ಶನಿವಾರ, ಮಾರ್ಚ್ 28, 2020
19 °C

ಕಿರಿಕ್ ‍ಪಾರ್ಟಿ 2 ಕರ್ಣ ಇರ್ತಾನೆ, ಸಾನ್ವಿ ಇರಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಕ್ಷಿತ್ ಶೆಟ್ಟಿ ಅವರು ‘ಕಿರಿಕ್ ಪಾರ್ಟಿ 2’ ಸಿನಿಮಾ ವೀಕ್ಷಕರ ಮುಂದೆ ಬರಲಿದೆ ಎಂದು ಟ್ವೀಟ್ ಮಾಡಿದ್ದು ಹಲವು ಊಹಾಪೋಹಗಳಿಗೆ ಮೂಲವಾಗಿತ್ತು. ‘ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ತೆರೆಯ ಮೇಲೆ ಪುನಃ ಒಂದಾಗಲಿದೆ’ ಎಂಬುದು ಈ ಸಿನಿಮಾ ವಿಚಾರವಾಗಿ ಹರಡಿದ್ದ ಊಹಾಪೋಹಗಳಲ್ಲಿ ಒಂದು.

ಆದರೆ, ರಶ್ಮಿಕಾ ಅವರು ‘ಕಿರಿಕ್ ಪಾರ್ಟಿ 2’ರಲ್ಲಿ ಇರುವುದಿಲ್ಲ ಎಂಬುದು ಖಚಿತವಾಗಿದೆ. ‘ಅವರು ಹೊಸ ಸಿನಿಮಾದಲ್ಲಿ ಇರುತ್ತಾರೆಯೇ ಎಂಬ ಪ್ರಶ್ನೆಯೇ ಅಪ್ರಸ್ತುತ’ ಎನ್ನುವ ಉತ್ತರ ಕೂಡ ರಕ್ಷಿತ್ ಬಳಗದ ಕಡೆಯಿಂದ ಬಂದಿದೆ! ಏಕೆಂದರೆ, ರಶ್ಮಿಕಾ ನಿಭಾಯಿಸಿದ್ದ, ಹದಿಹರೆಯದವರ ಮನಸ್ಸು ಕದ್ದ ‘ಸಾನ್ವಿ’ ಪಾತ್ರ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿಯೇ ಕೊನೆಯಾಗಿದೆಯಲ್ಲ?!

‘ಆ ಪಾತ್ರ ಪುನಃ ಜೀವ ‍ಪಡೆದು, ಕಿರಿಕ್ ‍ಪಾರ್ಟಿಯ ಎರಡನೆಯ ಭಾಗದಲ್ಲಿ ಕಾಣಿಸಿಕೊಳ್ಳುವುದು ಎಲ್ಲಾದರೂ ಉಂಟೇ’ ಎಂಬ ಪ್ರಶ್ನೆ ಬಂದಿದೆ ‘ಕಿರಿಕ್...’ ತಂಡದ ಕಡೆಯಿಂದ. ‘ಈ ಚಿತ್ರದ ಎರಡನೆಯ ಭಾಗದ ಕಥೆಯು ಪರಿಕಲ್ಪನೆಯ ರೂಪದಲ್ಲಿ ಸಿದ್ಧವಾಗಿದೆ. ಆದರೆ, ಸಿನಿಮಾ ಸಿದ್ಧವಾಗಿ ವೀಕ್ಷಕರ ಎದುರು ಬರಲು ಇನ್ನೂ ಸಮಯ ಬೇಕು. ರಿಷಬ್ ಶೆಟ್ಟಿ ಅವರು ರುದ್ರಪ್ರಯಾಗ ಚಿತ್ರದ ಕೆಲಸ ಪೂರ್ಣಗೊಳಿಸಬೇಕು, ರಕ್ಷಿತ್ ಅವರು ಪುಣ್ಯಕೋಟಿ ಸಿನಿಮಾ ಕೆಲಸ ಮುಗಿಸಬೇಕು. ಅದಾದ ನಂತರ ಈ ಸಿನಿಮಾ’ ಎನ್ನುತ್ತವೆ ಮೂಲಗಳು.

‘ಕಿರಿಕ್‌ನ ಎರಡನೆಯ ಭಾಗದ ಕಥೆಯು ಕಾಲೇಜಿನ ಸುತ್ತವೇ ಇರುವ ಸಾಧ್ಯತೆ ಇದೆ. ಕರ್ಣ ಮತ್ತು ಅವನ ಸ್ನೇಹಿತರು ಓದಿದ ಕಾಲೇಜಿನ ಜೊತೆ ಕನೆಕ್ಟ್‌ ಆಗುವ ಅಂಶಗಳೂ ಇದರಲ್ಲಿ ಇರುತ್ತವೆ. ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರೇ ಹೊಸ ಚಿತ್ರದಲ್ಲಿಯೂ ಇರಲಿದ್ದಾರೆ. ಆದರೆ, ಪಾತ್ರಗಳಲ್ಲಿ ಒಂದಿಷ್ಟು ಬದಲಾವಣೆಗಳು ಆಗಬಹುದು’ ಎಂದು ರಕ್ಷಿತ್ ಆಪ್ತರು ಹೇಳುತ್ತಾರೆ.

ಅಂದಹಾಗೆ, ಹೊಸ ಚಿತ್ರದ ಎರಡನೆಯ ಭಾಗದ ನಿರ್ದೇಶನದ ಹೊಣೆ ಯಾರದ್ದು ಎಂಬ ಪ್ರಶ್ನೆ ಕೇಳುವ ಅಗತ್ಯವೇ ಇಲ್ಲವಂತೆ. ‘ಅದನ್ನು ರಿಷಬ್ ಅವರೇ ನಿಭಾಯಿಸಲಿದ್ದಾರೆ’ ಎಂಬುದು ಖಚಿತ ವರ್ತಮಾನ. ಆದರೆ ಕರ್ಣನ ಜೊತೆ ತೆರೆಯ ಮೇಲೆ ಯಾರು ಹೆಜ್ಜೆ ಹಾಕುತ್ತಾರೆ ಎಂಬ ಗುಟ್ಟು ರಟ್ಟಾಗಿಲ್ಲ.


ರಿಷಬ್ ಶೆಟ್ಟಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು