ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಲ್ಲಿ ಸಿನಿಮಾ ಶೂಟಿಂಗ್‌: ಗಗನ ನೌಕೆಯಲ್ಲಿ ತೆರಳಿದ ರಷ್ಯಾ ಸಿನಿಮಾ ತಂಡ

ರಿಯಲ್‌ ಜತೆಗೆ ರೀಲ್‌ನಲ್ಲೂ ಅಮೆರಿಕವನ್ನು ಹಿಂದಿಕ್ಕುವ ಪ್ರಯತ್ನ
Last Updated 5 ಅಕ್ಟೋಬರ್ 2021, 11:03 IST
ಅಕ್ಷರ ಗಾತ್ರ

ಮಾಸ್ಕೊ: ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾವೊಂದನ್ನು ಚಿತ್ರೀಕರಿಸುವ ಐತಿಹಾಸಿಕ ಪ್ರಯತ್ನಕ್ಕೆ ರಷ್ಯಾದ ಚಿತ್ರ ತಂಡ ಸಜ್ಜಾಗಿದ್ದು, ಈ ಸಂಬಂಧ ಮಂಗಳವಾರ ರಷ್ಯಾದ ನಟಿ ಮತ್ತು ನಿರ್ದೇಶಕರು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದತ್ತ ಪ್ರಯಾಣ ಬೆಳೆಸಿದ್ದಾರೆ.

ಈ ಮೂಲಕ, ಕಳೆದ ವರ್ಷ ನಟ ಟಾಮ್‌ ಕ್ರೂಸ್‌, ನಾಸಾ ಮತ್ತು ಎಲಾನ್‌ ಮಸ್ಕ್‌ ಸ್ಪೇಸ್‌ ಎಕ್ಸ್‌ ಜಂಟಿಯಾಗಿ ಘೋಷಿಸಿದ್ದ ‘ಮಿಷನ್ ಇಂಪಾಸಿಬಲ್‘ ಹಾಲಿವುಡ್‌ ಸಿನಿಮಾ ಯೋಜನೆಯನ್ನು ಹಿಂದಿಕ್ಕಲು ರಷ್ಯಾದ ಸಿಬ್ಬಂದಿ ಸಜ್ಜಾಗಿದ್ದಾರೆ.

37ರ ಹರೆಯದ ನಟಿ ಯೂಲಿಯಾ ಪೆರೆಸಿಲ್ಡ್ ಮತ್ತು 38 ವರ್ಷದ ಚಲನಚಿತ್ರ ನಿರ್ದೇಶಕ ಕ್ಲಿಮ್ ಶಿಪೆಂಕೊ ಅವರು, ಅನುಭವಿ ಗಗನಯಾತ್ರಿ ಆಂಟನ್ ಶ್ಕಾಪ್ಲೆರೋವ್ ನೇತೃತ್ವದಲ್ಲಿ ಸೋಯುಜ್ ಎಂಎಸ್ -19 ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಈ ತಂಡ 12 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ‘ಚಾಲೆಂಜ್‘ ಸಿನಿಮಾಗಾಗಿ ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರೆ.‌

ಇಲ್ಲಿವರೆಗೂ ಗೌಪ್ಯವಾಗಿಡಲಾಗಿದ್ದ ಚಲನಚಿತ್ರದ ಕಥಾವಸ್ತುವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್‌ ಬಹಿರಂಗಪಡಿಸಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿದ್ದ ಗಗನಯಾನಿಯೊಬ್ಬರನ್ನು ರಕ್ಷಿಸುವ ಸಲುವಾಗಿ ಶಸ್ತ್ರಚಿಕಿತ್ಸಕಿಯೊಬ್ಬರನ್ನು ಅಂತರಿಕ್ಷಕ್ಕೆ/ಬಾಹ್ಯಾಕಾಶಕ್ಕೆ ಕಳುಹಿಸುವರೋಚಕ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಶ್ಕಾಪ್ಲೆರೋವ್ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿರುವ ಇತರ ಇಬ್ಬರು ರಷ್ಯಾದ ಗಗನಯಾತ್ರಿಗಳು ಚಿತ್ರದಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.

‘ನನ್ನನ್ನು ಈ ಬಾಹ್ಯಾಕಾಶ ತುಂಬಾ ಆಕರ್ಷಕವಾಗಿ ಸ್ವಾಗತಿಸುತ್ತಿದೆ ಮತ್ತು ಇಲ್ಲಿ ಯಾವುದೇ ಗಡಿಗಳಿಲ್ಲ‘ ಎಂದು ನಟಿ ಪೆರೆಸಿಲ್ಡ್‌ ತಿಳಿಸಿದ್ದಾರೆ. ಐಎಸ್‌ಎಸ್‌ ಕೇಂದ್ರದಿಂದ ನಟ ಪೆರೆಸಿಲ್ಡ್‌ ಕಳುಹಿಸಿರುವ ಈ ಧ್ವನಿಯನ್ನು ರೋಸ್ಕೋಸ್ಮೋಸ್ ಪ್ರಸಾರ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT