ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ನಿರ್ದೇಶಕ ಮಯೂರ್‌ ಅಂಬೆಕಲ್ಲು ಅವರ ಭಾವ ತೀರ ಯಾನ...

Published 21 ಮಾರ್ಚ್ 2024, 23:30 IST
Last Updated 21 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಚಂದ್ರಶೇಖರ ಕಂಬಾರರು ರಚಿಸಿದ ‘ಸಾಂಬಶಿವ ಪ್ರಹಸನ’ ನಾಟಕದ ಹಾಡು ‘ಅಗಲಿ ಇರಲಾರೆನೋ..ಮರೆತು ಇರಲಾರೆನೋ..ನಿನ್ನನ್ನ’ ಹಾಡನ್ನು ಇದೀಗ ಹಲವು ಗುನುಗುನಿಸುತ್ತಿದ್ದಾರೆ. ಇದಕ್ಕೆ ಕಾರಣರಾದವರು ಸಂಗೀತ ನಿರ್ದೇಶಕ ಮಯೂರ್‌ ಅಂಬೆಕಲ್ಲು. ಸುಮಾರು ನಾಲ್ಕು ದಶಕಗಳ ಹಿಂದೆ ರಚನೆಯಾದ ಈ ಗೀತೆಗೆ ಹೊಸ ಸ್ಪರ್ಶ ನೀಡಿ ಬೆಳ್ಳಿಪರದೆಗೆ ತಂದಿರುವ ಮಯೂರ್‌ ಪ್ರಯೋಗಮುಖಿ ಸಂಗೀತ ಸಂಯೋಜಕ. ಚೊಚ್ಚಲ ಸಿನಿಮಾ ‘ಶಾಖಾಹಾರಿ’ಯಲ್ಲಿ ನಶೆಯಂತೆ ಸೆಳೆಯುವ ಮೂರು ಹಾಡುಗಳನ್ನು ನೀಡಿರುವ ಮಯೂರ್‌, ಕನಸಿನ ಗೋಪುರವನ್ನೇ ಕಟ್ಟಿಕೊಂಡು ಚಂದನವನದಲ್ಲಿ ಪಯಣಿಸುತ್ತಿದ್ದಾರೆ. ಅವರೊಂದಿಗಿನ ಮಾತುಕತೆ ಇಲ್ಲಿದೆ...

‘ನಾನು ದಕ್ಷಿಣ ಕನ್ನಡದ ಸುಳ್ಯದವನು. ಚಿಕ್ಕವಯಸ್ಸಿನಿಂದಲೂ ಹಾಡುವುದರಲ್ಲಿ ಆಸಕ್ತಿ ಹೊಂದಿದವನು. ನನ್ನ ಆಸಕ್ತಿಯ ಬೆನ್ನಿಗೆ ನಿಂತವರು ಪೋಷಕರು. ಕೆ.ಆರ್‌.ಗೋಪಾಲಕೃಷ್ಣ ಅವರಿಂದ ಸುಗಮ ಸಂಗೀತ ಕಲಿತೆ. ಭಾವಗೀತೆಗಳು, ಗಜಲ್‌ನಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಪ್ರೌಢ ಶಿಕ್ಷಣಕ್ಕೆ ಮೂಡಬಿದಿರೆಯ ಆಳ್ವಾಸ್‌ ಶಾಲೆಗೆ ಸೇರಿದೆ. ದ್ವಿತೀಯ ಪಿ.ಯುವರೆಗೂ ಅಲ್ಲಿಯೇ ಶಿಕ್ಷಣ ಮುಂದುವರಿಸಿದ್ದೆ. ಅಲ್ಲಿ ನನ್ನ ಈ ಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿತು. ನುಡಿಸಿರಿ, ವಿರಾಸತ್‌ನಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿನ ಪ್ರಭಾವ ಬೀರಿದವು. ಖ್ಯಾತ ಕಲಾವಿದರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಅಲ್ಲಿಂದ ಹಾಡುವುದರ ಜೊತೆಗೆ ರಾಗ ಸಂಯೋಜನೆ, ಸಂಗೀತ ಸಂಯೋಜನೆಯ ಕ್ಷೇತ್ರದತ್ತ ಒಲವು ಹೆಚ್ಚಾಯಿತು. ರಂಗಭೂಮಿಯ ಪ್ರವೇಶವೂ ಅಲ್ಲಿಯೇ ಆಗಿತ್ತು. ಜೀವನರಾಂ ಸುಳ್ಯ ಅವರು ಗುರುಗಳಾಗಿದ್ದರು. ದ್ವಿತೀಯ ಪಿ.ಯು ಮುಗಿಸಿ ನೇರವಾಗಿ ಬೆಂಗಳೂರಿಗೆ ಬಂದು, ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದೆ. ಒಳ್ಳೆಯ ಒಂದು ಪ್ರಾಜೆಕ್ಟ್‌ ಸಿಗುವವರೆಗೂ ಕಾದೆ. ಈ ಅವಧಿಯಲ್ಲಿ ಆಲ್ಬಂ ಹಾಡುಗಳು, ಮೊಲೊಡಿ ಸಿಂಗಲ್ಸ್‌ ಮಾಡಿದೆ. ಇಂತಹ ಒಂದು ಸಿಂಗಲ್‌ ನೋಡಿಯೇ ‘ಶಾಖಾಹಾರಿ’ ನಿರ್ದೇಶಕ ಸಂದೀಪ್‌ ಸುಂಕದ್‌ ಅವರ ಸಿನಿಮಾದಲ್ಲಿ ಅವಕಾಶ ನೀಡಿದರು’ ಎಂದು ತಮ್ಮ ಹಿನ್ನೆಲೆ ಬಿಚ್ಚಿಟ್ಟರು ಮಯೂರ್‌. 

‘ಮೊದಲಿಗೆ ಕೇವಲ ಒಂದು ಹಾಡು ‘ಸೌಗಂಧಿಕ’ ಸಂಗೀತ ಸಂಯೋಜಿಸಲು ಸಂದೀಪ್‌ ತಿಳಿಸಿದ್ದರು. ಇದಾದ ಬಳಿಕ ‘ಸೋಲ್‌ ಆಫ್‌ ಶಾಖಾಹಾರಿ’ ಪ್ರಯತ್ನಿಸಬಹುದೇ ಎಂದು ಕೇಳಿದರು. ನನ್ನ ಎರಡೂ ಕೆಲಸಗಳು ಸಂದೀಪ್‌ ಅವರಿಗೆ ಇಷ್ಟವಾದವು. ಒಂದು ರೀಲ್‌ಗೆಂದು ಆರಂಭವಾದ ಸಿನಿಮಾದ ಬ್ಯಾಕ್‌ಗ್ರೌಂಡ್‌ ಸ್ಕೋರ್‌ ಕೆಲಸ ಕೊನೆಗೆ ಇಡೀ ಸಿನಿಮಾಗೇ ಬ್ಯಾಕ್‌ಗ್ರೌಂಡ್‌ ಸ್ಕೋರ್‌ ನೀಡುವಂತೆ ಮಾಡಿತು. ‘ಸೋಲ್‌ ಆಫ್‌ ಶಾಖಾಹಾರಿ’ ಹಾಡಿನ ಸಂಯೋಜನೆ ಸವಾಲಿನಿಂದ ಕೂಡಿತ್ತು. ಹಲವು ಟ್ರಯಲ್‌ ಆ್ಯಂಡ್‌ ಎರರ್‌ ಆಗಿತ್ತು. ಚೈತ್ರಾ ಅವರ ಧ್ವನಿಯ ಟೆಕ್ಸ್ಚರ್‌ ಇದಕ್ಕೆ ಪೂರಕವಾಯಿತು. ಅದೇ ರೀತಿ ‘ಅಗಲಿ ಇರಲಾರೆನೋ..’ ಎಲ್ಲರಿಗೂ ಪರಿಚಯ ಇರುವ ಹಾಡು. ಹೀಗಾಗಿ ರಿಸ್ಕ್‌ ಕೂಡಾ ಅಧಿಕ. ನಿರ್ದೇಶಕರು ಮೊದಲೇ ಈ ಹಾಡು ಬೇಕು ಎಂದು ನಿರ್ಧಾರ ಮಾಡಿದ್ದರು. ಹೀಗಾಗಿ ಸಿನಿಮ್ಯಾಟಿಕ್‌ ಫೀಲ್‌ ಕೊಟ್ಟು ಮೂಲಸ್ವರೂಪಕ್ಕೆ ಧಕ್ಕೆ ತರದೆ ರಿ–ಅರೇಂಜ್‌ ಮಾಡಿ, ಹಾಡಿದೆ’ ಎಂದರು. 

ಸದ್ಯ ಹೊಸಬರ ಎರಡು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿರುವ ಮಯೂರ್‌, ‘ಭಾವ ತೀರ ಯಾನ’ ಎಂಬ ಮ್ಯೂಸಿಕಲ್‌ ರೊಮ್ಯಾಂಟಿಕ್‌ ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನದ ಜೊತೆಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಸಿನಿಮಾ ಜೂನ್‌ನಲ್ಲಿ ತೆರೆಕಾಣಲಿದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT