ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮಿಲೇನಿಯಲ್ಸ್‌ ಮನಸು

Last Updated 12 ಫೆಬ್ರುವರಿ 2019, 12:00 IST
ಅಕ್ಷರ ಗಾತ್ರ

ಸಂಜು ಹಿಂದಿ ಸಿನಿಮಾದ ಕಥೆ ನಟ ಸಂಜಯ್ ದತ್ ಖಾಸಗಿ ಬದುಕನ್ನು ಆಧರಿಸಿದೆ. ಮುನ್ನೂರಕ್ಕೂ ಹೆಚ್ಚು ಹೆಣ್ಣುಗಳ ಜತೆ ಮಲಗಿದ, ಅಕ್ರಮವಾಗಿ ಸಿಗುತ್ತಿದ್ದ ಎಲ್ಲ ಮಾದಕವಸ್ತುಗಳಿಗೂ ದಾಸನಾಗಿದ್ದ, ಅಶಿಸ್ತನ್ನೇ ಹಾಸಿ ಹೊದ್ದಿದ್ದ, ಧಾರಾಳಿ ಸ್ನೇಹಿತನ ಬೆನ್ನಿಗೂ ಚೂರಿ ಹಾಕಬಲ್ಲವನಾಗಿದ್ದ ಸಂಜಯ್‌ ದತ್‌ ಒಂದು ರೀತಿಯಲ್ಲಿ ದಿಕ್ಕೆಟ್ಟಂತೆ ಕಾಣುವ ಹೊಸಕಾಲದ ಯುವಕರ ಪ್ರತಿನಿಧಿ. ಚಾರಿತ್ರ್ಯದಲ್ಲಿ ಓರೆಕೋರೆಗಳಿದ್ದರೂ ಸಂಜಯ್‌ ಕುಟುಂಬದ ಮನುಷ್ಯ. ಆತನಿಗೆ ತಾಯಿಯೆಂದರೆ ಇಷ್ಟ. ತಂದೆ ಆತ್ಮೀಯ. ಮಗನ ಎಲ್ಲ ಹಳವಂಡಗಳನ್ನೂ ಸಹಿಸಿಕೊಂಡೂ ಕ್ಯಾನ್ಸರ್‌ ಬೀಸಿಗೆ ಸಿಲುಕಿ ಅಸುನೀಗುವ ತಾಯಿಯ ಮಮಕಾರ ಯಾರಿಗೆ ತಾನೆ ಇಷ್ಟವಾಗುವುದಿಲ್ಲ. ಚಟಗಳ ಮೂಟೆಯಂಥ ಮಗನಿಗೆ ಎದೆಮೇಲೆ ಕೈಯಾಡಿಸುತ್ತ ಆತ್ಮವಿಶ್ವಾಸದ ಗೀತೆಯ ಪಠಣ ಮಾಡುವ, ಕಪ್ಪು ಗುಣಗಳ ನಾಯಕನಿಗೆ ಬಿಳಿ ಗುಣಗಳ ಉಣಬಡಿಸುವಂಥ ತಂದೆಯನ್ನು ಯಾರು ತಾನೆ ಹಂಬಲಿಸುವುದಿಲ್ಲ. ನೋಡುವವರಿಗೆ ಕಪ್ಪು ಗುಣಗಳ ನಾಯಕನೇ ಇಷ್ಟ. ಬಿಳಿ ಗುಣಗಳ ತಂದೆ ಅಯ್ಯೋ ಪಾಪ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಪಥ ಬಿಟ್ಟು ಹೋಗುವಂತೆ ನಟಿಸುತ್ತಾ ತೋರಿಸುವ ಸಿನಿಮಾಗಳು ಹೊಸ ತಲೆಮಾರಿನವರನ್ನು ಅದರಲ್ಲೂ ಮಿಲೇನಿಯಲ್‌ಗಳನ್ನು ಹಿಡಿದಿಟ್ಟುಕೊಳ್ಳುತ್ತಾ ಬಂದಿವೆ. 1982ರಿಂದ 2004ರ ಅವಧಿಯಲ್ಲಿ ಹುಟ್ಟಿದವರೇ ಮಿಲೇನಿಯಲ್‌ಗಳು. ಕನ್ನಡದಲ್ಲಿ ‘ಸಹಸ್ರಮಾನಿಗಳು’ ಎಂದು ಹೇಳಬಹುದೇನೋ. ಇಂಥವರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡಿಬಿಟ್ಟರೆ ಅಪ್ಪ, ಅಮ್ಮ, ತಾತ, ಅಜ್ಜಿ, ಅಂಕಲ್‌, ಆಂಟಿಗಳೆಲ್ಲ ತಂತಾವೇ ಬಂದುಬಿಡುತ್ತಾರೆ ಎನ್ನುವುದು ಸಾಬೀತಾಗಿರುವ ಲೆಕ್ಕಾಚಾರ.

ಸಿನಿಮಾ ಮಾತ್ರವಲ್ಲ; ಸಹಸ್ರಮಾನಿಗಳನ್ನು ನೆಚ್ಚಿಕೊಂಡೇ ದೇಸಿ ಮಾರುಕಟ್ಟೆಯೂ ಬೆಳೆದಿದೆ. ಬ್ರಾಂಡೆಂಡ್ ವಸ್ತುಗಳು, ಮಾಲ್‌ ಸಂಸ್ಕೃತಿ, ಪಬ್‌ ಸಂಸ್ಕೃತಿ, ಚಾರಣ, ಪ್ರವಾಸ, ಸಾಹಸಿ ಕ್ರೀಡೆಗಳು, ಇಷ್ಟವಾದದ್ದನ್ನೇ ವೃತ್ತಿಯನ್ನಾಗಿಸಿಕೊಳ್ಳುವ ಅವಕಾಶಗಳ ಸೃಷ್ಟಿ... ಇವೆಲ್ಲವುಗಳಲ್ಲೂ ಯುವಮನವಿದೆ. ಈ ಯುವಮಂತ್ರವನ್ನೇ ಮಾರುಕಟ್ಟೆ ಅಳವಡಿಸಿಕೊಂಡಿದೆ. ಅದು ಒಡ್ಡುವ ಪ್ರಲೋಭನೆಗೆ ಯುವಕರದ್ದು ಸಹಜ ಪ್ರಚೋದನೆ, ಸ್ಪಂದನ.

ಕನ್ನಡ ಸಿನಿಮಾ ನಿರ್ದೇಶಕ ಯೋಗರಾಜ ಭಟ್ಟರು ‘ಮುಂಗಾರು ಮಳೆ’ ಸಿನಿಮಾ ಮಾಡಿದ್ದಾಗ ಅದನ್ನು ನೋಡಿ ಕೊಂಡಾಡಿದ್ದ ಪ್ರೇಕ್ಷಕರಲ್ಲಿ ಎಷ್ಟೋ ಜನ ಈಗ ಸಿನಿಮಾ ನೋಡುವುದನ್ನೇ ಬಿಟ್ಟಿದ್ದಾರೆ. ಹಾಗೆಂದು ಅವರೇ ಒಮ್ಮೆ ಹೇಳಿಕೊಂಡಿದ್ದರು. ಅದಕ್ಕೇ ಈಗ ಅವರಿಗೆ ಹೊಸ ತಲೆಮಾರನ್ನು ನೋಡಿಸುವ ಸಿನಿಮಾ ಮಾಡಬೇಕಾದದ್ದು ಮುಖ್ಯವಾಗಿಬಿಟ್ಟಿದೆ. ಅದಕ್ಕಾಗೇ ವರ್ಷಗಳಿಂದ ಒಂಥರಾ ಹೆಣಗಾಟ. ಅದು ಎಲ್ಲರ ಪಾಲಿನ ಸತ್ಯ.

‘ಹೀಗೂ ಉಂಟು’ ತಲೆಮಾರುಗಳು...

1982ರಿಂದ ಈಚೆಗೆ ಜನಿಸಿದವರೆಲ್ಲರನ್ನು ‘ವೈ’ ಜನರೇಷನ್ ಎನ್ನುತ್ತಾರೆ. ಹಾಗಿದ್ದರೆ ‘ಎಕ್ಸ್‌’ ಅಥವಾ ‘ಝಡ್’ ಜನರೇಷನ್‌ ಎಂದರೆ ಯಾರೆಂಬ ಪ್ರಶ್ನೆ ಉದ್ಭವವಾಗುತ್ತದೆ. 20ನೇ ಶತಮಾನದ ಮೊದಲ ಭಾಗದಲ್ಲಿ ಹುಟ್ಟಿದವರಿಂದ ಹಿಡಿದು, ಈ ಶತಮಾನದಲ್ಲಿ ಹುಟ್ಟಿದವರವರೆಗೆ ವಿವಿಧ ಪೀಳಿಗೆಗಳೆಂದು ವಿಂಗಡಿಸಲಾಗಿದೆ.

1901ರಿಂದ 1924ರವರೆಗೆ ಹುಟ್ಟಿದವರು ‘ಗ್ರೇಟೆಸ್ಟ್‌ ಜನರೇಷನ್’. ಇವರೆಲ್ಲಾ ಎರಡನೇ ಮಹಾಯುದ್ಧದ ಕಾಲದಲ್ಲಿ ಯುವಕರಾಗಿದ್ದವರು. 1925ರಿಂದ 1945ರವರೆಗೆ ಹುಟ್ಟಿದವರು ‘ಸೈಲೆಂಟ್‌ ಜನರೇಷನ್‌’ಗೆ ಸೇರಿದವರು. ತಮ್ಮಷ್ಟಕ್ಕೆ ತಾವು ಶಾಂತಚಿತ್ತದಿಂದ ಇದ್ದು, ತುತ್ತಿನಚೀಲ ತುಂಬಿಸಿಕೊಂಡ ಪೀಳಿಗೆ ಇದೆನ್ನುವುದು ವ್ಯಾಖ್ಯೆ. 1946ರಿಂದ 1964ರವರೆಗೆ ಜನಿಸಿದ ಜನರನ್ನು ‘ಬೇಬಿ ಬೂಮರ್ಸ್’ ಅರ್ಥಾತ್ ಹೆಚ್ಚು ಮಕ್ಕಳನ್ನು ಹೆತ್ತು–ಹೊತ್ತವರು ಎಂದು ವ್ಯಂಗ್ಯ ಬೆರೆಸಿದ ದಾಟಿಯಲ್ಲಿ ಕರೆಯುತ್ತಾರೆ. 1965ರಿಂದ 1982ರವರೆಗೆ ಹುಟ್ಟಿದವರೇ ‘ಎಕ್ಸ್‌’ ಜನರೇಷನ್‌ನವರು. 1995ರ ನಂತರ ಹುಟ್ಟಿದವರನ್ನು ‘ಝಡ್’ ಜನರೇಷನ್‌ಗೆ ಸೇರಿಸಿದ್ದಾರೆ.

1991ರಲ್ಲಿ ಕೆನಡಾದ ಬರಹಗಾರ ಡೌಗ್ಲಾಸ್‌ ಕೂಪ್‌ಲ್ಯಾಂಡ್‌ ‘ಜನರೇಷನ್‌ ಎಕ್ಸ್‌: ಟೇಲ್ಸ್‌ ಫಾರ್‌ ಎನ್‌ ಆ್ಯಕ್ಸಲರೇಟೆಡ್‌ ಕಲ್ಚರ್‌’ ಎಂಬ ಕೃತಿ ಪ್ರಕಟಿಸಿದ ಮೇಲೆ ‘ಎಕ್ಸ್‌’ ತಲೆಮಾರಿಗೆ ಈಗಿನ ವ್ಯಾಖ್ಯಾನ ಸಿಕ್ಕಿತಷ್ಟೆ. ‘ವೈ’ ಜನರೇಷನ್‌ ಕುರಿತು ಅವರ ಹಿರಿಯರಾದ ‘ಎಕ್ಸ್‌’ ಜನರಿಗೆ ಮೊದಲಿನಿಂದಲೂ ತಕರಾರು. ಅವರ ರೀತಿ–ರಿವಾಜು, ಬದುಕುವ ಕ್ರಮ, ಚೆಲ್ಲಾಪಿಲ್ಲಿ ಚಿಂತನೆಗಳು, ಬಹು ಚಟುವಟಿಕೆಯ ಬಗೆಗೆ ಟೀಕೆಗಳು ಸಾಮಾನ್ಯ. ವ್ಯಂಗ್ಯವೆಂದರೆ, ಇಂಥ ಟೀಕೆಗಳು ಏನೇ ಇದ್ದರೂ ಇದೇ ‘ಎಕ್ಸ್‌’ ಜನರೇಷನ್‌ನ ಉದ್ಯಮಪತಿಗಳು ಉಳಿದೆರಡು ತಲೆಮಾರುಗಳ ಪಡ್ಡೆಗಳಿಗೇ ಗಾಳ ಹಾಕಬೇಕಿದೆ.

ವಿರಾಟ್‌ ಕೊಹ್ಲಿಗಿಂತ ಹದಿನೈದು ವರ್ಷ ಮುಂಚೆ ಹುಟ್ಟಿ, ಆತನಿಗೆ ಒಂದು ವರ್ಷ ತುಂಬಿದ್ದ ಹೊತ್ತಿಗೆ ಮೊದಲ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯ ಆಡಿದ ಸಚಿನ್ ತೆಂಡೂಲ್ಕರ್‌ ಗೊತ್ತಲ್ಲವೇ? ಇದೇ ಕೊಹ್ಲಿ ತಾವು ಆರಾಧಿಸಿದ ಕ್ರಿಕೆಟಿಗನನ್ನು ವಿಶ್ವಕಪ್‌ ಗೆದ್ದಾಗ ಭುಜದ ಮೇಲೆ ಕೂರಿಸಿಕೊಂಡು ಮೆರೆಸಿದ್ದನ್ನು ಮರೆಯಲಾದೀತೆ. ಸಚಿನ್‌ ಕೂಡ ಕಪಿಲ್‌ ದೇವ್‌ ಬೌಲಿಂಗ್‌ನಲ್ಲಿ ಮೊದಲ ಸಲ ನೆಟ್ಸ್‌ನಲ್ಲಿ ಆಡಿದಾಗ ಪುಲಕಗೊಂಡಿದ್ದವರು. ‘ಎಕ್ಸ್‌’, ‘ವೈ’ ಎರಡೂ ಜನರೇಷನ್‌ಗಳು ಹೇಗೆ ಕ್ರಿಕೆಟ್‌ ಚರಿತ್ರೆಯ ಪ್ರಭಾವಳಿಯಲ್ಲಿ ಕಣ್ಣುಕೋರೈಸಿದ್ದವು ಎನ್ನುವುದಕ್ಕೆ ಇದೊಂದು ದೃಷ್ಟಾಂತ.

ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ಗೂ ಗ್ರೀಸ್‌ನ ಸ್ಟೆಫನೋಸ್‌ ಸಿಸಿಪಸ್‌ಗೂ ಹದಿನೇಳು ವರ್ಷ ವಯಸ್ಸಿನ ಅಂತರ. ಮೊನ್ನೆ ಮೊನ್ನೆ ಇಬ್ಬರೂ ಆಸ್ಟ್ರೇಲಿಯಾ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಆಡತೊಡಗಿದಾಗ ‘ಅತಿ ಹಿರಿಯ ವರ್ಸಸ್’ ಅತಿ ಕಿರಿಯ ಸೆಣೆಸಿದಂತಾಯಿತು. ಮೂರನೇ ಗ್ರ್ಯಾನ್‌ ಸ್ಲ್ಯಾಮ್ ಟೆನಿಸ್‌ ಪ್ರಶಸ್ತಿ ಗೆಲ್ಲುವ ಕನಸನ್ನು ಕಣ್ಣಲ್ಲಿ ಮಡಚಿಟ್ಟುಕೊಂಡು ಬಂದಿದ್ದ ಫೆಡರರ್‌, ಹೊಸ ಹುಡುಗನ ಎದುರು ಮಂಡಿಯೂರಿದರು. ‘ಭಲೇ...ಈ ರಾತ್ರಿ ನೀನು ಹಸನಾಗಿ ಆಡಿದೆ’ ಎಂದು ಬೆನ್ನುತಟ್ಟಿ ತಣ್ಣಗೆ ಹೋದರು. ಸ್ಟೆಫನೋಸ್‌ ಬರೀ ಟೆನಿಸ್‌ ಆಡುವುದಿಲ್ಲ. ಅವನಿಗೆ ಅಡುಗೆ ಮಾಡಲು ಗೊತ್ತು. ಪ್ರವಾಸ ಹವ್ಯಾಸ. ಕೈಯಲ್ಲಿ ಸದಾ ಪುಟಾಣಿ ವಿಡಿಯೊ ಕ್ಯಾಮೆರಾ ಇರುತ್ತದೆ. ಜನಕಥನಗಳನ್ನು ಚಿತ್ರೀಕರಿಸಿ ತನ್ನದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡುವ ಹುರುಪಿನ ಹುಡುಗ. ಅಲ್ಲಿ ಎಷ್ಟು ಜನ ಇಷ್ಟಪಟ್ಟರು, ಎಂತೆಂಥ ಕಮೆಂಟ್‌ಗಳು ಬಂದವು ಎನ್ನುವುದರ ಉಸಾಬರಿಯೂ ಅವನಿಗೆ. ಅಷ್ಟೇ ಏಕೆ, ಟೆನಿಸ್‌ ಅಂಕಣದಲ್ಲಿ ನಿಂತೇ ‘ನನ್ನ ಯೂಟ್ಯೂಬ್‌ ಚಾನೆಲ್‌ಗೆ ಯಾರು ಯಾರು ಸಬ್‌ಸ್ಕ್ರೈಬ್ ಆಗಿಲ್ಲವೋ ಬೇಗ ಆಗಿ’ ಎಂದು ಕೋರಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡ. ಫೆಡರರ್‌ ಇನ್ನೊಂದು ವರ್ಷ ತಡವಾಗಿ ಹುಟ್ಟಿದ್ದಿದ್ದರೆ ಅವರೂ ಮಿಲೇನಿಯಲ್‌ಗಳ ಪಟ್ಟಿ ಸೇರುತ್ತಿದ್ದರು. ‘ಎಕ್ಸ್‌’, ‘ವೈ’ ಎರಡೂ ಜನರೇಷನ್‌ಗಳು ಹೇಗೆ ಟೆನಿಸ್‌ ಚರಿತ್ರೆಯ ಪ್ರಭಾವಳಿಯಲ್ಲಿ ಮನಗೆದ್ದವು ಎನ್ನುವುದಕ್ಕೆ ಇದು ಇನ್ನೊಂದು ದೃಷ್ಟಾಂತ.

ನಮ್ಮ ಕಾಲದಲ್ಲಿ ಹಾಗಿತ್ತು... ನಿಮ್ಮ ಕಾಲ ನೋಡಿ...

ಹಿರಿಯರು, ಮೇಲಧಿಕಾರಿಗಳು ಹೀಗೆ ನಾಸ್ಟಾಲ್ಜಿಕ್‌ ಆಗಿ ಹೇಳುವುದನ್ನು ತಲೆಮಾರುಗಳು ಕೇಳಿಕೊಂಡೇ ಬಂದಿವೆ. ಆದರೆ, ಮಿಲೇನಿಯಲ್‌ಗಳು ಇಂಥ ಮಾತುಗಳನ್ನು ಶಾಂತಚಿತ್ತದಿಂದ ಕೇಳುವುದು ಕಡಿಮೆ. ನಡುವೆಯೇ ಬಾಯಿ ಹಾಕುತ್ತಾರೆ. ಪ್ರಶ್ನಿಸುತ್ತಾರೆ. ಕೆಣಕುತ್ತಾರೆ. ಅದು ಹಿರಿಯರಿಗೆ ಕಿರಿಕಿರಿ. ನಮ್ಮ ದೇಶದ ಮಟ್ಟಿಗೆ ಅರ್ಧಂಬರ್ಧ ಕೇಳಿಸಿಕೊಂಡು, ಗೋಣು ಆಡಿಸುತ್ತಾ ನಟಿಸುವವರನ್ನು ಹೆಚ್ಚಾಗಿ ಕಾಣಬಹುದು.

ಇನ್ನು ಕೆಲವರು ತಮ್ಮಷ್ಟಕ್ಕೆ ತಾವು ಮೊಬೈಲ್ ಫೋನ್‌ನಲ್ಲಿ ಮೇಸೇಜ್ ಮಾಡುತ್ತಾ ಕೂರುತ್ತಾರೆ. ಸೈದ್ಧಾಂತಿಕ ಕೊರೆತದಿಂದ ಮುಕ್ತಿಮಾರ್ಗದಂತೆ ಅದು ಅವರಿಗೆ ಕಾಣಬಹುದೋ ಏನೋ? ನೆಂಚಿಕೆಗೆ ‘ಫೇಸ್‌ಬುಕ್‌’ ಕೂಡ ಇದೆ. ಮಿಲೇನಿಯಲ್‌ಗಳ ಮನಸ್ಥಿತಿ ದೇಶದಿಂದ ದೇಶಕ್ಕೆ ಭಿನ್ನವಾಗಿದ್ದರೂ ಹಳಹಳಿಕೆಯ ವಿಷಯದಲ್ಲಿ ಎಲ್ಲೆಡೆಯೂ ಸಮಾತನೆ ಇದೆ.

ತಮ್ಮನ್ನು ತಾವು ಸಕಲ ಕಲಾವಲ್ಲಭರೆಂದೇ ನಂಬಿಕೊಂಡ ಮಿಲೇನಿಯಲ್‌ಗಳ ಮನಸ್ಸನ್ನು ಸ್ಥಿಮಿತದಲ್ಲಿಡಲು ಬಹುತೇಕ ಅಭಿವೃದ್ಧಿ ಹೊಂದಿದ ದೇಶಗಳ ಮಾನವ ಸಂಪನ್ಮೂಲ ವಿಭಾಗಗಳೂ ತಲೆಕೆಡಿಸಿಕೊಂಡಿವೆ. ‘ಸೋಷಿಯಲ್ ಜನರೇಷನ್’ ಎಂದು ಕರೆಸಿಕೊಳ್ಳುವ ಈ ಪೀಳಿಗೆ ಸಾಮಾಜಿಕ ಜಾಲಗಳನ್ನು ನೋಡುತ್ತಲೇ ತಮ್ಮ ಹರೆಯ ಕಳೆದವರು. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ಮೊದಲಾದ ಸಾಮಾಜಿಕ ಜಾಲತಾಣಗಳನ್ನು ವಿಪರೀತ ಹಚ್ಚಿಕೊಂಡ ಇವರಲ್ಲಿ ನಗರ ಪ್ರದೇಶಗಳ ಜನರೇ ಹೆಚ್ಚು. ಅಂಥವರಿಗೆ ಹಳ್ಳಿ ಬದುಕೆಂದರೆ ಅಷ್ಟಕ್ಕಷ್ಟೆ. ವ್ಯೋಮಲೋಕದ ಕಾಣದ ಸ್ನೇಹಿತ–ಸ್ನೇಹಿತೆಯರ ಜತೆ ಸಂವಾದದಲ್ಲಿ ಮೈಮರೆಯುವ ಇವರಲ್ಲಿ ಎಷ್ಟೋ ಮಂದಿಗೆ ಭೌತಿಕ ಭಾವುಕ ಚರ್ಚೆಗಳು ಇಷ್ಟವಾಗದು. ಇವರ ಮನಸ್ಸಿನ ಹಂಬಲವೂ ಕಾಣದ ಕಡಲೇ ಹೌದು.

ಇವರು ಹೀಗೇಕೆ..

ಅಮೆರಿಕದ ದಕ್ಷಿಣ ಕೆರೊಲಿನಾದ ಚಾರ್ಲ್ಸ್‌ಟನ್‌ ರಿಯಲ್ ಎಸ್ಟೇಟ್ ಕಂಪನಿ ಸೇರಿದ ಸ್ಟೀವನ್ ಕ್ಲಾರ್ಕ್ ಎಂಬ ಯುವಕ 2014ರಲ್ಲಿ ಹೀಗೆಂದಿದ್ದ: ‘ಮುಂದಿನ ವರ್ಷದೊಳಗೆ ನಮ್ಮ ಕಂಪನಿ ಕೋಟಿಗಟ್ಟಲೆ ಡಾಲರ್ ಲಾಭ ಮಾಡಲಿದೆ’. ಕಚೇರಿಯ ಸಭೆಯಲ್ಲಿ ಅವನ ಮಾತು ಕೇಳಿ ‘ಬೇಬಿ ಬೂಮರ್ಸ್’ ಒಂದು ಕ್ಷಣ ಅವಾಕ್ಕಾಗಿದ್ದರು. ಕ್ಲಾರ್ಕ್‌ನ ಓರಗೆಯವರಿಗೆ ಅಚ್ಚರಿಯೇನೂ ಆಗಿರಲಿಲ್ಲ. ಅವರು ಹಣ ಮಾಡಿದರೂ ಮಾಡಬಹುದು ಎಂಬ ನಿರೀಕ್ಷೆಯ ನೋಟವನ್ನಷ್ಟೇ ಬೀರಿದ್ದರು. ಅಮೆರಿಕದಲ್ಲಿ ಮಿಲೇನಿಯಲ್‌ಗಳ ಸಂಖ್ಯೆ ಏಳೂವರೆ ಕೋಟಿಗೂ ಹೆಚ್ಚು. ‘ಬೇಬಿ ಬೂಮರ್ಸ್’ ಸುಮಾರು 7 ಕೋಟಿ 90 ಲಕ್ಷ. ಐದು ಕೋಟಿ ಚಿಲ್ಲರೆ ಇರುವ ‘ಎಕ್ಸ್’ ಜನರೇಷನ್‌ನವರಿಗೆ ಕ್ಲಾರ್ಕ್ ಆಡಿದಂಥ ಮಾತು ಸವಾಲಾಗಿ ಕೇಳಿಸಿರುತ್ತದೆ. ಬಿಸಿರಕ್ತದ ಈ ಹುಡುಗರು ‘ಅಷ್ಟು ಲಾಭ ತರಬಹುದು, ಇಷ್ಟು ಲಾಭ ತರಬಹುದು’ ಎಂದು ಮುನ್ನುಗ್ಗಿದರೆ, ವಯಸ್ಸಾಗುತ್ತಾ ಇರುವ ತಾವು ಹಿಂದುಳಿಯಬೇಕಾದೀತಲ್ಲ ಎನ್ನುವ ಆತಂಕ ಅವರದ್ದು.

‘ಎಚ್ಆರ್4ಚೇಂಜ್’ ಎಂಬ ಅಮೆರಿಕದ ಕಂಪನಿಯ ಸಂಸ್ಥಾಪಕ ಟೋನಿ ದೇಬ್ಲಾ, ‘ಮೂರೂ ತಲೆಮಾರುಗಳು ಒಟ್ಟಿಗೆ ಕೆಲಸ ಮಾಡುತ್ತಿರುವುದನ್ನು ನಾವು ಈಗಷ್ಟೇ ನೋಡುತ್ತಿದ್ದೇವೆ. ಸಿದ್ಧಾಂತಗಳ ತಾಕಲಾಟ ಇಂಥ ಸಂದರ್ಭದಲ್ಲಿ ಹೆಚ್ಚು. ಇದರಿಂದಾಗಿ ಕಚೇರಿಗಳಲ್ಲಿ ಗೊಂದಲ ಮೂಡುವ ಸಾಧ್ಯತೆ ಹೆಚ್ಚು’ ಎಂದು ಸಿಲಿಕಾನ್ ಸಿಟಿಯಲ್ಲಿನ ತಮ್ಮ ಕಂಪನಿಯ ಭವಿಷ್ಯದ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದರು.

ಕ್ಲಾರ್ಕ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜೇಫ್ರಿ ಜೆನ್ಸನ್ ಆರ್ನೆಟ್ ‘ವೆನ್ ವಿಲ್ ಮೈ ಗ್ರೋನ್-ಅಪ್ ಕಿಡ್ ಗ್ರೋ ಅಪ್’ ಎಂಬ ಮಜವಾದ ಶೀರ್ಷಿಕೆಯ ಪುಸ್ತಕ ಬರೆದರು. ಮಿಲೇನಿಯಲ್‌ಗಳ ಕುರಿತು ಉಳಿದೆರಡು ಪೀಳಿಗೆಯವರಿಗೆ ವಿಪರೀತ ಅಸಹನೆ ಇದೆ ಎಂದು ಸಂಶೋಧನೆ ನಡೆಸಿಯೇ ಅವರು ಆ ಕೃತಿಯನ್ನು ಬರೆದಿದ್ದರು. ಮಾಧ್ಯಮಗಳು ಕೂಡ ಹೊಸ ಸಹಸ್ರಮಾನದ ಪೀಳಿಗೆಯ ಅಪದ್ಧ ಮನಸ್ಥಿತಿಯನ್ನು ಕೆಂದ್ರೀಕರಿಸಿಯೇ ಹೆಚ್ಚು ಲೇಖನಗಳನ್ನು ಪ್ರಕಟಿಸಿರುವುದಾಗಿಯೂ ಅವರು ಉಲ್ಲೇಖಿಸಿದ್ದರು.

‘ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಷಿಯಲ್ ಸೈಕಾಲಜಿ’ ನಾಲ್ಕು ವರ್ಷಗಳ ಹಿಂದೆಯೇ ಅಮೆರಿಕದ ಹೈಸ್ಕೂಲುಗಳ 90 ಲಕ್ಷ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿತ್ತು. ಮಿಲೇನಿಯಲ್‌ಗಳಲ್ಲಿ ಬಹುಪಾಲು ಲೋಲುಪರು, ರಾಜಕೀಯವಾಗಿ ತೊಡಗಿಕೊಳ್ಳದವರು, ಉಳಿದವರಿಗೆ ಸಹಾಯ ಮಾಡುವ ಬಗೆಗೆ ಎಳ್ಳಷ್ಟೂ ಯೋಚಿಸದವರು ಎಂಬ ಅಭಿಪ್ರಾಯಗಳನ್ನು ಅದು ಸಮೀಕ್ಷಾ ವರದಿಯಲ್ಲಿ ಪ್ರಕಟಿಸಿತ್ತು. ಬೇಬಿ ಬೂಮರ್ಸ್ ಹಾಗೂ ‘ಎಕ್ಸ್’ ಪೀಳಿಗೆಯವರು ಹೊಸ ಪೀಳಿಗೆಯ ವಯಸ್ಸಿನಲ್ಲಿ ಇದ್ದಾಗ ಈ ರೀತಿ ಯೋಚಿಸದೇ ಇರಲು ತಾವು ಅನುಭವಿಸಿದ ಸಾಮಾಜಿಕ ಕಷ್ಟಗಳೂ ಕಾರಣವಾಗಿದ್ದವು ಎಂದಿತ್ತು. ಇದು ಬಹುತೇಕ ದೇಶಗಳ ಮಟ್ಟಿಗೆ ಮೇಲುನೋಟಕ್ಕೆ ಸತ್ಯವೆನ್ನಿಸಬಹುದು.

ಟ್ವೆಂಜ್ ಎಂಬ ಮಹಿಳೆ ಕೂಡ ಕಾಲೇಜು ವಿದ್ಯಾರ್ಥಿಗಳನ್ನು ಒಂದು ಸಮೀಕ್ಷೆಗೆ ಒಳಪಡಿಸಿದ್ದರು. ಕೆಲವು ಸಿದ್ಧ ಪ್ರಶ್ನೆಗಳನ್ನು ನೀಡಿ ಉತ್ತರಿಸುವಂತೆ ಕೇಳಿಕೊಂಡಿದ್ದರು. ಒಂದು ವಸ್ತುವಿಷಯ ಕೊಟ್ಟು ಸಣ್ಣದೊಂದು ಪ್ರಬಂಧ ಬರೆಯಲು ಸೂಚಿಸಿದ್ದರು. ‘ಆತ್ಮವಿಶ್ವಾಸ, ಧಾರ್ಷ್ಟ್ಯದಲ್ಲಿ ಸದಾ ಮುಂದೆನಿಸುವ ಈ ಪೀಳಿಗೆ ಆಂತರಿಕವಾಗಿ ದುಃಖಾರ್ತವಾಗಿದೆ’ ಎಂಬ ಕುತೂಹಲಕಾರಿ ಅಂಶವನ್ನು ಅವರು ತಿಳಿಸಿದ್ದರು. ಅಷ್ಟೇ ಅಲ್ಲದೆ, ಸಿಂಹಪಾಲು ವಿದ್ಯಾರ್ಥಿಗಳ ಪ್ರಬಂಧಗಳು ‘ನಾನು’, ‘ನನ್ನದು’ ಎಂಬ ಸ್ವಾರ್ಥಚಿಂತನೆಗಳಿಂದಲೇ ಕೂಡಿದ್ದವೆಂದೂ ಹೇಳಿದ್ದರು.

ಅಮೆರಿಕದ ಡಲ್ಲಾಸ್‌ನ ಮನೋವಿಜ್ಞಾನಿ ಶೆರ್ರಿ ಬಫಿಂಗ್ ಟನ್ ‘ಎಕ್ಸಿಟಿಂಗ್ ಓಜ್’ ಎಂಬ ಕೃತಿಯ ಸಹ ಲೇಖಕರೂ ಹೌದು. ಹೊಸ ಪೀಳಿಗೆಯ ಕಡಿಮೆ ವೃತ್ತಿಪರತೆ, ಮುಕ್ಕಾದ ಸೃಜನಶೀಲತೆ, ಒಳನೋಟಗಳಿಲ್ಲದ ಮಾತುಕತೆ, ಸಮಸ್ಯೆ ಉದ್ಭವಿಸಿದಾಗ ಪರಿಹರಿಸುವ ದಾರಿ ಹುಡುಕದ ಮನಸ್ಥಿತಿ ಇವೆಲ್ಲವುಗಳನ್ನು ಕೇಂದ್ರೀಕರಿಸಿ ಅವರು ಕಂಪನಿಗಳ ಮಾನವ ಸಂಪನ್ಮೂಲ ವಿಭಾಗಗಳಿಗೇ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರಚಿಸಿಕೊಟ್ಟಿದ್ದರು. ಇದಕ್ಕಾಗಿ ಅವರು 400 ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರ ಜತೆ ಚರ್ಚಿಸಿದ್ದರು. ‘ಬಹುತೇಕ ಕಂಪನಿಗಳ ವ್ಯವಸ್ಥಾಪಕರಿಗೆ ಮೂರು ತಲೆಮಾರುಗಳ ನೌಕರರ ನಡುವೆ ಸಮನ್ವಯತೆ ಸಾಧಿಸುವುದು ಹೇಗೆ ಎನ್ನುವುದರ ಅರಿವೇ ಇಲ್ಲದಾಗಿದೆ’ ಎಂದು ಅವರು ಹೇಳಿದ್ದನ್ನು ಅಮೆರಿಕದ ಬಹುತೇಕ ಕಂಪನಿಗಳು ಒಪ್ಪಿಕೊಂಡಿದ್ದವು. ಆದರೆ, ‘ಐಡಿಯಾಪೇಂಟ್’ ಎಂಬ ಕಂಪನಿಯ ವಾಣಿಜ್ಯ ವ್ಯವಹಾರಗಳ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಜೆಫ್ ಅವಲಾನ್ ‘ಈ ಎಲ್ಲ ಅಭಿಪ್ರಾಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ’ ಎಂದು ಕಿವಿಮಾತು ಹೇಳಿದ್ದರು. ‘ಪ್ರತಿ ಪೀಳಿಗೆಯವರಿಗೂ ಸಾಮಾನ್ಯವಾದ ಕೆಲವು ಮಾನವ ಅಗತ್ಯಗಳಿರುತ್ತವೆ. ಅವು ಪೀಳಿಗೆಯಿಂದ ಪೀಳಿಗೆಗೆ ಬದಲಾಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಷ್ಟೆ. ಸಮೂಹ, ಸಂವಹನ, ಜೀವನಶೈಲಿ ಇವೆಲ್ಲವನ್ನೂ ಅವು ನಿಯಂತ್ರಿಸುತ್ತಾ ಹೋಗುತ್ತವೆ. ಒಂದು ಪೀಳಿಗೆಯವರಿಗೆ ಅಗತ್ಯ ಎನ್ನಿಸದೇ ಹೋದದ್ದನ್ನು ಈ ಪೀಳಿಗೆಯವರಿಗೆ ಜರೂರು ಎನಿಸಿದರೆ ಅವರು ವೈಯಕ್ತಿಕ ಸಮಸ್ಯೆ ಅಲ್ಲ. ಅದನ್ನು ಸಮಾಜವೇ ಈಡೇರಿಸಬೇಕಾಗುತ್ತದೆ ಅಥವಾ ಈಡೇರಿಸಿಕೊಳ್ಳುವ ದಾರಿಯನ್ನು ಪೀಳಿಗೆಯೇ ಹುಡುಕತೊಡಗುತ್ತದೆ’ ಎನ್ನುವುದು ಅವರ ವಾದ.

ಮಿಲೇನಿಯಲ್‌ಗಳು ಜಾಗತಿಕವಾಗಿ ಕನೆಕ್ಟ್ ಆಗಿರುವವರು. ಚತುರಮತಿಗಳು. ಚುರುಕು. ಸಾಮಾಜಿಕ ತಾಣಗಳ ಮೂಲಕವೇ ಹೊಸತನ್ನು ಮನಸ್ಸಿಗಿಳಿಸಿಕೊಳ್ಳುವವರು. ತಂತ್ರಜ್ಞಾನದ ಹಸಿವು ಅವರಿಗೆ ಜಾಸ್ತಿ. ಥಟ್ಟನೆ ಯೋಚಿಸಿ, ಕಾರ್ಯರೂಪಕ್ಕೂ ತರಬಲ್ಲ ನಿಷ್ಣಾತರು. ಹೊಸ ವಾಣಿಜ್ಯ–ವ್ಯಾಪಾರ ವ್ಯವಸ್ಥೆಯಲ್ಲಿ ಏಗಲು ಇಂಥ ಎಲ್ಲ ಗುಣಗಳು ಬೇಕಿರುವುದರಿಂದ ಮಿಲೇನಿಯಲ್‌ಗಳು ಮಾನವ ಸಂಪನ್ಮೂಲವಾಗಿ ಸರಿಯಾಗಿ ಇದ್ದರೆಂದೇ ಅರ್ಥ ಎಂದು ಜೆಫ್ ಅವಲಾನ್ ಉದಾಹರಣೆಗಳ ಸಮೇತ ಬಣ್ಣಿಸಿದ್ದರು.

‘ಹೊಸ ಪೀಳಿಗೆಯ ಸ್ಮಾರ್ಟ್ ಫೋನ್ ಮೋಹವನ್ನು ವಿರೋಧಿಸುವ ಸಂಪ್ರದಾಯಸ್ಥರು, ತಂತ್ರಜ್ಞಾನದ ಪದರಗಳಲ್ಲಿ ಹುದುಗಿರುವ ಅವಕಾಶಗಳ ಇನ್ನೊಂದು ಮುಖದ ಕುರಿತು ಯೋಚಿಸುವುದಿಲ್ಲ. ಅದಕ್ಕೇ ಬರೀ ಟೀಕೆಗಳು, ಬುದ್ಧಿಮಾತುಗಳಿಗೇ ಸಂವಾದಗಳನ್ನು ಹಿರಿಯರು ಮುಗಿಸಿಬಿಡುವ ಸಾಧ್ಯತೆ ಹೆಚ್ಚು’ ಎಂದು ಬಫಿಂಗ್ಟನ್ ಎಂಬ ಮನೋವಿಜ್ಞಾನಿ ಹೇಳಿದ್ದನ್ನೂ ಅನೇಕರು ಒಪ್ಪಿದ್ದರು.

ಕಂಪನಿಗಳಲ್ಲಿ ಎರಡು ಪೀಳಿಗೆಗಳ ನಡುವಿನ ಮನೋತಿಕ್ಕಾಟಕ್ಕೆ ಕೆಲವು ಉದಾಹರಣೆಗಳನ್ನು ಹೀಗೆ ನೋಡಬಹುದು:

ಎಲ್ಲಕ್ಕೂ ಪ್ರತಿಕ್ರಿಯೆ ಬಯಸುವುದು ಹೊಸ ಪೀಳಿಗೆ. ಅದು ಸೂಪರ್‌ವೈಸರ್‌ಗಳಿಗೆ ಕಿರಿಕಿರಿಯ ವಿಷಯ. ತಂತ್ರಜ್ಞಾನ ಅಳವಡಿಕೆಯಲ್ಲಿನ ಹೊಸಬರ ವೇಗ ಹಳಬರ ದೃಷ್ಟಿಯಲ್ಲಿ ಬೇಗ ಬಡ್ತಿ ಪಡೆಯುವ ಹುನ್ನಾರ. ‘ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕೆಲಸ ಮಾಡಲು ಇಷ್ಟವಿಲ್ಲ’ ಎಂಬ ಧೋರಣೆ ಹಳಬರ ನೋಟದಲ್ಲಿ ಅಶಿಸ್ತು, ದೀರ್ಘ ಕಾಲ ಗಮನಕೇಂದ್ರೀಕರಿಸಲಾಗದ ಮನಸ್ಥಿತಿ. ಬಿಡುವೇ ಇಲ್ಲದಂತೆ ಕೆಲಸದಲ್ಲಿ ತೊಡಗಿಕೊಳ್ಳುವುದನ್ನೂ ಹಳೆಯ ತಲೆಮಾರು ಸಹಿಸಿಕೊಳ್ಳುವುದಿಲ್ಲ. ಅದು ಅವರಿಗೆ ಅಶಾಂತ, ಉದ್ಧಟತನದ ವರ್ತನೆಯಾಗಿ ಕಾಣುತ್ತಿರುತ್ತದೆ. ಮಿಲೇನಿಯಲ್‌ಗಳು ಸ್ವ-ಪ್ರಚಾರ ಎಂದು ಹೇಳಿಕೊಂಡರೆ, ಹಿರಿಯರು ಆತ್ಮರತಿ ಎಂದು ಜರೆಯುತ್ತಾರೆ.

ಇಷ್ಟೆಲ್ಲ ಟೀಕೆ-ಟಿಪ್ಪಣಿಗಳ ಹೊರತಾಗಿಯೂ ‘ಡೀಕೋಂಡಿಂಗ್ ಮಿಲೇನಿಯಲ್ ಕನ್ಸ್ಯೂಮರ್’ ಎಂದು ಎಲ್ಲ ಕಂಪನಿಗಳು ಸಭೆಗಳನ್ನು ನಡೆಸುವುದರಲ್ಲೇ ಹೊಸತಲೆಮಾರಿನ ಶಕ್ತಿ ಎಂಥದೆನ್ನುವುದು ಅಡಗಿದೆ, ಅಲ್ಲವೇ?

******

‘ಹೊಸ ಸಹಸ್ರಮಾನಿಗಳಲ್ಲಿ ಇರುವ ಮಿತಿಗಳನ್ನೆಲ್ಲ ದಾಟಿ ಇನ್ನೇನೋ ಹೊಸತನ್ನು ಮಾಡುವವರ ಸಂಖ್ಯೆ ನಮ್ಮ ದೇಶದಲ್ಲಿ ತುಂಬಾ ಕಡಿಮೆ’ ಎನ್ನುತ್ತಲೇ ಮನೋವಿಜ್ಞಾನಿ ಹಾಗೂ ಸಲಹೆಗಾರ ಡಾ. ಎಂ. ಶ್ರೀಧರಮೂರ್ತಿ ತಾವು ಗಮನಿಸಿದ್ದನ್ನು ಹಂಚಿಕೊಳ್ಳಲಾರಂಭಿಸಿದರು. ಅವರ ಮಾತು ಹೀಗೆ ಮುಂದುವರಿಯಿತು: ‘ಧೈರ್ಯ ಇರುವ, ಐಷಾರಾಮ ಕಂಡುಂಡೇ ಬೆಳೆದ ಈ ಮಕ್ಕಳು ಮಾರುಕಟ್ಟೆ ಪ್ರಣೀತರು. ಹಿಂದಿನವರಂತೆ ನಾಚಿಕೆ, ಬಿಗುಮಾನಗಳಿಲ್ಲ. ಬಯಕೆ ತೋಟದ ಬೇಲಿ ಜಿಗಿಯಲು ಹವಣಿಸುವ ಮನಸ್ಸು ಅವರದ್ದು. ಅತಿ ವೇಗ. ಎಲ್ಲವೂ ಅಪ್ರಸ್ತುತ ಎನ್ನಿಸುವ ಸ್ಥಿತಿಯನ್ನೂ ಹೆಚ್ಚೇ ಲಗುಬಗೆಯಲ್ಲಿ ಮುಟ್ಟಿಬಿಡುತ್ತಾರೆ. ಸ್ವರತಿ ಅಥವಾ ಆತ್ಮರತಿ ಅಂಥವರಲ್ಲಿ ಸಹಜ. ಆದರೆ, ಅವರು ಹಿಪಾಕ್ರೆಟ್ಸ್‌ ಅಲ್ಲ. ಆಶಾವಾದ, ಆತ್ಮಬಲ ಕಡಿಮೆ. ಭವಿಷ್ಯದ ನಂಬಿಕೆ ವಿಷಯ ಬಂದಾಗ ನಿಂತಲ್ಲೇ ನಿಂತುಬಿಟ್ಟಂತೆ ಭಾಸವಾಗುತ್ತಾರೆ.’

ಮಲ್ಟಿಫ್ಲೆಕ್ಸ್ ಶಕೆಯ ಈ ಮಕ್ಕಳು ಕೊಳ್ಳುಬಾಕರು. ಇದು ‘ಬಟರ್‌ಫ್ಲೈ ಜನರೇಷನ್’. ಉಡಾಳತೆ ಇಲ್ಲ. ಪ್ರಶ್ನೆಗಳನ್ನು ಕೇಳುವಾಗ ಖುಷಿಯೆನಿಸುತ್ತದೆ. ರೋಡೀಸ್, ರಿಯಾಲಿಟಿ ಷೋಗಳನ್ನು ನೋಡಿ ಬೆಳೆದವರು. ಬಗೆ ಬಗೆಯ ಭಾಷೆ–ಸಂಸ್ಕೃತಿಗಳೊಳಗೆ ಸಲೀಸಾಗಿ ನುಸುಳಬಲ್ಲರು. ಕನ್ನಡದ ನಡುವೆ ‘ಮಚ್ಚಾ’ ಎಂಬ ಪದವಿಟ್ಟು ನಗಬಲ್ಲರು. ಇಂಗ್ಲಿಷ್‌ ಮೇಲೋಗರಕ್ಕೆ ‘ಅಚ್ಛಾ’ ಎಂದು ಹಿಂದಿ ಅಗುಳ ಬೆರೆಸಿ ಕಣ್ಣರಳಿಸಬಲ್ಲರು.

ಹಳೆಯ ತಲೆಮಾರಿನವರಿಗೆ ಸಣ್ಣ ಸಣ್ಣ ಪುಳಕಗಳಿದ್ದವು. ಸಹಪಾಠಿ ಊಟಕ್ಕೆ ಕರೆದರೆ ಮೈಜುಮ್ಮೆನ್ನುತ್ತಿದ್ದ ಕಾಲವದು. ಹುಡುಗಿ ಪಕ್ಕದಲ್ಲಿ ಕುಳಿತುಕೊಳ್ಳುವ ಅವಕಾಶಕ್ಕಾಗಿ ಚಾತಕಪಕ್ಷಿಗಳಾಗುತ್ತಿದ್ದ ಯುವಮನಗಳ ಕಾಲ. ಈಗ ಹೆಣ್ಣಿನ ಸ್ಪರ್ಶದಿಂದ ಅಂಥ ಕಂಪನವೇ ಕಾಣುವುದಿಲ್ಲ. ಪೋರ್ನೋಗ್ರಫಿಯನ್ನು ಮನದಣಿಯೆ ನೋಡಿದವರಿಗೆ ಅದರ ಪುಳಕದ ನಿಜಾರ್ಥ ಹೇಗೆತಾನೆ ಅರಿವಿಗೆ ಬಂದೀತು?

ಸಹಸ್ರಮಾನಿಗಳಿಗೆ ಬೇಗ ಶ್ರೀಮಂತರಾಗುವ ಬಯಕೆ. 20 ಸಾವಿರ ಕೋಟಿ ರೂಪಾಯಿ ಷೇರು ವಹಿವಾಟು ನಡೆಯುವ ದೇಶ ನಮ್ಮದೆನ್ನುವುದೇ ಇದಕ್ಕೆ ಸಾಕ್ಷಿ. ನುಗ್ಗಿ ಪಡೆಯಬೇಕೆಂಬ ಕಥನವ ಮನಕ್ಕಿಳಿಸಿಕೊಂಡವರು. ಯಶಸ್ವಿ ಯುವಕರ ಅಂಥ ಕಥನಗಳು ಅವರಿಗೆ ಮನದಟ್ಟಾಗಿವೆ. ಉದ್ಯಮಶೀಲತೆ, ವ್ಯಾಪಾರಿ ಸೃಜನಶೀಲತೆಯ ಸೂಕ್ಷ್ಮಗಳೂ ಗೊತ್ತು. ಬೇರೆ ಬೇರೆ ಲ್ಯಾಂಡ್‌ಸ್ಕೇಪ್‌ಗಳಿಗೆ ಪ್ರಯಾಣ ಮಾಡಿ ಸುಖವುಣ್ಣುವ ಹಂಬಲ. ಅದಕ್ಕೇ ಬೈಕು, ಕಾರುಗಳ ಭರಾಟೆ. ಸಾವಿರಾರು ಕಿ.ಮೀ. ದೂರದ ಊರುಗಳ ಕಥನ ಕೇಳಿ ಕಿವಿಯಗಲಿಸುತ್ತಿದ್ದ ಕಾಲ ಹಳೆಯದ್ದು. ‘ಅಲ್ಲಿಗಾ... ನಾವೆಲ್ಲ ಬೈಕರ್‌ಗಳು ಹೋಗಿ ಬಂದರಾಯಿತು’ ಎನ್ನುವುದು ಹೊಸಕಾಲದ ನುಡಿಗಟ್ಟು. ಸಂಪಾದಿಸುವುದೇ ಖರ್ಚು ಮಾಡಲು ಎನ್ನುವ ಧೋರಣೆ ಮುಂದು. ಉಳಿತಾಯಕ್ಕಿಂತ ಹೂಡಿಕೆಯ ದಾರಿಗಳೇ ಮುಖ್ಯ. ಇದು ನಗರದ ಸಹಸ್ರಮಾನಿಗಳ ಮೇಲುನೋಟದ ಗುಣಲಕ್ಷಣ.

ಇನ್ನೊಂದು ಕಡೆ ಸಹಸ್ರಮಾನಿಗಳಲ್ಲೇ ಕಂದಕವಿದೆ. ಹೊಸ ಸಾಮಾಜಿಕ ಗುಂಡಿಗಳವು – ಕಣ್ಣಿಗೆ ಕಾಣುವುದೇ ಇಲ್ಲ. ‘ಡೆಕಥ್ಲಾನ್‌’ನಲ್ಲಿ ಕೆಲಸ ಮಾಡುವ ಹುಡುಗರ ನಡುವೆ ಎಂಜಿನಿಯರಿಂಗ್ ಪದವೀಧರ ಇದ್ದಾನೆ. ಮದುವೆಮನೆಯಲ್ಲಿ ಊಟ ಬಡಿಸುವ ಹೊಳೆವ ಕೆನ್ನೆಯ ಯುವಕ ಕೂಡ ತಂತ್ರಜ್ಞ. ಎರಡು ಮೂರು ಅರೆಕಾಲಿಕ ವೃತ್ತಿಗಳನ್ನು ಮಾಡಿಕೊಂಡು, ನಗರದಲ್ಲಿನ ಅನಿಶ್ಚಿತ ಖರ್ಚು ತೂಗಿಸಿಕೊಂಡು ಹೋಗುತ್ತಲೇ ಹೊಸ ಕನಸುಗಳನ್ನು ನೇವರಿಸುವ ಹುಡುಗರೂ ಇಲ್ಲುಂಟು.

ಮಿಲೇನಿಯಲ್‌ಗಳಲ್ಲಿ ಬೋಲ್ಡ್‌ನೆಸ್‌ ಅಥವಾ ದಿಟ್ಟತನವಿದೆ. ಆದರೆ, ಅದಕ್ಕೆ ತಮ್ಮದೇ ಆದ ಪೇಟೆಂಟ್‌ ಹೊಂದಲು ಅವರಿಗೆ ಸಾಧ್ಯವಾಗುತ್ತಿಲ್ಲ. ‘ಫ್ಯೂಷನ್’ ಪ್ರಯೋಗಗಳು ಬಹುಮುಖಿ ಕ್ಷೇತ್ರಗಳಲ್ಲಿ ನಡೆಯುತ್ತಿವೆ. ಸಂಗೀತದಲ್ಲಂತೂ ಅದು ಎದ್ದುಕಾಣುತ್ತದೆ. ಆದರೂ ಸೋಲಿನ ಭಯ ಅವರನ್ನು ಹೆಚ್ಚಾಗಿ ಕಾಡುತ್ತಿಲ್ಲವೆನ್ನುವುದು ವಿಶೇಷ. ಕಂಪ್ಯೂಟರ್‌ ಕೂಡ ಅಪ್ರಸ್ತುತವೆನ್ನಿಸುವಂತೆ ಅವರು ನೋಟ ಬೀರಬಲ್ಲರು. ಪ್ರಯೋಗಾಲಯಗಳಲ್ಲಿ ಅಡುಗೆ ಮಾಡುವ ಯಂತ್ರ ತಯಾರಿಸಿ ಚಕಿತಗೊಳಿಸಿದವರೂ ಅವರೇ.

ಹೆಣ್ಣುಮಕ್ಕಳೂ ತಮ್ಮ ದೃಢ ನಿರ್ಧಾರಗಳಿಂದ ಮುಂದಡಿ ಇಡುತ್ತಿದ್ದಾರೆ. ಮದುವೆಯೇ ಆಗದೆ ಮಗುವನ್ನು ದತ್ತು ತೆಗೆದುಕೊಂಡು ಸಾಕುತ್ತಾರೆ. ಸಮಾರಂಭದ ಊಟಕ್ಕೆ ಇಟ್ಟ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಸುತರಾಂ ನೀರು ಕುಡಿಯುವುದೇ ಇಲ್ಲವೆಂಬ ಸಂಕಲ್ಪ ಮಾಡಿದವರು...

ಅದೋ ಅಲ್ಲಿ. ಜಾತಿ–ಧರ್ಮಗಳ ಸಂಕೋಲೆ ಮೀರಿ ಮದುವೆಗಳನ್ನಾದವರು, ಮಕ್ಕಳೇ ಬೇಡವೆಂದು ತಮ್ಮ ಪಾಡಿಗೆ ತಾವು ಇರುವ ತೀರ್ಮಾನ ತೆಗೆದುಕೊಂಡವರು... ಹೀಗೆ ಪರಿ ಪರಿ ಮನೋನಿಶ್ಚಯಿಗಳ ನಡುವೆ ಬೆರಳ ತುದಿಯ ಇಂಟರ್ನೆಟ್ ಜ್ಞಾನದ ಪರಿಧಿಯನ್ನು ಹಿರಿದಾಗಿಸಿದೆ. ಸಂಭಾಷಣೆಗಳ ಮೂಲಕ ಅವರು ಚರ್ಚೆಯಲ್ಲಿ ತೊಡಗುವುದು ನೋಡಲು ಚೆನ್ನ. ಹಳೆಯ ಕಾಲದಲ್ಲಿ ಪೌಡರ್‌ ಒರೆಸಲು ಬಳಸುವ ಪಫ್‌ನಂತೆ ನೆತ್ತಿಮೇಲೆ ಜುಟ್ಟು ಬಿಟ್ಟ ಸ್ನೇಹಿತನನ್ನು ವಿಚಿತ್ರವಾಗಿ ನೋಡುತ್ತಿದ್ದೆವು. ಈಗ ಅದೇ ಬಹುತೇಕ ಯುವಕರ ಕೇಶವಿನ್ಯಾಸ. ನೋಡಲು ಚೆಂದ ಕಾಣಿಸಲೇಬೇಕು ಎನ್ನುವುದು ಮುಖ್ಯ. ಪ್ರತಿಷ್ಠಿತ ಶಾಲಾ ವಾರ್ಷಿಕೋತ್ಸವವನ್ನು ಪೊಲೀಸ್‌ ಭದ್ರತೆಯಲ್ಲಿ ನಡೆಸಬೇಕಾದ ದುಃಸ್ಥಿತಿ. ‘ಸೆಲೆಬ್ರೇಷನ್‌ ಆಫ್ ಯೂತ್’ನ ಬಹುಮುಖಗಳು ಇವು. ಹೀಗಿದ್ದೂ, ಅಭದ್ರತೆ ಕಾಡುತ್ತಿರುವ ಯುವಕರ ಸಂಖ್ಯೆ ಈಗ ಹಿಂದಿಗಿಂತ ಹೆಚ್ಚು. ಆಹಾರ ಪದ್ಧತಿ ಕ್ರಮ ತಪ್ಪಿರುವುದು ಇನ್ನೊಂದು ಆತಂಕ. ಮೂಳೆಮುರಿದ ಸ್ಥಿತಿಯಲ್ಲಿ ಸಂಬಂಧಗಳು ಇರಲೂ ಹೊಸಮನಸ್ಥಿತಿಗಳೇ ಕಾರಣ. ಸಾಂಪ್ರದಾಯಿಕ ಸಾಂಸ್ಥಿಕ ವ್ಯವಸ್ಥೆಗೆ ಇವರದ್ದು ಧಿಕ್ಕಾರ. ಸಿದ್ಧಾಂತ ಮಾತನಾಡಿದರೆ ನಖಶಿಖಾಂತ ಸಿಟ್ಟು. ಒಟ್ಟಿನಲ್ಲಿ ಇದು ಅಸಹನೀಯ ತಲೆಮಾರು.

**************

ಅವರೇ ಬೆಳಕು, ಅವರೇ ಭವಿಷ್ಯ

ಭಾರತ ಹಾಗೂ ಚೀನಾದಲ್ಲಿ ‘ಮಿಲೇನಿಯಲ್ಸ್’ ಸಂಖ್ಯೆ ಹೆಚ್ಚಾಗುತ್ತಿದೆ. ವಿಶ್ವದಾದ್ಯಂತ ಇರುವ ಜನಸಂಖ್ಯೆಯ ಶೇ. 47ರಷ್ಟು ಹುಟ್ಟಿರುವುದು 2000 ಇಸವಿಯ ನಂತರ ಎಂದು ಅಧ್ಯಯನವೊಂದು ಹೇಳಿದೆ. 2020ರ ಹೊತ್ತಿಗೆ ಭಾರತ ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಯುವಜನರನ್ನು ಒಳಗೊಂಡ ದೇಶ ಎನಿಸಿಕೊಳ್ಳಲಿದೆ. ಹೀಗಾಗಿ ಭವಿಷ್ಯ ಯುವಜನತೆಯ ಪ್ರಗತಿಯನ್ನೇ ಅವಲಂಬಿಸಿದೆ.

ಎರಡು ಹಾಗೂ ಮೂರನೇ ತಲೆಮಾರಿನ ಹುಡುಗ–ಹುಡುಗಿಯರು ಆರ್ಥಿಕ ಸುಭಿಕ್ಷ ವಾತಾವರಣದಲ್ಲಿ ಹೆಚ್ಚಾಗಿ ಬೆಳೆದಿರುತ್ತಾರೆ. ನಮಗೆ ಚೆನ್ನಾಗಿ ಓದಿ, ಒಂದು ಸುಭದ್ರ ಕೆಲಸ ಹಿಡಿದು ಭವಿಷ್ಯ ರೂಪಿಸಿಕೊಳ್ಳುವುದು ಆದ್ಯತೆ ಆಗಿತ್ತು. ಇಂದಿನವರ ಆದ್ಯತೆ ಬದಲಾಗಿದೆ.

ಇಂಟರ್ನೆಟ್‌, ಗ್ಯಾಡ್ಜೆಟ್‌ಗಳ ಜೊತೆಜೊತೆಗೇ ಬೆಳೆದಿರುವ ಅವರಿಗೆ ಅವುಗಳ ಜ್ಞಾನ ಸಹಜವಾಗಿಯೇ ಸಿಕ್ಕಿದೆ. ನಾವಾದರೆ ಅದನ್ನು ಹೊಸದಾಗಿ ಕಲಿತು ನಮ್ಮದಾಗಿಸಿಕೊಂಡೆವು. ಹೀಗಾಗಿ ಅವನ್ನು ಹೊಸಕಾಲದ ಜರೂರಿಗೆ ಒಗ್ಗಿಸಿಕೊಳ್ಳುವಲ್ಲಿ ಅವರು ಸದಾ ಮುಂದಿರುತ್ತಾರೆ. ಡಿಜಿಟಲ್ ವ್ಯಸನಿಗಳು ಅವರಾದರೂ ಅದರ ಸಕಾರಾತ್ಮಕ ಆಯಾಮವನ್ನು ನಿರ್ಲಕ್ಷಿಸಕೂಡದು. ಇದು ಡಿಜಿಟಲ್ ವರ್ಲ್ಡ್ ಆಗಿರುವುದರಿಂದ ಅವರ ವ್ಯಸನ ಕೂಡ ಒಪ್ಪಿತ ಜ್ಞಾನಶಾಖೆಯೇ ಹೌದಲ್ಲವೇ?

ಜಾಗತಿಕ ಮಟ್ಟದಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಹೊಸ ಪೀಳಿಗೆ ಬೇಗ ತಿಳಿಯುತ್ತಿದೆ. ತಮ್ಮ ಆಸಕ್ತಿಯ ಕ್ಷೇತ್ರವನ್ನು ವೃತ್ತಿಗೆ ಅನ್ವಯಿಸಿಕೊಳ್ಳುವ ಗುರಿ ಅವರದ್ದು. ಹೀಗಾಗಿ ಈ ನಿಟ್ಟಿನಲ್ಲಿ ಲಭ್ಯವಿರುವ ಆಯ್ಕೆಗಳ ಅರಿವೂ ಅವರಿಗೆ ಚೆನ್ನಾಗಿಯೇ ಇದೆ.

ಇನ್ನು ಹಳಹಳಿಕೆಯ ವಿಷಯ. ಅವರಿಗೆ ಬೇರೆಯವರ ಬಗೆಗೆ ಚಿಂತೆ ಇಲ್ಲ, ಸಾಮಾಜಿಕ ಹೊಣೆಗಾರಿಕೆ ಇಲ್ಲ ಎನ್ನುವ ಆರೋಪಗಳನ್ನು ಸಾಮಾನ್ಯೀಕರಿಸುವುದೇ ತಪ್ಪು. ಸಂಶೋಧನೆಗಳು ಹೇಳುವಂತೆ ಹೊಸ ಪೀಳಿಗೆಯವರಲ್ಲಿ ಸಾಮಾಜಿಕ ಸೇವೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಎಷ್ಟೋ ಜನ ಒಂದಿಷ್ಟು ವರ್ಷಗಳ ಕಾಲ ಸಂಪಾದನೆ ಮಾಡಿದ ಮೇಲೆ ಸಮಾಜಕ್ಕೆ ಯಾವ ಯಾವುದೋ ರೂಪದಲ್ಲಿ ಮರುಪೂರೈಸಲು ಮುಂದಾಗುತ್ತಿದ್ದಾರೆ.

ತಮ್ಮ ಆಸಕ್ತಿಗೆ ನೀರೂಡಿಸಿಕೊಳ್ಳುವುದರಲ್ಲೂ ಅವರ ಧೋರಣೆ ಅನುಕರಣೀಯ. ಕ್ರೀಡೆಯಲ್ಲಿ ಆಸಕ್ತಿ ಇರುವವರು ಓದಿಗೆ ಪೂರ್ಣವಿರಾಮ ಹಾಕಿ, ಸಾಧನೆಯ ಮೆಟ್ಟಿಲು ಹತ್ತಿದ ಮೇಲೆ ಮತ್ತೆ ಓದನ್ನು ಮುಂದುವರಿಸುವುದನ್ನು ಕಾಣಬಹುದು. ಇವೆಲ್ಲ ಕೆಲವು ಉದಾಹರಣೆಗಳಷ್ಟೆ. ಕಣ್ಣಗಲಿಸಿ ನೋಡಿದರೆ ಇನ್ನಷ್ಟು ಒಳಿತುಗಳು ಇಣುಕಿಯಾವು.

ನಮ್ಮ ಶಿಕ್ಷಣ ವ್ಯವಸ್ಥೆ ಒತ್ತಡದ ಕತ್ತಿ ಅಲಗಿನ ಮೇಲೆ ಮಕ್ಕಳು ನಡೆಯುವಂತೆ ಮಾಡಿರುವುದು ನಿಜ. ಸ್ಪರ್ಧೆಯಲ್ಲಿ ಹಿಂದುಳಿದರೆ ತಂತಾನೇ ಆತಂಕದ ಮೋಡ ಕವಿಯುವಂತಹ ವ್ಯವಸ್ಥೆ ಇದೆ. ಇದು ವಿಕಾಸ, ಸೃಜನಶೀಲತೆಯ ಹೊಸ ಮಾರ್ಗಗಳನ್ನು ಶಿಕ್ಷಣದಲ್ಲಿ ತರಬೇಕಾದ ಅಗತ್ಯವನ್ನು ಹೇಳುತ್ತಿದೆ. ಇದು ಸಾಧ್ಯವಾದಲ್ಲಿ ಹೊಸ ಪೀಳಿಗೆಯ ಕೈಯಲ್ಲಿನ ದೀಪಗಳ ಬೆಳಕು ಇನ್ನೂ ಜೋರಾಗುತ್ತದೆ.

ಡಿಜಿಟಲ್ ವ್ಯಸನಕ್ಕೆ ಮಕ್ಕಳು ಬೀಳುವುದರಲ್ಲಿ ಪೋಷಕರ ಪಾತ್ರವೂ ಇದೆ. ಅಳುವ ಮಗುವನ್ನು ಯೂಟ್ಯೂಬ್ ವಿಡಿಯೊ ನೋಡಲು ಹಚ್ಚಿ, ಸಮಾರಂಭದಲ್ಲಿ ಮಗು ಕಿರಿಕಿರಿ ಮಾಡದೇ ಇರಲಿ ಎಂದು ಮೊಬೈಲ್ ಕೈಗಿತ್ತು ಸುಮ್ಮನಾಗುವವರು ಪೋಷಕರೇ ಅಲ್ಲವೇ? ಅವರು ಹೊಸ ಪೀಳಿಗೆಯ ಜತೆಗೆ ಈ ಎಲ್ಲ ವಿಷಯಗಳಲ್ಲೂ ಹೆಜ್ಜೆ ಹಾಕಬೇಕು. ಆಗ ಮಿಲೇನಿಯಲ್‌ಗಳ ಮನೋಬಲದ ನಿಜ ಹೊಳಪು ಸಾಧ್ಯ.

**************

ಸಹಸ್ರಮಾನದ ಯಶಸ್ವಿ ಹೆಣ್ಣುಮಕ್ಕಳ ವಿಷಯ ಬಂದಾಗ ಬಾಲಿವುಡ್‌ನ ಇಬ್ಬರು ನಟಿಯರು ನೆನಪಾಗದೇ ಇರಲು ಸಾಧ್ಯವೇ ಇಲ್ಲ. ಒಬ್ಬರು–ದೀಪಿಕಾ ಪಡುಕೋಣೆ. ಇನ್ನೊಬ್ಬರು–ಆಲಿಯಾ ಭಟ್.

‘ಶುಭಮಂಗಳ’ ಸಿನಿಮಾದಲ್ಲಿ ಆರತಿ ನಟಿಸಿದ ‘ಈ ಶತಮಾನದ ಮಾದರಿ ಹೆಣ್ಣು... ಸ್ವಾಭಿಮಾನದ ಸಾಹಸಿ ಹೆಣ್ಣು’ ಎಂಬ ಹಾಡನ್ನು ದೀಪಿಕಾ ಅವರಿಗೆ ಸಲೀಸಾಗಿ ಅನ್ವಯಿಸಬಹುದು. ಮೊದಲಿನಿಂದಲೂ ತಮಗೆ ತೋಚಿದ್ದನ್ನೇ ಮಾಡುತ್ತಾ ಬಂದ ನಟಿ ಅವರು. ಅಪ್ಪ-–ಅಮ್ಮನ ಮೇಲೆ ಗೌರವ ಇಟ್ಟುಕೊಂಡೂ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಅವರು ತಮ್ಮ ಮನದ ಮಾತಿಗೇ ಬದ್ಧರು. ವರ್ಷಗಟ್ಟಲೆ ಆಡಿದ್ದ ಬ್ಯಾಡ್ಮಿಂಟನ್ ಆಟವನ್ನು ದಿಢೀರನೆ ಬದಿಗೊತ್ತಿದ್ದು, ಮಾಡೆಲಿಂಗ್‌ ಕಡೆಗೆ ವಾಲಿದ್ದು, ಆಮೇಲೆ ನಟಿಯಾದದ್ದು, ಬರಬರುತ್ತಾ ಚೂಸಿ ಆದದ್ದು, ಈ ಪಯಣದ ನಡುವೆಯೇ ಖಿನ್ನತೆ ಅನುಭವಿಸಿದ್ದು, ಅದರಿಂದ ತಂತಾವೇ ಆಚೆ ಬಂದದ್ದು, ಮುರಿದ ಪ್ರೇಮದ ಕಹಿಯನ್ನು ಹಿಂದಿಕ್ಕಿ ಸಿಹಿ ಬದುಕನ್ನು ಕಟ್ಟಿಕೊಂಡದ್ದು, ಎಲ್ಲ ಸಂಘರ್ಷಗಳ ನಡುವೆಯೂ ಬಾಲಿವುಡ್‌ನ ನಂಬರ್‌ ಒನ್‌ ನಟಿ ಆದದ್ದು, ಈಗ ಇಷ್ಟಪಟ್ಟು ರಣವೀರ್‌ ಸಿಂಗ್ ಅವರನ್ನು ವರಿಸಿದ್ದು...ಹೀಗೆ ಒಂದೇ ಗುಕ್ಕಿನಲ್ಲಿ ದೀಪಿಕಾ ಬದುಕಿನ ಪುಟಗಳನ್ನು ಚಕಚಕನೆ ತೆಗೆದುಬಿಡಬಹುದು. 1986ರಲ್ಲಿ ಹುಟ್ಟಿದ ಅವರೀ ಮಿಲೇನಿಯಲ್‌ಗಳಲ್ಲಿ ಒಬ್ಬರು. ಮೊದಲಿನಿಂದಲೂ ತಮ್ಮ ಕಚೇರಿಯನ್ನು ತಾವೇ ಜಾಣ್ಮೆಯಿಂದ ನಿಭಾಯಿಸುತ್ತಾ ಬಂದಿರುವ ಅವರ ಆತ್ಮಬಲ ಹಾಗೂ ‘ಲಿವ್ ಲವ್ ಲಾಫ್’ ಸಂಸ್ಥೆಯ ಮೂಲಕ ತಣ್ಣಗೇ ಮಾಡುತ್ತಿರುವ ಕೆಲಸಗಳು ಅನುಕರಣೀಯ.

‘ನಾನು ಕನ್ಯತ್ವ ಕಳೆದುಕೊಂಡಾಗ ನನಗೆ ಹದಿಮೂರು’ ಎಂದು ಹೇಳಿ ಸಂಪ್ರದಾಯಸ್ಥರೆಲ್ಲ ಕಣ್ಣಗಲಿಸುವಂತೆ ಮಾಡಿದ್ದ ಆಲಿಯಾ ಭಟ್‌ ಕೂಡ ತಾನು ನಡೆದದ್ದೇ ದಾರಿ ಎಂದುಕೊಂಡ ಪ್ರತಿಭಾವಂತೆ. 2012ರಲ್ಲಿ ಕರಣ್ ಜೋಹರ್‌ ಕೊಟ್ಟ ಅವಕಾಶದಿಂದ ನಾಯಕಿಯಾದ ಅವರ ವೃತ್ತಿಬದುಕಿನ ಗ್ರಾಫ್ ಬರೀ ಆರು ವರ್ಷಗಳಲ್ಲೇ ಕಳೆಗಟ್ಟಿತು. ‘ಹೈವೇ’, ‘ಉಡ್ತಾ ಪಂಜಾಬ್’, ‘ರಾಜಿ’, ಈಗ ‘ಗಲ್ಲಿ ಬಾಯ್’... ಈ ಸಿನಿಮಾಗಳಲ್ಲಿನ ಅವರ ಪಾತ್ರತೂಕವೇ ನಿರ್ದೇಶಕರ ಪ್ರಯೋಗಶೀಲ ಕಣ್ಣುಗಳ ನಾಯಕಿ ಅವರೆನ್ನುವುದಕ್ಕೆ ಸಾಕ್ಷಿ. ತಂದೆ ಮಹೇಶ್ ಭಟ್‌ ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕ, ನಿರ್ಮಾಪಕರಾಗಿ ಹೆಸರು ಮಾಡಿದ್ದರೂ ಆಲಿಯಾ ನೋಡನೋಡುತ್ತಲೇ ಅಪ್ಪನನ್ನೂ ಮೀರಿಸುವ ಹಾದಿಯಲ್ಲಿ ಸಾಗುತ್ತಿರುವುದು ವಿಶೇಷ. ಅವರ ಓರಗೆಯವರ ಪಾಲಿಗೆ ಅವರು ಮಹೇಶ್ ಭಟ್‌ ಮಗಳಷ್ಟೇ ಅಲ್ಲ; ಆಲಿಯಾ ತಂದೆ ಮಹೇಶ್ ಎಂದು ಹೇಳುವಷ್ಟರ ಮಟ್ಟಿಗೆ ಅವರು ತಮ್ಮತನದ ಛಾಪು ಮೂಡಿಸಿದ್ದಾರೆ.

ಬಿಡುಬೀಸಾಗಿ ಮಾತನಾಡುವ, ಸಾಮಾಜಿಕ ಜಾಲತಾಣಗಳಲ್ಲಿ ದಡ್ಡಿ ಎನಿಸಿಕೊಂಡೇ ಕೆಲವು ಮೀಮ್‌ಗಳಿಗೆ ವಸ್ತುವಾದ ಆಲಿಯಾ ‘ನೆಗೆಟಿವ್ ಪಬ್ಲಿಸಿಟಿ’ಯನ್ನು ಮೀರಿಯೂ ಒಬ್ಬ ನಟಿಯಾದ ಪ್ರಕ್ರಿಯೆ ಕುತೂಹಲಕಾರಿ. ಮಿಲೇನಿಯಲ್‌ಗಳ ಮನೋನಂದನದ ಚೆಲ್ಲಾಪಿಲ್ಲಿ ಸಂಗತಿಗಳ ನಡುವೆಯೂ ಹಳಹಳಿಕೆಯನ್ನೂ ಮೀರಿ ಬೆಳೆಯುವ ಇಂತಹ ಅಸಂಖ್ಯ ಉದಾಹರಣೆಗಳು ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT