ಮುಂಬೈ: ಡಿಸ್ನಿ ನಿರ್ಮಾಣದ ಬಹು ನಿರೀಕ್ಷಿತ ‘ಮುಫಾಸಾ: ದಿ ಲಯನ್ ಕಿಂಗ್’ ಚಿತ್ರದ ಹಿಂದಿ ಅವತರಣಿಕೆಯಲ್ಲಿನ ಮುಖ್ಯ ಪಾತ್ರಗಳಿಗೆ ಬಾಲಿವುಡ್‌ನ ಶಾರುಖ್ ಖಾನ್ ಮತ್ತು ಅವರ ಪುತ್ರರಾದ ಆರ್ಯನ್ ಮತ್ತು ಅಬ್‌ರಾಮ್ ಧ್ವನಿ ನೀಡಿದ್ದಾರೆ.
ಇದೇ ಡಿ. 20ರಂದು ಈ ಸಿನಿಮಾ ತೆರೆ ಕಾಣಲಿದೆ. ಈ ಹಿಂದೆ ಲಯನ್ ಕಿಂಗ್ ನೋಡಿ ಸಂಭ್ರಮಿಸಿದವರಿಗೆ, ಕಾಡಿನ ರಾಜನ ಹೊಸ ಕಥೆಯೊಂದಿಗೆ ಮುಫಾಸಾ ತೆರೆ ಕಾಣುತ್ತಿದೆ. ಈ ಚಿತ್ರವನ್ನು ಬೆರ್ರಿ ಜೆಂಕಿನ್ಸ್ ನಿರ್ದೇಶಿಸಿದ್ದಾರೆ.
ಈ ಚಿತ್ರದ ಹಿಂದಿ ಅವತರಣಿಕೆಯ ಟ್ರೇಲರ್ ಅನ್ನು ಇತ್ತೀಚೆಗೆ ಡಿಸ್ನಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ‘ದಿ ಕಿಂಗ್ @iamsrk ಮುಸ್ತಾಫಾ ಆಗಿ ಮರಳಿದ್ದಾರೆ. ಅವರೊಂದಿಗೆ #AryanKhan ಮತ್ತು #AbRamKhan ಕೂಡಾ ಪಾಲ್ಗೊಂಡಿದ್ದಾರೆ’ ಎಂದು ಡಿಸ್ನಿ ಬರೆದುಕೊಂಡಿದೆ.
ಆರ್ಯನ್ ಅವರು ಮುಫಾಸಾನ ಪುತ್ರ ಸಿಂಬಾ ಪಾತ್ರಕ್ಕೆ ಧ್ವನಿ ನೀಡಿದರೆ, ಅಬ್‌ರಾಮ್ ಖಾನ್ ಮುಫಾಸಾ ಬಾಲ್ಯದ ದಿನಗಳ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.
‘ಕಾಡಿನ ರಾಜನ ರೋಚಕ ಕಥೆಯನ್ನೊಳಗೊಂಡ ‘ಮುಫಾಸಾ: ದಿ ಲಯನ್ ಕಿಂಗ್’ ಮತ್ತು ಅವರ ಪುತ್ರ ಮರಿ ಸಿಂಹ ಸಿಂಬಾ ಅದ್ಭುತ ಪಯಣ ಇದರಲ್ಲಿ ಕಾಣಬಹುದು. ನೂತನ ಚಿತ್ರವು ಮುಫಾಸಾನ ಬಾಲ್ಯದ ಕಥೆಯನ್ನು ಹೇಳಲಿದೆ’ ಎಂದು ಡಿಸ್ನಿ ವಿವರಿಸಿದೆ.
‘ಈ ಚಿತ್ರಕ್ಕಾಗಿ ಡಿಸ್ನಿ ಜೊತೆ ಕೈಜೋಡಿಸಿದ್ದು ಸಂತಸದ ಸಂಗತಿ. ಅದರಲ್ಲೂ ಪುತ್ರರಾದ ಆರ್ಯನ್ ಮತ್ತು ಅಬ್‌ರಾಮ್ ಕೂಡಾ ಈ ಪಯಣದಲ್ಲಿ ನನ್ನ ಜೊತೆಗೂಡಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ’ ಎಂದು ಶಾರುಖ್ ಬರೆದುಕೊಂಡಿದ್ದಾರೆ.