ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿಯಿಂದ ನಟಿಯರಿಗೆ ಹೆಚ್ಚಿದ ಬೇಡಿಕೆ

Last Updated 15 ಜೂನ್ 2020, 7:54 IST
ಅಕ್ಷರ ಗಾತ್ರ

ತಂತ್ರಜ್ಞಾನದ ವಿಸ್ತಾರ ಹೆಚ್ಚಿದಂತೆ ಬದಲಾವಣೆಯ ಪರ್ವವೇ ಆರಂಭವಾಗುತ್ತದೆ. ಈ ಪರ್ವ ಸಿನಿಮಾ ಕ್ಷೇತ್ರವನ್ನು ಬಿಟ್ಟಿಲ್ಲ. ಸಿನಿಮಾ ಎಂದರೆ ಥಿಯೇಟರ್ ಎಂಬ ಕಾಲ ಇಂದಿಲ್ಲ. ಸಿನಿಮಾ ಹಿಟ್ ಆಗಲಿ ಬಿಡಲಿ ಥಿಯೇಟರ್‌ನಲ್ಲೇ ಸಿನಿಮಾ ಬಿಡುಗಡೆ ಮಾಡುವುದು ಎಂಬುದೆಲ್ಲಾ ಈಗ ಇಲ್ಲವೇ ಇಲ್ಲ. ಈಗ ಸಿನಿಮಾ ಬಿಡುಗಡೆಗೆ ಒಟಿಟಿಯೇ ವೇದಿಕೆ.

ಸ್ಯಾಂಡಲ್‌ವುಡ್‌, ಟಾಲಿವುಡ್‌ ಹಾಗೂ ಕಾಲಿವುಡ್‌ನಲ್ಲಿ ಪುರುಷ ಪ್ರಧಾನ ಸಿನಿಮಾಗಳೇ ಹೆಚ್ಚು. ಬಾಲಿವುಡ್‌ನಲ್ಲಿ ಈ ವರ್ಷ ಒಂದಷ್ಟು ಮಹಿಳಾ ಕೇಂದ್ರಿತ ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ ಎಷ್ಟೋ ಮಹಿಳಾ ಪ್ರಧಾನ ಸಿನಿಮಾಗಳು ಸೂಪರ್ ಹಿಟ್‌ ಆಗಿದ್ದ ಇತಿಹಾಸ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿದೆ. ಆದರೂ ನಿರ್ಮಾಪಕರು ಮಾತ್ರ ಮಹಿಳಾ ಕೇಂದ್ರಿತ ಸಿನಿಮಾಗಳಿಗೆ ಹಣ ಹಾಕಲು ಹಿಂದೇಟು ಹಾಕುತ್ತಾರೆ ಎನ್ನುವುದು ಅಕ್ಷರಶಃ ಸತ್ಯ.

ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವ ನಿರ್ಮಾಪಕನು ಸಿನಿಮಾಗಳಿಗೆ ಹೆಚ್ಚು ಬಂಡವಾಳ ಹೂಡಲು ಸಿದ್ಧರಿಲ್ಲ. ಕಾರಣ ತಾವು ಹಾಕಿದ ಬಂಡವಾಳ ಮರಳಿ ಬರುತ್ತದೆ ಎಂಬುದು ಅವರಿಗೆ ಅನುಮಾನವಾಗಿರುತ್ತದೆ. ಆ ಕಾರಣಕ್ಕೆ ಕಡಿಮೆ ಬಜೆಟ್‌ನ ಸಿನಿಮಾಗಳತ್ತ ಮನಸ್ಸು ವಾಲಿಸುತ್ತಿದ್ದಾರೆ. ಆದರೆ ಇದರಿಂದ ಮುಂದಿನ ದಿನಗಳಲ್ಲಿ ನಾಯಕಿಯರಿಗೆ ಒಳ್ಳೆಯ ದಿನಗಳು ಎದುರುಗೊಳ್ಳಬಹುದು ಎಂಬ ನಿರೀಕ್ಷೆ ಇದೆ.

ಒಂದು ಸಿನಿಮಾಗೆ 5 ರಿಂದ 6 ಕೋಟಿ ರೂಪಾಯಿ ಬಜೆಟ್‌ ಹಾಕಿದರೆ ಒಟಿಟಿ ವೇದಿಕೆಯಲ್ಲಿ ಖಂಡಿತ ಅದನ್ನು ಮರಳಿ ಪಡೆಯಬಹುದು ಎಂಬುದು ನಿರ್ಮಾಪಕರ ಮಾತು. ಆದರೆ ಪುರುಷ ಪ್ರಧಾನ ಸಿನಿಮಾಕ್ಕೆ ಅಷ್ಟು ಕಡಿಮೆ ಬಜೆಟ್ ಸಾಲುವುದಿಲ್ಲ.

ಆ ಕಾರಣಕ್ಕೆ ಒಟಿಟಿ ವೇದಿಕೆಗೆ ಹೊಂದುವಂತೆ ಸಿನಿ ನಿರ್ಮಾಪಕರು ಮಹಿಳಾ ಕೇಂದ್ರಿತ ಸಿನಿಮಾಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಟ್ರೆಂಡ್‌ನಿಂದ ಸಿನಿಮಾಗಳಿಲ್ಲದೇ ಕೊಂಚ ಹಿಂದೆ ಸರಿದಿರುವ ನಾಯಕಿಯರಿಗೂ ಬೇಡಿಕೆ ಬರಬಹುದು ಎಂಬುದು ಸಿನಿರಂಗದ ಮಾತು.

ನಟಿ ನಯನಾತಾರ ನಿರಂತರವಾಗಿ ಮಹಿಳಾ ಕೇಂದ್ರಿತ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾಗಳು ನಿರ್ಮಾಪಕರಿಗೆ ಹೇಳುವಷ್ಟರ ಮಟ್ಟಿಗೆ ಆದಾಯ ತಂದುಕೊಟ್ಟಿಲ್ಲ. ‌

‘ಪೆಂಗ್ವಿನ್’‌ ಸಿನಿಮಾ ಇನ್ನೇನು ಕೆಲದಿನಗಳಲ್ಲಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳು ಒಟಿಟಿಯಲ್ಲೇ ಬಿಡುಗಡೆಯಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.

ಟಾಲಿವುಡ್‌ನಲ್ಲೂ ಅನೇಕ ಮಹಿಳಾ ಕೇಂದ್ರಿತ ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ ಇತ್ತೀಚೆಗೆ ಇಂತಹ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಈಗ ಅಧಿಕ ಸಂಖ್ಯೆಯಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳನ್ನು ಮಾಡುವತ್ತ ಮಸನ್ಸು ಮಾಡುತ್ತಿದ್ದಾರೆ ಸಿನಿ ನಿರ್ಮಾಪಕರು. ಹಾಗಾಗಿ ಸಿನಿಮಾ ನಟಿಯರಿಗೆ ಮುಂದಿನ ದಿನಗಳಲ್ಲಿ ಅದೃಷ್ಟದ ಬಾಗಿಲು ತೆಗೆಯಬಹುದು ಎನ್ನುತ್ತಿದೆ ದಕ್ಷಿಣ ಭಾರತದ ಸಿನಿರಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT