ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಮಧುರ ಗಾನ ಗಾರುಡಿಗ

Published 27 ಫೆಬ್ರುವರಿ 2024, 0:16 IST
Last Updated 27 ಫೆಬ್ರುವರಿ 2024, 0:16 IST
ಅಕ್ಷರ ಗಾತ್ರ

1994ರಲ್ಲಿ ತೆರೆಕಂಡ ‘ಮೊಹ್ರಾ’ ಹಿಂದಿ ಸಿನಿಮಾದಲ್ಲಿ ಸ್ವರ ಸಂಯೋಜಕ ವಿಜು ಶಾ ಆಸಕ್ತಿಕರ ಹಿಂದೂಸ್ತಾನಿ ರಾಗಗಳನ್ನಿಟ್ಟು ಮಟ್ಟುಗಳನ್ನು ಹಾಕಿದ್ದರು. ಆ ಸಿನಿಮಾದ ಒಂದು ಹಾಡು ಸುನಿಲ್ ಶೆಟ್ಟಿ ಬಂಡೆಯಂಥ ದೇಹಕ್ಕೆ ಹೊರತೇ ಆದಂತಹ ಭಾವದ್ದು. ‘ನಾ ಕಜರೆ ಕೀ ಧಾರ್... ನಾ ಮೋತಿಯೋಂ ಕೆ ಹಾರ್’ ಎಂಬ ಹೆಣ್ಣಿನ ಸಹಜ ಸೌಂದರ್ಯ ವರ್ಣನೆಯ ಹಾಡು ಅದು. ಅದರಲ್ಲಿನ ಪಂಕಜ್ ಉಧಾಸ್ ಕಂಠ ಸಾಹಸಪ್ರಧಾನ ಸಿನಿಮಾಗಳಲ್ಲೂ ಸಂಗೀತದ ದೊಡ್ಡ ‘ರಿಲೀಫ್’ ಹೇಗಿರುತ್ತಿತ್ತು ಎನ್ನುವುದಕ್ಕೆ ಸಾಕ್ಷಿಯಂತೆ ಇತ್ತು. 

ಕ್ರಿಕೆಟ್‌ನಲ್ಲಿ ರಾಹುಲ್‌ ದ್ರಾವಿಡ್‌ ಅವರ ತುಸುವೂ ಧಾವಂತವೇ ಇಲ್ಲದ ಧೋರಣೆಯೊಂದಿದೆ. ಪಂಕಜ್ ಗೀತಚೌಕಟ್ಟಿನಲ್ಲೂ ಅಂಥದ್ದೇ ಒಂದು ಧೋರಣೆ ಕಾಣುತ್ತದೆ. ಗೀತಸಾಹಿತ್ಯಕ್ಕೆ ಮೃದುತ್ವವನ್ನು ಸವರಿದಂತೆ ಅವರು ಹಾಡುತ್ತಿದ್ದರು. ಕಣ್ಣುಮುಚ್ಚಿ ಕೇಳುತ್ತಾ ಹೋದರೆ ತಂತಾನೇ ನಿದ್ರೆ ಆವರಿಸಿಕೊಳ್ಳುವಷ್ಟು ಪ್ರಭಾವಿ ಗಾಯನ. 

‘ಸಾಜನ್’ ಹಿಂದಿ ಸಿನಿಮಾದ ‘ಜಿಯೆ ತೋ ಜಿಯೆ ಕೈಸೆ’ ಹಾಡನ್ನು ಕೇಳಿದರೆ, ಪಂಕಜ್ ಹೇಗೆ ಶ್ರುತಿಯ ತಲೆಮೇಲೆ ಕೂತಂತೆ ಶಾರೀರ ದಾಟಿಸುತ್ತಿದ್ದರೆನ್ನುವುದು ಅರಿವಿಗೆ ಬಾರದೇ ಇರದು.  

ಹಾಡುಗಳ ಮೂಲಕವೇ ಸಂವಹನ ಮಾಡುತ್ತಾ ಬಂದಿದ್ದ ಪಂಕಜ್ ಇನ್ನು ಭೌತಿಕವಾಗಿ ನಮ್ಮೊಡನೆ ಇರುವುದಿಲ್ಲ. ಅವರ ಗಾನ ಪ್ರತಿಭೆ ಮಾತ್ರ ಸದಾ ಎಲ್ಲಿಯೋ ಅನುರಣವಾಗುತ್ತಲೇ ಇರುತ್ತದೆ; ಯಾರದ್ದೋ ಮೊಬೈಲ್‌ನಲ್ಲೋ, ಕಾರಿನ ಪ್ಲೇಯರ್‌ನಲ್ಲೋ ಅಥವಾ ಸಮಾರಂಭದ ಗ್ರಾಮಾಫೋನ್‌ನಲ್ಲೋ. 

ಪಂಕಜ್, ರಾಜಸ್ಥಾನದ ಜೇತ್‌ಪುರದವರು. ತಂದೆ ಕೇಶೂಭಾಯಿ ಉಧಾಸ್ ಸರ್ಕಾರಿ ಕೆಲಸದಲ್ಲಿದ್ದರು. ಜಮೀನ್ದಾರರ ಕುಟುಂಬ. ಮೂವರು ಗಂಡುಮಕ್ಕಳಲ್ಲಿ ಪಂಕಜ್ ಕೊನೆಯವರು. ಮನಹರ್ ಉಧಾಸ್ ಹಾಗೂ ನಿರ್ಮಲ್ ಉಧಾಸ್ ಅವರ ಅಣ್ಣಂದಿರು. ಮೂವರೂ ಹಿಂದೂಸ್ತಾನಿ ಸಂಗೀತಗಾರರು. ವೀಣಾ ವಾದಕ ಅಬ್ದುಲ್‌ ಕರೀಂ ಖಾನ್ ಅವರಿಂದ ಕೇಶೂಭಾಯಿ ಉಧಾಸ್‌ ಸ್ವ–ಆಸಕ್ತಿಯಿಂದ ದಿಲ್‌ರುಬಾ ಕಲಿತರು. ಪಂಕಜ್‌ಗೆ ಆ ವಾದ್ಯದ ನಾದದಲೆಯೇ ಜೋಗುಳವಾದ ದಿನಗಳಿದ್ದವು. ಸಂಗೀತ ಹೀಗೆ ಮನೆಯಲ್ಲಿ ಎಲ್ಲರಿಗೂ ಹರಡಿಕೊಂಡಿತು. ಪಂಕಜ್‌ ಅವರಿಗೆ ತಬಲಾ ಅಲ್ಲದೆ ಗಿಟಾರ್‌, ಹಾರ್ಮೋನಿಯಂ, ಪಿಯಾನೊ, ಪಿಟೀಲು ನುಡಿಸುವುದೂ ಗೊತ್ತಿತ್ತು. 

ಭಾರತ–ಚೀನಾ ಯುದ್ಧ ನಡೆದಿದ್ದ ಸಂದರ್ಭದಲ್ಲಿ ಪಂಕಜ್ ವೇದಿಕೆ ಏರಿ, ‘ಯೇ ಮೇರೆ ವತನ್‌ ಕೇ ಲೋಗೊ’ ಹಾಡು ಹಾಡಿ, ಬಹುಮಾನದ ರೂಪದಲ್ಲಿ ₹51 ಪಡೆದಾಗ ಅವರಿಗೆ ಇನ್ನೂ ಹನ್ನೊಂದು ವಯಸ್ಸು. 

ರಾಜ್‌ಕೋಟ್‌ನ ಸಂಗೀತ ನಾಟ್ಯ ಅಕಾಡೆಮಿಗೆ ತಂದೆ ಸೇರಿಸಿದ್ದರಿಂದ ಪಂಕಜ್‌ ಅಲ್ಲಿ ಸಂಗೀತದ ಮೂಲ ಪಾಠಗಳನ್ನು ಕಲಿತರು. ಕುಟುಂಬ ಆಮೇಲೆ ಮುಂಬೈಗೆ ಸ್ಥಳಾಂತರಗೊಂಡರೂ ಕಲಿಕೆ ನಿಲ್ಲಲಿಲ್ಲ. ನವರಂಗ್ ಅವರಲ್ಲಿ ಹಾಡುಗಾರಿಕೆಯ ಸಾಣೆಗೆ ಒಳಗಾಗುವ ಮೊದಲೇ ತಬಲಾ ನುಡಿಸುವುದರಲ್ಲಿ ಪಳಗಿದರು. ಗಜಲ್‌ಗಳಲ್ಲಿ ಪಳಗಲೆಂದೇ ಅವರು ಉರ್ದು ಕಲಿತರು. ಕೆನಡಾ ಹಾಗೂ ಅಮೆರಿಕದಲ್ಲಿ ಹತ್ತು ತಿಂಗಳು ಗಜಲ್‌ಗಳ ಕಛೇರಿಗಳನ್ನು ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. 

ಅಷ್ಟೆಲ್ಲ ರಿಯಾಜ್‌ನ ನಂತರ 1980ರಲ್ಲಿ ಅವರು ‘ಆಹಟ್’ ಹಿಂದಿ ಆಲ್ಬಂ ಹೊರತಂದರು. ಅವರ ಮಧುರ ಕಂಠದ ಜೇನಸವಿ ರಸಿಕರೆದೆಗೆ ಇಳಿಯಿತು. ಸಹಜವಾಗಿಯೇ ಚಿತ್ರಗೀತೆಗಳಲ್ಲಿ ಹಾಡುವ ಅವಕಾಶಗಳೂ ಹುಡುಕಿಕೊಂಡು ಬಂದಿತು. ‘ಕಾಮ್ನಾ’ ಹಿಂದಿ ಸಿನಿಮಾದಲ್ಲಿ ಉಷಾ ಖನ್ನಾ ಅವರ ಸಂಯೋಜನೆಯ ಗೀತೆಗೆ ಅವರು ದನಿಯಾದರು. ಇದು ಅವರು ಹಾಡಿದ ಮೊದಲ ಚಿತ್ರಗೀತೆ. ಸಿನಿಮಾ ಸೋತರೂ ಈ ಹಾಡಿನ ಕಂಠ ಚಿತ್ರಗಳಿಗೆ ಸ್ವರ ಸಂಯೋಜನೆ ಮಾಡುವವರಿಗೆ ಹಿಡಿಸಿತು. ‘ನಾಮ್’ ಸಿನಿಮಾದಲ್ಲಿ ‘ಚಿಟ್ಟಿ ಆಯೀ ಹೈ’ ಹಾಡನ್ನು ಅವರು ಹಾಡಿದ್ದೇ ಅಲ್ಲದೆ, ತೆರೆಮೇಲೆ ಕೂಡ ಕಾಣಿಸಿಕೊಂಡರು. ‘ಘಾಯಲ್’ ಸಿನಿಮಾದ ‘ಮಾಹಿಯಾ ತೇರಿ ಕಸಮ್’ ಗೀತೆಗೆ ಲತಾ ಮಂಗೇಷ್ಕರ್ ಅವರೊಟ್ಟಿಗೆ ದನಿಯಾದದ್ದು ಇನ್ನೊಂದು ಜಿಗಿತ.

2011ರ ಹೊತ್ತಿಗೆ 50ಕ್ಕೂ ಹೆಚ್ಚು ಆಲ್ಬಂಗಳನ್ನು ಹೊರತಂದಿದ್ದ ಪಂಕಜ್ ಉಧಾಸ್, ಆಮೇಲೆ ಕಛೇರಿಗಳಿಗೇ ತಮ್ಮ ಬದುಕನ್ನು ಹೆಚ್ಚು ಮೀಸಲಿಟ್ಟರು. ಶಂಕರ್‌–ಜೈಕಿಶನ್, ಲಕ್ಷ್ಮೀಕಾಂತ್ ಪ್ಯಾರೆಲಾಲ್, ಬಪ್ಪಿ ಲಹರಿ, ನದೀಮ್–ಶ್ರವಣ್, ಆನಂದ್–ಮಿಲಿಂದ್ ಅವರಿಂದ ಹಿಡಿದು ಆನಂದ್‌ ರಾಜ್‌ ಆನಂದ್ ಅವರವರೆಗೆ ಹಲವು ಸಂಯೋಜಕರ  ನೂರಾರು ಹಾಡುಗಳಿಗೆ ಪಂಕಜ್ ದನಿಯಾದರು. 2016ರಲ್ಲಿ ‘ದಿಲ್‌ ತೋ ದೀವಾನಾ ಹೈ’ ಚಿತ್ರದ ‘ರಾತ್ ಭರ್ ತನ್‌ಹಾ ರಹಾ’ ಎಂಬ ಗೀತೆ ಅವರ ಹಳೆಯ ಛಾಪನ್ನು ನೆನಪಿಸಿತ್ತು. 

ಕೋವಿಡ್‌ ಕಾಲದಲ್ಲಿ ಅವರು ಕನಲಿದ್ದರು. ಆರೋಗ್ಯದಲ್ಲಿ ಆಗಿದ್ದ ತುಸು ಏರುಪೇರಿನಿಂದಾಗಿ ಮತ್ತೆ ಹಾಡಲು ಆದೀತೋ ಇಲ್ಲವೋ ಎಂಬ ವಿಷಯ ಅವರನ್ನು ಬಹುಕಾಲ ಕಾಡಿತ್ತು. ಆಮೇಲೆ ಎರಡು ವರ್ಷಗಳ ನಂತರ ಉತ್ತರ ಪ್ರದೇಶದ ರಾಂಪುರದಲ್ಲಿ ಅವರ ಕಛೇರಿ ಏರ್ಪಾಟಾಯಿತು. ಆ ಕಛೇರಿ ಶುರುವಾಗುವ ಎರಡು ದಿನ ಅವರು ಹಾಡಲು ಆದೀತೋ ಇಲ್ಲವೋ ಎಂದೇ ಚಡಪಡಿಸಿದ್ದರು. ವೇದಿಕೆ ಏರಿದಾಗ, ಎದುರಲ್ಲಿ ಇದ್ದ ಆರು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರನ್ನು ಕಂಡು ಅವರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತು. 

‘ಚಿಟ್ಟಿ ಆಯೀ ಹೈ’ ಗೀತೆಯಲ್ಲಿನ ಭಾವಗಳ ಏರಿಳಿತವನ್ನು ಉಳಿಸಿ, ತಮಗೆ ಯಾವುದೋ ಪತ್ರ ಬಂತೇನೋ ಎನ್ನುವಂತೆ ಪಂಕಜ್ ಕಣ್ಮುಚ್ಚಿದ್ದಾರೆ. ಅವರ ಹಾಡುಗಳು ಮಾತ್ರ ಈಗಲೂ ಕಣ್ಣು ಪಿಳುಪಿಳಿಸುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT