ಶುಕ್ರವಾರ, ಜುಲೈ 23, 2021
23 °C

ಅರಣ್ಯಾಭಿವೃದ್ಧಿಗೆ ಜೈ ಎಂದ ‘ಬಾಹುಬಲಿ’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಹುಬಲಿ‘ ಸಿನಿಮಾ ಖ್ಯಾತಿಯ ನಟ ಪ್ರಭಾಸ್‌ ಒಂದು ಸಾವಿರ ಎಕರೆ ಅರಣ್ಯ ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ!

ಈ ಸುದ್ದಿ ಓದಿ, ‘ಇದೇನಿದು ಪ್ರಭಾಸ್ ನಟನೆ ಬಿಟ್ಟು, ಅರಣ್ಯ ಅಭಿವೃದ್ಧಿಯತ್ತ ಹೊರಟಿದ್ದಾರಲ್ಲಾ‘ ಅಂತ ಅಚ್ಚರಿಪಡಬೇಡಿ. ಅವರು ಸಿನಿಮಾ ಬಿಟ್ಟಿಲ್ಲ. ‘ಗ್ರೀನ್‌ ಇಂಡಿಯಾ’ ಅಭಿಯಾನದ ಭಾಗವಾಗಿ ಅರಣ್ಯ ಪ್ರದೇಶದ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.

ತೆಲಂಗಾಣದ ರಾಜ್ಯಸಭಾ ಸದಸ್ಯ ಜೆ. ಸಂತೋಷ್‌ಕುಮಾರ್ ಅವರು ‘ಗ್ರೀನ್‌ ಇಂಡಿಯಾ 3.0‘ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದ ಅಡಿ 1550 ಎಕರೆ ವಿಸ್ತಾರದ ‘ಕೀಸರ ಅರಣ್ಯ ಪ್ರದೇಶ‘ ಅಭಿವೃದ್ಧಿಪಡಿಸಲು ದತ್ತು ತೆಗೆದುಕೊಂಡಿದ್ದಾರೆ. ಇದಕ್ಕಾಗಿ ತಮ್ಮ ಸಂಸದರ ನಿಧಿಯ ಅನುದಾನ ನೀಡಿದ್ದಾರೆ. ಅಭಿಯಾನದ ಅಡಿಯಲ್ಲಿ ಶಾಲಾ ಮಕ್ಕಳು, ಸ್ವಯಂ ಸೇವಕರಿಂದ ಈ ಅರಣ್ಯ ಪ್ರದೇಶದಲ್ಲಿ ಗಿಡ ನೆಡಿಸುವ ಕಾರ್ಯಕ್ರಮವೂ ಇದೆ.

ಸಂಸದ ಸಂತೋಷ್‌ಕುಮಾರ್ ಈ ಅಭಿಯಾನ ಆಂದೋಲನದಂತೆ ನಡೆಯಬೇಕೆಂಬ ಉದ್ದೇಶದಿಂದ ಇದನ್ನು ‘ಗೀನ್‌ ಇಂಡಿಯಾ 3.0‘ ಚಾಲೆಂಜ್ ರೀತಿ ಮುಂದುವರಿಸಿದ್ದಾರೆ. ಈ ಚಾಲೆಂಜ್‌ ಅನ್ನು ಒಬ್ಬರಿಂದ ಒಬ್ಬರಿಗೆ ತಲುಪಿಸಬೇಕು. ಚಾಲೆಂಜ್ ಸ್ವೀಕರಿಸಿದವರು ಕನಿಷ್ಠ ಮೂರು ಗಿಡ ನೆಡಬೇಕು. ಸಂತೋಷ್‌ಕುಮಾರ್ ಈ ಚಾಲೆಂಜ್‌ ಅನ್ನು ಪ್ರಭಾಸ್ ಅವರ ಸೋದರ ಮಾವ, ನಟ ಹಾಗೂ ಕೇಂದ್ರ ಮಾಜಿ ಸಚಿವ ಕೃಷ್ಣಂ ರಾಜು ಅವರಿಗೆ ತಲುಪಿಸಿದ್ದರು. ಅವರು ಪ್ರಭಾಸ್‌ಗೆ ಚಾಲೆಂಜ್‌ ಹಸ್ತಾಂತರಿಸಿದ್ದಾರೆ.

ಸವಾಲನ್ನು ಖುಷಿಯಿಂದ ಸ್ವೀಕರಿಸಿದ ಸಾಹೋ ನಟ ತಮ್ಮ ಮನೆಯಂಗಳದಲ್ಲಿ ಮೂರು ಸಸಿಗಳನ್ನು ನೆಟ್ಟಿದ್ದಾರೆ. ಸಂಸದ ಸಂತೋಷ್‌ಕುಮಾರ್‌ ಸಹ ಇದಕ್ಕೆ ಸಾಕ್ಷಿಯಾಗಿದ್ದಾರೆ. ಮನೆಯಂಗಳದಲ್ಲಿ ಸಸಿ ನೆಟ್ಟ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಸಂತೋಷ್‌ಕುಮಾರ್‌ ಸೂಚಿಸುವ 1000 ಎಕರೆ ಮೀಸಲು‌ ಅರಣ್ಯವನ್ನು ಅಭಿವೃದ್ಧಿಪಡಿಸುತ್ತೇನೆ. ಕೀಸರ ಅರಣ್ಯ ದತ್ತು ತೆಗೆದುಕೊಂಡ ಅವರ ‌ಕಾರ್ಯದಿಂದ ಉತ್ತೇಜಿತಗೊಂಡಿದ್ದೇನೆ. ಅವರ ತತ್ವ ಹಾಗೂ ಸರಳ ನಡೆಯೂ ನನಗಿಷ್ಟ. ಅವರ‌ ಕೆಲಸ ಅನುಕರಣೀಯವಾದುದು. ಗಿಡ ನೆಡುವುದನ್ನು ಒಂದು ಆಂದೋಲನದಂತೆ ಮುಂದುವರಿಸಬೇಕು. ಕೋಟಿ ಕೋಟಿ ಲೆಕ್ಕದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು’ ಎಂದು ಪ್ರಭಾಸ್ ಅಭಿಮಾನಿಗಳಿಗೆ‌ ಕರೆ ನೀಡಿದ್ದಾರೆ.  

ನಟರಾದ ರಾಮ್‌ ಚರಣ್‌, ರಾನಾ ದಗ್ಗುಬಾಟಿ ಹಾಗೂ ಶ್ರದ್ಧಾ ಕಪೂರ್‌ ಅವರಿಗೆ ಪ್ರಭಾಸ್ ಚಾಲೆಂಜ್‌ ಹಾಕಿದ್ದಾರೆ. ನೆಚ್ಚಿನ ನಟನ ಈ ನಿರ್ಧಾರವನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು ಅವರ ಕೆಲಸವನ್ನು ಅನುಕರಿಸುವುದಾಗಿ ಪಣ ತೊಟ್ಟಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು