ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಅಭಿಮಾನದ ರೂಪಕ ರಾಜಕುಮಾರ್: ಮಹೇಶ ಜೋಶಿ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅಭಿಮತ
Published 24 ಏಪ್ರಿಲ್ 2024, 16:02 IST
Last Updated 24 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ‘ದಿವಂಗತ ನಟ ರಾಜಕುಮಾರ್ ಅವರು ಕನ್ನಡಿಗರ ಅಭಿಮಾನದ ರೂಪಕವಾಗಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು. 

ಕಸಾಪ ಬುಧವಾರ ಹಮ್ಮಿಕೊಂಡಿದ್ದ ರಾಜಕುಮಾರ್ ಅವರ 96ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

‘ರಾಜಕುಮಾರ್ ಅವರು ಕನ್ನಡ ಸಂಸ್ಕೃತಿಯ ಪ್ರತೀಕದಂತಿದ್ದರು. ಅವರ ಅಭಿನಯ ಮತ್ತು ಬದುಕು ಮಾದರಿಯಾಗಿದೆ. ಅವರು ಸಂತ ಶ್ರೇಷ್ಠರಾದ ಕನಕದಾಸ, ಪುರಂದರದಾಸ, ಸರ್ವಜ್ಞ, ತುಕಾರಂ, ಕಬೀರ ಮೊದಲಾದವರ ಪಾತ್ರಗಳಿಗೆ ಜೀವ ತುಂಬಿದರು. ಇಮ್ಮಡಿ ಪುಲಕೇಶಿ, ಮಯೂರ, ಶ್ರೀಕೃಷ್ಣದೇವರಾಯ ಮೊದಲಾದ ಕನ್ನಡ ನಾಡಿನ ವೀರರನ್ನು ಬೆಳ್ಳಿತೆರೆಯ ಮೂಲಕ ಜೀವಂತವಾಗಿಸಿದರು. ಬಾಂಡ್‌ನಿಂದ ಭಕ್ತನವರೆಗೆ, ಚಮ್ಮಾರನಿಂದ ಚಕ್ರವರ್ತಿಯವರೆಗೆ ಎಲ್ಲ ಮಾದರಿಯ ಪಾತ್ರಗಳನ್ನು ಮಾಡಿ, ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದರು’ ಎಂದು ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ, ‘ರಾಜಕುಮಾರ್ ಅವರು ಚಲನಚಿತ್ರಕ್ಕೆ ಸೀಮಿತವಾಗದೆ ನಮ್ಮ ಕಾಲದ ಸಾಂಸ್ಕೃತಿಕ ರೂಪಕವಾಗಿ ಬೆಳೆದರು. ಎಲ್ಲ ತಲೆಮಾರಿನವರೂ ತಮ್ಮ ಪಾಲಿನ ಆದರ್ಶವನ್ನು ರಾಜಕುಮಾರ್ ಎನ್ನುವ ಕನ್ನಡಿಯಲ್ಲಿ ಕಂಡುಕೊಂಡಿದ್ದಾರೆ. ಅಣ್ಣ-ತಮ್ಮಂದಿರು ಹೇಗಿರಬೇಕು? ಗಂಡ-ಹೆಂಡತಿ ಒಡನಾಟ ಹೇಗಿರಬೇಕು? ತಂದೆ-ಮಕ್ಕಳ ಸಂಬಂಧದ ಸ್ವರೂಪ...ಹೀಗೆ ಎಲ್ಲಾ ಪ್ರಶ್ನೆಗಳಿಗೂ ಅವರ ಚಿತ್ರದಲ್ಲಿ ಉತ್ತರವಿದೆ’ ಎಂದು ತಿಳಿಸಿದರು.

ಕನ್ನಡ ಪರ ಹೋರಾಟಗಾರ ರಾ.ನಂ.ಚಂದ್ರಶೇಖರ, ‘ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಕನ್ನಡಿಗರಿಗೆ ದೊಡ್ಡ ಭರವಸೆಯಾಗಿ ಬಂದವರು ರಾಜಕುಮಾರ್. ಅವರು ಯಾವುದೇ ಹೋರಾಟಕ್ಕೆ ಇಳಿದರೂ ಸರ್ಕಾರ ನಡುಗುತ್ತಿತ್ತು’ ಎಂದು ಹಳೆಯ ಘಟನೆಗಳನ್ನು ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT