ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Actress Leelavathi | ನಟಿ ಲೀಲಾವತಿಗೆ ತುಳುನಾಡು, ಮೀನೂಟದ ನಂಟು

ಬೆಳ್ತಂಗಡಿಯಲ್ಲಿ ಹುಟ್ಟಿ, ಬಾಲ್ಯ ಕಳೆದಿದ್ದು ಕಂಕನಾಡಿಯಲ್ಲಿ
Published 9 ಡಿಸೆಂಬರ್ 2023, 5:51 IST
Last Updated 9 ಡಿಸೆಂಬರ್ 2023, 5:51 IST
ಅಕ್ಷರ ಗಾತ್ರ

ಮಂಗಳೂರು: ‘ಅಮ್ಮನವರಿಗೆ ಮೀನು ಊಟವೆಂದರೆ ಇಷ್ಟ, ಅದರಲ್ಲೂ ಮರುವಾಯಿ, ಸಿಗಡಿ ಅವರಿಗೆ ಅಚ್ಚುಮೆಚ್ಚು. ತುಳುನಾಡಿನ ಅಡುಗೆ, ತುಳು ನೆಲವನ್ನು ಅತೀವವಾಗಿ ಪ್ರೀತಿಸುತ್ತಿದ್ದರು’ ಎನ್ನುತ್ತಲೇ ಮಾತಿಗಿಳಿದರು ರಂಗ ನಿರ್ದೇಶಕ ತಮ್ಮ ಲಕ್ಷ್ಮಣ.

‘2009ರಲ್ಲಿ ನಾನು ನಿರ್ದೇಶಿಸಿದ ‘ಯಾರದು’ ಕನ್ನಡ ಸಿನಿಮಾದಲ್ಲಿ ಲೀಲಾವತಿ ನಟಿಸಿದ್ದರು. ಅದು ಅಚ್ಚಳಿಯದ ನೆನಪು‘ ಎನ್ನುತ್ತ ಚಿತ್ರನಟಿ ಲೀಲಾವತಿ ಅವರ ಜೊತೆಗಿನ ಒಡನಾಟದ ನೆನಪಿನ ಪುಟಗಳನ್ನು ತಿರುವಿದರು.

‘ಪಗೆತ ಪುಗೆ, ‘ಬಿಸತ್ತಿ ಬಾಬು’, ‘ಯಾನ್‌ ಸನ್ಯಾಸಿ ಆಪೆ’, ‘ಸಾವಿರಡೊರ್ತಿ ಸಾವಿತ್ರಿ’, ‘ಬದ್ಕೆರೆಬುಡ್ಲೆ’ ಸೇರಿದಂತೆ ಎಂಟು ತುಳು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ತುಳು ಸಿನಿಮಾ ರಂಗಕ್ಕೆ ಅವರ ಕೊಡುಗೆ ದೊಡ್ಡದು. ತುಳು ಭಾಷೆಯ ಮೇಲೆ ಅಪಾರ ಅಭಿಮಾನ ಹೊಂದಿದ್ದ ಅವರು, ಭೇಟಿಯಾದಾಗಲೆಲ್ಲ ತುಳುವಿನಲ್ಲೇ ಮಾತನಾಡುತ್ತಿದ್ದರು. ಅವರ ಪುತ್ರ ವಿನೋದ್‌ರಾಜ್ ಕೂಡ ತುಳು ಭಾಷೆ ಬಲ್ಲವರು. ಸಿನಿಮಾ ಶೂಟಿಂಗ್ ವೇಳೆ ನಾವು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು. ವಾತ್ಸಲ್ಯಮಯಿಯಾಗಿದ್ದ ಲೀಲಾವತಿ ಅವರು ಅದೆಷ್ಟೋ ಬಾರಿ ತಮ್ಮ ಕೈಯಾರೆ ಊಟ ಬಡಿಸಿದ್ದನ್ನು ಮರೆಯಲು ಸಾಧ್ಯವಿಲ್ಲ’ ಎಂದು ‘ಪ್ರಜಾವಾಣಿ’ ಜೊತೆ ಅನುಭವ ಹಂಚಿಕೊಂಡರು.

ಲೀಲಾವತಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನವರು. ಮಂಗಳೂರಿನ ಕ್ರಿಶ್ಚಿಯನ್ ಕುಟುಂಬವೊಂದು ಅವರನ್ನು ಸಾಕಿ ಸಲಹಿತ್ತು. ಎರಡನೇ ತರಗತಿವರೆಗೆ ಕಂಕನಾಡಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಅವರು ಶಿಕ್ಷಣ ಪಡೆದಿದ್ದಾರೆ. ಬಾಲ್ಯದ ತುಳುನಾಡಿನ ನಂಟು, ಆ ಸೆಳೆತವನ್ನು ಕೊನೆಯ ತನಕವೂ ಕಾಪಿಟ್ಟುಕೊಂಡಿದ್ದರು. ವರ್ಷಕ್ಕೆ ಒಂದೆರಡು ಬಾರಿಯಾದರೂ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಿಗೆ ಅವರು ಭೇಟಿ ನೀಡುತ್ತಿದ್ದರು.

‘ತುಳು ಚಿತ್ರರಂಗಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲಿ ನನ್ನದೊಂದು ಪುಸ್ತಕ ಬಿಡುಗಡೆ ವೇಳೆ ಅಮ್ಮನವರನ್ನು (ಲೀಲಾವತಿ) ಭೇಟಿಯಾಗಿದ್ದೆ. ಆ ದಿನ ಅಕ್ಟೋಬರ್ 31. ಅದೇ ನನ್ನ ಕೊನೆಯ ಭೇಟಿಯಾಗಿರಬಹುದು ಅಂದುಕೊಂಡಿರಲಿಲ್ಲ’ ಎಂದು ತಮ್ಮ ಲಕ್ಷ್ಮಣ ನೋವಿನಿಂದ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT