ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲಿವುಡ್‌ಗೆ ‘ದುನಿಯಾ ವಿಜಿ’ ಎಂಟ್ರಿ: ಖಡಕ್‌ ವಿಲನ್‌ ಪಾತ್ರದಲ್ಲಿ ಸಲಗ

Last Updated 7 ಜನವರಿ 2022, 3:15 IST
ಅಕ್ಷರ ಗಾತ್ರ

‘ಸಲಗ’ ಚಿತ್ರದ ಯಶಸ್ಸು, 14 ವರ್ಷದ ಸಿನಿಪಯಣದಲ್ಲಿ ‘ದುನಿಯಾ’ ವಿಜಯ್‌ಗೆ ಹೊಸ ಇನಿಂಗ್ಸ್‌ ಆರಂಭಿಸುವ ಅವಕಾಶ ನೀಡಿದೆ. ‘ಸಲಗ’ದಲ್ಲಿ ನಟನಾಗಿ, ನಿರ್ದೇಶಕನಾಗಿ ಮಿಂಚಿದ್ದ ವಿಜಯ್‌ ಅವರು ಇದೀಗ ಟಾಲಿವುಡ್‌ ಅಂಗಳಕ್ಕೆ ಅಧಿಕೃತವಾಗಿ ಹೆಜ್ಜೆ ಇಟ್ಟಿದ್ದಾರೆ. ಖ್ಯಾತ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ 107ನೇ ಸಿನಿಮಾದಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿರುವ ವಿಜಯ್‌ ಖಳನಾಯಕನ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ.

ವಿಜಯ್‌ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನುವುದು ‘ಸಲಗ’ ಬಿಡುಗಡೆ ಸಂದರ್ಭದಲ್ಲೇ ಸುದ್ದಿಯಾಗಿತ್ತು. ಇದೀಗ ವಿಜಯ್‌ ಅವರೇ ಅಧಿಕೃತವಾಗಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಗೋಪಿಚಂದ್‌ ನಿರ್ದೇಶಿಸುತ್ತಿರುವ ಈ ಹೊಸ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಟಿ ಶೃತಿ ಹಾಸನ್‌ ಕೂಡಾ ಈ ಚಿತ್ರದಲ್ಲಿದ್ದಾರೆ. ‘ಚಂದನವನದ ಸೆನ್ಸೇಷನ್‌ ದುನಿಯಾ ವಿಜಯ್‌ ಅವರನ್ನು ಈ ತಂಡಕ್ಕೆ ಸ್ವಾಗತಿಸಲು ಖುಷಿಯಾಗುತ್ತಿದೆ. ಅವರ ಪಾತ್ರ ‘ಖಳ’ಪಾತ್ರವನ್ನೇ ಮರುವ್ಯಾಖ್ಯಾನಗೊಳಿಸಲಿದೆ’ ಎನ್ನುತ್ತಾರೆ ಗೋಪಿಚಂದ್‌.

ಚಿತ್ರದ ಕುರಿತು ಮಾತನಾಡಿದ ವಿಜಯ್‌, ‘ಸಲಗ’ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ಗೋಪಿಚಂದ್‌ ಅವರು ತಮ್ಮ ಹೊಸ ಚಿತ್ರದಲ್ಲಿ ಆಫರ್‌ ನೀಡಿದರು. ಈಗಾಗಲೇ ಪೋಸ್ಟರ್‌ನಲ್ಲಿರುವ ರಗಡ್‌ ಲುಕ್‌ನಲ್ಲೇ ನಾನು ಕಾಣಿಸಿಕೊಳ್ಳಲಿದ್ದೇನೆ. ನನ್ನ 14 ವರ್ಷದ ಸಿನಿ ಪಯಣದಲ್ಲಿ ‘ಸಲಗ’ ನನಗೆ ನಟನೆ ಮತ್ತು ನಿರ್ದೇಶನದಲ್ಲಿ ದೊಡ್ಡ ಬ್ರೇಕ್‌ ನೀಡಿತು. ಈ ಯಶಸ್ಸಿನ ಮೆಟ್ಟಿಲನ್ನು ಏರಿಕೊಂಡೇ ನಾನು ಟಾಲಿವುಡ್‌ ಪ್ರವೇಶಿಸುತ್ತಿದ್ದೇನೆ. ನನಗೆ ಎಲ್ಲ ಪಾತ್ರಗಳೂ ಒಂದೇ. ಹೀರೊ ಅಥವಾ ಖಳನಾಯಕ ಎನ್ನುವ ವ್ಯತ್ಯಾಸವನ್ನು ನಾನು ಕಾಣುವುದಿಲ್ಲ. ಪಾತ್ರವನ್ನು ಹೇಗೆ ಅಭಿನಯಿಸಿ ಒಪ್ಪಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಖಳನಾಯಕನ ಪಾತ್ರ ಎಂದು ನಾನು ತಲೆಗೆ ಹಾಕಿಕೊಳ್ಳಲೇ ಇಲ್ಲ. ಹೀರೊ, ವಿಲನ್‌ ಅಥವಾ ಹಾಸ್ಯ ಪಾತ್ರವೇ ಆಗಿರಬಹುದು ನಾನು ಒಂದು ಪಾತ್ರಕ್ಕೆ ಅಂಟಿಕೊಂಡು ಕೂರುವುದಿಲ್ಲ ಎನ್ನುತ್ತಾರೆ ವಿಜಯ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT