ಶನಿವಾರ, ಮೇ 15, 2021
25 °C

ತಮಿಳು ಚಿತ್ರರಂಗದ ಪ್ರಸಿದ್ಧ ನಟ ವಿವೇಕ್‌ ಇನ್ನಿಲ್ಲ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನಟ ವಿವೇಕ್‌- ವಿವೇಕ್‌ ಅವರ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದ ವಿಡಿಯೊದ ಸ್ಕ್ರೀನ್‌ ಶಾಟ್‌

ಚೆನ್ನೈ: ತಮಿಳು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಖ್ಯಾತಿ ಗಳಿಸಿರುವ ನಟ ವಿವೇಕ್‌ (59) ಶನಿವಾರ ನಿಧನರಾದರು. ಶುಕ್ರವಾರ ಬೆಳಿಗ್ಗೆ ಅವರಿಗೆ ಹೃದಯ ಸ್ತಂಭನವಾಗಿತ್ತು.

ಹೃದಯ ಸ್ತಂಭನ ಒಳಗಾಗಿ ಮೂರ್ಛೆ ಹೋಗಿದ್ದ ಅವರನ್ನು ತಕ್ಷಣವೇ ಪತ್ನಿ ಮತ್ತು ಮಗಳು ಆಸ್ಪತ್ರೆಗೆ ಸೇರಿಸಿದ್ದರು. ಗುರುವಾರ (ಏ.15) ಅವರು ಕೋವಿಡ್‌ ಲಸಿಕೆ ಪಡೆದಿದ್ದರು. ಅರ್ಹರಾದ ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ಸಂದೇಶವನ್ನೂ ನೀಡಿದ್ದರು.

ಚೆನ್ನೈನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಕೋವಿಡ್‌ ಲಸಿಕೆ ಪಡೆದದ್ದಕ್ಕೂ ಹೃದಯ ಸ್ತಂಭನ ಸಂಭವಿಸಿದ್ದಕ್ಕೂ ಸಂಬಂಧವಿಲ್ಲ ಎಂದು ಆಸ್ಪತ್ರೆ ವೈದ್ಯರು ಶುಕ್ರವಾರ ಸ್ಪಷ್ಟಪಡಿಸಿದ್ದರು. ಹೃದಯದ ರಕ್ತನಾಳಗಳಲ್ಲಿ ಶೇ 100ರಷ್ಟು ಅಡ್ಡಗಟ್ಟುವಿಕೆ ಉಂಟಾಗಿ ಹೃದಯ ಸ್ತಂಭನವಾಗಿತ್ತು. ಕೃತಕವಾಗಿ ರಕ್ತವನ್ನು ಪಂಪ್ ಮಾಡುವ ವ್ಯವಸ್ಥೆ ಅಳವಡಿಸಲಾಗಿತ್ತು.

ಅವರಿಗೆ ಆಂಜಿಯೊಗ್ರಾಮ್‌ ಮತ್ತು ಆಂಜಿಯೊಪ್ಲಾಸ್ಟಿ ಚಿಕಿತ್ಸೆ ನಡೆಸಲಾಗಿತ್ತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿವೇಕ್‌ ಅವರು ರಜನಿಕಾಂತ್‌, ವಿಜಯ್‌, ಕಮಲ್ ಹಾಸನ್, ಅಜಿತ್‌ ಸೇರಿ ಪ್ರಮುಖ ನಾಯಕರೊಂದಿಗೆ ನಟಿಸಿದ್ದಾರೆ. 2012ರ ಹಿಂದಿಯ ವಿಕ್ಕಿ ಡೋನರ್ ಚಿತ್ರದ ತಮಿಳು ರಿಮೇಕ್‌ 'ಧಾರಾಳ ಪ್ರಭು' ಅವರು ಕಾಣಿಸಿಕೊಂಡ ಕೊನೆ ಚಿತ್ರ.

ನಿರ್ದೇಶಕ ಕೆ.ಬಾಲಚಂದರ್‌ ಅವರು ವಿವೇಕ್‌ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. 1987ರಿಂದ ವಿವೇಕ್‌ ಸಿನಿಮಾ ಪ್ರಯಾಣ ಶುರುವಾಯಿತು. ಸಾಮಿ, ಅನಿಯನ್‌, ಶಿವಾಜಿ, ರನ್‌, ಕನ್ನಡದ ಚಂದ್ರ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಚಿತ್ರರಂಗದ ಹಲವು ಪ್ರಮುಖರು ಹಾಗೂ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು