ಎವರ್‌ಗ್ರೀನ್ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್ ನಟಿ ರೇಖಾ ಅವರ ವೈಯಕ್ತಿಕ ಜೀವನ ಬಗೆದಷ್ಟು ನಿಗೂಢವಾಗಿದೆ. ಅಮಿತಾಭ್ ಜೊತೆ ಪ್ರೇಮ, ಪತಿ ಮುಖೇಶ್ ಅವರ ಆತ್ಮಹತ್ಯೆ ಹೀಗೆ ಹಲವು ವಿಷಯಗಳು ರೇಖಾ ಅವರ ಜೀವನದ ಸುತ್ತ ಗಿರಿಕಿ ಹೊಡೆಯುತ್ತಲೇ ಇವೆ. ಇದೀಗ ರೇಖಾ ಅವರು ತಮ್ಮ ಸೆಕ್ರಟರಿ ಜೊತೆಯೇ ಸಹ–ಜೀವನ(ಲಿವ್–ಇನ್ ರಿಲೆಷನ್‌ಶಿಪ್) ನಡೆಸುತ್ತಿದ್ದಾರೆ ಎಂಬ ವಿಷಯ ಅವರ ಜೀವನ ಚರಿತ್ರೆಯಿಂದ ಬಹಿರಂಗವಾಗಿದೆ!
ಯಾಸೀರ್ ಉಸ್ಮಾನ್ ಬರೆದಿರುವ 'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ' ಜೀವನ ಚರಿತ್ರೆಯಲ್ಲಿ ನಟಿಯ ಜೀವನದ ಹಲವು ಗೌಪ್ಯ ಮಾಹಿತಿಗಳು ತೆರೆದುಕೊಂಡಿವೆ. ಪತಿಯ ಆತ್ಮಹತ್ಯೆ ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವೊಂದು ಶಾಕಿಂಗ್ ವಿಷಯಗಳು ಬಯಲಾಗಿವೆ. ಅದರಲ್ಲೂ ಸ್ನೇಹಿತೆ, ಹಿರಿಯ ನಟಿ ಫರ್ಝಾನಾ (ರೇಖಾ ಅವರ ಪರ್ಸನಲ್ ಸೆಕ್ರೆಟರಿ ಕೂಡ ಹೌದು) ಜೊತೆಗಿನ ರೇಖಾ ಅವರ ಸಂಬಂಧದ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಜೀವನಚರಿತ್ರೆಯಲ್ಲಿ ಏನಿದೆ?
ಪುಸ್ತಕದ ಒಂದು ಭಾಗಗವು ಹೀಗೆ ಹೇಳುತ್ತದೆ. 'ಫರ್ಝಾನಾ ರೇಖಾ ಅವರ ಸಂಗಾತಿ, ಸಲಹೆಗಾರ್ತಿ, ಸ್ನೇಹಿತೆ ಎಲ್ಲವೂ ಆಗಿದ್ದಳು. ಅವಳಿಲ್ಲದೆ ರೇಖಾ ಬದುಕಲು ಸಾಧ್ಯವಿರಲಿಲ್ಲ. ಫರ್ಝಾನಾ ಮತ್ತು ರೇಖಾ ಸಹ ಜೀವನ ನಡೆಸುತ್ತಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ರೇಖಾ ಅವರ ಶಯನ ಗೃಹದೊಳಗೆ(ಬೆಡ್ ರೂಮ್) ಪ್ರವೇಶ ಪಡೆದ ಏಕೈಕ ವ್ಯಕ್ತಿ ಅಂದರೆ ಅದು ಫರ್ಝಾನಾ ಮಾತ್ರ. ಮನೆ ಕೆಲಸದವರು ಕೂಡ ಕೋಣೆಯೊಳಗೆ ಪ್ರವೇಶ ಮಾಡುವಂತಿರಲಿಲ್ಲ'
'ರೇಖಾ ಅವರ ಜೀವನದ ಪ್ರತಿಯೊಂದು ವಿಷಯವನ್ನು ಫರ್ಝಾನಾ ಅವರೇ ನಿಯಂತ್ರಿಸುತ್ತಿದ್ದರು. ರೇಖಾ ಅವರಿಗೆ ಬರುವ ಪ್ರತಿ ಪೋನ್ ಕರೆಯನ್ನು ಪರಿಶೀಲನೆ ಮಾಡುತ್ತಾರೆ. ಎಲ್ಲ ಆಗು ಹೋಗುಗಳ ಬಗ್ಗೆ ಪ್ರತಿ ನಿಮಿಷ ಗಮನ ಹರಿಸುತ್ತಾರೆ. ರೇಖಾ ಅವರ ಈಗಿನ ವ್ಯಕ್ತಿತ್ವದ ಹಿಂದೆ ಫರ್ಝಾನಾ ಅವರ ಪ್ರಭಾವವೂ ಇದೆ' ಎಂದು ಪುಸ್ತಕ ತಿಳಿಸಿದೆ.
'ರೇಖಾ ಅವರ ಪತಿ ಆತ್ಮಹತ್ಯೆ ಹಿಂದೆಯೂ ಫರ್ಝಾನಾ ಅವರ ಕೈವಾಡವಿದೆ' ಎಂದು ಪುಸ್ತಕದಲ್ಲಿ ಆರೋಪಿಸಲಾಗಿದೆ.
ಮದುವೆಯಾದ ವರ್ಷವೇ ಆತ್ಮಹತ್ಯೆ ಮಾಡಿಕೊಂಡಿದ್ದ ಪತಿ!
ದೆಹಲಿ ಮೂಲದ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು 1990ರಲ್ಲಿ ರೇಖಾ ವಿವಾಹವಾಗಿದ್ದರು. ಅದೇ ವರ್ಷ ಮುಖೇಶ್ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ರೇಖಾ ಲಂಡನ್‌ನಲ್ಲಿದ್ದರು ಎನ್ನಲಾಗಿದೆ. ಪತ್ರದಲ್ಲಿ 'ನನ್ನ ಸಾವಿಗೆ ಯಾರೂ ಕಾರಣರಲ್ಲ' ಎಂದು ಮುಖೇಶ್ ಹೇಳಿದ್ದರು. ಪತಿಯ ಸಾವಿಗೆ ಪರೋಕ್ಷವಾಗಿ ರೇಖಾ ಅವರೇ ಕಾರಣ ಎಂದು ಹೇಳಲಾಗಿತ್ತು. ಅಂದಿನಿಂದ ಇಂದಿನವರೆಗೂ ರೇಖಾ ಈ ಅಪವಾದದ ಜೊತೆಯೇ ಬದುಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.