರೋಜಾದೇವಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕಾಳಿದಾಸ ಸಿನಿಮಾದ ಮತ್ತೊಂದು ಅಗ್ಗಳಿಕೆ.

‘ಸದಾರಮೆ’, ‘ಅಣ್ಣ ತಂಗಿ’, ‘ರಾಣಿ ಹೊನ್ನಮ್ಮ’ ಹಾಗೂ ‘ಮನ ಮೆಚ್ಚಿದ ಮಡದಿ’ ಕು.ರ.ಸೀ. ನಿರ್ದೇಶನದ ಜನಪ್ರಿಯ ಸಿನಿಮಾಗಳು. ಗುಬ್ಬಿ ವೀರಣ್ಣನವರು ‘ಸದಾರಮೆ’ ಚಿತ್ರವನ್ನು 1935ರಲ್ಲೇ ನಿರ್ಮಿಸಿದ್ದರು. 1955ರಲ್ಲಿ ಆ ಚಿತ್ರವನ್ನು ಕೆಲವು ಮಾರ್ಪಾಡುಗಳೊಂದಿಗೆ ಕು.ರ.ಸೀ. ಮತ್ತೆ ನಿರ್ದೇಶಿಸಿದರು. ಸಿನಿಮಾದ ಹಾಡುಗಳು ಜನಪ್ರಿಯವಾದವು. ಆ ಸಿನಿಮಾದ ತೆಲುಗು ಅವತರಣಿಕೆಯನ್ನೂ ಕು.ರ.ಸೀ. ನಿರ್ದೇಶಿಸಿದರು; ನಾಯಕನಾಗಿ ನಾಗೇಶ್ವರ ರಾವ್ ನಟಿಸಿದ್ದರು.

ರಾಜ್‌ಕುಮಾರ್, ಬಿ. ಸರೋಜಾದೇವಿ ಜೋಡಿಯಾಗಿದ್ದ ‘ಅಣ್ಣ ತಂಗಿ’ ಸಿನಿಮಾ ತನ್ನ ಗ್ರಾಮ್ಯ ಸೊಗಡಿನಿಂದ ಸಹೃದಯರ ಗಮನಸೆಳೆಯಿತು. ‘ರಾಣಿ ಹೊನ್ನಮ್ಮ’ ಮತ್ತು ‘ಮನ ಮೆಚ್ಚಿದ ಮಡದಿ’ ಚಿತ್ರಗಳಲ್ಲೂ ರಾಜ್‌ಕುಮಾರ್ ಅವರೇ ನಾಯಕ. ‘ಮನ ಮೆಚ್ಚಿದ ಮಡದಿ’ ಚಿತ್ರದ ಶೀರ್ಷಿಕೆ ಗೀತೆಯಾಗಿ ಕುವೆಂಪು ಅವರ (ಇಂದಿನ ನಾಡಗೀತೆ) ‘ಜಯ ಭಾರತ ಜನನಿಯ ತನುಜಾತೆ’ ಗೀತೆಯನ್ನು ಬಳಸಿಕೊಂಡಿರುವುದು ಕು.ರ.ಸೀ. ಅವರ ಅಭಿರುಚಿ ಮತ್ತು ಸಾಹಿತ್ಯಪ್ರೀತಿಯ ಉದಾಹರಣೆಯಂತಿದೆ.

ನಿರ್ದೇಶಕರಾಗಿ ಯಶಸ್ಸು ಗಳಿಸಿದರೂ ಕು.ರ.ಸೀ. ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವುದು ಗೀತರಚನೆಕಾರರಾಗಿ. ಅವರು ರಚಿಸಿದ ಹಲವು ರಚನೆಗಳು ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠಗೀತೆಗಳ ಪಟ್ಟಿಯಲ್ಲಿವೆ. ಅವರ ಗೀತೆಗಳಲ್ಲಿ ಎದ್ದುಕಾಣುವ ಅಂಶಗಳು ಮೂರು. 1. ಭಾಷೆಯ ಸೊಗಡು ಹಾಗೂ ನಾದಮಯತೆ, 2. ಗೀತೆಗಳ ಮೂಲಕ ಮೌಲ್ಯಗಳ ಪ್ರತಿಪಾದನೆ. 3. ಪ್ರಯೋಗಶೀಲತೆ.

ಗೀತರಚನೆಕಾರರಾಗಿ ಕು.ರ.ಸೀ. ಅವರ ಉತ್ತಮಿಕೆಗೆ ‘ಭೂ ಕೈಲಾಸ’ ಚಿತ್ರದ ‘ರಾಮನ ಅವತಾರ’ ಗೀತೆಯೊಂದೇ ಸಾಕು. ‘ಭೂ ಕೈಲಾಸ’ ಕನ್ನಡದೊಂದಿಗೆ ತೆಲುಗಿನಲ್ಲೂ ನಿರ್ಮಾಣಗೊಂಡಿರುವ ಸಿನಿಮಾ. ಹತ್ತು ನಿಮಿಷದ ಹಾಡಿನಲ್ಲಿ ರಾಮಾಯಣದ ಕಥೆಯನ್ನು ಹೇಳುವುದು ಅಸಾಧ್ಯವೆಂದು ತೆಲುಗಿನ ಗೀತರಚನೆಕಾರರು ಕೈಚೆಲ್ಲಿದರು. ಕನ್ನಡದಲ್ಲಿ ಆ ಸವಾಲನ್ನು ಒಪ್ಪಿಕೊಂಡವರು ಕು.ರ.ಸೀ. ನಲವತ್ತೊಂದು ಸಾಲುಗಳ ಪದ್ಯದಲ್ಲಿ ರಾಮಾಯಣದ ಕಥೆಯ ಪ್ರಮುಖ ಘಟ್ಟಗಳನ್ನು ರಸವತ್ತಾಗಿ ಅಡಕಗೊಳಿಸಿದರು. ರಘುಕುಲ ಸೋಮ ರಾಮನ ಅವತಾರದ ಕಥೆಯನ್ನು ಹೇಳಲು ಹೊರಟ ಕು.ರ.ಸೀ., ಅಂತಿಮವಾಗಿ ತಲುಪುವುದು – ‘ಅಯ್ಯೋ ದಾನವ ಭಕ್ತಾಗ್ರೇಸರ / ಆಗಲಿ ನಿನ್ನೀ ಕಥೆ ಅಮರ’ ಎನ್ನುವ ಕಾವ್ಯನ್ಯಾಯಕ್ಕೆ. ‘ಪರಸತಿ ಬಯಕೆಯ ಸಂಹಾರ’ದ ರೂಪದಲ್ಲಿ ರಾಮಾಯಣವನ್ನು ಗ್ರಹಿಸುವ ಅವರು, ಹನುಮನನ್ನು ಕನ್ನಡ ಕುಲಪುಂಗವ ಎಂದಿದ್ದಾರೆೆ; ಶಿವನ ಉರಿಗಣ್ಣಿನ ರೂಪದಲ್ಲಿ ಹೆಣ್ಣನ್ನು ಕಂಡಿದ್ದಾರೆೆ.

ರಾಮಾಯಣದ ಗೀತೆಯನ್ನು ಬರೆದ ರಚನಕಾರನ ಪ್ರತಿಭಾವಿಲಾಸದ ಮತ್ತೊಂದು ರೂಪವಾಗಿ ‘ಮೆಲ್ಲುಸಿರೇ ಸವಿಗಾನ’ ಹಾಗೂ ‘ಬಿಂಕದ ಸಿಂಗಾರಿ’ ಗೀತೆಗಳನ್ನು ಗಮನಿಸಬೇಕು. ಬಿಂಕದ ಸಿಂಗಾರಿ ಗೀತೆಯಲ್ಲಿ – ಹೆಣ್ಣಿನ ದೇಹವನ್ನು ಮಧುಪಾನ ಪಾತ್ರೆಯಂತೆಯೂ, ಅವಳ ಸೌಂದರ್ಯವನ್ನು ‘ಮಧುವಿಲ್ಲದೆ ಮದವೇರಿಪ ನಿನ್ನಂದ ಚಂದ ಮಕರಂದ’ದ ರೂಪದಲ್ಲಿ ನೋಡಿ, ಮನುಷ್ಯ ದೇಹವನ್ನು – ‘ಈ ದೇಹ ರಸಮಯ ಸದನ / ಈ ನೇಹ ಮಧು ಸಂಗ್ರಹಣ’ ಎಂದು ಚಿತ್ರಿಸಿರುವುದು ಅವರ ಜೀವನಪ್ರೀತಿಯ ದ್ಯೋತಕದಂತಿದೆ. ‘ಬೇತ್ಲೇಹೇಮಿನ ಯೇಸುಕ್ರಿಸ್ತ, ಮಕ್ಕಾ ನಗರದ ಗುರು ಪೈಗಂಬರ್, ಯಾದವ-ರಾಘವ ಎಲ್ಲಾ ದೈವ’ಗಳನ್ನು ದೇವರುಗಳಾದರೂ, ‘ತಾಯಿ ಮುಂದೆ ಬಾಲಕರವ್ವಾ’ (ಚಿತ್ರ: ಸುವರ್ಣ ಭೂಮಿ) ಎನ್ನುವ ನಿಲುವು ಕು.ರ.ಸೀ. ಅವರ ಜೀವನ–ನಂಬಿಕೆಗಳ ಒಟ್ಟಾರೆ ತಾತ್ವಿಕತೆಯಂತಿದೆ.

ಸಿನಿಮಾ ಗೀತೆಗಳ ರಚನೆಯಲ್ಲಿ ಗಣನೀಯ ಸಾಧನೆ ಮಾಡಿದ್ದರೂ ತಮ್ಮನ್ನು ಸಾಹಿತಿ ಅಥವಾ ಕವಿಯೆಂದು ಕರೆದುಕೊಳ್ಳಲು ಕು.ರ.ಸೀ. ಹಿಂಜರಿಯುತ್ತಿದ್ದರು. ಸಾಹಿತ್ಯದ ಮೂಲಕ ಸಾಧ್ಯವಾಗಬಹುದಾದ ಮನೋವಿಕಾಸ ಅಥವಾ ಸಾಮಾಜಿಕ ಬದಲಾವಣೆಯ ಸಾಧ್ಯತೆ, ಮನರಂಜನೆಯೇ ಮುಖ್ಯವಾದ ಸಿನಿಮಾ ಮಾಧ್ಯಮಕ್ಕೆ ಕಷ್ಟಸಾಧ್ಯ ಎನ್ನುವ ವಿಚಾರ ಅವರದು. ‘ರಾಗಕ್ಕೆ ಬರೆಯುವುದಷ್ಟೇ ಚಿತ್ರಸಾಹಿತಿಯ ಕೆಲಸ’ ಎಂದು ನಂಬಿದ್ದರು. ಆದರೆ, ಕು.ರ.ಸೀ. ಅವರ ಗೀತೆಗಳು ಮನರಂಜನೆ ಮತ್ತು ರಾಗದ ಚೌಕಟ್ಟನ್ನು ಮೀರಿ ಕನ್ನಡದ ಸಹೃದಯರ ಮನಸ್ಸುಗಳಲ್ಲಿ ನೆಲೆನಿಂತಿರುವುದು ಅವುಗಳಲ್ಲಿನ ಜೀವನಪ್ರೀತಿ ಮತ್ತು ಭಾಷಿಕ ಸೌಂದರ್ಯದಿಂದಾಗಿ. ಅವರು ಕಟ್ಟಿಕೊಟ್ಟ ರಾಮನ ಅವತಾರ ಹಾಗೂ ಮೆಲ್ಲುಸಿರಿನ ಸವಿಗಾನ ಚಿತ್ರರಸಿಕರ ಮನಸ್ಸುಗಳಲ್ಲಿ ಸದಾ ಅನುರಣಿಸುತ್ತಲೇ ಇರುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು