ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ಸಂವಾದ: ಮೂರು ದಾರಿಗಳು, ನೂರು ಬಿಂಬಗಳು

ಡಿ. ಸತ್ಯಪ್ರಕಾಶ್‌, ಹೇಮಂತ್‌ ರಾವ್‌, ಅರವಿಂದ್ ಶಾಸ್ತ್ರಿ ಮನದಮಾತು
Last Updated 20 ಆಗಸ್ಟ್ 2018, 12:12 IST
ಅಕ್ಷರ ಗಾತ್ರ

ಈ ಹೊತ್ತಿನ ಕನ್ನಡ ಸಿನಿಮಾ ರುಚಿಯ ಕುರಿತ ಮಾತು ಆರಂಭವಾದುದು ಊಟದ ರುಚಿಯ ಪ್ರಸ್ತಾಪದೊಂದಿಗೆ. ಯುವ ನಿರ್ದೇಶಕತ್ರಯರ ಪೈಕಿ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ನಿರ್ದೇಶಕ ಹೇಮಂತ್‌ ರಾವ್ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಯಲ್ಲಿ ತಾವು ಇಂಟರ್ನಿಯಾಗಿ ಕೆಲಸ ಮಾಡಿದ ದಿನಗಳನ್ನೂ, ‘ಪ್ರಜಾವಾಣಿ’ ಕ್ಯಾಂಟೀನ್‌ನ ಸವಿರುಚಿಯ ನೆನಪುಗಳನ್ನು ಚಪ್ಪರಿಸಿದರು. ಆ ನೆನಪಿನ ಸ್ವಾದವನ್ನು ಕಲ್ಪಿಸಿಕೊಳ್ಳುವಂತೆ ಉಳಿದಿಬ್ಬರು ನಿರ್ದೇಶಕರಾದ ‘ರಾಮಾ ರಾಮಾ ರೇ’ ಚಿತ್ರದ ಸತ್ಯಪ್ರಕಾಶ್‌ ಹಾಗೂ ‘ಕಹಿ’ ಸಿನಿಮಾದ ಅರವಿಂದ್‌ ಶಾಸ್ತ್ರಿ ತಲೆದೂಗಿದರು.

ಹೇಮಂತ್‌, ಅರವಿಂದ್‌ ಹಾಗೂ ಸತ್ಯಪ್ರಕಾಶ್‌ ಮೂವರೂ ಎಂಜಿನಿಯರಿಂಗ್‌ ಕಲಿತವರು. ‘ಅವರಿಬ್ಬರು ನಿಜವಾದ ಎಂಜಿನಿಯರ್‌ಗಳು. ನಾನು ಓದಿದ್ದು ಡಿಪ್ಲೊಮಾ’ ಎಂದರು ಸತ್ಯಪ್ರಕಾಶ್. ಹಾಗಿದ್ದರೆ ಉಳಿದಿಬ್ಬರಿಗಿಂತ ನೀವೇ ಹೆಚ್ಚು ಓದಿರಬೇಕು ಎನ್ನುವ ಜೋಕ್‌ಗೆ ಮೂವರೂ ನಕ್ಕರು.

ಮಾತಿಗೆ ನೆಪವಾಗಿದ್ದುದು ಕನ್ನಡ ಚಿತ್ರರಂಗದ ಇತ್ತೀಚಿನ ವರ್ಷಗಳಲ್ಲಿನ ಯುವೋತ್ಸಾಹ ಹಾಗೂ ಯುವಪ್ರತಿಭೆಗಳು ರೂಪಿಸಿರುವ ಗಮನಾರ್ಹ ಸಿನಿಮಾಗಳು. ಈ ಉತ್ಸಾಹ–ಸಿನಿಮಾಗಳ ಪ್ರತಿನಿಧಿಯಾಗಿಯೇ ಮೂವರು ನಿರ್ದೇಶಕರು ‘ಪ್ರಜಾವಾಣಿ ದೀಪಾವಳಿ ಸಂಚಿಕೆ’ಯ ನೆಪದಲ್ಲಿ ಒಟ್ಟಿಗೆ ಸೇರಿದ್ದರು. ಮೂವರೂ ತಮ್ಮ ಚೊಚ್ಚಿಲ ಸಿನಿಮಾಗಳ ಮೂಲಕವೇ ಚಿತ್ರರಸಿಕರ ಗಮನಸೆಳೆದವರು ಹಾಗೂ ಎರಡನೇ ಸಿನಿಮಾಗಳ ಸಿದ್ಧತೆಯಲ್ಲಿರುವವರು; ಯಾವುದೇ ಗಾಡ್‌ಫಾದರ್‌ಗಳ ಬೆನ್ನುಚಪ್ಪರಿಸುವಿಕೆ ಇಲ್ಲದೆ, ಸಾಂಪ್ರದಾಯಿಕ ಗಾಂಧಿನಗರದ ಹಿನ್ನೆಲೆ ಇಲ್ಲದೆ ಬಂದು ಅಸ್ತಿತ್ವ ಕಂಡುಕೊಂಡವರು.

ಸುಮಾರು ಹತ್ತು ವರ್ಷಗಳ ಹಿಂದೆ (2006ರಲ್ಲಿ) ‘ಮುಂಗಾರುಮಳೆ’, ‘ದುನಿಯಾ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ನೀರು ಕಾಣಿಸಿಕೊಂಡಿತು. ಹೊಸ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಚಿತ್ರರಂಗಕ್ಕೆ ಬಂದರು. ರೆಗ್ಯುಲರ್‍ ವ್ಯಕ್ತಿಗಳ ಹೊರತಾಗಿ, ಸಿನಿಮಾಕ್ಕೆ ಸಂಬಂಧಪಡದ ವ್ಯಕ್ತಿಗಳು ದೊಡ್ಡ ಪ್ರಮಾಣದಲ್ಲಿ ಚಿತ್ರರಂಗ ಪ್ರವೇಶಿಸಿದ ಕಾಲಘಟ್ಟವದು. ಅದರಿಂದ ದೊಡ್ಡ ಪರಿಣಾಮ, ಬದಲಾವಣೆ ಆಗಬೇಕಿತ್ತು. ಆದರೆ, ಸಂಖ್ಯೆಯ ದೃಷ್ಟಿಯಿಂದ ಫಲಿತಾಂಶ ಗೋಚರಿಸಿತೇ ಹೊರತು, ಗುಣಮಟ್ಟದಲ್ಲಿ ಆಗಲಿಲ್ಲ. ಅಂಥದೇ ಉತ್ಸಾಹ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಣಿಸುತ್ತಿದೆ. ಈ ಬೆಳವಣಿಗೆಯನ್ನು ಏನನ್ನುವುದು? ಇದನ್ನು ಅಲೆ ಎನ್ನಬಹುದಾ?

‘ಅಲೆ’ಯ ಪ್ರಶ್ನೆಗೆ ಮೊದಲು ಉತ್ತರಿಸಿದ್ದು ಸತ್ಯಪ್ರಕಾಶ್‍. ತಮ್ಮ ಮಾತಿಗೆ ಸಮರ್ಥನೆಯಾಗಿ ಅವರು ಪರಂಪರೆಯ ಋಣವನ್ನು ನೆನಪಿಸಿಕೊಂಡರು. ‘‘ಹಿಂದೆ ಯಾರೋ ಮಾಡಿದ್ದರ ಪ್ರೇರಣೆ ಇದ್ದುದರಿಂದಲೇ ನಾವೂ ಮಾಡಿದೆವು. ಇಂದಿನ ನಮ್ಮ ಸಿನಿಮಾಗಳ ಹಿನ್ನೆಲೆಯಲ್ಲಿ ಪುಟ್ಟಣ್ಣನವರ ಚಿತ್ರಗಳಿವೆ. ಸಿಂಗೀತಂರ ‘ಪುಷ್ಪಕ ವಿಮಾನ’, ಸಿದ್ದಲಿಂಗಯ್ಯನವರ ‘ಬೂತಯ್ಯನ ಮಗ ಅಯ್ಯು’, ರಾಜೇಂದ್ರಸಿಂಗ್ ಬಾಬು ಅವರ ‘ಮುತ್ತಿನಹಾರ’ – ಈ ಪರಂಪರೆಯ ಭಾಗವಾಗಬೇಕು, ಇಂಥ ಸಿನಿಮಾಗಳನ್ನು ನಾವೂ ಮಾಡಬೇಕು ಎನ್ನುವ ಹಂಬಲದಿಂದಲೇ ಚಿತ್ರರಂಗಕ್ಕೆ ಬಂದಿದ್ದೇವೆ. ನಾವು ಬೆಳೆದುಬಂದ ಪರಿಸರ, ನಮಗೆ ಹಿತ ಅನ್ನಿಸುವಂಥದ್ದು – ಎಲ್ಲವೂ ಈ ಪರಂಪರೆಯ ಭಾಗವಾಗಿದೆ’’.

‘‘ಅಲೆ ಎನ್ನುವುದು ಬಂದುಹೋಗುವುದಲ್ಲ. ಕಾಲುವೆ ರೀತಿ ನಿರಂತರವಾಗಿ ಹರಿಯುತ್ತಿರಬೇಕು’’ ಎನ್ನುವುದು ಸತ್ಯಪ್ರಕಾಶ್‌ ಅನಿಸಿಕೆ. ‘ಅಲೆ’ಯ ಬಗ್ಗೆ ಅವರು ಬಳಸಿನ ಮಾತುಗಳನ್ನಾಡಿದರೆ, ಹೇಮಂತ್‌ ಕಡ್ಡಿಮುರಿದಂತೆ ಹೇಳಿದರು – ‘‘ಅಲೆ ಇರಬಹುದಿತ್ತು. ಅದರ ಚಹರೆ ಕೂಡ ಕಾಣಿಸಿತು. ಆದರದು ಡೈಲ್ಯೂಟ್‍ ಆಯಿತು. ಅಲೆ ಸ್ಪಷ್ಟವಾಗಿ ರೂಪುಗೊಳ್ಳಲಿಲ್ಲ. ಅಲೆ ನಿಲ್ಲಲಿಕ್ಕೆ ಇಲ್ಲಿ ಸ್ಪೀಡ್‍ ಬ್ರೇಕರ್ಸ್‍ ಇದ್ದವು, ಅದರಿಂದಲೇ ಅದು ತೆಳುವಾಯಿತು. ‘ರಂಗಿತರಂಗ’ ಬಿಡುಗಡೆ ಆಗಿ ಗೆದ್ದ ಸಮಯದಲ್ಲಿ – ಒಂದು ತಲೆಮಾರಿನ ನಿರ್ದೇಶಕರು ಸಿನಿಮಾ ಮಾಡುತ್ತಿದ್ದೇವೆ ಎನ್ನುವ ಭಾವನೆ ಉಂಟಾಗಿತ್ತು. ಗುಣಮಟ್ಟದ ಸಿನಿಮಾಗಳ ಸಂಖ್ಯೆಯೂ ಹೆಚ್ಚಾಯಿತು. ಆದರೆ ಅದು ಮುಂದುವರಿಯಲಿಲ್ಲ. ಯುಟ್ಯೂಬ್‌ನಲ್ಲಿ ಈಗಲೂ ದಿನಕ್ಕೊಂದು ಟ್ರೇಲರ್ಬರುತ್ತೆ. ಆದರೆ, ಗುಣಮಟ್ಟ? ಚಿತ್ರರಂಗ ಮತ್ತೆ ಮಾಮೂಲಿನ ಪರಿಸ್ಥಿತಿಗೆ ಬರುತ್ತಿದೆ ಎನ್ನಿಸುತ್ತದೆ. ಸೋಲಿನ ಭಯ ಈಗಲೂ ಹೆಚ್ಚಾಗಿದೆ.

ಗಾಂಧಿನಗರದ ವಸ್ತುಸ್ಥಿತಿಗೆ ಕನ್ನಡಿ ಹಿಡಿಯುವ ಪ್ರಯತ್ನ ಹೇಮಂತ್‌ ಮಾತುಗಳಲ್ಲಿತ್ತು. ಆದರೆ, ಪರಿಸ್ಥಿತಿ ಅಷ್ಟೊಂದು ನಿರಾಶಾದಾಯಕವಾಗಿದೆಯೇ? ಕಳೆದ ಎರಡು ವರ್ಷಗಳಲ್ಲಿ ತಿಂಗಳಿಗೆ ಒಂದೊಂದಾರೂ ಗಮನ ಸೆಳೆಯುವ ಸಿನಿಮಾ ತೆರೆಕಾಣುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆಯೂ ಚೆನ್ನಾಗಿದೆ. ಇದು ಆಶಾದಾಯಕ ಬೆಳವಣಿಗೆ ಇದಲ್ಲವೇ?

‘‘ಖಂಡಿತಾ ಬದಲಾವಣೆ ಆಗಿದೆ. ಸಿನಿಮಾ ಒಂದು ಉತ್ಪನ್ನವಾಗಿ ದುಬಾರಿ ಮಾಧ್ಯಮ. ನಿರ್ಮಾಪಕ ಬಂಡವಾಳ ಹೂಡಿ, ಅದರಿಂದ ಲಾಭ ಬಂದರೆ ಹೆಚ್ಚು ಜನರಿಗೆ ಕೆಲಸ ಸಿಗುತ್ತದೆ. ಸಿನಿಮಾದಿಂದ ದುಡ್ಡು ಮಾಡಬಹುದು ಎನ್ನುವ ನಂಬಿಕೆ ಬೆಳೆಯುತ್ತದೆ. ಆದರೆ, ಅಂಥ ನಂಬಿಕೆಯನ್ನು ನಾವು ಬಹಳಷ್ಟು ಸಮಯ ಕಳೆದುಕೊಂಡಿದ್ದೆವು. ಬರೀ ಸ್ಟಾರ್‌ಗಳ ಹೆಸರ ಮೇಲೆ, ನಾಯಕರ ನಾಮಬಲದ ಮೇಲೆ ಸಿನಿಮಾ ಮಾಡುತ್ತಿದ್ದೆವು. ಕಥೆಯ ಮೇಲೆ, ಸ್ವಪ್ರಯತ್ನದ ಮೇಲೆ ಸಿನಿಮಾಗಳು ಆಗುತ್ತಿದ್ದುದು ಕಡಿಮೆ. ಸಿನಿಮಾ ಎನ್ನುವುದೊಂದು ಪ್ಯೂರ್‍ ಕಾಮರ್ಸ್‍. ವ್ಯಾಪಾರ ಆಗಿದ್ದೂ ಅದರಲ್ಲಿ ಕಲೆ ಇದೆ. ಕಥೆ ಹೇಳುವುದು ನಿರ್ದೇಶಕರಾದ ನಮ್ಮ ಕರ್ತವ್ಯ. ಕಡಿಮೆ ಬಜೆಟ್‌ನಲ್ಲಿ, ಕಥೆಗೆ ಹೆಚ್ಚು ಒತ್ತು ಕೊಟ್ಟು ಸಿನಿಮಾ ಮಾಡುವ ನಿರ್ಮಾತೃಗಳನ್ನು ಪ್ರೇಕ್ಷಕರು ಬೆಂಬಲಿಸಿದಾಗ, ಆ ನಂಬಿಕೆ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ‘ತಿಥಿ’ಯಂಥ ಸಿನಿಮಾ ಮೆಜೆಸ್ಟಿಕ್‌ನಲ್ಲಿ ಫುಲ್‌ಹೌಸ್‌ ಆಗುವುದು ಅದ್ಭುತ. ನಮ್ಮಲ್ಲಿ ಪ್ರೇಕ್ಷಕರು ಇದ್ದಾರೆ. ಅವರ ಭರವಸೆಯನ್ನು ನಾವು ಉಳಿಸಿಕೊಳ್ಳಬೇಕಿದೆ’’ ಎಂದರು ಅರವಿಂದ್.

ಹೇಮಂತ್‌ ಅಲೆಯನ್ನು ಮತ್ತೊಂದು ಕೋನದಿಂದ ನೋಡಲು ಪ್ರಯತ್ನಿಸಿದರು. ‘‘ಬೇರೆ ಬೇರೆ ದಿಕ್ಕುಗಳಿಂದ ಧ್ವನಿಗಳು ಬರುತ್ತಿವೆ. ಕೆಲವು ಧ್ವನಿಗಳು ತಲುಪುತ್ತವೆ. ಕೆಲವು ಗಟ್ಟಿಯಾಗುತ್ತವೆ. ಇಂಥ ಧ್ವನಿಗಳು ಹೆಚ್ಚಾಗಬೇಕು. ಒಂದು ಕಾಲದಲ್ಲಿ ಕನ್ನಡ ಸಿನಿಮಾದಲ್ಲಿ ಏನಾಗುತ್ತಿದೆ ಎನ್ನುವುದನ್ನು ಎಲ್ಲರೂ ಗಮನಿಸುತ್ತಿದ್ದರು. ಆ ಸ್ಥಿತಿಯನ್ನು ಮತ್ತೆ ಗಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಇದೇನೂ ಸಂಘಟಿತ ಹೋರಾಟ ಅಲ್ಲ. ನಾನು ನನ್ನ ರೀತಿಯಲ್ಲಿ, ಸತ್ಯ–ಅರವಿಂದ್‍ ಅವರ ರೀತಿಯಲ್ಲಿ, ಮತ್ತೊಬ್ಬರು ಬೇರೆಯದೇ ರೀತಿಯಲ್ಲಿ ಒಳ್ಳೆಯ ಸಿನಿಮಾಗಳಿಗೆ ಹೋರಾಡುತ್ತಿರಬಹುದು. ಈ ಪ್ರಯತ್ನಗಳೆಲ್ಲ ಒಂದು ರೇಖೆಯಲ್ಲಿ ಸಂಧಿಸಿ ಚಿತ್ರೋದ್ಯಮಕ್ಕೆ ಒಳಿತಾಗಬಹುದು ಎನ್ನಿಸುತ್ತದೆ’’ ಎಂದರು.

ಹೇಮಂತ್‌ರ ಮಾತುಗಳ ಹಿನ್ನೆಲೆಯಲ್ಲಿ ನಾಳೆಗಳ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದಾದ ಸಿನಿಮಾಗಳ ಜೊತೆಗೆ ಪ್ರೇಕ್ಷಕವರ್ಗ ವಿಸ್ತರಿಸುತ್ತಿರುವುದರ ಸೂಚನೆಯಿತ್ತು. ಕನ್ನಡ ಸಿನಿಮಾಗಳು ತೆರೆಕಾಣದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ಗೆದ್ದಿರುವ ‘ರಾಮಾ ರಾಮಾ ರೇ ಚಿತ್ರ’ದ ಪ್ರಸ್ತಾಪವೂ ಬಂತು.

ಯುವ ನಿರ್ದೇಶಕರಾದ ಸತ್ಯಪ್ರಕಾಶ್‌, ಹೇಮಂತ್‌ ರಾವ್ ಹಾಗೂ ಅರವಿಂದ್‌ ಶಾಸ್ತ್ರಿ
ಯುವ ನಿರ್ದೇಶಕರಾದ ಸತ್ಯಪ್ರಕಾಶ್‌, ಹೇಮಂತ್‌ ರಾವ್ ಹಾಗೂ ಅರವಿಂದ್‌ ಶಾಸ್ತ್ರಿ

‘ಗೋಧಿಬಣ್ಣ’ ಚಿತ್ರದ ಮೂಲಕ ಪ್ರೇಕ್ಷಕರ ನಾಡಿಮಿಡಿತ ಹೇಮಂತ್‌ಗೆ ಚೆನ್ನಾಗಿಯೇ ಅರ್ಥವಾದಂತಿದೆ. ‘‘ನನ್ನ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ನೋಡಿದ ಕೆಲವರು – ಹದಿನೈದು ವರ್ಷಗಳ ನಂತರ ಚಿತ್ರಮಂದಿರಕ್ಕೆ ಬರುತ್ತಿದ್ದೇನೆ, ಫ್ಯಾಮಿಲಿ ಜೊತೆ ಸಿನಿಮಾ ನೋಡಿದ್ದೇನೆ ಎಂದೆಲ್ಲ ಹೇಳಿದರು. ಇಂಥ ಪ್ರತಿಕ್ರಿಯೆಗಳನ್ನು ಕೇಳಿದಾಗಿ ಆಗುವ ಖುಷಿ ಅಷ್ಟಿಷ್ಟಲ್ಲ. ಬೇರೆಯವರ ಮಾತಿರಲಿ, ಬದಲಾವಣೆ ನಮ್ಮ ಮನೆಯಲ್ಲೇ ಆಗಿದೆ. 90ರ ದಶಕದಲ್ಲಿ ಮನೆಮಂದಿಯೆಲ್ಲ ಸಿನಿಮಾಕ್ಕೆ ಹೋಗುತ್ತಿದ್ದೆವು. ಕ್ರಮೇಣ ಆ ಅಭ್ಯಾಸ ಕಡಿಮೆಯಾಗಿ ಚಿತ್ರಮಂದಿರಕ್ಕೆ ಹೋಗುವ ಅಭ್ಯಾಸವೇ ತಪ್ಪಿಹೋಯಿತು. ಈಗ ನಮ್ಮ ಕುಟುಂಬದವರೆಲ್ಲ ಮತ್ತೆ ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ. ಇದು ಒಂದು ಕುಟುಂಬದ ಕಥೆಯಲ್ಲ... ಮನೆ ಮನೆ ಕಥೆ’’.

ಚಿತ್ರರಂಗದ ಮನೆ ಮನೆ ಕಥೆಯಿಂದ ಮಾತು ಹೊರಳಿದ್ದು ಖಾಸಗಿ ಒಲವು–ನಿಲುವುಗಳತ್ತ. ಅರವಿಂದ್‍ ಎಂಜಿನಿಯರಿಂಗ್‌ ಪದವೀಧರರು. ಯಾವುದೋ ಕಂಪೆನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿ ಆರಾಮಾಗಿ ಇರಬಹುದಿತ್ತು. ಸಿನಿಮಾದ ಸೆಳೆತ ಎನ್ನುವುದಾದರೆ ನೋಡಲಿಕ್ಕೆ ಚಾಕ್ಲೆಟ್‌ ಹೀರೊನಂತೆ ಕಾಣುವ ಅವರು ನಟನೆಯ ಗೀಳು ಹತ್ತಿಸಿಕೊಳ್ಳಬಹುದಿತ್ತು. ಆದರೆ, ಅವರು ಆರಿಸಿಕೊಂಡಿದ್ದು ನಿರ್ದೇಶನವನ್ನು. ಈ ನಿರ್ಧಾರದ ಹಿಂದೆ ಇರುವುದಾದರೂ ಏನು?

‘‘ಹಾಸ್ಟೆಲ್‍ ಜೀವನದಲ್ಲಿ ಜೀವನದ ಸಮೀಪದರ್ಶನ ಸಾಧ್ಯವಾಯಿತು. ಅಲ್ಲಿಯೇ ಸಿನಿಮಾ ಬಗ್ಗೆ ಆಸಕ್ತಿ ಹೆಚ್ಚಾಯಿತು. ಕಥೆಗಿಂತಲೂ ಸಿನಿಮಾ ಆಗುವ ಪ್ರಕ್ರಿಯೆ ಹೆಚ್ಚು ಕುತೂಹಲಕಾರಿ ಅನ್ನಿಸಿತು. ಧ್ವನಿ ವಿನ್ಯಾಸ, ಬಿಂಬಗಳ ರಾಜಕಾರಣ ಬೆರಗು ಮೂಡಿಸಿದವು. ಮನೆಯಲ್ಲಿ ಕೂಡ ಕಲೆಯ ವಾತಾವರಣವಿತ್ತು. ನನ್ನ ತಂದೆ ಕಲೆಯ ಬಗ್ಗೆ ಆಸಕ್ತಿ ಇರುವವರು. ನಾಟಕ–ಕವಿತೆ ಬರೆಯುವವರು. ನನಗೆ ಸಂಗೀತದ ಆಸಕ್ತಿ ಇತ್ತು. ಕರ್ನಾಟಿಕ್‍ ಸಂಗೀತವನ್ನು ಜೂನಿಯರ್‌ವರೆಗೆ ಕಲಿತಿರುವೆ. ಇದೆಲ್ಲದರ ಮುಂದುವರಿದ ಭಾಗ ಸಿನಿಮಾ ಇರಬಹುದು’’ – ಅರವಿಂದ್‌ ಚುಟುಕಾಗಿ ಹೇಳಿದರು.

ಸತ್ಯಪ್ರಕಾಶ್‌
ಸತ್ಯಪ್ರಕಾಶ್‌

‘‘ನಾಗರಹಾವು ನನ್ನ ಮೊದಲ ಪ್ರೇರಣೆ’’ ಎನ್ನುವುದರೊಂದಿಗೆ ಸತ್ಯಪ್ರಕಾಶ್‌ ತಮ್ಮ ಸಿನಿಮಾ ಒಲವಿನ ಬೇರು ತಡವಿಕೊಂಡರು.

‘‘ನಾಗರಹಾವು ಸಿನಿಮಾ ಬಂದಾಗ ನಮ್ಮ ಮನೆಯವರೆಲ್ಲ ಗುಡ್ಡೆ ಹಾಕಿಕೊಂಡಂತೆ ನೋಡುತ್ತಿದ್ದರು. ಆಗ ಎಲ್ಲರೂ ‘ಪುಟ್ಟಣ್ಣ ಪುಟ್ಟಣ್ಣ’ ಎನ್ನುತ್ತಿದ್ದರು. ನಿರ್ದೇಶಕ ಆಗ ನನ್ನ ಮನಸ್ಸಿನಲ್ಲಿ ಇಳಿದಿರಬೇಕು. ‘ಶರಪಂಜರ’, ‘ಮಾನಸ ಸರೋವರ’ ಸಿನಿಮಾಗಳನ್ನು ನೋಡುವ ಸಮಯದಲ್ಲಿ ನಮಗೆ ಅವು ಅರ್ಥವೇ ಆಗುತ್ತಿರಲಿಲ್ಲ. ಮನೆಯವರೆಲ್ಲ ನೋಡಿ ಎಂಜಾಯ್‍ ಮಾಡುತ್ತಿದ್ದರು. ‘ಹದಿನಾಲ್ಕು ವರ್ಷ ವನವಾಸದಿಂದ...’ ಹಾಡು ಕೇಳಿ ದೊಡ್ಡಮ್ಮ–ಚಿಕ್ಕಮ್ಮ ಅಳುತ್ತಿದ್ದರು. ಸಿನಿಮಾ ಜನರೊಂದಿಗೆ ಇಷ್ಟೊಂದು ರಿಲೇಟ್‍ ಆಗುತ್ತಾ ಅನ್ನಿಸಿತ್ತು.

‘ನಾಗರಹಾವು ಸಿನಿಮಾ ಬಂದಾಗ ನಾನು ಚಿಕ್ಕ ಹುಡುಗ. ನಮಗೆಲ್ಲ ತೆರೆಯ ಮೇಲೆ ವಿಷ್ಣು ಕಾಣಿಸುತ್ತಿದ್ದರು. ಅಪ್ಪ ‘ಇದು ಪುಟ್ಟಣ್ಣ ಸಿನಿಮಾ’ ಎಂದರು. ಯಾರಿದು ಪುಟ್ಟಣ್ಣ? ಎನ್ನುವ ಪ್ರಶ್ನೆಗೆ ‘ಸಿನಿಮಾಗೆ ಒಬ್ಬ ನಿರ್ದೇಶಕ ಇರುತ್ತಾನೆ. ಅವನೇ ಸಿನಿಮಾ ರೂಪಿಸುವವನು. ಅವನು ಎಲ್ಲ ವಿಷಯ ತಿಳಿದುಕೊಂಡಿರುತ್ತಾನೆ’ ಎಂದರು. ನನ್ನ ಮೇಲದು ಪರಿಣಾಮ ಬೀರಿತು. ಎಲ್ಲರಿಂದ ಜಾಣ ಎನ್ನಿಸಿಕೊಳ್ಳಬೇಕು ಎನ್ನುವ ಆಸೆ ಚಿಕ್ಕಂದಿನಲ್ಲಿ ಗಾಢವಾಗಿರುತ್ತದೆ. ಆ ಆಸೆ ಪೂರೈಸಿಕೊಳ್ಳುವ ವಿಧಾನ ನಿರ್ದೇಶಕನಾಗುವುದು ಅನ್ನಿಸಿತು.

ನಾನು ಸಿನಿಮಾ ನೋಡುತ್ತಿದ್ದು ಕಡಿಮೆ. ಗೆಳೆಯರೆಲ್ಲ ಹೆಚ್ಚು ಸಿನಿಮಾ ನೋಡುತ್ತಿದ್ದರು. ಅವರು ನೋಡುತ್ತಿದ್ದುದೆಲ್ಲ ಕನ್ನಡ ಸಿನಿಮಾಗಳು. ಆ ಸಿನಿಮಾಗಳ ಕಥೆಗಳನ್ನು ಹೇಳುತ್ತಿದ್ದರು. ನಾನು ಹಿಂದಿ ಸಿನಿಮಾಗಳ ಪೋಸ್ಟರ್‍ ನೋಡಿ ಕಥೆ ಕಟ್ಟುತ್ತಿದ್ದೆ. ‘ಬಾಜಿಗರ್‍’ ಸಿನಿಮಾದ ಪೋಸ್ಟರ್‍ ನೋಡಿದರೆ, ಅಲ್ಲಿನ ಪಾತ್ರಗಳನ್ನು ಊಹಿಸಿಕೊಂಡು, ‘ಬಾಜಿಗರ್‍ ಹೇಗಿದೆ ಗೊತ್ತಾ?’ ಎಂದು ನಾನೇ ಒಂದು ಕಥೆ ಹೇಳುತ್ತಿದ್ದೆ. ಕಥೆ ಹೇಳುವುದರೊಂದಿಗೆ ನಟಿಸುವ ಹವ್ಯಾಸವೂ ತಳಕು ಹಾಕಿಕೊಂಡಿತ್ತು. ನಮ್ಮ ತಾತ ಶಿಕ್ಷಕರಾಗಿದ್ದವರು. ಅವರು ನಾಟಕಗಳ ಪಾತ್ರಗಳನ್ನು ಪರಿಚಯಿಸುತ್ತಿದ್ದರು. ಆರನೇ ತರಗತಿ ವೇಳೆಗೆ ನಾನೇ ಪುಟ್ಟ ನಾಟಕಗಳನ್ನು ಬರೆದು, ಗೆಳೆಯರ ಗುಂಪಿನೊಂದಿಗೆ ಅವುಗಳನ್ನು ಆಡಿಸುತ್ತಿದ್ದೆ’’.

ಮೇಷ್ಟರಾಗಬೇಕು, ಡಾಕ್ಟರ್‌ ಆಗಬೇಕು, ಪೊಲೀಸ್‌ ಆಗಬೇಕು, ಡ್ರೈವರ್‌ ಆಗಬೇಕು ಎಂದು ಹಂಬಲಿಸುವ ಗೆಳೆಯರ ನಡುವೆ ಸತ್ಯಪ್ರಕಾಶ್‌ ಬಾಲ್ಯದಲ್ಲಿಯೇ ನಿರ್ದೇಶಕನ ಯೂನಿಫಾರ್ಮ್‌ಗೆ ತಮ್ಮನ್ನು ಒಪ್ಪಿಸಿಕೊಂಡಾಗಿತ್ತು. ಹೇಮಂತ್‌ ಕಥೆಯೂ ಭಿನ್ನವೇನಲ್ಲ.

‘‘ನನಗೆ ಮೊದಲಿನಿಂದಲೂ ಸಿನಿಮಾ ಹುಚ್ಚು. ಕಥೆ ಬರೆಯುವ ಹುಚ್ಚು. ಎಂಜಿನಿಯರಿಂಗ್‍ ಸಮಯದಲ್ಲಿ ಹೆಚ್ಚು ಪುಸ್ತಕ ಓದುತ್ತಿದ್ದೆ. ಆ ಕಥೆಗಳನ್ನು ದೃಶ್ಯಗಳಾಗಿ ಕಲ್ಪಿಸಿಕೊಳ್ಳುತ್ತಿದ್ದೆ. ಸಿನಿಮಾ ಎಲ್ಲ ಕಲೆಗಳ ಸಂಗಮದ ರೀತಿಯಲ್ಲಿ ಅದ್ಭುತವೆನಿಸಿತು. ಸಿನಿಮಾದ ಗಂಧಗಾಳಿ ಗೊತ್ತಿರಲಿಲ್ಲ. ‘ಗುಲಾಬಿ ಟಾಕೀಸ್‌’ನಲ್ಲಿ ಗಿರೀಶ ಕಾಸರವಳ್ಳಿ ಅವರ ಸಹಾಯಕನಾಗಿ ಕೆಲಸ ಮಾಡಿದೆ. ಅವರ ಜೊತೆ ಇದ್ದುದು ನನ್ನ ಪಾಲಿಗೆ ಫಿಲ್ಮ್‍ ಸ್ಕೂಲ್‌ನಲ್ಲಿ ಕಲಿತ ಅನುಭವ ನೀಡಿತು. ಶೂಟಿಂಗ್‍ ನಡೆಯುವಾಗ ಏನೂ ಅರ್ಥವಾಗುತ್ತಿರಲಿಲ್ಲ. ಅದಾದ ಮೂರು ತಿಂಗಳ ನಂತರ ಕಾಸರವಳ್ಳಿ ಅವರು ಏನು ಮಾಡುತ್ತಿದ್ದರು ಎನ್ನುವುದು ತಿಳಿಯುತ್ತಿತ್ತು. ಅವರ ಜೊತೆ ತುಂಬಾ ಚರ್ಚಿಸುತ್ತಿದ್ದೆ. ಅವರ ಸಿನಿಮಾ ಹೆಚ್ಚು ಜನ ನೋಡುವುದಿಲ್ಲ ಎನ್ನುವ ಬೇಜಾರು ನನ್ನನ್ನು ಕಾಡುತ್ತಿತ್ತು. ‘ನನ್ನ ಸಿನಿಮಾ ರಿಲೀಸ್‍ ಆಗುವುದಿಲ್ಲ, ಜನ ನೋಡುವುದಿಲ್ಲ ಎಂದು ನಿಮಗೆ ಬೇಜಾರಾಗುವುದಿಲ್ಲವಾ?’ ಎಂದು ನಾನವರನ್ನು ತೀರಾ ಅಮಾಯಕತೆಯಿಂದ ಕೇಳಿದ್ದೆ. ನನಗಾಗ 21 ವರ್ಷ. ‘ಥಿಯೇಟರ್‌ನಲ್ಲಿ ನೋಡುವವರು ಮಾತ್ರ ಪ್ರೇಕ್ಷಕರಲ್ಲ. ನನ್ನ ಸಿನಿಮಾ ನೋಡುವ ಬೇರೆ ವಲಯವೇ ಇದೆ’ ಎಂದೇನೋ ಕಾಸರವಳ್ಳಿ ನಗುತ್ತಾ ಉತ್ತರಿಸಿದ್ದರು.

ನನ್ನ ಕಥೆ – ನನ್ನ ಸಿನಿಮಾ ಹೆಚ್ಚು ಜನ ನೋಡಬೇಕು ಅನ್ನಿಸುತ್ತಿತ್ತು. ಕಮರ್ಷಿಯಲ್‍ ವಲಯದಲ್ಲೂ ಕಥೆ ಮಾಡಬಹುದು ಎನ್ನುವ ಮೂಢನಂಬಿಕೆ ಇತ್ತೇನೋ? ವಿಶ್ವದ ಸಿನಿಮಾಗಳನ್ನು ನೋಡಿ, ಬೇರೆ ಬೇರೆ ರೀತಿ ಕಥೆಗಳನ್ನು ಹೇಗೆ ಹೇಳಬಹುದು ಎನ್ನುವುದನ್ನು ಗಮನಿಸಿದೆ’’.

ತಾವು ನಿರ್ದೇಶಕನಾದ ಕಥೆಯನ್ನು ಹೇಮಂತ್‌ ಹೇಳಿಕೊಂಡರು. ಆದರೆ, ನಿರ್ದೇಶಕನಾಗಲು ನಿರ್ಧಾರ ಮಾಡಿದಷ್ಟು ಸುಲಭದಲ್ಲಿ ಸಿನಿಮಾ ಕನಸು ಕೈಗೂಡುವುದು ಸಾಧ್ಯವೇ? ನಿರ್ಮಾಪಕರು ಸಿಗದೆಹೋದುದರಿಂದ ಹೇಮಂತ್ ಸಾಲ ಮಾಡಿ ಸಿನಿಮಾ ಶುರು ಮಾಡಿದರು. ಒಂದು ದಿನದ ಶೂಟಿಂಗ್‍ ನಂತರ ಸಿನಿಮಾ ನಿಂತುಹೋಯಿತು. ಒಂದೂವರೆ ವರ್ಷ ನಿರ್ಮಾಪಕರನ್ನು ಹುಡುಕಿದರು. 45 ನಿರ್ಮಾಪಕರನ್ನು ಎಡತಾಕಿದರೂ ಒಬ್ಬರೂ ಕೈಹಿಡಿಯಲಿಲ್ಲ. ‘ಲವ್‌ ಚುರುಮುರಿ’ ಎನ್ನುವ ಮೊದಲ ಪ್ರೇಮ ಕೈಬಿಟ್ಟು ಹೇಮಂತ್‌ ಹೊಸ ಕಥೆ ಬರೆಯತೊಡಗಿದರು. ಆಗ ರೂಪುಗೊಂಡಿದ್ದು ಗೋಧಿಬಣ್ಣ. ಅದಕ್ಕೂ ನಿರ್ಮಾಪಕರು ಸಿಗಲಿಲ್ಲ. ಹೇಮಂತ್‌ ಅವರೇ ನಿರ್ಮಾಣಕ್ಕೆ ಮುಂದಾದರು. ಪ್ರೇಕ್ಷಕರು ಇದನ್ನು ನೋಡುತ್ತಾರಾ ಎನ್ನುವ ಭಯವಿತ್ತು. ದುಡ್ಡು ವಾಪಸ್ ಬಂದರೆ ದೊಡ್ಡ ಗೆಲುವು ಎನ್ನಿಸಿತ್ತು. ಆದುದೇ ಬೇರೆ – ಸಾಧಾರಣ ಮೈಕಟ್ಟಿನ ಹುಡುಗನ ಅದೃಷ್ಟ ಕೈಕೊಡಲಿಲ್ಲ, ಸಿನಿಮಾ ದೊಡ್ಡ ಗೆಲುವು ಸಾಧಿಸಿತು.

ಅರವಿಂದ್‌, ಹೇಮಂತ್‌, ಸತ್ಯಪ್ರಕಾಶ್‌ – ಮೂವರೂ ನಿರ್ದೇಶಕನಾಗಲು ಹಂಬಲಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡ ಪ್ರತಿಭಾವಂತರು. ಈ ಮೂವರಲ್ಲೂ ಎದ್ದುಕಾಣುವ ಸಮಾನಗುಣ – ಕಥೆಯ ಕುರಿತ ನೆಚ್ಚುಗೆ, ಬರವಣಿಗೆಯ ಕುರಿತ ಬದ್ಧತೆ. ‘ಸಿನಿಮಾ ಮಾಡುವ ಸಂದರ್ಭದಲ್ಲಿ ನಿಮಗೆ ಅತ್ಯಂತ ಮುಖ್ಯವೆನ್ನಿಸುವುದು ಯಾವುದು?’ ಎನ್ನುವ ಪ್ರಶ್ನೆಗೆ ಅರವಿಂದ್‌ ಥಟ್ಟೆಂದು ಉತ್ತರಿಸಿದ್ದು – ‘ಕಥೆ’.

‘ಒಳ್ಳೆಯ ಚಿತ್ರಕಥೆ ಇದ್ದು ಕೆಟ್ಟ ನಿರ್ದೇಶಕನಾದರೂ ಡೀಸೆಂಟ್‍ ಸಿನಿಮಾ ರೂಪುಗೊಳ್ಳಬಹುದು. ಆದರೆ, ಒಳ್ಳೆಯ ನಿರ್ದೇಶಕನಿದ್ದು ಚಿತ್ರಕಥೆ ಕೆಟ್ಟದಾಗಿದ್ದರೆ ಒಳ್ಳೆಯ ಸಿನಿಮಾ ರೂಪುಗೊಳ್ಳಲು ಸಾಧ್ಯವಿಲ್ಲ’ ಎನ್ನುವ ಕುರೊಸವೊ ಮಾತಿನಲ್ಲಿ ಅವರಿಗೆ ನಂಬಿಕೆ. ಚಿತ್ರಕಥೆ ನಿಖರವಾಗಿರಬೇಕು, ಹೋಂವರ್ಕ್ ಸರಿಯಾಗಿರಬೇಕು, ಬರವಣಿಗೆಯಲ್ಲಿ ಪ್ರೀತಿಯಿರಬೇಕು ಎನ್ನುವ ಸೂತ್ರಗಳನ್ನು ಹೇಳುವ ಅರವಿಂದ್‌, ‘ಕಹಿ’ ಚಿತ್ರಕಥೆ ಬರೆಯಲು ಎಂಟು ತಿಂಗಳು ತೆಗೆದುಕೊಂಡರಂತೆ.

‘ಕಹಿ’ ಸಿನಿಮಾದ ಕನಸು ಕೊನರಿದ್ದು ಅರವಿಂದ್‌ ಹೈದರಾಬಾದ್‌ನಲ್ಲಿ ಫಿಲ್ಮ್‌ ಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಗ. ಎರಡನೇ ಟರ್ಮ್‌ ವೇಳೆಗೆ ಯಾವುದೋ ಸಾಕ್ಷಾತ್ಕಾರವಾದವರಂತೆ, ‘‘ಎರಡನೇ ಟರ್ಮ್‍ ಶುಲ್ಕ ಕಾಲೇಜಿಗೆ ಕಟ್ಟುವುದು ಬೇಡ, ಅದನ್ನು ನನಗೇ ಕೊಡಿ’’ ಎಂದು ಅರವಿಂದ್‌ ಮನೆಯವರನ್ನು ಒಪ್ಪಿಸಿದರು. ಆ ದುಡ್ಡಿನಲ್ಲಿ ಕೊಂಡಿದ್ದು ಡಿಎಸ್‍ಎಲ್‍ಆರ್‍ ಕ್ಯಾಮೆರಾ. ‘ಗ್ರಾಫಿಕ್ಸ್‍ ಬೇಡ, ಸ್ಟಂಟ್ಸ್‍ ಬೇಡ’ ಎಂದುಕೊಂಡು ಕಥೆ ಬರೆಯಲು ಆರಂಭಿಸಿದ ಅವರು ಎಂಟು ತಿಂಗಳಲ್ಲಿ ಚಿತ್ರಕಥೆಯ ಹದಿನಾಲ್ಕು ಡ್ರಾಫ್ಟ್‌ಗಳನ್ನು ಬರೆದರು. ಹದಿನೈದನೆಯದು ಸಿನಿಮಾರೂಪಕ್ಕೆ ಬಂದಿತು. ‘‘ಬರೆಯುವುದು, ಮತ್ತೆ ತಿದ್ದಿ ಬರೆಯುವುದರಲ್ಲಿ ನನಗೆ ನಂಬಿಕೆ. ಕೆತ್ತುತ್ತಲೇ ಇರುವುದು ಮುಖ್ಯ. ಶೂಟಿಂಗ್‍ ನಂತರದ ಪರಿಷ್ಕಾರವೂ ಮುಖ್ಯ’’ – ಇದು ಅರವಿಂದ್‌ ಸಿನಿಮಾ ಗಣಿಗಾರಿಕೆಯ ಹಿಂದಿನ ತಾತ್ವಿಕತೆ.

ಸಿನಿಮಾ ಕಥೆಯ ಎಳೆ, ಸಿನಿಮಾದ ತಾತ್ವಿಕತೆ ಕುರಿತು ಮಾತು ಹೊರಳಿತು. ಮಾತಿನ ಎಳೆ ಹಿಡಿದದ್ದು ಸತ್ಯಪ್ರಕಾಶ್. ‘‘ಎಲ್ಲ ಸಿನಿಮಾಗಳು ಆರಂಭವಾಗುವುದು ಯಾವುದೋ ಒಂದು ಚಿಕ್ಕ ಎಳೆಯಿಂದ. ಆ ಎಳೆಯೇ ಕಥೆ. ಕಥೆಗೆ ಎಷ್ಟು ಮಹತ್ವ ಕೊಡುವಿರೋ ಅದಕ್ಕೂ ಹೆಚ್ಚು ಒತ್ತನ್ನು ಚಿತ್ರಕಥೆಗೆ ನೀಡಬೇಕು. ಒಂದು ಎಳೆಯಲ್ಲಿ ಎಮೋಷನ್ಸ್‍ ಇರುವುದಿಲ್ಲ, ಸಂಘರ್ಷ ಇರುವುದಿಲ್ಲ. ಚಿತ್ರಕಥೆ ಸಮಯಕ್ಕೆ ಒದ್ದಾಟ ಶುರುವಾಗುತ್ತದೆ. ನನ್ನ ಅನುಭವ ಹಾಗೂ ಒದ್ದಾಟ ಪ್ರೇಕ್ಷಕನದೂ ಆಗಬೇಕು. ‘ರಾಮಾ ರಾಮಾ ರೇ’ ಮಾಡುವಾಗ ನನ್ನ ಬಳಿ ಇದ್ದುದು ದ್ರುಪದ ಮತ್ತು ದ್ರೋಣಾಚಾರ್ಯರ ನಡುವಣ ಶೀತಲ ಸಂಘರ್ಷದ ಎಳೆ ಮಾತ್ರ. ಅದನ್ನು ಬರೆಯಲಿಕ್ಕೆ ಶುರು ಮಾಡಿದ ಮೇಲೆ ಹುಟ್ಟು–ಸಾವು, ಭಗವದ್ಗೀತೆ ಸೇರಿದಂತೆ ಏನೆಲ್ಲ ಕಾಣಿಸತೊಡಗಿತು. ನನ್ನದು ನಾಗಾಭರಣರ ಸ್ಕೂಲ್‍. ಅವರ ತಂಡದಲ್ಲಿದ್ದಾಗ ಎರಡು ವರ್ಷ ಚಿತ್ರಕಥೆ ಬರೆದಿರುವುದಿದೆ’’.

‘‘ಕಥೆ-ಚಿತ್ರಕಥೆ ಎರಡೂ ಭಿನ್ನ. ಆದರೆ ಎರಡೂ ಮುಖ್ಯ. ಬರವಣಿಗೆ ಮುಖ್ಯ. ಇವತ್ತು ಕನ್ನಡ ಚಿತ್ರರಂಗದಲ್ಲಿರುವುದು ನಿರ್ಮಾಪಕ, ನಿರ್ದೇಶಕ ಅಥವಾ ಕಲಾವಿದರ ಸಮಸ್ಯೆಯಲ್ಲ. ಅದು ಬರಹಗಾರರ ಕೊರತೆ. ಒಳ್ಳೆಯ ಸಿನಿಮಾ ಆಗಲಿಕ್ಕೆ ಒಳ್ಳೆಯ ಬರಹಗಾರ ಅಗತ್ಯ’’.

‘‘ಬರವಣಿಗೆ ಎನ್ನುವುದು ನನಗೂ ಮುಖ್ಯ ಎನ್ನಿಸುತ್ತದೆ’’ ಎಂದು ಗೆಳೆಯನ ಮಾತನ್ನು ಮಾತನ್ನು ಹೇಮಂತ್ ಕೂಡ ಅನುಮೋದಿಸಿದರು. ‘‘ನಮ್ಮಲ್ಲಿ ಉತ್ತಮ ಬರಹಗಾರರು ಇಲ್ಲವೇ ಇಲ್ಲ ಎಂದಲ್ಲ. ಅವರಿಗೆ ನಾವು ಬೆಲೆ ಕೊಡುವುದಿಲ್ಲ. ಇವತ್ತಿನ ಗಾಂಧಿನಗರದ ಲೆಕ್ಕಾಚಾರದಲ್ಲಿ ಕಥೆಗೆ ಒಂದು ಲಕ್ಷ, ಎರಡು ಲಕ್ಷ ರೂಪಾಯಿ ಖರ್ಚಾಗುತ್ತದೆ. ಆ ಖರ್ಚು ಇಡೀ ಸಿನಿಮಾದ ಬುನಾದಿ ಎನ್ನುವುದು ನಮಗರ್ಥವಾಗಬೇಕು. ಬರಹಗಾರರ ಒಕ್ಕೂಟ ನಮ್ಮಲ್ಲಿಲ್ಲ. ಕಥೆಗಳನ್ನು ನೋಂದಣಿ ಮಾಡಿಕೊಳ್ಳುವ ಅವಕಾಶ ಇಲ್ಲ. ತಮಿಳುನಾಡಿನಲ್ಲಿ, ಮುಂಬಯಿಯಲ್ಲಿ ಬರಹಗಾರರ ಒಕ್ಕೂಟಗಳು ಬಲಿಷ್ಟವಾಗಿವೆ. ನಾನು ಬಾಂಬೆಗೆ ಹೋಗಿದ್ದೆ. ಅಲ್ಲಿ ಬರಹಗಾರರ ಜೊತೆ ಮಾತನಾಡಿದ್ದೆ. ಅಲ್ಲವರಿಗೆ ಸಿಗುವ ಗೌರವ, ಕಥೆ–ಬರವಣಿಗೆಗೆ ದೊರೆಯುವ ನಿರ್ದಿಷ್ಟ ಮೊತ್ತವನ್ನು ನೋಡಿದರೆ ಖುಷಿಯಾಗುತ್ತದೆ’’ ಎಂದರು.

‘‘ಉಳಿಯಬಹುದಾದ ದೊಡ್ಡ ಅಲೆ ಚಿತ್ರರಂಗದಲ್ಲಿ ರೂಪುಗೊಳ್ಳಬೇಕಾದರೆ ನಾವು ಬರಹಗಾರರಿಗೆ ಗೌರವ ಕೊಡಲೇಬೇಕು. ಬರವಣಿಗೆ ಸಿನಿಮಾಕ್ಕೆ ಬಹಳ ಮುಖ್ಯ’’ ಎಂದು ಅರವಿಂದ್‌ ದನಿಗೂಡಿಸಿದರು.

ಬರವಣಿಗೆಯ ಮಾತು ಬಿಂಬ ರಾಜಕಾರಣದ ದಿಕ್ಕುಹಿಡಿಯಿತು. ಕಥೆಯೋ ಚಿತ್ರಕಥೆಯೋ ಬರವಣಿಗೆಯೋ ಮತ್ತೊಂದೋ – ಇವೆಲ್ಲ ಸಿನಿಮಾ ಸಂದರ್ಭದಲ್ಲಿ ಬಳಸುವ ವ್ಯಾಕರಣ. ಪ್ರೇಕ್ಷಕರ ಪಾಲಿಗೆ ಸಿನಿಮಾ ಎನ್ನುವುದು ಪ್ರಧಾನವಾಗಿ ಕಥೆ. ಇತ್ತೀಚಿನ ದಿನಗಳಲ್ಲಿ ಕೆಲವು ನಿರ್ದೇಶಕರು ಕಥೆ ಎನ್ನುವುದು ನೆಪ ಮಾತ್ರ, ತಮ್ಮದು ಇಮೇಜ್‌ಗಳ ಸೃಷ್ಟಿ ಎಂದು ಗಟ್ಟಿಯಾಗಿ ಹೇಳುತ್ತಿದ್ದಾರೆ. ಹೀಗೆ ಒಂದಷ್ಟು ಇಮೇಜ್‌ಗಳ ಕೊಲಾಜ್‌ ಸಿನಿಮಾ ಆಗಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಯಿತು.

‘‘ಒಬ್ಬೊಬ್ಬರದು ಒಂದೊಂದು ಸ್ಟೈಲ್‌. ಇಮೇಜ್‌ಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲೂ ಸಾಧ್ಯವಿದೆ. ನಿರೂಪಣೆಗೆ ನೀವು ಯಾವ ವಿಧಾನವನ್ನಾದರೂ ಬಳಸಬಹುದು. ಆದರೆ, ಹೆಚ್ಚು ಜನಕ್ಕೆ ತಲುಪಬೇಕು ಎಂದಲ್ಲಿ ಕಥೆಯಾಗಿಯೇ ಹೇಳಬೇಕು’’ ಎಂದರು ಹೇಮಂತ್. ಅವರ ಮಾತಿಗೆ ಪೂರಕವಾಗಿದ್ದರೂ ಅರವಿಂದ್‌ ನಿಲುವು ಕೊಂಚ ಬೇರೆಯಾಗಿಯೇ ಇತ್ತು. ‘‘ನಾವು ಕಥೆ ಹೇಳುವವರು, ಕಥೆ ಹೇಳಬೇಕು. ಹಿಟ್‌ – ಫ್ಲಾಪ್‌ ಬೇರೆಯೇ. ನಮ್ಮ ಐಡಿಯಾ ಏನೇ ಇದ್ದರೂ ಅದನ್ನು ಕಥೆಯ ರೀತಿಯೇ ಹೇಳಬೇಕು. ಮೊದಲ ಹಂತದಲ್ಲಿ ನನ್ನಷ್ಟಕ್ಕೆ ಹೇಳಿಕೊಳ್ಳಬೇಕು. ಅದು ನನ್ನ ಆಯ್ಕೆ. ಆದರೆ, ಕೊನೆಗೆ ಯಾರಿಗೆ ಇದನ್ನು ಹೇಳುತ್ತಿದ್ದೇನೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಮಗೆ ನಾವೇ ಹೇಳಿಕೊಳ್ಳಲು ಸಿನಿಮಾ ಮಾಡಬೇಕಿಲ್ಲ. ಯಾರಿಗೋ ತಲುಪಿಸಬೇಕು ಎಂದರೆ ಕಥೆ ಹೇಳಲೇಬೇಕು’’ ಎಂದರು ಅರವಿಂದ್‌.

ನಂತರದ್ದು, ಒಳ್ಳೆಯ ಸಿನಿಮಾ ಮಾಡುವಾಗ ಯಶಸ್ಸಿನ ಕುರಿತ ಅಳುಕು ನಿರ್ದೇಶಕನನ್ನು ಎಷ್ಟರಮಟ್ಟಿಗೆ ನಿಯಂತ್ರಿಸುತ್ತದೆ ಎನ್ನುವ ಪ್ರಶ್ನೆ.

‘‘ನಿರ್ಮಾಪಕರ ಬಗ್ಗೆ ನಮಗೆ ಕಾಳಜಿ ಬೇಕು. ಹಾಗೆಂದು ನಮ್ಮ ಯೋಚನೆಗಳನ್ನು ಬಿಟ್ಟುಕೊಡಬೇಕು ಎಂದಲ್ಲ. ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳಲೇಬೇಕು. ಮೊದಲ ಸಿನಿಮಾ ಸಂದರ್ಭದಲ್ಲಿ ನಮಗೆ ಪ್ರೇಕ್ಷಕರೇ ಇರುವುದಿಲ್ಲ. ಮೊದಲ ಸಿನಿಮಾ ನಿರ್ಮಿಸುವ ಹೊತ್ತಿಗೆ ಪ್ರೇಕ್ಷಕ ಎನ್ನುವವ ಅಲ್ಲಿ ಇರಬಾರದು. ಹಾಗಾಗಿ ಏನನ್ನೂ ಕಳೆದುಕೊಳ್ಳುವ ಭಯ ಇರುವುದಿಲ್ಲ. ಪ್ರೇಕ್ಷಕರನ್ನು ಕಂಡುಕೊಳ್ಳುವ ಜೊತೆಗೆ ನಮ್ಮ ಐಡೆಂಟಿಟಿ ರೂಪಿಸಿಕೊಳ್ಳಬೇಕು’’ ಎಂದರು ಅರವಿಂದ್‌.

ಫಾರ್ಮುಲಾ ಬದಲಿಗೆ ಕಥೆಯನ್ನು ನೆಚ್ಚಿ ಸಿನಿಮಾ ಮಾಡುವ ಕುರಿತು ಅರವಿಂದ್‌ಗೆ ಹೆಚ್ಚಿನ ವಿಶ್ವಾಸ. ‘‘ಹಾಡು ತಪ್ಪಲ್ಲ. ಫೈಟ್‌ ತಪ್ಪಲ್ಲ. ಕಥೆಗೆ ಅನಿವಾರ್ಯವಾದರೆ ಯಾವುದೂ ತಪ್ಪಲ್ಲ. ಆದರೆ, ಪ್ರೇಕ್ಷಕ ಚಪ್ಪಾಳೆ ತಟ್ಟುತ್ತಾನೆಂದು ಅವುಗಳನ್ನು ತುರುಕುವುದು ಸರಿಯಲ್ಲ’’ ಎನ್ನುವ ಕಾಸರವಳ್ಳಿಯವರ ಮಾತನ್ನು ನೆನಪಿಸಿಕೊಂಡರು.

ಸಿದ್ಧಸೂತ್ರದ ಮಾತಿನ ನಡುವೆ, ಹೇಮಂತ್‌ರ ಗೋಧಿಬಣ್ಣ ಚಿತ್ರದಲ್ಲಿ ಭೂಗತಲೋಕದ ಕಥೆಯನ್ನು ಎಳೆತಂದಿರುವುದು ಕೂಡ ಅನುಕೂಲಸಿಂಧು ಅಲ್ಲವಾ ಎನ್ನುವ ಅನುಮಾನ ವ್ಯಕ್ತವಾಯಿತು. ‘‘ಖಂಡಿತಾ ಇಲ್ಲ’’ ಎಂದರು ಅಸಾಧಾರಣ ಗೆಲುವು ಕಂಡ ಹುಡುಗ.

ಹೇಮಂತ್‌
ಹೇಮಂತ್‌

‘‘ಲವ್ ಚುರುಮುರಿ ನಿಂತುಹೋದ ಮೇಲೆ ನನಗೆ ಸರಿ ಅನ್ನಿಸಿದ್ದನ್ನು ಮಾಡಲು ಗಂಭೀರವಾಗಿ ನಿರ್ಧರಿಸಿದೆ. ಪ್ರೇಕ್ಷಕರ ಚಪ್ಪಾಳೆಗೋಸ್ಕರ ಭೂಗತಲೋಕದ ಎಳೆಯನ್ನು ಚಿತ್ರದಲ್ಲಿ ಸೇರಿಸಲಿಲ್ಲ. ಆ ಎಳೆಯ ಬಳಕೆಗೆ ಸ್ಪಷ್ಟ ಉದ್ದೇಶವಿತ್ತು. ರೈಲಿನ ಟ್ಯ್ರಾಕ್‌ ಸಿನಿಮಾದ ಉದ್ದಕ್ಕೂ ರೂಪಕದ ರೀತಿ ಬಳಕೆಯಾಗಿದೆ. ಕುಟುಂಬದ ಜೊತೆಗೆ ಬೆಳೆಯುವ ವ್ಯಕ್ತಿ ಹಾಗೂ ಕುಟುಂಬದಿಂದ ದೂರವಾದ ವ್ಯಕ್ತಿ – ನೈತಿಕತೆಯ ಹಿನ್ನೆಲೆಯಲ್ಲಿ ವ್ಯಕ್ತಿತ್ವಗಳನ್ನು ಶೋಧಿಸುವುದು ನನ್ನ ಪ್ರಯತ್ನವಾಗಿತ್ತು. ಈ ಎರಡು ವ್ಯಕ್ತಿತ್ವಗಳ ನಡುವೆ ತನ್ನನ್ನೇ ತಾನು ಕಳೆದುಕೊಂಡ ಹಿರೀಕನಿದ್ದಾನೆ. ಹೀಗೆ ಬೇರೆ ಬೇರೆ ಹಿನ್ನೆಲೆಯವರು ಒಂದು ಕುಟುಂಬವಾದಾಗ ಸಂಭವಿಸುವ ಹೊಸ ಕುಟುಂಬದ ಬಗ್ಗೆ ನನಗೆ ಕುತೂಹಲವಿತ್ತು. ಇದೆಲ್ಲವೂ ಸಿನಿಮಾದಲ್ಲಿ ಎಷ್ಟು ಕಾಣಿಸಿದೆಯೋ, ನಾನು ಅಂದುಕೊಂಡಿದ್ದು ಆಗಿದೆಯೋ ಇಲ್ಲವೋ ತಿಳಿಯದು’’ ಎಂದರು ಹೇಮಂತ್‌.

ನಾಯಕನಟರು ಹಾಗೂ ಪ್ರೇಕ್ಷಕರನ್ನು ಹೊರತುಪಡಿಸಿ ಸಿನಿಮಾ ಬಗೆಗಿನ ಮಾತು ನಡೆಯಲು ಸಾಧ್ಯವೇ? ಮಲಯಾಳಂನಲ್ಲಿ ಕಮರ್ಷಿಯಲ್‌ ಹೀರೊಗಳು ಕೂಡ ಪ್ರಯೋಗಶೀಲ ಸಿನಿಮಾಗಳ ಭಾಗವಾಗುತ್ತಾರೆ. ಅಲ್ಲಿ ಪ್ರಯೋಗಶೀಲ ಸಿನಿಮಾಗಳಿಗೆ ಪ್ರೇಕ್ಷಕವರ್ಗ ಸೃಷ್ಟಿಯಾಗಿದೆ. ಇದು ನಮ್ಮಲ್ಲಿ ಯಾಕೆ ಸಾಧ್ಯವಾಗಿಲ್ಲ ಎನ್ನುವ ಜಿಜ್ಞಾಸೆಗೆ ಹೇಮಂತ್‌ ತಮ್ಮ ಅನುಭವವೊಂದನ್ನು ಹಂಚಿಕೊಂಡರು.

‘‘ನಾನೊಮ್ಮೆ ಕೇರಳದಲ್ಲಿ ಫಿಲ್ಮ್‌ ಫೆಸ್ಟಿವಲ್‌ಗೆ ಹೋಗಿದ್ದೆ. ಆಟೋ ಓಡಿಸುವ ವ್ಯಕ್ತಿ ನಾನು ನೋಡಬೇಕೆಂದುಕೊಂಡಿದ್ದ ಒಂದು ಫ್ರೆಂಚ್‌ ಸಿನಿಮಾದ ಬಗ್ಗೆ, ‘ಆ ಸಿನಿಮಾ ನೋಡಬೇಡಿ, ನಾನದನ್ನು ನೋಡಿರುವೆ, ಚೆನ್ನಾಗಿಲ್ಲ’ ಎಂದರು. ಅಲ್ಲಿ ಜನಸಾಮಾನ್ಯರೂ ವಿಶ್ವಸಿನಿಮಾಗಳ ಬಗ್ಗೆ ಚರ್ಚಿಸುತ್ತಾರೆ. ಅಲ್ಲಿನ ಪ್ರೇಕ್ಷಕರು ಪ್ರಯೋಗಶೀಲ ಸಿನಿಮಾಗಳಿಗೆ ಹೆಚ್ಚು ಹತ್ತಿರವಿದ್ದಾರೆ. ಅಡೂರು ಸಿನಿಮಾ ನೂರು ದಿನ ಓಡುತ್ತೆ. ಕಾಸರವಳ್ಳಿ ಅವರ ಸಿನಿಮಾಗಳು ತೆರೆಕಾಣುವುದು ಕಷ್ಟ. ನಮ್ಮಲ್ಲಿ ಪ್ರೇಕ್ಷಕರನ್ನು ಬೆಳೆಸುವ ಪ್ರಕ್ರಿಯೆ ನಿರಂತರವಾಗಿ ಆಗಬೇಕಿದೆ. ಪ್ರತಿ ಫಿಲ್ಮ್‌ ಮೇಕರ್‌ಗೂ ಈ ಜವಾಬ್ದಾರಿ ಇದೆ. ನಿರ್ಮಾಪಕರಿಗೆ ಬಂಡವಾಳ ವಾಪಸ್‍ ತಂದುಕೊಡುವ ಜವಾಬ್ದಾರಿಯೂ ನಮ್ಮ ಮೇಲಿರುತ್ತದೆ. ಕೆಲವೊಮ್ಮೆ ನಾನು ಅಂದುಕೊಂಡ ಸಿನಿಮಾ ಮಾಡಲು ಸಾಧ್ಯವಿಲ್ಲ. ಇದೆಲ್ಲದರ ಅರ್ಥ ನಮ್ಮತನ ಬಿಟ್ಟುಕೊಡುವುದು ಎಂದಲ್ಲ’’ ಎಂದರು.

‘‘ಪ್ರೇಕ್ಷಕರನ್ನು ಬೆಳೆಸುವುದು ನಮ್ಮ ಜವಾಬ್ದಾರಿ. ಗೋವಾ ಚಿತ್ರೋತ್ಸವದಲ್ಲಿ ‘ಸೆಲ್ಯುಲಾಯ್ಡ್‌ ಮ್ಯಾನ್‌’ ಡಾಕ್ಯುಮೆಂಟರಿ ನೋಡಿದೆ. ಉತ್ತರ ಕರ್ನಾಟಕದ ಒಂದು ಹಳ್ಳಿಯಲ್ಲಿ, ಗುಡಿಸಲ ಮುಂದೆ ಕುಳಿತಿದ್ದ ಹಿರಿಯರೊಬ್ಬರು ಹೇಳುತ್ತಾರೆ – ‘ಎಂಥ ಸಿನಿಮಾ ನೋಡುತ್ತಿದ್ದೆವು ಗೊತ್ತಾ...’ ಎಂದು ಉದ್ಗರಿಸುತ್ತ ರೋಶೊಮನ್‍ ಹೆಸರು ಪ್ರಸ್ತಾಪಿಸುತ್ತಾರೆ. ಅಂದರೆ, ನಮ್ಮ ಪ್ರೇಕ್ಷಕರ ಬೌದ್ಧಿಕ ಮಟ್ಟದ ಬಗ್ಗೆ ನಾವು ಅನುಮಾನ ಪಡುವುದು ತಪ್ಪು. ಬೌದ್ಧಿಕ ಸಿನಿಮಾ ಜನಕ್ಕೆ ಅರ್ಥವಾಗುತ್ತದೆ. ನಮ್ಮಲ್ಲಿ ಅಂಥ ಪ್ರೇಕ್ಷಕರು ಇಲ್ಲ ಎನ್ನೋದು ಸುಳ್ಳು. ನಾವು ಒಳ್ಳೆಯ ಸಿನಿಮಾ ಮಾಡಬೇಕಿದೆ ಅಷ್ಟೇ’’ – ಅರವಿಂದ್‌ರ ಮಾತುಗಳಲ್ಲಿ ಚಿತ್ರರಸಿಕರ ಬಗ್ಗೆ ಗೌರವಭಾವ ಸ್ಪಷ್ಟವಾಗಿತ್ತು.

ಅರವಿಂದ್‌ ಮಾತಿಗೆ ಪೂರಕವಾಗಿ ಎಪ್ಪತ್ತು ಎಂಬತ್ತರ ದಶಕದ ಕೆಲವು ಚಿತ್ರಗಳನ್ನು ನೆನಪಿಸಿಕೊಳ್ಳಬಹುದು. ಸ್ವರ್ಣಕಮಲ ಪುರಸ್ಕಾರ ಪಡೆದ ‘ಸಂಸ್ಕಾರ’ ಸಿನಿಮಾ ನೂರು ದಿನಗಳ ಪ್ರದರ್ಶನ ಕಂಡಿತ್ತು. ‘ನಾಂದಿ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ತಪ್ಪಿದಾಗ, ಬೆಂಗಳೂರಿನಲ್ಲಿ ಚಿತ್ರರಸಿಕರಿಂದ ದೊಡ್ಡ ಪ್ರತಿಭಟನೆ ನಡೆದಿತ್ತು. ಈ ಸಿನಿಮಾಪ್ರೀತಿಯನ್ನು, ಅಭಿರುಚಿಯನ್ನು ನಾವು ಕಳೆದುಕೊಂಡಿದ್ದು ಯಾವಾಗ? ಈ ಪ್ರಶ್ನೆಯೊಂದಿಗೆ ಪ್ರಯೋಗಶೀಲ ಸಿನಿಮಾಗಳ ಕುರಿತು ಜನಪ್ರಿಯ ನಾಯಕರ ಅನಾಸಕ್ತಿಯನ್ನು ತಳಕು ಹಾಕಿ ನೋಡಲು ಸಾಧ್ಯವಿದೆಯೇ?

‘‘ದೊಡ್ಡ ದೊಡ್ಡ ಹೀರೊಗಳು ಪ್ರಾಯೋಗಿಕ ಸಿನಿಮಾ ಮಾಡುವುದಿಲ್ಲ ಎನ್ನುವ ಮಾತೊಂದಿದೆ. ಇದನ್ನು, ದೊಡ್ಡ ನಿರ್ದೇಶಕರು ದೊಡ್ಡ ಹೀರೊಗಳ ಜೊತೆ ಕೆಲಸ ಮಾಡುವುದಿಲ್ಲ ಎಂದೂ ಹೇಳಬಹುದು. ಗಿರೀಶ ಕಾಸರವಳ್ಳಿ ಅಂಥವರು ಅವರ ಶೈಲಿ ಬಿಟ್ಟುಕೊಡದೆ ದೊಡ್ಡ ಹೀರೊ ಜೊತೆ ಸಿನಿಮಾ ಮಾಡಿ ಅದು ಗೆದ್ದಿದ್ದಲ್ಲಿ, ಅಂಥ ಅವಕಾಶ ನಮ್ಮ ಹೇಮಂತ್‌ ಅವರಿಗೂ ಸಿಗುತ್ತಿತ್ತು. ಆದರೆ ಅದು ನಮ್ಮಲ್ಲಿ ಆಗಲಿಲ್ಲ. ನಿರ್ದೇಶಕನ ಹೆಸರ ಮೇಲೆ ಸಿನಿಮಾ ಗೆಲ್ಲಬೇಕು ಎನ್ನುವುದು ಕಡಿಮೆ ಅವಧಿಯಲ್ಲಿ ಆಗುವುದಲ್ಲ. ಅದಕ್ಕೆ ಹತ್ತು ಹದಿನೈದು ಸಿನಿಮಾಗಳು ಗೆಲ್ಲಬೇಕು. ಹಾಗೆ ಯಶಸ್ಸು ಕಂಡಿದ್ದರಿಂದಲೇ ಪುಟ್ಟಣ್ಣನವರ ಬಗ್ಗೆ ಮಾತನಾಡುತ್ತೇವೆ. ಯೋಗರಾಜ ಭಟ್‍ ಬೇರೆ ಬೇರೆ ನಾಯಕರ ಜೊತೆ ಸಿನಿಮಾ ಮಾಡಿ ಗೆದ್ದಿರುವುದರಿಂದ ಅವರ ಬಗ್ಗೆ ಮಾತನಾಡುತ್ತೇವೆ’’ ಎಂದರು ಸತ್ಯಪ್ರಕಾಶ್‌.

ಸತ್ಯಪ್ರಕಾಶ್‌
ಸತ್ಯಪ್ರಕಾಶ್‌

ಕಾಸರವಳ್ಳಿ ಅವರು ಜನಪ್ರಿಯ ನಾಯಕನೊಂದಿಗೆ ಸಿನಿಮಾ ಮಾಡಬೇಕು ಎನ್ನುವ ಹಂಬಲ ಸೊಗಸಾದುದು. ಆದರೆ ಅಂಥ ಸಾಧ್ಯತೆ ನನಸಾಗುವುದು ಹೇಗೆ? ಮೋಹನ್‌ಲಾಲ್‌, ಮುಮ್ಮುಟ್ಟಿ ತೆಗೆದುಕೊಳ್ಳುವ ರಿಸ್ಕ್‍ ಅನ್ನು ನಮ್ಮಲ್ಲಿ ಎಷ್ಟು ನಾಯಕರು ತೆಗೆದುಕೊಳ್ಳುತ್ತಾರೆ?

‘‘ಈಗ ಪರಿಸ್ಥಿತಿ ಬದಲಾಗುತ್ತಿದೆ. ಪುನೀತ್‍ ರಾಜಕುಮಾರ್‍ ನಿರ್ಮಾಪಕರಾಗಿ, ಹೇಮಂತ್‍ ಜೊತೆ ಸಿನಿಮಾ ಮಾಡುತ್ತಿರುವುದೇ ಇದಕ್ಕೆ ಉದಾಹರಣೆ’’. ಸತ್ಯಪ್ರಕಾಶ್‌ ಮಾತುಗಳಲ್ಲಿ ನಾಳೆಗಳ ಬಗ್ಗೆ ಆಶಾಭಾವವಿತ್ತು.

‘‘ಒಬ್ಬ ನಿರ್ದೇಶಕನಿಂದ ಸಿನಿಮಾ ಗೆಲ್ಲುವುದು, ಒಬ್ಬ ನಾಯಕನಿಂದ ಸಿನಿಮಾ ಗೆಲ್ಲುವುದು – ಇವೆರಡೂ ಈಗ ಬೇರೆ ಬೇರೆ ಆಗಿವೆ. ಒಬ್ಬ ನಿರ್ದೇಶಕ ತನ್ನಿಷ್ಟದ ಸಿನಿಮಾ ಮಾಡಬೇಕು, ನಾಯಕ ಜನಪ್ರಿಯ ಸಿನಿಮಾಗಳಲ್ಲಿ ನಟಿಸುತ್ತಿರಬೇಕು ಎನ್ನುವುದು ಸರಿ. ಆದರೆ, ಕೆಲವೊಮ್ಮೆಯಾದರೂ ಇವೆರಡೂ ಒಟ್ಟಾಗಿ ಸೇರುವಂತಾದರೆ, ಕಂಟೆಂಟ್‍ ಮತ್ತು ನಾಯಕನ ವರ್ಚಸ್ಸು ಒಟ್ಟಿಗೆ ಸೇರಿದರೆ ಚೆನ್ನಾಗಿರುತ್ತದೆ. ಅಂಥ ಪ್ರಯತ್ನಗಳು ಈಗ ಹೆಚ್ಚಬೇಕು. ಗೆಲುವು–ಸೋಲು, ನಟ–ನಿರ್ದೇಶಕ... ಇದೆಲ್ಲವನ್ನೂ ಮೀರಿದ್ದು ಸಿನಿಮಾ. ನನ್ನ ಐಡಿಯಾಲಜಿ ಮತ್ತು ನಾಯಕನ ಜನಪ್ರಿಯತೆ ಒಟ್ಟಾಗಬೇಕು. ಅದು ಈಗ ಎಲ್ಲೋ ಮಿಸ್‍ ಆಗಿದೆ. ರಾಜಕುಮಾರ್‍ ಇರಾನಿ–ಅಮೀರ್‍ ಖಾನ್‍ ಜೋಡಿಯಾದಾಗ ‘ಪಿಕೆ’ ರೂಪುಗೊಳ್ಳುತ್ತದೆ. ನಮ್ಮಲ್ಲೂ ಹಾಗಾಗಬೇಕು’’ ಎಂದು ತಮ್ಮ ಮಾತನ್ನು ಸತ್ಯಪ್ರಕಾಶ್‌ ವಿಸ್ತರಿಸಿದರು.

ಕಲಾವಿದರ ಸಾಮಾಜಿಕ ಜವಾಬ್ದಾರಿಯ ಮಾತಿಗೆ ಚಾಲನೆ ದೊರೆತದ್ದು ಅರವಿಂದ್‌ರಿಂದ. ‘‘ಜನಪ್ರಿಯತೆ ಗಳಿಸಿದವರಿಗೆ ಒಂದು ಸಾಮಾಜಿಕ ಜವಾಬ್ದಾರಿಯೂ ಇರಬೇಕು ಎನ್ನಿಸುತ್ತದೆ. ಅವರು ತಮ್ಮ ಮನಸ್ಸಿಗೆ ಒಪ್ಪದೆ ಹೋದುದನ್ನು ಮಾಡಬೇಕಿಲ್ಲ. ಆದರೆ, ಹೊಸ ಪ್ರಯೋಗಗಳಿಗೆ ಮುಕ್ತವಾಗಿರಬೇಕು’’ ಎಂದರು.

ಅರವಿಂದ್‌
ಅರವಿಂದ್‌

ಅರವಿಂದ್‌ ಹೇಳುವ ಬದ್ಧತೆಯನ್ನು ನಮ್ಮ ಕೆಲವು ನಾಯಕಿಯರು ತೋರಿಸಿದ್ದಾರೆ. ನಟಿ ಸೌಂದರ್ಯ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿ ಗಿರೀಶ ಕಾಸರವಳ್ಳಿ ಅವರು ಹುಡುಕಿಕೊಂಡು ಬಂದು ‘ದ್ವೀಪ’ ಸಿನಿಮಾ ನಿರ್ಮಿಸಿದರು. ಅಂಥ ಉದಾಹರಣೆಗಳು ನಾಯಕರ ನಿಟ್ಟಿನಲ್ಲಿ ಕಾಣಿಸುವುದಿಲ್ಲ. ಈ ಮಾತಿಗೆ ಸತ್ಯಪ್ರಕಾಶ್‌ ತಮ್ಮ ಪೂರ್ಣ ಸಮ್ಮತಿಯಿಲ್ಲ ಎನ್ನುವಂತೆ ಗೋಣಾಡಿಸಿದರು. ‘‘ದೊಡ್ಡ ನಾಯಕನಿಗೆ ಸಿನಿಮಾ ಮಾಡಬೇಕು ಎಂದರೆ ದೊಡ್ಡ ನಿರ್ಮಾಪಕ ಬೇಕು. ಅಂಥ ನಿರ್ಮಾಪಕರ ಬಳಿ ಹೋಗಿ ಕಥೆ ಹೇಳಿದರೆ, ‘ಇದೆಲ್ಲ ವರ್ಕ್‍ ಆಗೊಲ್ಲ ಸಾರ್‍’ ಎಂದು ಮಾತು ಮುಗಿಸಿಬಿಡುತ್ತಾರೆ. ಜೊತೆಯಾಗಿ ಕೆಲಸ ಮಾಡಲು ಪ್ರಯೋಗಶೀಲ ನಿರ್ದೇಶಕರಿಗೂ ಜನಪ್ರಿಯ ನಾಯಕರಿಗೂ ಮನಸ್ಸಿದೆ. ಆದರೆ ಅಂಥ ಅವಕಾಶಗಳು ಸೃಷ್ಟಿಯಾಗುತ್ತಿಲ್ಲ’’ ಎನ್ನುವ ಅನಿಸಿಕೆ ಅವರದು. ಹಾಗಾದರೆ, ‘ನಾಯಕನಟರೇ ಇಂಥ ಪ್ರಯತ್ನಗಳನ್ನು ಯಾಕೆ ಮಾಡಬಾರದು?’ ಎನ್ನುವ ಪ್ರಶ್ನೆಗೂ ಅವರಲ್ಲಿ ಉತ್ತರವಿದೆ: ‘‘ನಾನು ಸತತವಾಗಿ ಹಿಟ್‍ ಕೊಟ್ಟಾಗ ನಾಯಕರಿಗೆ ನನ್ನ ಮೇಲೆ ನಂಬಿಕೆ ಬರುತ್ತದೆ. ಒಂದೆರಡು ಸಿನಿಮಾಗಳಲ್ಲಿ ಅದು ಸಾಧ್ಯವಾಗುವಂತಹದ್ದಲ್ಲ’’.

ಕಲಾವಿದರ ಬಗೆಗೆ ನಿರ್ದೇಶಕರ ಪಕ್ಷಪಾತ ಮೆಚ್ಚಿಕೊಳ್ಳುವಂತಹದ್ದೇ. ಆದರೆ, ನಿರ್ದೇಶಕನೊಬ್ಬ ತನ್ನ ಸಿನಿಮಾದಲ್ಲಿ ರಿಸ್ಕ್‍ ತೆಗೆದುಕೊಂಡಂತೆ, ನಾಯಕರು ಯಾಕೆ ತೆಗೆದುಕೊಳ್ಳುವುದಿಲ್ಲ. ಏಳೆಂಟು ಸಿನಿಮಾಗಳು ಸೋತರೂ ನಾಯಕ ತನ್ನ ಸೇಫ್ಟಿ ಜೋನ್‌ನಲ್ಲಿಯೇ ಉಳಿಯುತ್ತಾನೆ. ಚೌಕಟ್ಟಿನಿಂದ ಹೊರಬಂದು ಯಾಕೆ ಭಿನ್ನ ಪ್ರಯತ್ನಗಳಲ್ಲಿ ತೊಡಗುವುದಿಲ್ಲ?

‘‘ನಾನು ಕೂಡ ತುಂಬಾ ಕಡಿಮೆ ರಿಸ್ಕ್‍ ತೆಗೆದುಕೊಂಡೇ ಸಿನಿಮಾ ಮಾಡಿರುವುದು. ಒಂದು ವೇಳೆ ಸಿನಿಮಾ ದಯನೀಯವಾಗಿ ಸೋತರೂ ಹೆಚ್ಚು ನಷ್ಟವಾಗಬಾರದು, ದೊಡ್ಡ ಮೊತ್ತದ ಸಾಲ ನನ್ನ ಹೆಗಲೇರಬಾರದು ಎನ್ನುವ ಎಚ್ಚರಿಕೆ ವಹಿಸಿಯೇ ಸಿನಿಮಾ ಮಾಡಿದೆ. ಎಷ್ಟೇ ರಿಸ್ಕ್‍ ಎಂದರೂ ಅಲ್ಲೊಂದು ಕಂಫರ್ಟ್‍ ಜೋನ್‍ ಇದ್ದೇ ಇರುತ್ತದೆ. ಅದನ್ನು ಬುದ್ಧಿವಂತಿಕೆ ಎನ್ನಬಹುದು. ಇಂಥ ಬುದ್ಧಿವಂತಿಕೆಯನ್ನು ಹೀರೊ ಕೂಡ ಪ್ರದರ್ಶಿಸುವುದು ಸಹಜ. ನಮ್ಮ ನಾಯಕರು ಹೇಳುವುದು ಒಂದೇ ಮಾತು – ‘ಜನ ನೋಡಬೇಕು’. ಹೀಗೆ ಹೇಳುವುದರಲ್ಲಿ ತಪ್ಪೇನಿದೆ?’’. ಸತ್ಯಪ್ರಕಾಶ್ ತಮ್ಮ ವಾದ ಬಿಟ್ಟುಕೊಡಲು ಸಿದ್ಧರಿರಲಿಲ್ಲ.

‘‘ನಾನು ಕೂಡ ಸುರಕ್ಷಿತ ಧೋರಣೆಯೊಂದಿಗೆ, ಬುದ್ಧಿವಂತಿಕೆಯಿಂದಲೇ ಸಿನಿಮಾ ಮಾಡಿರುವುದು. ಪುನೀತ್‍ ಅವರೊಂದಿಗಿನ ನನ್ನ ಒಡನಾಟದ ಪ್ರಕಾರ ಅವರಿಗೆ ಒಳ್ಳೆಯ ಸಿನಿಮಾ ಮಾಡುವ ಆಸೆಯಿದೆ. ಎಲ್ಲ ನಾಯಕರಿಗೂ ಒಳ್ಳೆಯ ಸಿನಿಮಾಗಳ ಹಂಬಲ ಇದ್ದೇಇರುತ್ತದೆ. ಆದರೆ, ರಿಸ್ಕ್‍ ಎನ್ನುವುದು ನಿರ್ದೇಶಕನ ಪಾಲಿಗೆ ಒಂದು ಪಾಲಾದರೆ, ಅದರ ಹತ್ತರಷ್ಟನ್ನು ಹೀರೊ ಎದುರಿಸುತ್ತಿರುತ್ತಾನೆ’’ ಎಂದು ಹೇಮಂತ್‌ ಗೆಳೆಯನ ಬೆಂಬಲಕ್ಕೆ ಬಂದರು.

ಸತ್ಯಪ್ರಕಾಶ್‌ ತಮ್ಮ ವಾದದ ಮುಂದುವರಿಕೆಯಾಗಿ, ‘‘ನನ್ನ ಚಿತ್ರವನ್ನು ಪುನೀತ್‍, ಸುದೀಪ್‍, ಗಣೇಶ್‍, ದರ್ಶನ್‍ ಎಲ್ಲರೂ ಬೆಂಬಲಿಸಿದರು. ಎಲ್ಲರಿಗೂ ಹೊಸ ಸಿನಿಮಾಗಳ ಹಂಬಲವಿದೆ. ಆದರೆ ಅದನ್ನು ಸಾಧಿಸುವ ನಿಟ್ಟಿನಲ್ಲಿ ಕೆಲವು ತೊಡಕುಗಳಿವೆ. ಅದು ಹಣಕಾಸಿಗೆ ಸಂಬಂಧಿಸಿದ್ದಾಗಿರಬಹುದು, ರೀಚ್‍ ಬಗ್ಗೆ ಇರುವ ಅನುಮಾನಗಳಿರಬಹುದು. ಇವೆಲ್ಲವನ್ನೂ ಮೀರಿ ಒಂದು ಅಪೂರ್ವ ಸಮೀಕರಣದ ಸಿನಿಮಾ ಗೆದ್ದರೆ ಪರಿಸ್ಥಿತಿ ಬದಲಾಗಬಹುದು’’ ಎಂದರು.

ನಾಯಕನಟರ ಪ್ರಭಾವಳಿಯಿಂದ ಮಾತು ಷಿಫ್ಟ್‌ ಆದುದು ಸಿನಿಮಾಗಳಲ್ಲಿನ ಕನ್ನಡದ ಆವರಣದತ್ತ. ತಾಂತ್ರಿಕವಾಗಿ ಗಮನಾರ್ಹ ಸಿನಿಮಾಗಳೇನೋ ರೂಪುಗೊಳ್ಳುತ್ತಿವೆ. ಆದರೆ, ಕನ್ನಡದ ಪರಿಸರವನ್ನು ಕಾಣಿಸುವಲ್ಲಿ ಇಂದಿನ ಸಿನಿಮಾಗಳು ದುರ್ಬಲವಾಗಿವೆಯಲ್ಲವೇ ಎನ್ನುವುದು ಪ್ರಶ್ನೆಯ ತಿರುಳು.

‘‘ಒಂದು ಮೊಟ್ಟೆಯ ಕಥೆ, ರಾಮಾ ರಾಮ್‍ ರೇ ಸಿನಿಮಾಗಳಲ್ಲಿ ಅಥೆಂಟಿಸಿಟಿ ಇದೆ. ನಿರ್ದೇಶಕರ ಧ್ವನಿ ಇದೆ. ಇದು ಎಲ್ಲ ಸಿನಿಮಾಗಳಲ್ಲಿ ಸಾಧ್ಯವಾಗುವುದಿಲ್ಲ. ಇಲ್ಲಿಯೇ ರೂಪುಗೊಂಡ ಕಥೆಗಳು ಸಿನಿಮಾಗಳಾದರೆ ಕನ್ನಡತನ ಸಹಜವಾಗಿಯೇ ಬರುತ್ತದೆ’’ ಎಂದರು ಅರವಿಂದ್‌.

‘‘ನನ್ನ ಪ್ರಕಾರ ಕನ್ನಡ ಸಿನಿಮಾ ಎಂದರೆ ಅಲ್ಲಿ ಕನ್ನಡತನದ ಅಥೆಂಟಿಸಿಟಿ ಇರಬೇಕು. ನೆದರ್ಲೆಂಡಿನಲ್ಲಿ ಕನ್ನಡ ಸಿನಿಮಾ ನೋಡಿದರೆ ಅವರಿಗೆ ಕನ್ನಡದ ನಾಡು–ನುಡಿಯ ಪರಿಚಯ ಆಗಬೇಕು. ನಾವು ಇರಾನಿ ಸಿನಿಮಾಗಳನ್ನು ನೋಡಿ ಅಲ್ಲಿನ ಬದುಕನ್ನು ತಿಳಿಯುತ್ತೇವಲ್ಲ, ಹಾಗೆ. ಆದರೆ, ಇಂಥ ಪ್ರಯತ್ನಗಳು ಕನ್ನಡದಲ್ಲಿ ತುಂಬಾ ಕಡಿಮೆ ಆಗುತ್ತಿವೆ. ಏಕೆಂದರೆ, ಈಗ ಸಿನಿಮಾ ಮಾಡುತ್ತಿರುವ ಬಹುತೇಕರು ಬೆಂಗಳೂರಿಗರು. ಬೆಂಗಳೂರಿಗೆ ಒಂದು ಅಥೆಂಟಿಸಿಟಿ ಇಲ್ಲ. ಕೇರಳ, ಚೆನ್ನೈಗೆ ಹೋದರೆ ಅಲ್ಲೊಂದು ನೇಟಿವಿಟಿ ಇದೆ. ಅದು ಬೆಂಗಳೂರಿನಲ್ಲಿ ಇಲ್ಲ. ಇದು ಪೂರ್ಣ ಅರ್ಬನ್‍ ಸಿಟಿ’’ ಎಂದರು ಸತ್ಯಪ್ರಕಾಶ್‌ ಹೇಳಿದರು.

ಸತ್ಯಪ್ರಕಾಶ್‍ ಮಾತನ್ನು ಕೊಂಚ ವಕ್ರವಾಗಿ ನೋಡಿದರೆ, ಅದು ಅರವಿಂದ್‍ ಹಾಗೂ ಹೇಮಂತ್‍ ಅವರಿಗೆ ಯಾಕೆ ಅನ್ವಯವಾಗಬಾರದು?

ಕೆಣಕುಪ್ರಶ್ನೆಯನ್ನು ಅರವಿಂದ್‌ ಸಮಾಧಾನ ಚಿತ್ತದಿಂದಲೇ ಸ್ವೀಕರಿಸಿದರು. ‘ಕನ್‌ಫ್ಯೂಸ್ ಐಡೆಂಟಿಟಿಯೇ ಇಲ್ಲಿನ ಸಂಸ್ಕೃತಿ. ಇದು ಇಲ್ಲಿರುವವರಿಗೆ ಅರ್ಥ ಆಗುತ್ತದೆ’’ ಎನ್ನುವುದು ಅವರ ಚುಟುಕು ಉತ್ತರ. ‘‘ನಾವು ಏನನ್ನು ನೋಡುತ್ತಿದ್ದೇವೋ ಅದನ್ನು ಮಾಡುತ್ತಿದ್ದೇವೆ’’ ಎಂದು ಹೇಮಂತ್‌ ಮಾತು ಸೇರಿಸಿದರು.

ನೋಡಿದ್ದನ್ನು ಮಾಡುತ್ತಿದ್ದೇವೆ ಎನ್ನುವುದು ಬೀಸುಹೇಳಿಕೆಯಲ್ಲವೇ? ಇದರಾಚೆಗೆ ನಿರ್ದೇಶಕರಿಗೆ ಒಂದು ಜವಾಬ್ದಾರಿ ಇಲ್ಲವೇ? ಬೆಂಗಳೂರನ್ನು ಕೊಳೆಗೇರಿಯಂತೆ, ಭೂಗತಲೋಕದ ಕೂಪದಂತೆ ತೋರಿಸುವುದು ಎಷ್ಟು ಸರಿ?

ಹೇಮಂತ್‌ ರಾವ್
ಹೇಮಂತ್‌ ರಾವ್

ಹೇಮಂತ್‍ ತಮ್ಮ ಮಾತನ್ನು ವಿಸ್ತರಿಸತೊಡಗಿದರು. ‘‘ನನ್ನ ಸಿನಿಮಾವನ್ನೇ ಉದಾಹರಿಸುವುದಾದರೆ, ಗೋಧಿಬಣ್ಣ ಸಿನಿಮಾ ನೋಡಿದ ಕೆಲವರು – ‘ನಿಮ್ಮ ಸಿನಿಮಾದ ಕ್ಯಾರೆಕ್ಟರ್‌ಗಳು ಯಾಕೆ ಹಿಂದಿ–ಉರ್ದು ಮಾತನಾಡ್ತಿವೆ’ ಎಂದು ತಕರಾರು ಎತ್ತಿದ್ದರು. ಅದೆಲ್ಲ ಅಥೆಂಟಿಸಿಗಾಗಿ ಎನ್ನುವುದು ನನ್ನ ಉತ್ತರ. ಅಂದರೆ, ‘ತಿಥಿ’ ಸಿನಿಮಾದ ಮಟ್ಟಿಗೆ ನಾನು ಅಥೆಂಟಿಕ್‌ ಆಗಿ ಮಾಡುತ್ತಿರುವೆ ಎಂದೆಲ್ಲ. ಬೆಂಗಳೂರಿನ ಐಡೆಂಟಿಟಿ ಗೊತ್ತು ಮಾಡಲು ಹೀಗೆ ಹಿಂದಿ–ಉರ್ದು ಬಳಕೆ ನನಗೆ ಅಗತ್ಯವಾಗಿತ್ತು’’.

ಕನ್ನಡದ ಬಹುತೇಕ ಸಿನಿಮಾಗಳ ಮಾತನ್ನು ತಮಿಳಿಗೋ ತೆಲುಗಿಗೋ ಬದಲಿಸಿದರೂ ಚಿತ್ರದ ಒಟ್ಟಂದದಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲ. ಇಂದಿನ ಚಿತ್ರಗಳಲ್ಲಿ ಕನ್ನಡದ ಮಾತಷ್ಟೇ ಇರುತ್ತದೆ. ಇದು ಬದ್ಧತೆಯ ಕೊರತೆಯಲ್ಲವೇ? ಟೈಟಲ್‍ ಕಾರ್ಡ್‌ಗಳಲ್ಲಿ ಕೂಡ ಇಂಗ್ಲಿಷ್‍ ಮಾತ್ರ ಇರುತ್ತದೆ ಎಂದು ‘ಕನ್ನಡತನ’ದ ಪ್ರಶ್ನೆ ಮುಂದುವರಿಯಿತು.

‘‘ರೀಚ್‍ ದೃಷ್ಟಿಯಿಂದ ಇಂಗ್ಲಿಷ್‍ ಬಳಕೆ ಹೆಚ್ಚುತ್ತಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಪ್ರಚಾರದ ದೃಷ್ಟಿಯಿಂದಲೂ ಇದಾಗುತ್ತಿದೆ’’ ಎಂದರು ಅರವಿಂದ್‌.

ಹೇಮಂತ್‍ ಸಮಸ್ಯೆಯನ್ನು ಬೇರೊಂದು ನೆಲೆಗೊಯ್ಯುವ ಪ್ರಯತ್ನ ಮಾಡಿದರು. ‘‘ಇದು ಸಿನಿಮಾದ ಸಮಸ್ಯೆಯಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ಇಂಗ್ಲಿಷ್‍ ಹೇರಿಕೆಯಿದೆ. ಕಾನ್ವೆಂಟ್‌ಗಳಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸಲಾಗುತ್ತದೆ. ನಾನು ಓದುವಾಗಲೂ ಇಂಥ ಸ್ಥಿತಿ ಅನುಭವಿಸಿದ್ದೇನೆ. ಕನ್ನಡ ಮಾತನಾಡುವುದು ಕೀಳರಿಮೆ ಎಂದು ನಂಬಿಸಲಾಗುತ್ತದೆ. ಇದೇ ಮನೋಭಾವ ಸಿನಿಮಾದಲ್ಲೂ ಪ್ರತಿಫಲನಗೊಳ್ಳುತ್ತಿರಬಹುದು. ಕನ್ನಡದ ಬದ್ಧತೆ ಶಾಲೆಗಳಲ್ಲಿ ಸಾಧ್ಯವಾಗಬೇಕು. ಆನಂತರ ಅದು ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಸಾಧ್ಯವಾಗುತ್ತದೆ’’ ಎನ್ನುವ ತರ್ಕ ಅವರದು.

***

ಮಾತು ಮುಗಿಯುವಂತಿರಲಿಲ್ಲ. ಏಕೆಂದರೆ ಮಾತಿನ ಕೇಂದ್ರದಲ್ಲಿದ್ದುದು ಸಿನಿಮಾ!

ಕೊನೆಯದಾಗಿ, ಹೇಳಲೇ ಬೇಕಾದ ಮಾತುಗಳೇನಾದರೂ ಇದ್ದರೆ ಹೇಳಿ ಎಂದಾಗ ಮೂವರ ಪರವಾಗಿ ಅರವಿಂದ್‌ ಮಾತನಾಡಿದರು.

‘‘ಪಾಪ್ಯುಲರ್ಸಿನಿಮಾ ಅವಾರ್ಡ್‌ಗಳಲ್ಲಿ ಎಡಿಟರ್‌ಗೆ, ಧ್ವನಿವಿನ್ಯಾಸಕ್ಕೆ ಸ್ಥಾನವೇ ಇಲ್ಲ. ಈ ತಂತ್ರಜ್ಞರು ಸಿನಿಮಾ ರೂಪುಗೊಳ್ಳುವಲ್ಲಿ ಮುಖ್ಯವಾದವರು. ಇವರಿಲ್ಲದೆ ಸಿನಿಮಾ ಆಗುವುದು ಸಾಧ್ಯವಿಲ್ಲ. ತೆರೆಯ ಹಿಂದಿನ ಹೀರೊಗಳಿಗೆ ಮನ್ನಣೆ ದೊರೆಯಬೇಕು. ಇವರ ಜವಾಬ್ದಾರಿ ಕೂಡ ಗ್ಲಾಮರಸ್‍ ಎನ್ನುವುದು ಚಿತ್ರರಸಿಕರಿಗೆ ಅರ್ಥವಾಗಬೇಕು. ಇಂಥದೊಂದು ಸಂಸ್ಕೃತಿಯನ್ನು ನಾವು ರೂಪಿಸಬೇಕು. ಈಗ ನಮ್ಮನ್ನು ಕರೆದು ಮಾತನಾಡಿಸಿದಂತೆ, ಧ್ವನಿವಿನ್ಯಾಸಕಾರರು, ಸಂಕಲನಕಾರರು, ಬರಹಗಾರರು ಪತ್ರಿಕೆಗಳ ಮುಖಪುಟಗಳಲ್ಲಿ ಬರಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು’’.

ಅರವಿಂದ್‌ ಮಾತು, ‘ಸಿನಿಮಾ ಒಂದು ಕೂಡು ಕಲೆ’ ಎನ್ನುವ ಸತ್ಯವನ್ನು ನೆನಪಿಸುವಂತಿತ್ತು.

ಬೆಳಗ್ಗೆ ತಿಂಡಿಯ ನಂತರ ಶುರುವಾದ ಮಾತು ಊಟದ ಹೊತ್ತಿನವರೆಗೂ ಮುಂದುವರಿದಿತ್ತು. ಮಾತು ಮುಂದುವರಿಯುತ್ತಲೇ ಇತ್ತು, ಊಟದ ಜೊತೆಗೂ!

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT