ಮಂಗಳವಾರ, ಜನವರಿ 18, 2022
22 °C

ಅಪ್ಪು ಕನಸಿನ ಪಯಣ: ಶೀರ್ಷಿಕೆ ಟೀಸರ್‌ ಡಿ.6ಕ್ಕೆ ರಿಲೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದ ಗುಡಿ’ ಕನಸನ್ನು ನನಸು ಮಾಡುವ ಮುಹೂರ್ತವನ್ನು ಪುನೀತ್‌ ಅವರ ಪತ್ನಿ ಅಶ್ವಿನಿ ಅವರು ಘೋಷಿಸಿದ್ದಾರೆ. 

ಶುಕ್ರವಾರ ಟ್ವೀಟ್‌ ಮಾಡಿರುವ ಅಶ್ವಿನಿ, ‘ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ. ಶೀರ್ಷಿಕೆ ಟೀಸರ್‌ ಡಿ.6ಕ್ಕೆ ಅನಾವರಣಗೊಳ್ಳಲಿದೆ’ ಎಂದಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ರಾಷ್ಟ್ರಪ್ರಶಸ್ತಿ ವಿಜೇತ ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್‌. ಅವರ ಜೊತೆಗೂಡಿ ಪುನೀತ್‌ ‘ಗಂಧದ ಗುಡಿ’ ಹೆಸರಿನಲ್ಲಿ ಡಾಕ್ಯೂಫಿಲಂ ಒಂದನ್ನು ನಿರ್ಮಾಣ ಮಾಡಿದ್ದರು.

ಕರ್ನಾಟಕದ ವನ್ಯಲೋಕ, ವನ್ಯಸಂಪತ್ತನ್ನು ಪರಿಚಯಿಸುವ ಈ ಸಾಕ್ಷ್ಯಚಿತ್ರದ ಟೀಸರ್‌ ನ.1ಕ್ಕೆ ಅನಾವರಣಗೊಳ್ಳಬೇಕಿತ್ತು. ಆದರೆ ಅಪ್ಪು ಅಕಾಲಿಕ ನಿಧನದಿಂದಾಗಿ ಇದು ಸಾಧ್ಯವಾಗಿರಲಿಲ್ಲ. ನಾಗರಹೊಳೆ, ಕಾಳಿನದಿ, ಹೊಸಪೇಟೆ ಸೇರಿದಂತೆ ಕರ್ನಾಟಕದ ಹಲವು ಜಾಗಗಳಲ್ಲಿ ಸುತ್ತಿ ಇದರ ಚಿತ್ರೀಕರಣ ನಡೆಸಲಾಗಿದೆ. ಅಪ್ಪು ಕನಸನ್ನು ನನಸು ಮಾಡುವ ಕುರಿತು ಕೆಲ ದಿನಗಳ ಹಿಂದಷ್ಟೇ ಟ್ವೀಟ್‌ ಮಾಡಿದ್ದ ಅಶ್ವಿನಿ, ‘ಅಪ್ಪು ಅವರ ಕನಸೊಂದು ನವೆಂಬರ್‌ 1ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ಅಲ್ಪವಿರಾಮವಷ್ಟೆ. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು’ ಎಂದಿದ್ದರು. ಲಿಂಕ್‌:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು