ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತುರಾಜನ ಮುತ್ತು ಎತ್ತ ಹೋದೆಯೋ: ಪುನೀತ್‌ಗೆ ಗೀತನಮನ– ದೀಪನಮನ

Last Updated 16 ನವೆಂಬರ್ 2021, 19:42 IST
ಅಕ್ಷರ ಗಾತ್ರ

ಬೆಂಗಳೂರು: ಮುತ್ತುರಾಜ ಹೆತ್ತ ಮುತ್ತು ಎತ್ತ ಹೋದೆಯೋ...ಅತ್ತು ಕರೆದರೂ ಮತ್ತೆ ಬಾರದಾದೆಯೋ...

– ಹಾಡು ಅನುರಣಿಸುತ್ತಿದ್ದಂತೆಯೇ ಕತ್ತಲಾವರಿಸಿದ ಅರಮನೆ ಮೈದಾನದ ‘ಪುನೀತ ನಮನ’ದ ಸಭಾಂಗಣದಲ್ಲಿ ಬೆಳಗಿದ ಮೋಂಬತ್ತಿಗಳೂ ಮಂದ ಬೆಳಕು ಸೂಸುತ್ತಾ ಮೌನಗೌರವ ಸಲ್ಲಿಸಿದವು. ಅಭಿಮಾನಿಗಳು, ಸಿನಿಮಾ ಕ್ಷೇತ್ರದ ನೂರಾರು ಜನರ ಮೊಬೈಲ್‌ ಟಾರ್ಚ್‌ಗಳು ಬೆಳಗಿ ಅಗಲಿದ ಅಪ್ಪು ಎಂಬ ಬೆಳಕನ್ನು ಹುಡುಕಾಡಿದವು.

ಇದು ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ‘ಪುನೀತ ನಮನ’ದಲ್ಲಿ ನಡೆದ ಗೀತನಮನ– ದೀಪನಮನದ ಸಂದರ್ಭದ ಭಾವುಕ ಕ್ಷಣಗಳ ನೋಟ. ಅತ್ತ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ವಿವಿಧ ಗಣ್ಯರು ಪುಷ್ಪಾರ್ಚನೆ ಮಾಡಿದರು. ಪುನೀತ್‌ ಅವರ ಧ್ವನಿ ಸಂಯೋಜಿಸಿದ ವಿಡಿಯೋವೊಂದು ವೇದಿಕೆಯ ಪರದೆಯಲ್ಲಿ ಬಿತ್ತರವಾಯಿತು. ಪರದೆಯಲ್ಲಿ ಮೂಡಿಬಂದ ಪುನೀತ್‌ ಮತ್ತೆ ಜೀವಂತವಾಗಿ ಕಾಣಿಸಬಾರದೇ ಎಂದು ಸಭಾಂಗಣದಲ್ಲಿದ್ದ ಪ್ರತಿ ಮನಸ್ಸುಗಳೂ ಆಶಿಸಿದವು.

ಇದಕ್ಕೂ ಮುನ್ನ ಪುನೀತ್‌ ಅವರ ಬಗೆಗಿನ ವಿಡಿಯೋ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು. ಹುಟ್ಟಿನಿಂದ ಈವರೆಗಿನ ಜೀವನ ಚಿತ್ರಣ, ಸಿನಿಮಾ ಬದುಕು, ಸಮಾಜ ಸೇವೆ ಹಾಗೂ ಅಂತಿಮ ಯಾತ್ರೆಯವರೆಗಿನ ಸಮಗ್ರ ಕಥನ ನಟ ಸುದೀಪ್‌ ಅವರ ಹಿನ್ನೆಲೆ ಧ್ವನಿಯಲ್ಲಿ ಮೂಡಿಬಂದಿತು. ದೃಶ್ಯ–ಧ್ವನಿ ಪರಿಣಾಮ ಇಡೀ ಸಭಾಂಗಣದಲ್ಲಿ ಗಂಭೀರ ಮೌನ ಸೃಷ್ಟಿಸಿತು.

ಮೈಸೂರಿನ ಶಕ್ತಿಧಾಮದ ಮಕ್ಕಳು ಗೀತನಮನ ಸಲ್ಲಿಸಿದರು. ಗೀತೆಯಲ್ಲಿ ರಾಜ್‌ಕುಮಾರ್ ಕುಟುಂಬದ ಸೇವೆ, ಸದ್ಯ ಅದನ್ನು ನೋಡಿಕೊಳ್ಳುತ್ತಿರುವ ಶಿವರಾಜ್‌ಕುಮಾರ್‌ ಮತ್ತು ಗೀತಾ ಶಿವರಾಜ್‌ಕುಮಾರ್‌ ಶಕ್ತಿಧಾಮದೊಂದಿಗೆ ಪುನೀತ್‌ ನಂಟು ಹೊರಹೊಮ್ಮಿತು.

ಪುನೀತ್‌ ದೃಶ್ಯಗಳನ್ನು ನೋಡುತ್ತಾ ಅವರ ಅಣ್ಣ ಶಿವರಾಜ್‌ ಕುಮಾರ್‌ ಅವರ ಕಣ್ಣಾಲಿಗಳು ತುಂಬಿಬಂದವು. ಪುನೀತ್‌ ಪತ್ನಿ ಅಶ್ವಿನಿ ಮತ್ತು ಮಕ್ಕಳು ದುಃಖದ ಮೌನಕ್ಕೆ ಜಾರಿದ್ದರು. ಒಂದು ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಅಭಿಮಾನಿಗಳು ‘ಪವರ್‌ ಸ್ಟಾರ್‌ಗೆ ಜೈ’, ‘ಪುನೀತ್‌ಗೆ ಜಯವಾಗಲಿ’ ಎಂದು ಜಯಘೋಷ ಕೂಗುತ್ತಿದ್ದರು. ಎಲ್ಲ ಗಣ್ಯರ ಬಾಯಲ್ಲಿ ಪುನೀತ್‌ ಅವರ ನಡವಳಿಕೆ ಮತ್ತು ವಿವಾದಾತೀತ ವ್ಯಕ್ತಿತ್ವ ಹಾಗೂ ಸೇವಾಭಾವವೇ ಬಣ್ಣನೆಗೆ ಒಳಗಾಯಿತು.

ನಮಗೆ ಪ್ರೀತಿ ಕೊಟ್ಟು

ನಮ್ಮನೆಲ್ಲ ಬಿಟ್ಟು

ಕಾಣದಂತೆ ಮಾಯವಾದರೋ

ನಮ್ಮ ಅಪ್ಪು ಕೈಲಾಸ ಸೇರಿಕೊಂಡರು...

ಕವಿರಾಜ್‌ ಅವರ ಸಾಹಿತ್ಯದ ಈ ಹಾಡನ್ನು ಗುರುಕಿರಣ್‌, ವಿಜಯ ಪ್ರಕಾಶ್‌ ಮತ್ತು ಖ್ಯಾತ ಗಾಯಕರು ಸೇರಿ ಹಾಡಿದರು. ಕಾರ್ಯಕ್ರಮದ ಮುನ್ನ ಸ್ಯಾಕ್ಸೋಫೋನ್‌ ಕಛೇರಿ ನಡೆಯಿತು.

ಮುಖ್ಯಮಂತ್ರಿ ಭಾಷಣದ ಬಳಿಕ ಪುನೀತ್‌ ಪತ್ನಿ ಅಶ್ವಿನಿ ಸಭಾಂಗಣದಿಂದ ಮನೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT