ಕೆಜಿಎಫ್‌ ಸಕ್ಸಸ್‌ ತಲೆಗೇರಿಲ್ಲ: ಯಶ್‌

7

ಕೆಜಿಎಫ್‌ ಸಕ್ಸಸ್‌ ತಲೆಗೇರಿಲ್ಲ: ಯಶ್‌

Published:
Updated:

‘ಕೆಜಿಎಫ್‌ ಚಿತ್ರದ ಸಕ್ಸಸ್‌ ತಲೆಗೇರಿಲ್ಲ. ಎದೆಯೊಳಗೆ ಬೆಚ್ಚಗೆ ಅವಿತು ಕುಳಿತಿದೆ’  –‘ಕೆಜಿಎಫ್‌’ ಸಿನಿಮಾದ ಯಶಸ್ಸಿನ ಬಗ್ಗೆ ನಟ ಯಶ್‌ ಅವರ ವ್ಯಾಖ್ಯಾನ ಇದು. ಸಿನಿಮಾ ಇಪ್ಪತ್ತೈದು ದಿನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡ ಪತ್ರಕರ್ತರ ಮುಂದೆ ಹಾಜರಾಗಿತ್ತು. ಈ ಚಿತ್ರದ ಯಶಸ್ಸಿನಿಂದಾಗಿ ಇಡೀ ಭಾರತೀಯ ಚಿತ್ರರಂಗ ಚಂದನವನದತ್ತ ನೋಡುವಂತಾಗಿದೆ ಎಂಬ ಖುಷಿ ತಂಡದ ಸದಸ್ಯರಲ್ಲಿತ್ತು.

‘ನನ್ನಲ್ಲಿ ಸಾರ್ಥಕ ಭಾವ ಮೂಡಿದೆ. ವೃತ್ತಿಬದುಕಿನಲ್ಲಿ ದೊಡ್ಡ ಯಶಸ್ಸು ಇದು. ಚಿತ್ರದ ಎರಡನೇ ಭಾಗದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ಮಾಡಲು ಮುಂದಾದಾಗ ನಟಿಸಿರುವ ಎಲ್ಲ ಕಲಾವಿದರ ಕುಟುಂಬದ ಸದಸ್ಯರು ‘ಇದು ಹುಚ್ಚುತನ’ ಎಂದು ಜರೆದಿದ್ದರು. ಹಲವರ ಮನೆಯಲ್ಲಿ ಜಗಳಗಳೂ ನಡೆದಿವೆ’ ಎಂದು ನೆನಪಿನ ಸುರುಳಿ ಬಿಚ್ಚಿದರು ಯಶ್‌.

‘ದೊಡ್ಡ ಬಜೆಟ್‌ನ ಸಿನಿಮಾ ಮಾಡಲು ತಾಕತ್ತು ಬೇಕು. ವಿಜಯ್‌ ಕಿರಗಂದೂರು ಅದನ್ನು ಸಾಧ್ಯವಾಗಿಸಿದ್ದಾರೆ. ಕೆಜಿಎಫ್‌ ಒಂದು ಕುಟುಂಬ’ ಎಂದು ಬಣ್ಣಿಸಿದರು.


‘ಕೆಜಿಎಫ್’ ಚಿತ್ರತಂಡ

‘ಕಿರಾತಕ ಚಿತ್ರದ ಮುಂದುವರಿದ ಭಾಗದಿಂದ ನಾನು ಹಿಂದೆ ಸರಿಯುವುದಿಲ್ಲ. ಕೆಜಿಎಫ್‌ನಷ್ಟೇ ಆ ಸಿನಿಮಾವನ್ನೂ ಪ್ರೀತಿಸುತ್ತೇನೆ. ಆ ಚಿತ್ರಕ್ಕೆ ಲುಕ್‌ ಬದಲಾಯಿಸಿಕೊಳ್ಳಬೇಕಿದೆ. ಕೆಜಿಎಫ್‌ ಎರಡನೇ ಭಾಗಕ್ಕೆ ಗಡ್ಡ ಅನಿವಾರ್ಯ. ಹಾಗಾಗಿ, ಯಾವುದು ಅನುಕೂಲ ಎನ್ನುವುದನ್ನು ನೋಡಿಕೊಂಡು ಎರಡೂ ಚಿತ್ರಗಳನ್ನು ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ನಿರ್ದೇಶಕ ಪ್ರಶಾಂತ್‌ ನೀಲ್, ‘ಕೆಜಿಎಫ್‌ ಜೊತೆಗೆ ನಮ್ಮದು ಭಾವನಾತ್ಮಕ ನಡಿಗೆ. ಯಶಸ್ಸಿನಲ್ಲಿ ಪ್ರೇಕ್ಷಕರ ಪಾಲು ದೊಡ್ಡದು. ಎರಡನೇ ಭಾಗವು ಚಿತ್ರತಂಡದ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದು ಹೇಳಿದರು.

ಹಿರಿಯ ನಟ ಅನಂತನಾಗ್, ‘ಪ್ರಶಾಂತ್‌ ಬಂದು ಕಥೆ ಕೇಳಿದಾಗ ನನಗೆ ಕುತೂಹಲ ಮೂಡಿತು. ಶೂಟಿಂಗ್‌ಗೆ ಹೋದಾಗಲೇ ಚಿತ್ರ ಅರ್ಥವಾಗತೊಡಗಿತು. ಡಬ್ಬಿಂಗ್‌ ವೇಳೆ ಒಳ್ಳೆಯ ಸಿನಿಮಾ ಮಾಡಿದ್ದಾರೆ ಎಂದು ಹೆಮ್ಮೆಯಾಯಿತು. ಹಿಂದಿ ಅವತರಣಿಕೆಗೂ ನಾನೇ ಡಬ್ಬಿಂಗ್ ಮಾಡುವಂತೆ ನಿರ್ದೇಶಕರು ಕೋರಿದರು. ನನ್ನ ಪತ್ನಿಯ ಸಹಾಯದಿಂದ ಅದನ್ನೂ ಸಾಧ್ಯವಾಗಿಸಿದೆ’ ಎಂದು ನಕ್ಕರು.

ಕೆಜಿಎಫ್‌ ಪರಭಾಷೆಗಳಿಗೆ ಡಬ್‌ ಆಗಿದೆ. ಡಬ್ಬಿಂಗ್‌ ಬಗ್ಗೆ ಕನ್ನಡದ ಪ್ರೇಕ್ಷಕರು ಮುಕ್ತವಾಗಿ ಮಾತನಾಡುವಂತಹ ವಾತಾವರಣವನ್ನು ಸೃಷ್ಟಿಸಿದೆ ಎಂದರು.

ನಿರ್ಮಾಪಕ ವಿಜಯ್ ಕಿರಗಂದೂರು, ನಾಯಕನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್‌ ಕುಮಾರ್‌, ಅನ್ಮೋಲ್, ಅರ್ಚನಾ ಜೋಯಿಸ್‌ ಅನುಭವ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 58

  Happy
 • 3

  Amused
 • 3

  Sad
 • 1

  Frustrated
 • 6

  Angry

Comments:

0 comments

Write the first review for this !