ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಕಣ್ಣಲ್ಲಿ ‘ಒಂದಲ್ಲಾ ಎರಡಲ್ಲಾ...’

Last Updated 21 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ವರ್ಷದ ಹಿಂದೆ ‘ರಾಮಾ ರಾಮಾರೇ...’ ಎಂಬ ಸದಭಿರುಚಿಯ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಡಿ. ಸತ್ಯಪ್ರಕಾಶ್, ‘ಒಂದಲ್ಲಾ ಎರಡಲ್ಲಾ...’ ಸಿನಿಮಾ ಮೂಲಕ ಮತ್ತೊಮ್ಮೆ ಪ್ರೇಕ್ಷಕನನ್ನು ಎದುರಾಗುತ್ತಿದ್ದಾರೆ. ಪ್ರಯೋಗಶೀಲತೆಗೆ ತಮ್ಮನ್ನು ಒಡ್ಡಿಕೊಳ್ಳುವ ನಿರ್ದೇಶಕರ ಸಾಲಿನಲ್ಲಿ ನಿಲ್ಲುವ ಸತ್ಯಪ್ರಕಾಶ್, ಸಮೀರ ಎಂಬ ಬಾಲಕನ ಸುತ್ತ ‘ಒಂದಲ್ಲಾ... ಕಥೆ ಹೆಣೆದಿದ್ದಾರೆ. ಯಾವುದೇ ಪ್ರಕಾರಗಳಿಗೆ ಸೇರಿಸಲಾಗದ ಕಥನ ಅವರ ಚಿತ್ರಗಳಲ್ಲಿರುವ ವಿಶೇಷತೆ.

ನಿರ್ದೇಶಕರೇ ಹೇಳುವಂತೆ, ಚಿತ್ರದ ಪ್ರಮುಖ ಪಾತ್ರ ಸಮೀರ, ಕಳೆದು ಹೋದ ತನ್ನ ನೆಚ್ಚಿನ ಸಾಕುಪ್ರಾಣಿ ಹುಡುಕಿಕೊಂಡು ನಗರಕ್ಕೆ ಬಂದು ಏಕಾಂಗಿಯಾಗುತ್ತಾನೆ. ನಗರದಲ್ಲಿ ಅವನಿಗೆ ವಿವಿಧ ಸ್ತರದ, ಮನಸ್ಥಿತಿಯ ಜನ ಸಿಗುತ್ತಾರೆ. ಅವರ ಸ್ವಾರ್ಥ ಮತ್ತು ದುರಾಸೆಗಳು ಆತನ ಹುಡುಕಾಟಕ್ಕೆ ಅಡ್ಡಿಯಾಗುತ್ತದಾ ಅಥವಾ ಆತನ ಮುಗ್ಧತೆ ಆ ಪಾತ್ರಗಳ ಸ್ವಾರ್ಥವನ್ನು ಅಳಿಸಿ ಹಾಕುತ್ತದೆಯಾ, ಕೊನೆಗೆ ಸಮೀರನಿಗೆ ತನ್ನ ಪ್ರೀತಿಯ ಪ್ರಾಣಿ ಸಿಗುತ್ತದೆಯೇ ಎಂಬುದು ಚಿತ್ರದ ತಿರುಳು.

ಮನುಷ್ಯನ ನೆಮ್ಮದಿಯ ಬದುಕಿಗೆ ಮುಗ್ಧತೆ ಮತ್ತು ಪರರ ನೋವಿಗೆ ಸ್ಪಂದಿಸುವ ಗುಣ ಅತ್ಯಗತ್ಯ. ಇವು ವಯಸ್ಸು, ಅಂತಸ್ತು ಹಾಗೂ ವೃತ್ತಿಯನ್ನು ಮೀರಿ ಎಲ್ಲರಲ್ಲೂ ಇರಬಹುದೇ ಎಂದು ಇಣುಕಿ ನೋಡುವ ಪ್ರಯತ್ನವೇ ‘ಒಂದಲ್ಲಾ ಎರಡಲ್ಲಾ...’ ಎಂಬುದು ಸತ್ಯಪ್ರಕಾಶ್ ಉವಾಚ.

ಅಂದಹಾಗೆ ಸ್ಟಾರ್ ನಟರಿಲ್ಲದ, ಕೇವಲ ರಂಗಭೂಮಿ ಹಿನ್ನೆಲೆ ಹೊಂದಿರುವ ಕಲಾವಿದರು ದಂಡು ಚಿತ್ರದಲ್ಲಿದೆ. ಈ ಪೈಕಿ, ಕೆಲ ಮುಖಗಳಿಗೆ ಬೆಳ್ಳಿ ತೆರೆ ಹೊಸದು.

ಸುರೇಶ್ ಪಾತ್ರದಲ್ಲಿ ನಾಗಭೂಷಣ್

ರಂಗಭೂಮಿ ಹಿನ್ನೆಲೆಯ ನಾಗಭೂಷಣ್, ಕೆ. ಇ. ಬಿ. (ಕರ್ನಾಟಕ ಎಂಟರ್‌ಟೈನ್‌ಮೆಂಟ್ ಬೋರ್ಡ್) ಎಂಬ ಯೂಟ್ಯೂಬ್ ಚಾನಲ್‌ನಲ್ಲಿ, ಹಾಸ್ಯಮಯ ವಿಡಿಯೋಗಳನ್ನು ತಯಾರಿಸಿ ನಗಿಸುವ ಮೂಲಕ ಜನರಿಗೆ ಪರಿಚಿತರಾಗಿದ್ದಾರೆ. ನಟನೆ ಮತ್ತು ಬರವಣಿಗೆ ಜತೆಗೆ, ನಿರ್ದೇಶನವನ್ನೂ ಮಾಡಿದ್ದಾರೆ. ಈಗಾಗಲೇ ‘ಜಾನಿ ಜಾನಿ ಯೆಸ್ ಪಪ್ಪಾ’, ‘ಸಂಕಷ್ಟಕರ ಗಣಪತಿ’ ಸೇರಿದಂತೆ ಕೆಲವು ಚಿತ್ರಗಳಲ್ಲೂ ನಟಿಸಿರುವ ನಾಗಭೂಷಣ್ ಈ ಚಿತ್ರದಲ್ಲಿ ಸುರೇಶನಾಗಿ ಕಾಣಿಸಿಕೊಂಡಿದ್ದಾರೆ.

‘ಗೂಡ್ಸ್ ಆಟೊ ಚಾಲಕ ಸುರೇಶನ ಪಾತ್ರ ನನ್ನದು. ಆ ದಿನದ ಬದುಕಿಗಷ್ಟೇ ಮಹತ್ವ ಕೊಡುವ ವ್ಯಕ್ತಿ. ಬೇರೆಯವರಿಗೆ ಏನು ಬೇಕಾದರೂ ಆಗಲಿ, ನಾನು ಚನ್ನಾಗಿರಬೇಕಷ್ಟೆ ಎಂಬ ಸ್ವಾರ್ಥಿ. ಇಡೀ ಕಥೆ ಸಮೀರ ಪಾತ್ರದ ಸುತ್ತ ಗಿರಕಿ ಹೊಡೆಯುತ್ತದೆ. ಆತ ನನ್ನನ್ನು ಭೇಟಿ ಮಾಡಿದಾಗ, ಕಥೆಗೊಂದು ತಿರುವು ಸಿಗುತ್ತದೆ’ ಎಂದು ನಾಗಭೂಷಣ್ ಚಿತ್ರದ ಎಳೆಯನ್ನು ಬಿಚ್ಚಿಡುತ್ತಾರೆ.

‘ಮೇಲ್ನೊಟಕ್ಕೆ ಇದು ಮಕ್ಕಳ ಸಿನಿಮಾ ಎನಿಸುತ್ತದೆ. ಆದರೆ, ಇದು ಅದನ್ನು ಮೀರಿದ, ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರಿಬ್ಬರೂ ನೋಡಲೇಬೇಕಾದ ಚಿತ್ರ. ಹಳ್ಳಿ ಮತ್ತು ನಗರದವರೆಲ್ಲರನ್ನು ಸೆಳೆಯುವ ಶಕ್ತಿ ಇದೆ. ಕೌಟುಂಬಿಕ ಮನರಂಜನೆ ಜತೆಗೆ, ಭಾವುಕತೆ ಹಾಸು ಹೊಕ್ಕಾಗಿದೆ. ಸಮಾಜದ ಸದ್ಯದ ಸ್ಥಿತಿಗೆ ಇಂತಹದ್ದೊಂದು ಸಿನಿಮಾ ಬೇಕಿತ್ತು’ ಎಂದು ಚಿತ್ರದ ಅಗತ್ಯವನ್ನು ಒತ್ತಿ ಹೇಳುತ್ತಾರೆ.

‘ಎಡ, ಬಲ (ಸೈದ್ಧಾಂತಿಕ ಸಂಘರ್ಷ) ಹಾಗೂ ಧರ್ಮದ ಮೇಲುಗಾರಿಕೆಗೆ ಜನ ಕಿತ್ತಾಡಿಕೊಳ್ಳುವುದನ್ನು ನಾವು ನಿತ್ಯ ನೋಡುತ್ತಿದ್ದೇವೆ. ಆದರೆ, ಇವ್ಯಾವುದರ ಪರಿವೇ ಇಲ್ಲದ ಅನ್ಯೋನ್ಯವಾಗಿ ಬದುಕುತ್ತಿರುವ ಜನ ನಮ್ಮಲ್ಲಿ ಇದ್ದಾರೆ. ಅವರಿಗೆ ಇವ್ಯಾವು ಬೇಕಾಗಿಲ್ಲ. ಮನುಷ್ಯ ಪ್ರಜ್ಞಾಪೂರ್ವಕವಾಗಿ ಸೈದ್ಧಾಂತಿಕ ಸಂಘರ್ಷ ಮತ್ತು ಧರ್ಮದ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಂಡಾಗ, ಆತ ಹಾಳಾಗುತ್ತಾನೆನೊ. ಇಂತಹ ಹಲವು ವಿಷಯಗಳನ್ನು ಮನಸ್ಸಿಗೆ ನಾಟಿಸುವ ಶಕ್ತಿ ಚಿತ್ರಕ್ಕಿದೆ’ ಎಂದು ಅಭಿಪ್ರಾಯಡುತ್ತಾರೆ.

ರಾಜಣ್ಣ ಪಾತ್ರದಲ್ಲಿ ಪ್ರಭುದೇವ ಹೊಸದುರ್ಗ

ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿರುವವರು ಪ್ರಭುದೇವ. ‘ವಿಮುಕ್ತಿ’, ‘ಬೆಟ್ಟದ ಜೀವ’ ಸೇರಿದಂತೆ ಕೆಲವು ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಚಿತ್ರದಲ್ಲಿ ರಾಜಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

‘ಚಿತ್ರದ ಮುಖ್ಯ ಪಾತ್ರವಾದ ಸಮೀರನ ನೆರೆ ಮನೆಯವನು ರಾಜಣ್ಣ . ಧರ್ಮ ಮತ್ತು ಜಾತಿ ಮೀರಿದ ಸಹಬಾಳ್ವೆ ಸಾರುವ ಪಾತ್ರ. ತಾರತಮ್ಯ ಭಾವನೆ ಇಲ್ಲದೆ, ಅಕ್ಕಪಕ್ಕದ ಮನೆಯವರ ಕಷ್ಟ ಮತ್ತು ಸುಖಗಳಲ್ಲಿ ಭಾಗಿಯಾಗುವ ಸ್ವಭಾವಿ. ನಮ್ಮ ಹಳ್ಳಿಗಳಲ್ಲಿರುವ ಸೌಹಾರ್ದದ ಸಂಕೇತವಾಗಿ ರಾಜಣ್ಣ ಕಾಣುತ್ತಾನೆ’ ಎಂದು ಪ್ರಭುದೇವ ಪಾತ್ರದ ಬಗ್ಗೆ ವಿವರಿಸುತ್ತಾರೆ.

‘ನಿರ್ದೇಶಕ ಡಿ. ಸತ್ಯಪ್ರಕಾಶ್ ತುಂಬಾ ಸೂಕ್ಷ್ಮವಾಗಿ ಈ ಪಾತ್ರವನ್ನು ಕಡೆದಿದ್ದಾರೆ. ಸಾರ್ವಕಾಲಿಕ ಶಕ್ತಿ ಕಥೆಗಿದೆ. ನಿಂತ ನೀರಾಗದೆ ಹರಿಯುವ ನೀರಿನಂತೆ ಕಥೆ ಸಾಗುವ ಪರಿ ಪ್ರೇಕ್ಷಕನನ್ನು ಹಿಡಿದುಟ್ಟುಕೊಳ್ಳಬಲ್ಲದು. ಸ್ಟಾರ್ ನಟರಿಲ್ಲದ ಈ ಚಿತ್ರದಲ್ಲಿ ಕಥೆಯೇ ಹೀರೊ. ಪಾತ್ರಗಳೆಲ್ಲವೂ ಫಿಲ್ಲರ್‌ಗಳು. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಪ್ರಮುಖ ಪಾತ್ರ ಸಮೀರ ಪ್ರತಿಯೊಬ್ಬರ ಮನದಲ್ಲಿಯೂ ಅಚ್ಚೊತ್ತುತ್ತಾನೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹುಸೇನ್ ಪಾತ್ರದಲ್ಲಿ ರಂಜಾನ್ ಸಾಬ್ ಉಳ್ಳಾಗಡ್ಡಿ

ಹದಿನೆಂಟು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ರಂಜಾನ್ ಸಾಬ್ ಉಳ್ಳಾಗಡ್ಡಿ, ನೀನಾಸಂ ಪದವೀಧರರು. ಮೇರು ಲೇಖಕ ಗಿರೀಶ್ ಕಾರ್ನಾಡ್ ಅವರ ನಾಟಕಗಳನ್ನು ಮತ್ತು ದೇವನೂರು ಮಹಾದೇವ ಅವರಂತಹ ಹಿರಿಯ ಲೇಖಕರ ಕಥೆಗಳನ್ನು ರಂಗರೂಪಕ್ಕಿಳಿಸಿ ಸೈ ಎನಿಸಿಕೊಂಡವರು. ಈ ಚಿತ್ರದಲ್ಲಿ ಹುಸೇನ್‌ ಆಗಿ ಮೊದಲ ಸಲ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

‘ಸಿನಿಮಾದ ಮುಖ್ಯ ಪಾತ್ರವಾದ ಸಮೀರನ ತಂದೆ ಹುಸೇನ್. ಬಡ ಮುಸ್ಲಿಂ ಕುಟುಂಬದ ನೊಗ ಹೊತ್ತಿರುವ ಆತನಿಗೆ, ತನ್ನದೇ ಆದ ಆಸೆ–ಆಕಾಂಕ್ಷಿಗಳಿರುತ್ತವೆ. ಮಗ ಸಮೀರನ ಪಾತ್ರಕ್ಕೆ ಪೂರಕವಾಗಿ ಹುಸೇನ್ ಪಾತ್ರವನ್ನು ಸಮಾಜಮುಖಿಯಾಗಿ ಸೃಷ್ಟಿಸಲಾಗಿದೆ. ಚಿತ್ರದಲ್ಲಿ ತಂದೆ ಮತ್ತು ಮಗನ ಪಾತ್ರವಷ್ಟೇ ಅಲ್ಲದೆ, ಪ್ರತಿ ಪಾತ್ರಗಳೂ ಮನಸ್ಸನ್ನು ನಾಟುತ್ತವೆ’ ಎನ್ನುತ್ತಾರೆ ರಂಜಾನ್ ಸಾಬ್.

‘ಪ್ರೇಕ್ಷಕನೂ ತಾನೊಂದು ಪಾತ್ರವಾಗಿ ಭಾವಿಸಿಕೊಂಡು ಈ ಚಿತ್ರವನ್ನು ಸವಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಜತೆಗೆ, ಚಿತ್ರಮಂದಿರದಿಂದ ಹೊರಬಂದ ಪ್ರೇಕ್ಷಕನಲ್ಲಿ ಬದಲಾವಣೆಯ ತುಡಿತಕ್ಕೆ ಚಿತ್ರ ಪ್ರೇರೇಪಿಸುತ್ತದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT