ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂಸ್ಕೃತಿಯ ‘ರಾಜ’

Last Updated 24 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಕಲಾಭಿರುಚಿಯಿರುವ ಕನ್ನಡಿಗರಿಗೆ ಸಿನೆಮಾ ಅಭಿನಯವೆಂದರೆ ನೆನಪಾಗುವ ಮೊದಲ ಹೆಸರು ನಟಸಾರ್ವಭೌಮ ಡಾ. ರಾಜಕುಮಾರ್. ಕನ್ನಡ ಸಿನಿಮಾರಂಗದ ಇತಿಹಾಸದಲ್ಲಿ ಸಾಕಷ್ಟು ಶ್ರೇಷ್ಠ ಕಲಾವಿದರು ನೆಲೆಗೊಂಡು ತಮ್ಮ ಛಾಪನ್ನು ಸ್ಥಾಪಿಸಿ ಹೋಗಿದ್ದಾರೆ. ಆದರೆ, ಅವರಾರು ರಾಜಕುಮಾರ್ ಗಳಿಸಿದಷ್ಟು ಸಾರ್ವತ್ರಿಕ ಹಾಗು ಕಾಲಾತೀತ ಜನಮನ್ನಣೆ ಪಡೆಯಲಿಲ್ಲ. ಹಾಗಿದ್ದಲ್ಲಿ, ರಾಜಕುಮಾರ್ ಅವರ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯೇನು? ಸಿಂಗಾನಲ್ಲೂರು ಪುಟ್ಟಸಾಮಯ್ಯ ಮುತ್ತುರಾಜ್, ಕನ್ನಡಿಗರ ಹೃದಯ ಸಾಮ್ರಾಜ್ಯದ ಏಕೈಕ ರಾಜಕುಮಾರ್ ಆಗಿ ರೂಪುಗೊಂಡ ಪರಿಯೇನು?

ರಾಜಕುಮಾರ್ ಸಿನಿಮಾ ಪಯಣವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿದರೆ, ವಿಶಿಷ್ಟವಾಗಿ ಗುರುತಿಸಬಹುದಾದ ಅಂಶಗಳೆಂದರೆ; ಅವರ ಶಿಸ್ತುಬದ್ಧ ಜೀವನ ಶೈಲಿ, ವಹಿಸಿಕೊಂಡ ಪಾತ್ರಗಳಿಗೆ ಮಾಡುತ್ತಿದ್ದ ಅಪಾರ ಪೂರ್ವ ತಯಾರಿ, ಸೂಕ್ತ ಪಾತ್ರಗಳ ಆಯ್ಕೆ ಹಾಗು ಅವುಗಳು ಕೊಡುವ ಸಾಮಾಜಿಕ ಸಂದೇಶದ ಕುರಿತ ಕಾಳಜಿ, ತನ್ನೆಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಕೊಡುತ್ತಿದ್ದ ಗೌರವ, ಅಭಿಮಾನಿಗಳಿಗೆ ತೋರುತ್ತಿದ್ದ ಭಕ್ತಿಪೂರ್ವಕ ಕೃತಜ್ಞತೆ, ಅವರು ಅಭಿನಯಿಸಿದ ಪಾತ್ರಗಳ ವೈವಿಧ್ಯತೆ, ಅನ್ನದ ಭಾಷೆ ಕನ್ನಡಕ್ಕೆ ಸಲ್ಲಿಸಿದ ಸೇವೆ, ಅಲ್ಲದೆ, ಸದಾ ಅವರ ನೆರಳಿನಂತೆ ಜೊತೆಯಾಗಿದ್ದ ಪತ್ನಿ ಪಾರ್ವತಮ್ಮ ಮತ್ತು ತಮ್ಮ ವರದಪ್ಪರವರ ಕೊಡುಗೆ.

ಮೊದಲನೆಯದಾಗಿ, ರಾಜಕುಮಾರ್ ಅವರ ಶಿಸ್ತುಬದ್ಧ ಜೀವನ ಶೈಲಿ, ಸಿನಿಮಾ ರಂಗಕ್ಕೆ ಪ್ರವೇಶಿಸಲು ಬಯಸುವ ಪ್ರತಿಯೊಬ್ಬರಿಗೆ ಆದರ್ಶಪ್ರಾಯ. ವರ್ತಮಾನ ಕಾಲದ ನಾಯಕರುಗಳು ದೇಹದಾರ್ಢ್ಯತೆ ಬೆಳೆಸಿಕೊಳ್ಳುವುದು ಸಾಮಾನ್ಯ. ಆದರೆ, ರಾಜಕುಮಾರ್ ಕಾಲದಲ್ಲಿ ನಾಯಕನಿಗೆ ಭಾವಾಭಿನಯದ ಪಾತ್ರ ನಿರ್ವಹಣೆ ಪ್ರಾಧಾನ್ಯತೆಯಾಗಿತ್ತೇ ವಿನಃ, ದೇಹ ದಾರ್ಢ್ಯತೆಯಲ್ಲ. ಆದರೂ ಕೂಡ, ರಾಜಕುಮಾರ್ ದಿನವೂ ಕಠಿಣ ಯೋಗ್ಯಾಭ್ಯಾಸ ಮಾಡಿ ದೇಹ ದಾರ್ಢ್ಯತೆ ಕಾಪಾಡಿಕೊಂಡಿದ್ದರು. ಇದು, ರಾಜಕುಮಾರ್ ತನ್ನ ಸಿನಿಮಾ ಜೀವನಕ್ಕಾಗಿ ಸ್ವತಃ ರೂಢಿಸಿಕೊಂಡ ಪರಿಶ್ರಮವೇ ಹೊರತು, ಅನುಕರಣೆಯಾಗಿರಲಿಲ್ಲ. ಇದು, ಅವರು ತನ್ನ ವೃತ್ತಿಗೆ ತೋರಿದ ಗೌರವದ ಪ್ರತೀಕ ಮತ್ತು ಈ ಮೂಲಕ ತನ್ನ ಅಭಿಮಾನಿಗಳಿಗೆ ಕೊಟ್ಟ ಆರೋಗ್ಯಕರ ಸಂದೇಶ ಕೂಡ ಹೌದು.

ಇನ್ನು, ರಾಜಕುಮಾರ್ ತಾನು ನಿರ್ವಹಿಸಲು ಒಪ್ಪಿಕೊಂಡ ಪಾತ್ರಗಳಿಗೆ ಮಾಡುತ್ತಿದ್ದ ಅಮೋಘ ಪೂರ್ವ ತಯಾರಿ, ಎಲ್ಲಾ ವೃತ್ತಿಪರರಿಗೆ ಸ್ಪೂರ್ತಿ. ಉದಾಹರಣೆಗೆ, ‘ಸನಾದಿ ಅಪ್ಪಣ್ಣ’ ಚಿತ್ರಕ್ಕೆ ಬೇಕಾಗಿದ್ದ ಶೆಹನಾಯಿ ಊದುವ ನೈಜ್ಯ ಆಂಗಿಕ ಅಭಿನಯವನ್ನು ಅಂತರ್ಗತ ಮಾಡಿಕೊಳ್ಳಲು, ಶೆಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ರಿಂದ ರಾಜ್‌ಕುಮಾರ್ ತರಬೇತಿ ಪಡೆದಿದ್ದರು. ಅವರ ಅನೇಕ ನಿರ್ದೇಶಕರು ಕಂಡುಕೊಂಡಂತೆ, ಅಭಿನಯದ ವಿಷಯದಲ್ಲಿ ರಾಜಕುಮಾರ್ ತನ್ಮಯತೆ ಎಷ್ಟಿತ್ತೆಂದರೆ, ಹೊರಗಿನ ಬಿಸಿಲು, ಮಳೆ, ಚಳಿ, ಹಿಮಪಾತ ಇತ್ಯಾದಿಗಳು ಅವರನ್ನು ವಿಚಲಿತಗೊಳಿಸುತ್ತಿರಲಿಲ್ಲ. ಅವರು ಭಕ್ತಿ ಗೀತೆಗಳನ್ನು ಹಾಡುವಾಗ ಅಥವಾ ನಟಿಸುವಾಗ ಕಾಲಿಗೆ ಚಪ್ಪಲಿ ಧರಿಸುತ್ತಿರಲಿಲ್ಲ. ಅವರ ಶಿಸ್ತುಬದ್ಧ ಪೂರ್ವ ತಯಾರಿಯ ಒಂದು ನಿದರ್ಶನವೆಂಬಂತೆ, ರಾತ್ರಿ ಮಲಗುವ ಮೊದಲು ಮಾರನೇ ದಿನ ಚಿತ್ರೀಕರಣದ ತನ್ನ ಸಂಭಾಷಣೆಗಳನ್ನು ತಪ್ಪದೆ ಅಭ್ಯಸಿಸುತ್ತಿದ್ದರು. ಇನ್ನೊಂದು ವಿಶೇಷತೆಯೆಂದರೆ, ತನ್ನ ಸಹ ಕಲಾವಿದರಿಗೆ ತೋರುತ್ತಿದ್ದ ವಿಶಿಷ್ಟ ಗೌರವ. ತನ್ನ ಚಿತ್ರೀಕರಣವಿಲ್ಲದಿದ್ದರೂ ಉಳಿದ ಪಾತ್ರಗಳ ಅಭಿನಯವನ್ನು ಮೂಲೆಯಲ್ಲಿ ಕುಳಿತು ಗಮನಿಸುತ್ತಾ ಅವರಿಂದ ತಾನೇನಾದರೂ ಕಲಿಯಬಹುದೆನ್ನುವ ವಿನಮ್ರತೆ ಅವರಲ್ಲಿತ್ತು.

ಹಾಗೆಯೇ, ರಾಜಕುಮಾರ್ ತನ್ನ ಪಾತ್ರಗಳ ಆಯ್ಕೆಯಲ್ಲಿ ಬಹಳ ಜಾಗ್ರತೆ ವಹಿಸುತ್ತಿದ್ದರು. ಅವರಿಗಿದ್ದ ಅಪಾರ ಅಭಿಮಾನಿಗಳಿಗೆ ಅವರ ಪಾತ್ರಗಳು ಸಮಾಜ ಕಂಟಕ ಸಂದೇಶಗಳನ್ನು ಕೊಡಬಾರದೆಂಬ ಕಾಳಜಿ ಅವರಿಗಿತ್ತು. ವಿಶೇಷವಾಗಿ ಗಮನಿಸಿದರೆ, ರಾಜಕುಮಾರ್ ನಿರ್ವಹಿಸಿದ ಪಾತ್ರಗಳೆಂದೂ ಸಿಗರೇಟು ಸೇದಿಲ್ಲ ಮತ್ತು ಮದ್ಯಪಾನ ಮಾಡಿಲ್ಲ. ಉದಾಹರಣೆಗೆ, ಅವರ ಚಿತ್ರ ‘ಬಂಗಾರದ ಮನುಷ್ಯ’ ಯುವ ಜನತೆಯನ್ನು ವ್ಯವಸಾಯದತ್ತ ಸೆಳೆದರೆ, ‘ಕಸ್ತೂರಿ ನಿವಾಸ’ ದಾನದ ಮಹತ್ವ ತಿಳಿಸಿತು, ‘ಜೀವನ ಚೈತ್ರ’ ಹಲವಾರು ಹೆಂಡದ ಅಂಗಡಿಗಳನ್ನು ಮುಚ್ಚಿಸಲು ಕಾರಣವಾದರೆ, ‘ಶಬ್ದವೇಧಿ’ ಯುವಜನತೆಯನ್ನು ಬಲಿತೆಗೆದುಕೊಳ್ಳುತ್ತಿರುವ ಡ್ರಗ್ಸ್ ಪಿಡುಗನ್ನು ಕೊನೆಗಾಣಿಸುವ ಅಗತ್ಯ ತಿಳಿಸಿತು.

ಜೊತೆಗೆ, ರಾಜಕುಮಾರ್ ತನ್ನ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಕೊಡುತ್ತಿದ್ದ ಗೌರವ ವರ್ತಮಾನ ಕಾಲದ ಕಲಾವಿದರಿಗೆ ಮಾದರಿ. ತನ್ನನ್ನು ನಿರ್ದೇಶಿಸಿದ ಹಿರಿಯ ನಿರ್ದೇಶಕರಿಂದ ಹಿಡಿದು ಕಿರಿಯ ನಿರ್ದೇಶಕರನ್ನೂ ರಾಜಕುಮಾರ್ ಗುರುವಿನ ಸ್ಥಾನದಲ್ಲಿ ಇರಿಸಿದ್ದರು. ಕೆಲವೊಮ್ಮೆ ತನ್ನ ಪಾತ್ರದ ಕುರಿತು ನಿರ್ದೇಶಕರಿಗಿಂತ ವಿಭಿನ್ನ ಅಭಿಪ್ರಾಯ ಹೊಂದಿದ್ದರೂ, ಅವರಾಗಿಯೇ ಸ್ವತಃ ಕೇಳದ ಹೊರತು, ತಾನೇ ಮೂಗು ತೂರಿಸಿ ಅಭಿಪ್ರಾಯ ಮಂಡಿಸುತ್ತಿರಲಿಲ್ಲ. ಬದಲಾಗಿ, ವಿನಮ್ರ ವಿದ್ಯಾರ್ಥಿಯ ಮನೋಭಾವ ಹೊಂದಿದ್ದರು. ನಿರ್ದೇಶಕರನ್ನೆಂದೂ ಕಾಯಿಸದೆ, ಅವರಿಗಿಂತ ಮೊದಲೇ ಸೆಟ್ಟಿಗೆ ತಲುಪಿ ತನ್ನ ಪಾತ್ರಕ್ಕೆ ಸಿದ್ದರಾಗಿ ಕುಳಿತುಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದರು. ಅಂತೆಯೇ, ರಾಜಕುಮಾರ್ ಅಭಿನಯಿಸಿದ ಒಟ್ಟು 206 ಚಿತ್ರಗಳ ಯಶಸ್ಸಿನ ಸರಾಸರಿ ಸುಮಾರು ಶೇ 93. ಆದರೂ ಕೂಡ, ಎಲ್ಲಿಯಾದರೂ ನಿರ್ಮಾಪಕರು ತನಗೆ ರಾಜಕುಮಾರ್ ಸಿನಿಮಾದಿಂದ ನಷ್ಟವಾಗಿದೆಯೆಂದು ಹೇಳಿಕೊಂಡಿರುವುದು ಕಿವಿಗೆ ಬಿದ್ದಲ್ಲಿ, ಅವರನ್ನು ಮನೆಗೆ ಕರೆದು ಮುಂದಿನ ಸಿನಿಮಾಕ್ಕೆ ಉಚಿತ ಕಾಲ್ ಶೀಟ್ ಕೊಟ್ಟ ಉದಾಹರಣೆಗಳಿವೆ. ಒಟ್ಟಿನಲ್ಲಿ, ನಿರ್ಮಾಪಕರನ್ನು ಅನ್ನದಾತರೆಂದೇ ಕೃತಜ್ಞತೆ ತೋರಿಸಿ ಅವರು ಚೆನ್ನಾಗಿರುವಂತೆ ನೋಡಿಕೊಳ್ಳುತ್ತಿದ್ದರು.

ಅದೇ ರೀತಿ, ಸಾರ್ವಜನಿಕ ರಂಗದಲ್ಲಿ ಯಶಸ್ಸು ಪಡೆದವರಿಗೆಲ್ಲಾ, ರಾಜಕುಮಾರ್ ತನ್ನ ಅಭಿಮಾನಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿ ಅನುಕರಣೀಯ. ಅವರು ತನ್ನ ಅಭಿಮಾನಿಗಳನ್ನು ದೇವರೆಂದುದು ಬರಿ ಬಾಯಿಮಾತಾಗಿರಲಿಲ್ಲ, ಹೃದಯದಾಳದ ನುಡಿಯಾಗಿತ್ತು. ಅವರನ್ನು ನೋಡಬಯಸಿದ ಅಭಿಮಾನಿಗಳಿಗೆ ಎಂದೂ ನಿರಾಶೆ ಮಾಡಲಿಲ್ಲ. ತನ್ನ ಸಮಕಾಲೀನರವರಾಗಿದ್ದ ಎನ್.ಟಿ.ಆರ್. ಅಥವಾ ಎಂ.ಜಿ.ಆರ್. ಮಾದರಿಯಲ್ಲಿ ರಾಜಕೀಯ ಸೇರಿ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳಿದ್ದರೂ, ಇಂತಹ ಪ್ರಚೋದನೆ ಮತ್ತು ಒತ್ತಾಯಗಳಿಗೆ ಚಂಚಲರಾಗದೆ, ಅಧಿಕಾರದ ಮೋಹ ತೊರೆದು ಅಭಿಮಾನಿಗಳ ಹೃದಯದಲ್ಲಿ ಸ್ಥಾಪಿತರಾದರು. ಈ ಮೂಲಕ, ಜನರ ಅಭಿಮಾನವನ್ನು ಸ್ವಹಿತಕ್ಕಾಗಿ ಉಪಯೋಗಿಸಿಕೊಳ್ಳಲಿಲ್ಲ. ಮುಖ್ಯವಾಗಿ, ರಾಜಕುಮಾರ್ ಗೆ ತನ್ನ ಅಂತಃಸತ್ವಯೆಲ್ಲಿದೆ ಎನ್ನುವ ಅರಿವಿತ್ತು. ಜನರಿಂದ ತನಗೆ ಸಿಕ್ಕಿರುವ ನಿಸ್ವಾರ್ಥ ಪ್ರೀತಿ ತನ್ನ ನಟನೆಗೆ ಎನ್ನುವ ವಾಸ್ತವ ಪ್ರಜ್ಞೆ ಹಾಗು ಅದರಲ್ಲಿಯೇ ಉತ್ತುಂಗಕ್ಕೇರಿ ಜನರಿಗೆ ಇನ್ನಷ್ಟು ಮನೋರಂಜನೆ ಕೊಡಬೇಕೆನ್ನುವ ಜವಾಬ್ದಾರಿ ಅವರಿಗಿತ್ತು. ಹಾಗಾಗಿಯೇ, ತನ್ನ ಶ್ರೀಮಂತಿಕೆಯ ದಿನಗಳಲ್ಲೂ ಅವರು ಜನಸಾಮಾನ್ಯರಂತೆ ಬದುಕಿದರು ಹಾಗೂ ಜನರ ಕಷ್ಟಕ್ಕೆ ಸ್ಪಂದಿಸಿದರು. ಅವರು ಸೆಟ್‌ನಲ್ಲಿ ಉಳಿದ ಸಹಕಲಾವಿದರು, ಮತ್ತು ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನಷ್ಟೇ ಪಡೆಯುತ್ತಿದ್ದರು. ಅವರ ಇನ್ನೊಂದು ಸಾಧನೆಯೆಂದರೆ, ತನ್ನ ನಿರ್ಮಾಪಕರನ್ನು ಒತ್ತಾಯಿಸಿ, ಭಾರತ ಸಿನೆಮಾರಂಗದ ಇತಿಹಾಸದಲ್ಲಿಯೇ ಪ್ರಥಮಬಾರಿ ಸೆಟ್‌ನಲ್ಲಿ ಪಂಕ್ತಿಭೋಜನ ಪ್ರಾರಂಭಿಸಿರುವುದು. ಮುಂದೆ, ಈ ಶ್ರೇಷ್ಠ ಪರಂಪರೆಯನ್ನು ಉಳಿದ ಚಿತ್ರರಂಗದವರು ಅನುಸರಿಸುತ್ತಾರೆ.

ಅದರಂತೆಯೇ, ರಾಜಕುಮಾರ್‌ರವರ ವೈಶಿಷ್ಟ್ಯವೆಂದರೆ, ಅವರು ನಿರ್ವಹಿಸಿದ ಪಾತ್ರಗಳ ವೈವಿಧ್ಯತೆ. ಅವರು ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಳ್ಳದೆ, ಎಲ್ಲ ತರನಾದ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಭಕ್ತಿ ಪ್ರಧಾನ ಚಿತ್ರಗಳ ಮೂಲಕ ತೆರೆಯ ಮೇಲೆ ಪುರಾಣಗಳ ಮರುಕಳಿಸಿದರೆ, ಐತಿಹಾಸಿಕ ಪಾತ್ರಗಳ ಮೂಲಕ ಕರ್ನಾಟಕ ಇತಿಹಾಸದ ವೈಭವವನ್ನು ಮರುಸೃಷ್ಟಿ ಮಾಡಿದರು. ಜೊತೆಗೆ, ಅವರು ಎಲ್ಲ ವರ್ಗದ ಪ್ರೇಕ್ಷಕರನ್ನು ಮುಟ್ಟುವ ಪಾತ್ರ ಮಾಡಿದರು. ಸಾಮಾನ್ಯ ಕೆಳವರ್ಗದ/ಕೆಳಜಾತಿಯ ಪಾತ್ರಗಳಾದ ಕಾವಲುಗಾರ, ಕಮ್ಮಾರ, ಕುರಿಗಾಹಿ, ಕುಂಬಾರ, ರೈತ, ಕೂಲಿಕಾರ, ಅಂಬಿಗ, ಜೀತದಾಳು, ವಾದ್ಯಗಾರರಿಂದ ಹಿಡಿದು, ವೃತ್ತಿನಿರತ ಪತ್ತೇದಾರಿ, ಡಾಕ್ಟರ್, ಲಾಯರ್, ಅಧ್ಯಾಪಕ, ಇತ್ಯಾದಿ ಪಾತ್ರಗಳನ್ನು ಮಾಡಿದುದರಿಂದ, ಎಲ್ಲರಿಗೂ ರಾಜಕುಮಾರ್ ಪಾತ್ರಗಳ ಮೂಲಕ ತಮ್ಮನ್ನು ನೋಡಿಕೊಳ್ಳುವಂತಾಯಿತು.

ಸಾಮಾನ್ಯವಾಗಿ, ರಾಜಕುಮಾರ್ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಕನ್ನಡದ ಸೇವೆ ಮಾಡಿರುವುದನ್ನು ಕನ್ನಡಿಗರು ನೆನಪಿಸಿಕೊಳ್ಳುತ್ತಾರೆ. ಆದರೆ, ರಾಜಕುಮಾರ್ ಕನ್ನಡ ಅಭಿಮಾನ ಅದಕ್ಕಷ್ಟೇ ಸೀಮಿತವಾಗಿರಲಿಲ್ಲ. ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ 57 ಉಚಿತ ರಸಮಂಜರಿ ಕಾರ್ಯಕ್ರಮ ನೀಡಿ ಸಂಗ್ರಹಿಸಿದ ದೇಣಿಗೆಯಿಂದ 21 ಜಿಲ್ಲಾ ಕೇಂದ್ರಗಳಲ್ಲಿ ಕ್ರೀಡಾಂಗಣ ನಿರ್ಮಿಸುವಲ್ಲಿ ರಾಜಕುಮಾರ್ ಕೊಡುಗೆಯಿದೆ. ಇದಲ್ಲದೆ, ವಿವಿಧ ಕನ್ನಡ ಸಂಘಗಳಿಗೆ, ರಾಜ್ಯ ವಿದ್ಯುತ್ಚ್ಛಕ್ತಿ ಮಂಡಳಿ ಮತ್ತು ಪೊಲೀಸ್ ಇಲಾಖೆಗಳ ಕ್ಷೇಮಾಭಿವೃದ್ಧಿಗಾಗಿ ಅನೇಕ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಜೊತೆಗೆ, ದೆಹಲಿ ಮತ್ತು ಮುಂಬೈಯಲ್ಲಿ ಕನ್ನಡ ಸಂಘದ ಸ್ವಂತ ಕಟ್ಟಡಕ್ಕಾಗಿ ರಸಮಂಜರಿ ಕಾರ್ಯಕ್ರಮ ನೀಡಿ ನೆರವಾಗಿದ್ದರು. ಅದಕ್ಕಾಗಿಯೇ, ರಾಷ್ಟ್ರಕವಿ ಕುವೆಂಪು, ‘ನನ್ನ ವಿಶ್ವಮಾನವ ಸಂದೇಶಕ್ಕೆ ನೀವೇ ಯೋಗ್ಯ ವ್ಯಕ್ತಿ’ ಎಂದು ರಾಜಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇವುಗಳೊಂದಿಗೆ, ಮುತ್ತುರಾಜ್ ಕನ್ನಡಿಗರ ಕಣ್ಮಣಿ ರಾಜಕುಮಾರ್ ಆಗಿ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿದ ಇಬ್ಬರ ವಿಶೇಷ ಕೊಡುಗೆಯನ್ನು ಸ್ಮರಿಸಲೇ ಬೇಕು. ಅವರೇ, ಪತ್ನಿ ಪಾರ್ವತಮ್ಮ ಮತ್ತು ತಮ್ಮ ವರದಪ್ಪ. ತನಗಿಂತ ಹೆಚ್ಚು ಓದಿದ್ದ ಪತ್ನಿಯ ಸಲಹೆಗೆ ಬಹಳ ಗೌರವ ಕೊಡುತ್ತಿದ್ದ ರಾಜಕುಮಾರ್, ಪಾರ್ವತಮ್ಮ ನಿರ್ಮಾಪಕಿಯಾಗಲು ಉತ್ತೇಜನ ಕೊಟ್ಟರು. ರಾಜಕುಮಾರ್ ನೆರಳಿನಂತೆ ಜೊತೆಯಾಗಿದ್ದ ಪಾರ್ವತಮ್ಮ, ಅವರ ಸಿನೆಮಾ ಕಥೆಗಳ ಹುಡುಕಾಟಕ್ಕಾಗಿ ಕನ್ನಡ ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತಿದ್ದರು. ಇನ್ನು, ತಮ್ಮ ವರದಪ್ಪ ‘ನಿರ್ದೇಶಕರ ನಿರ್ದೇಶಕ’ರೆಂದೇ ಪ್ರಸಿದ್ದರಾದವರು. ಯಾಕೆಂದರೆ, ವರದಪ್ಪ ಪಾತ್ರ ಪರಿಶೀಲಿಸಿ ಒಪ್ಪಿದ ಮೇಲೆಯೇ ರಾಜಕುಮಾರ್ ಯಾವುದೇ ಸಿನೆಮಾದಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿದ್ದರು. ಹೀಗೆ, ರಾಜಕುಮಾರ್ ಚಿತ್ರಕಥೆಗಳನ್ನು ನಿರ್ದೇಶಕರೊಂದಿಗೆ ಚರ್ಚಿಸಿ, ಚಿತ್ರಸಂಭಾಷಣೆಯನ್ನು ಪರಿಶೀಲಿಸಿ, ಎಲ್ಲೂ ಅಪಾರ್ಥದ ಸಂಭಾಷಣೆ/ಸನ್ನಿವೇಶ ಬಾರದಂತೆ, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವ ಗುಣಮಟ್ಟದ, ರಾಜಕುಮಾರ್ ಸಿನೆಮಾ ರೂಪಿಸುವಲ್ಲಿ ದೊಡ್ಡಮಟ್ಟದ ಕೊಡುಗೆ ವರದಪ್ಪನವರದ್ದು. ಅವರಿಬ್ಬರ ನಂಟು ಎಷ್ಟು ಆಳವಾಗಿತ್ತೆಂದರೆ, ವರದಪ್ಪ 2006ರ ಫೆಬ್ರವರಿ 8ಕ್ಕೆ ತೀರಿಕೊಂಡರೆ, ಅದೇ ವರ್ಷದ ಏಪ್ರಿಲ್ 13ರಂದು ರಾಜ್ ಅಸ್ತಂಗತರಾಗುತ್ತಾರೆ. ವರದಪ್ಪ ಸಾವಿನ ನಂತರ ಬಹಳ ಖಿನ್ನರಾಗಿದ್ದ ರಾಜಕುಮಾರ್ ಎಲ್ಲರೊಂದಿಗೆ ಹೇಳುತಿದ್ದ ಮಾತೊಂದೆ-‘ಲಕ್ಷ್ಮಣ ಹೋದಮೇಲೆ ರಾಮನಿಗಿಲ್ಲೇನು ಕೆಲಸ?’

ಹೀಗೆ, ಅತಿ ಸಾಮಾನ್ಯ ಹಿನ್ನೆಲೆಯಿಂದ ತನ್ನ ವೃತ್ತಿಜೀವನ ಆರಂಭಿಸಿದ ರಾಜಕುಮಾರ್ ನಟನಾ ಕಲೆಯಲ್ಲಿಯೇ ತನ್ನ ಜೀವನದ ಅರ್ಥ ಕಂಡುಕೊಂಡು, ಮುಂದಿನ ಪೀಳಿಗೆಗಳಿಗೆ ಒಂದು ಕಲಾ ವಿಶ್ವವಿದ್ಯಾಲಯವಾಗಿ ಅಸ್ತಂಗತರಾದರು. ಆದುದರಿಂದ, ವರ್ತಮಾನದಲ್ಲಿ ಚಿತ್ರರಂಗಕ್ಕೆ ಪ್ರವೇಶ ಪಡೆಯಲಿಚ್ಚಿಸುವವರು, ರಾಜಕುಮಾರ್ ಸಿನೆಮಾಗಳನ್ನು ತನ್ಮಯತೆಯಿಂದ ನೋಡಿ ಅಭ್ಯಸಿಸಿದರೆ, ಅದೇ ಅವರು ಪಡೆಯುವ ಶ್ರೇಷ್ಠ ಮಟ್ಟದ ನಟನಾ ತರಬೇತಿ. ಜೊತೆಗೆ, ವೃತ್ತಿರಂಗದಲ್ಲಿ ಪಡೆದ ಅಭೂತಪೂರ್ವ ಯಶಸ್ಸು ಅವರನ್ನೆಂದೂ ವಿಚಲಿತರನ್ನಾಗಿಸಿಸದೇ ವಿನಮ್ರತೆಯನ್ನು ಕೊನೆಯ ತನಕ ಕಾಪಾಡಿಕೊಂಡಿದ್ದರು. ಹಾಗೆಯೇ, ರಾಜಕುಮಾರ್ ತನಗೆ ಪ್ರೀತಿ, ಯಶಸ್ಸು ಹಾಗು ಬದುಕು ಕೊಟ್ಟ ಮಣ್ಣಿನ ಭಾಷೆ ಮತ್ತು ಸಂಸ್ಕೃತಿಗೆ ಸ್ಮರಣೀಯ ಕಾಣಿಕೆ ನೀಡಿದ್ದಾರೆ. ರಾಜಕುಮಾರ್ ಜನ್ಮದಿನಾಚರಣೆಯ ಸಂದರ್ಭದಲ್ಲಿ, ಅವರ ಮೂರ್ತಿಗೆ ಬರಿ ಹಾರ ಹಾಕದೆ, ಅವರ ಸ್ಮರಣೀಯ ಸಿನೆಮಾ ಜೀವನಯಾತ್ರೆಯ ಕುರಿತು ಚರ್ಚೆ ಹಾಗು ವಿಮರ್ಶೆಗಳನ್ನು ಮಾಡಿ, ಹೊಸ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವುದೇ, ರಾಜಕುಮಾರ್ ಎನ್ನುವ ಕನ್ನಡ ಮಣ್ಣಿನ ಸಂಸ್ಕೃತಿಯ ಹೆಮ್ಮೆಯ ಮತ್ತು ಅಮೋಘ ಪ್ರತಿಭೆಗೆ ಮಾಡುವ ಅರ್ಥಪೂರ್ಣ ನಮನ.

ಲೇಖಕರು: ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT