ಗುರುವಾರ , ಫೆಬ್ರವರಿ 25, 2021
19 °C
ಸಂದರ್ಶನ

ಡಿಂಗ್ರಿ ನಾಗರಾಜ್‌ ಮಗ ಎಂಬ ಖುಷಿ ಇದೆ.. ರಾಜವರ್ಧನ್‌ ಮನದಾಳದ ಮಾತು

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

‘ಬಿಚ್ಚುಗತ್ತಿ’ ಸಿನಿಮಾದಲ್ಲಿ ಭರಮಣ್ಣ ನಾಯಕನಾಗಿ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ರಾಜವರ್ಧನ್‌ ಅವರು ಹಿರಿಯ ಹಾಸ್ಯನಟ ಡಿಂಗ್ರಿ ನಾಗರಾಜ್‌ ಅವರ ಪುತ್ರ. ಅವರ ಕೈಯಲ್ಲಿ ಹಲವು ಚಿತ್ರಗಳಿವೆ. ಈ ನಡುವೆ ಆರ್‌ಡಿ ಪ್ರೊಡಕ್ಷನ್‌ ಹೆಸರಿನ ನಿರ್ಮಾಣ ಸಂಸ್ಥೆಯನ್ನೂ ತೆರೆದಿದ್ದಾರೆ. ಈ ಸಂಸ್ಥೆ ಅಡಿ ‘ಚಕ್ರಿ’ ಹೆಸರಿನ ಸಿನಿಮಾ ಸೆಟ್ಟೇರಲಿದೆ. ಸಿನಿಬದುಕಿನ ಒಳಹೊರಗು, ಕನಸುಗಳನ್ನು ಅವರು ‘ಪ್ರಜಾಪ್ಲಸ್‌ ಬಳಿ ತೆರೆದಿಟ್ಟರು.

* ಸಿನಿಬದುಕಿಗೆ ಬರುವಾಗ ಸಿದ್ಧತೆ ಏನಿತ್ತು?
ನಾನು ಓದಿದ್ದು ಸ್ನಾತಕೋತ್ತರ ಪದವಿ. ಬಳಿಕ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂಬ ಆಸೆ ಇತ್ತು. ಬಹುತೇಕ ಕಲಾವಿದರ ಮಕ್ಕಳು ಕೂಡಾ ನನ್ನ ಸಮಕಾಲೀನರೇ. ಹೀಗಿರುವಾಗ ನಾನು ಇಲ್ಲಿ ಹೇಗೆ ನೆಲೆ ಕಂಡುಕೊಳ್ಳಬೇಕು ಎಂದು ಆಲೋಚಿಸುತ್ತಿದ್ದೆ. 2014ರಿಂದಲೂ ಸಿನಿಮಾಗಳಿಗಾಗಿ ಪ್ರಯತ್ನಿಸುತ್ತಿದ್ದೆ. ಡಿಂಗ್ರಿ ನಾಗರಾಜ್‌ ಅವರ ಮಗ ಅಂದಾಗ ಯಾರೂ ನನ್ನನ್ನು ನಂಬಲಿಲ್ಲ. ಏಕೆಂದರೆ ಡಿಂಗ್ರಿ ನಾಗರಾಜ್‌ 5 ಅಡಿ ಎತ್ತರ ಇದ್ದಾರೆ. ನಾನು 6.3 ಅಡಿ ಎತ್ತರ ಇದ್ದೇನೆ. ಹೀಗಿರುವಾಗ ಸಿನಿಮಾ ಕ್ಷೇತ್ರ ನನ್ನನ್ನು ಒಪ್ಪಿಕೊಳ್ಳಬೇಕಲ್ವಾ. ಅದಕ್ಕಾಗಿ ನೀನಾಸಂ ಸಹಿತ ಹಲವು ಕಡೆ ತರಬೇತಿ ಪಡೆದೆ. ದೇಹಭಾಷೆ, ನೃತ್ಯ, ಮಾತು ಹೀಗೆ ಸಾಕಷ್ಟು ಕಲಿಕೆ ಆಗಿದೆ. 

* ಮೊದಲ ಸಿನಿಮಾದ ಪ್ರವೇಶ ಹೇಗೆ?
ಬಿಚ್ಚುಗತ್ತಿಯಲ್ಲಿ ಭರಮಣ್ಣ ನಾಯಕನ ಅಭಿನಯ ಬಹಳ ಸವಾಲಿನದಾಗಿತ್ತು. ಏಕೆಂದರೆ ಐತಿಹಾಸಿಕ ವಿಷಯ ಅದು. ನಾಯಕ ಸಮುದಾಯದ ಕಥೆ. ಜನ ಆ ಕಥೆಯನ್ನು ನಂಬಬೇಕಿತ್ತು. ಆ ಮಟ್ಟಕ್ಕೆ ಭರಮಣ್ಣನನ್ನು ಚಿತ್ರಿಸಬೇಕಿತ್ತು. ಹೀಗಾಗಿ ಬಾಡಿ ಬಿಲ್ಡಿಂಗ್‌, ಸಾಹಸ ಎಲ್ಲವನ್ನೂ ಕಲಿಯಬೇಕಾಯಿತು. ಅದರ ಪರಿಣಾಮವೇ ‘ಬಿಚ್ಚುಗತ್ತಿ’ ನನ್ನ ಸಿನಿಬದುಕಿನಲ್ಲಿ ಒಂದು ಮೈಲಿಗಲ್ಲು ಆಯಿತು. ಒಳ್ಳೆಯ ಸಂಭಾವನೆ ಪಡೆಯುವ ನಟ ಆದೆ. ಇಲ್ಲಿ ಪರಿಶ್ರಮ ಬೇಕು. ಆ ಶಕ್ತಿ ಇದ್ದವರು ಮಾತ್ರ ಇಲ್ಲಿ ಉಳಿದುಕೊಳ್ಳುತ್ತಾರೆ.

* ಕಲಾವಿದರ ಮಗ ಅನ್ನುವುದು ನೆರವಾಯಿತೇ?
ಇಲ್ಲ. ಕಲಾವಿದರ ಮಕ್ಕಳಿಗೆ ಬೇಗ ಬೆಂಬಲ ಸಿಗುತ್ತದೆ ಅನ್ನುವುದು ಸುಳ್ಳು. ಇಲ್ಲಿ ಪರಿಶ್ರಮ ಅಷ್ಟೇ ಕೆಲಸ ಮಾಡುತ್ತದೆ. ಇದೊಂದು ತಪಸ್ಸಿನ ತರಹ. ನಿರಂತರ ಶ್ರಮ ಇರಬೇಕು.

* ನಿಮ್ಮ ವೃತ್ತಿ ಬದುಕಿನಲ್ಲಿ ತಂದೆ ಡಿಂಗ್ರಿ ನಾಗರಾಜ್‌ ಪಾತ್ರ ಎಷ್ಟು?
ತುಂಬಾ ಇದೆ. ಅವರು ಶೂನ್ಯದಿಂದ ಎದ್ದು ಬಂದವರು. ಏನೂ ಇಲ್ಲದೇ ಈ ಚಿತ್ರರಂಗದಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದಾರೆ ಅಂದರೆ ಅದೊಂದು ಹೋರಾಟವೇ ಸರಿ. ಅವರಿಗೆ ತುಂಬಾ ಗೌರವ ಕೊಡ್ತೇನೆ. ಡಿಂಗ್ರಿ ನಾಗರಾಜ್‌ಗೆ ಹೆಸರು ತರುತ್ತೇನೋ ಗೊತ್ತಿಲ್ಲ. ಆದರೆ, ಹೆಸರು ಕೆಡಿಸುವ ಕೆಲಸ ಮಾಡುವುದಿಲ್ಲ. ನನ್ನ ತಂದೆ ನನಗಾಗಿ ಸಿನಿಮಾ ಮಾಡಿ ಎಂದು ಯಾರನ್ನಾದರೂ ಕೇಳಿದರೆ ಯಾರೂ ಒಪ್ಪುವುದಿಲ್ಲ. ಏಕೆಂದರೆ ಅವರು ನಾಯಕನ ಪಾತ್ರ ಮಾಡಿದವರೂ ಅಲ್ಲ. ಆರ್ಥಿಕವಾಗಿ ತುಂಬಾ ಶಕ್ತರೂ ಅಲ್ಲ. ಹಾಗಾಗಿ ನಮ್ಮ ಶ್ರಮ ಮುಂದುವರಿಯುತ್ತಲೇ ಇರುತ್ತದೆ. ಡಿಂಗ್ರಿ ನಾಗರಾಜ್‌ ಅವರ ಮಗ ಎಂಬ ಖುಷಿ ಇದೆ.

* ನಿಮಗೆ ಮಾದರಿಯಾದ ನಟ ಯಾರು?
ನಂದಕಿಶೋರ್‌ ಮತ್ತು ತರುಣ್‌ ಸುಧೀರ್‌ ಅವರ ಬೆಂಬಲ ತುಂಬಾ ಇತ್ತು. ‘ಬಿಚ್ಚುಗತ್ತಿ’ ಸಿನಿಮಾ ಬಂದಾಗ ದರ್ಶನ್‌ ತುಂಬಾ ಬೆಂಬಲ ನೀಡಿದರು. ಸುದೀಪ್‌ ಆಡಿಯೋ ಲಾಂಚ್‌ ಮಾಡಿದರು. ಇವರೆಲ್ಲಾ ಅಣ್ಣನ ಜಾಗದಲ್ಲಿ ನಿಂತು ಬೆಂಬಲಿಸಿದರು.

* ನಿಮ್ಮ ನಿರ್ಮಾಣ ಸಂಸ್ಥೆ ಬಗ್ಗೆ ಹೇಳಿ
ನನ್ನ ತಂದೆಯವರು ನಿರ್ಮಾಣ ಸಂಸ್ಥೆ ಮಾಡಿ ಕೈಸುಟ್ಟುಕೊಂಡಿದ್ದರು. ಆ ಕನಸನ್ನು ಮತ್ತೆ ನನಸು ಮಾಡಬೇಕು ಅನ್ನುವ ಉದ್ದೇಶದಿಂದ ಆರ್‌.ಡಿ. ಪ್ರೊಡಕ್ಷನ್ಸ್‌ (ರೆಡ್‌ ಡೈಮಂಡ್‌ ಪ್ರೊಡಕ್ಷನ್ಸ್‌) ಆರಂಭಿಸಿದ್ದೇವೆ. ಇಲ್ಲಿ ಆರ್‌– ರಾಜವರ್ಧನ್‌ ಡಿ– ಡಿಂಗ್ರಿ ನಾಗರಾಜ್‌ ಎರಡೂ ಇದೆ. ನನ್ನ ತಂದೆಯ ಕಾಲದಲ್ಲಿರುವ ಒಂದಷ್ಟು ಕಲಾವಿದರನ್ನು ಸೇರಿಸಿಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದೇವೆ. ಪೋಷಕ ನಟರನ್ನು ಕೆಲಕಾಲದ ನಂತರ ಜನ ಮರೆತುಬಿಡುತ್ತಾರೆ. ಅವರಿಗೆ ನಾವೇ ಬೆಂಬಲವಾಗಿ ನಿಲ್ಲಬೇಕು. ಅದಕ್ಕಾಗಿ ಈ ಸಿನಿಮಾ ಆರಂಭಿಸಿದ್ದೇವೆ.

* ಚಕ್ರಿ ಸಿನಿಮಾ ಬಗ್ಗೆ ಹೇಳಿ
‘ಚಕ್ರಿ’ ಆ್ಯಕ್ಷನ್‌ ಆಧರಿತ ಸಿನಿಮಾ. ಎಲ್ಲ ಮಾನವೀಯ ಮೌಲ್ಯಗಳನ್ನು ಹೇಳಲು ಹೊರಟಿದ್ದೇವೆ. ಒಳ್ಳೆಯ ಕಥೆಯನ್ನು ಹರಿ ಸಂತೋಷ್‌ ಅವರು ಕೊಟ್ಟಿದ್ದಾರೆ. ಚಕ್ರಿಯಲ್ಲಿ ನನ್ನದು ಪಕ್ಕದ ಮನೆಯ ಹುಡುಗನ ತರಹದ ಪಾತ್ರ. ನಮಗೆ ಯಾರೋ ಸಹಾಯ ಮಾಡುತ್ತಾರೆ. ಯಾರಿಂದಲೋ ನಾವು ಬೆಳೆಯುತ್ತೇವೆ ಅನ್ನುವುದೆಲ್ಲಾ ಸುಳ್ಳು. ನಾವೇ ಶ್ರಮಪಟ್ಟುಕೊಂಡು ಬೆಳೆಯಬೇಕು ಎನ್ನುವ ಸಂದೇಶ ಇರುವ ಚಿತ್ರ.

* ಬೇರೆ ಯೋಜನೆ, ಕನಸುಗಳು?
ಸದ್ಯ ಪಿಟು ಪ್ರೊಡಕ್ಷನ್ಸ್‌ ಸಿನಿಮಾದಲ್ಲಿ ಬ್ಯುಸಿ ಇದ್ದೇನೆ. ಇದೇ ವೇಳೆ ‘ಚಕ್ರಿ’ ಸಿನಿಮಾದ ಪ್ರಾಥಮಿಕ ಸಿದ್ಧತೆಗಳು ನಡೆಯುತ್ತಿವೆ. ಮಾರ್ಚ್‌ ಬಳಿಕ ಚಿತ್ರೀಕರಣ ಆರಂಭಿಸುವ ಯೋಜನೆ ಇದೆ. ಅಷ್ಟರ ಒಳಗೆ ಪಿಟು ಪ್ರೊಡಕ್ಷನ್ಸ್‌ನ ಸಿನಿಮಾ ಮುಗಿಸಬೇಕು.

ನಮಗೆ ಕನಸುಗಳೇ ಬಂಡವಾಳ. ತುಂಬಾ ಕನಸುಗಳಿವೆ. ನಾವು ಮಧ್ಯಮವರ್ಗದಿಂದ ಬಂದವರು. ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ  ಕನಸು ಇತ್ತು. ಅದು ನನಸಾಗಿದೆ. ಕನಸುಗಳೆಲ್ಲಾ ನನಸಾಗಲು ನಮ್ಮಂಥವರಿಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೆ ದೇವರ, ಜನರ, ಅಶೀರ್ವಾದ ಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು