ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ಗೆ ‘ಪದ್ಮಶ್ರೀ’ ಅಭಿಯಾನ; ನಟ ಶಿವರಾಜ್‌ಕುಮಾರ್‌ ಪ್ರತಿಕ್ರಿಯೆ

Last Updated 8 ನವೆಂಬರ್ 2021, 7:21 IST
ಅಕ್ಷರ ಗಾತ್ರ

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎನ್ನುವ ಅಭಿಯಾನ ಆರಂಭವಾಗಿರುವ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್‌ಕುಮಾರ್‌, ‘ಪದ್ಮಶ್ರೀ ಅಲ್ಲ ಯಾವ ಶ್ರೀ ಕೊಟ್ಟರೂ ಅಪ್ಪು ಅಮರಶ್ರೀ. ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾಗಿಲ್ಲ. ಅಪ್ಪು ಯಾವತ್ತಿದ್ದರೂ ಅಮರವಾಗಿರುತ್ತಾನೆ. ಪದ್ಮಶ್ರೀ ಅಥವಾ ಪದ್ಮವಿಭೂಷಣ, ಹೆಸರಿನ ಪಕ್ಕದಲ್ಲಿ ಇರುವ ಕೇವಲ ಒಂದು ಶೀರ್ಷಿಕೆಯಷ್ಟೇ. ಅಪ್ಪು ಎಲ್ಲರ ಆತ್ಮದಲ್ಲಿ ಶ್ರೀ ಆಗಿರುತ್ತಾನೆ’ ಎಂದಿದ್ದಾರೆ.

ಪುನೀತ್‌ ಪುಣ್ಯತಿಥಿ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್‌ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್‌, ‘11ನೇ ದಿನದ ಕಾರ್ಯ ಮಾಡುವುದೇ ಒಂದು ರೀತಿ ನೋವು ಹಾಗೂ ಕಷ್ಟವಾಗಿದೆ. ಇದೆಲ್ಲಾ ಮಾಡುತ್ತಿದ್ದೇವೆಯೇ ಎಂದು ಬೆಳಗ್ಗಷ್ಟೇ ಅಂದುಕೊಂಡೆವು. ಈ ವಿಷಯಗಳನ್ನು ಮಾತನಾಡುವಾಗಲೇ ಬಹಳ ನೋವಾಗುತ್ತದೆ. ವಿಧಿವಿಧಾನದ ಪ್ರಕಾರ ಎಲ್ಲ ನಡೆಯಬೇಕು. ಇನ್ನು ಮುಂದೆ ಏನು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸೋಮವಾರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮನೆಯಲ್ಲಿ ಪೂಜೆ ನಡೆಯಲಿದೆ. ನಾಳೆ ತ್ರಿಪುರವಾಸಿನಿಯಲ್ಲಿ ಅನ್ನಸಂತರ್ಪಣೆ ಇದೆ’ ಎಂದರು.

‘ಅಪ್ಪುವನ್ನು ನೆನಸಿಕೊಂಡಾಗ ಪದಗಳೇ ಬರುವುದಿಲ್ಲ. ಆತನಿಗೆ ನಾನು ಅಣ್ಣ ಅನ್ನುವುದಕ್ಕಿಂತ ಮಿಗಿಲಾಗಿ ನನ್ನ ಮಗ ಅವನು. ನನ್ನ ಮಗನನ್ನೇ ಕಳೆದುಕೊಂಡಿದ್ದೇನೆ ಎನ್ನುವ ರೀತಿ ಆಗಿದೆ. ನನ್ನ ಬಲಗೈಯನ್ನೇ ಕಳೆದುಕೊಂಡಿದ್ದೇನೆ. ಅತ್ತು ದುಃಖ ಕಮ್ಮಿ ಮಾಡಿಕೊಳ್ಳಬಹುದು. ಆದರೆ ಈ ನೋವು ನಾನು ಜೀವಂತವಾಗಿರುವವರೆಗೂ ಇರುತ್ತದೆ. ಜೀವ ಹೋದ ಮೇಲೂ ಈ ನೋವು ಕಾಡಬಹುದು. ಅಂಥಹ ವ್ಯಕ್ತಿತ್ವ ಅಪ್ಪುವದ್ದು. ಚಿಕ್ಕವಯಸ್ಸಿನಿಂದಲೂ ನಾವೇ ಅವನನ್ನು ಆರಾಧಿಸಿದ್ದೇವೆ. ಅವನ ಬೆಳವಣಿಗೆಯನ್ನು ನೋಡಿ ಖುಷಿಪಟ್ಟವರು. ಇನ್ನು ಅಭಿಮಾನಿಗಳು ಇನ್ನೆಷ್ಟು ಆರಾಧಿಸಿರಬೇಡ. ಅಪ್ಪು ನಿಜವಾಗಲೂ ಸಂತೋಷದಿಂದ ಇರಬೇಕು ಎಂದರೆ ಅಭಿಮಾನಿಗಳು ಪ್ರಾಣ ಕಳೆದುಕೊಳ್ಳಬಾರದು. ಅವನ ಹೆಸರನ್ನು ಉಳಿಸಿಕೊಳ್ಳಲು ನೋಡಿ. ಅವನ ಜೀವ ಇನ್ನೂ ಅಮರವಾಗಿರಲಿ. ಅಪ್ಪು ದಾರಿಯನ್ನು ಮುಂದುವರಿಸಲು ನೋಡಿ. ನಿಮ್ಮ ಕೈಲಾದ ಸಹಾಯವನ್ನು ಮಾಡಿ. ಆತ್ಮಹತ್ಯೆ ಮಾಡಿಕೊಂಡರೆ ಅವನಿಗೂ ನೋವಾಗುತ್ತದೆ. ಈಗಲೇ ಎಲ್ಲರೂ ನೋವಿನಲ್ಲಿದ್ದೇವೆ. ಅ‍ಪ್ಪು ಸಾವನ್ನಪ್ಪಿಲ್ಲ. ನಮ್ಮಲ್ಲೇ ಇದ್ದಾನೆ ಎಂದುಕೊಳ್ಳಿ. ಅಭಿಮಾನಿಗಳೇ ಅಪ್ಪು ನಮಗೆ’ ಎಂದರು.

‘ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ಅಪ್ಪುವನ್ನು ಕೊಂಡಾಡುತ್ತಿದ್ದಾರೆ ಎಂದರೆ ಅವನ ವ್ಯಕ್ತಿತ್ವ ಅಂಥಹದು. ತಂದೆಗೆ ತಕ್ಕ ಮಗ ಅಪ್ಪು. ಮೊನ್ನೆ ತಾನೇ ಅಣ್ಣನ ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದಿದ್ದ ಅಪ್ಪು. ಇದನ್ನು ನೆನೆಸಿಕೊಂಡಾಗಲೇ ನೋವಾಗುತ್ತದೆ. ಕಳೆದೊಂದು ತಿಂಗಳಿಂದ ನಾನು, ಅಪ್ಪು ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಅವರು ಜೊತೆಗೇ ಹಲವು ಕಾರ್ಯಕ್ರಮಗಳಿಗೆ ಹೋಗಿದ್ದೆವು’ ಎಂದು ನೆನಪಿಸಿಕೊಂಡರು ಶಿವರಾಜ್‌ಕುಮಾರ್‌.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT