ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗಳ ಹೊನಲಿನಲ್ಲಿ ಕನ್ನಡದ ಕೋಲ್ಮಿಂಚು!

Last Updated 25 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ ಕನ್ನಡ, ತುಳು ಹಾಗೂ ಕನ್ನಡಿಗರು ನಿರ್ಮಿಸಿದ ಸಾಕ್ಷ್ಯಚಿತ್ರ, ಕೃತಿಗಳಿಗೆ ಪ್ರಶಸ್ತಿ ಬಂದಿರುವುದು ಚಂದನವನಕ್ಕೆ ಹೊಸ ಗರಿ ಮೂಡಿಸಿದೆ.

‘ಅಕ್ಷಿ’, ತುಳುಚಿತ್ರ ಪಿಂಗಾರ, ಅಮೋಘವರ್ಷ ಜೆ.ಎಸ್‌ ಅವರ ‘ವೈಲ್ಡ್‌ಲೈಫ್‌ ಕರ್ನಾಟಕ’, ಪಿ.ಆರ್‌.ರಾಮದಾಸ ನಾಯ್ಡು ಅವರ ‘ಕನ್ನಡ ಸಿನಿಮಾ: ಜಾಗತಿಕ ಸಿನಿಮಾ ವಿಕಾಸ, ಪ್ರೇರಣೆ, ಪ್ರಭಾವ’ ಕೃತಿಗಳು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿವೆ.

ಪ್ರಶಸ್ತಿ ಬಂದ ಖುಷಿಯಲ್ಲಿ ‘ಅಕ್ಷಿ’ಯ ನಿರ್ಮಾಪಕ ಶ್ರೀನಿವಾಸ ಪ್ರತಿಕ್ರಿಯಿಸಿ, ‘ನಾವು ಪ್ರಶಸ್ತಿಗಾಗಿ ಅಥವಾ ಇನ್ಯಾವುದೋ ಉದ್ದೇಶ ಇಟ್ಟುಕೊಂಡು ಮಾಡಿದ್ದೇ ಅಲ್ಲ. ರಾಜ್‌ಕುಮಾರ್‌ ಅವರು ನೇತ್ರದಾನ ಮಾಡಿದ್ದನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಈ ಸಂಬಂಧಿಸಿ ಜಾಗೃತಿ ಮೂಡಿಸಬೇಕು. ಈ ಸಂಬಂಧಿಸಿದ ಮೂಢನಂಬಿಕೆಗಳನ್ನು ತೊಡೆದುಹಾಕಬೇಕು. ಅದೊಂದೇ ಉದ್ದೇಶ ನಮಗಿತ್ತು. ನಿರ್ದೇಶಕರು ತುಂಬಾ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಈಗ ಜವಾಬ್ದಾರಿ ಹೆಚ್ಚಿದೆ’ ಎಂದರು. ಮನೋಜ್‌ ಕುಮಾರ್‌ ಅವರು ಕೂಡಾ ಪ್ರಶಸ್ತಿ ಸಂಬಂಧಿಸಿದಂತೆ ಖುಷಿ ಹಂಚಿಕೊಂಡರು. ಈ ಕ್ರೆಡಿಟ್‌ ಇಡೀ ಚಿತ್ರ ತಂಡಕ್ಕೆ ಸಲ್ಲಬೇಕು. ಅದರಲ್ಲೂ ನಿರ್ಮಾಪಕರಾದ ವಿ. ಶ್ರೀನಿವಾಸ್‌, ಎನ್‌. ರಮೇಶ್‌, ರವಿ ಎಚ್‌.ಎಸ್‌. ಅವರ ಶ್ರಮ ತುಂಬಾ ಇದೆ ಎಂದರು.

ಇನ್ನು ‘ಅವನೇ ಶ್ರೀಮನ್ನಾರಾಯಣ’ದ ಸಾಹಸ ನಿರ್ದೇಶಕ ವಿಕ್ರಂ ಮೋರ್‌ ಅವರಿಗೆ ಪ್ರಶಸ್ತಿ ಒಲಿದಿದೆ. ಕೆಜಿಎಫ್‌ ಚಾಪ್ಟರ್‌–1 ಚಿತ್ರಕ್ಕೂ ಅವರಿಗೆ ಇದೇ ಪ್ರಶಸ್ತಿ ಒಲಿದಿತ್ತು. ಹಾಗಾಗಿ ಅವರಿಗೆ ಇದು ಎರಡನೇ ಪ್ರಶಸ್ತಿ. ಶ್ರೀಮನ್ನಾರಾಯಣ ಅವರಿಗೆ 50ನೇ ಚಿತ್ರ. ವಿಕ್ರಂ ಅವರ ಮೂಲ ನೇಪಾಳ. ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. 10ನೇ ತರಗತಿ ಓದು ಮುಗಿಸಿ ಗೆಳೆಯನ ಸೈಬರ್‌ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಇಂಟರ್‌ನೆಟ್‌ ಮೂಲಕ ಜಗತ್ತನ್ನು ಅರಿತರು. ಹಂತಹಂತವಾಗಿ ಸಾಹಸ, ಸಿನಿಮಾ ತಂತ್ರಜ್ಞಾನವನ್ನು ಅರಿತರು. ಕನ್ನಡದ ಜೊತೆಗೆ ಹತ್ತಾರು ಭಾಷೆಗಳನ್ನು ಬಲ್ಲವರು ವಿಕ್ರಂ. ಸಾಹಸ ಶಾಲೆ ತೆರೆಯುವ ಕನಸು ಇದೆ. ಒಳ್ಳೆಯ ಚಿತ್ರಗಳಲ್ಲಿ ಕೆಲಸ ಮಾಡಬೇಕಿದೆ ಎಂದರು ವಿಕ್ರಂ.

ವೈಲ್ಡ್‌ಲೈಫ್‌ ಕರ್ನಾಟಕ ಸಾಕ್ಷ್ಯಚಿತ್ರಕ್ಕೆ ನಿರ್ದೇಶಕ ಅಮೋಘವರ್ಷ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಕರ್ನಾಟಕದ ವಿವಿಧ ಅರಣ್ಯ ಪ್ರದೇಶಗಳು, ಅದರಲ್ಲೂ ಪಶ್ಚಿಮ ಘಟ್ಟದ ವನ್ಯಜೀವಿಗಳ ಸುಂದರ ದೃಶ್ಯಾವಳಿಗಳನ್ನು ಅಮೋಘವರ್ಷ ತಂಡದ ಕ್ಯಾಮೆರಾಗಳು ಸೆರೆ ಹಿಡಿದಿವೆ. 4 ವರ್ಷ ಶ್ರಮಿಸಿ ಈ ಸಾಕ್ಷ್ಯಚಿತ್ರ ತಯಾರಾಗಿದೆ.

‘ಸರ್ಕಾರ ನಮ್ಮ ಶ್ರಮವನ್ನು ಗುರುತಿಸಿ ಮೌಲ್ಯ ನೀಡಿದೆ. ಈ ಗೌರವವನ್ನು ನಮ್ಮ ರಾಜ್ಯಕ್ಕೆ ಅರ್ಪಿಸುತ್ತೇವೆ. ಈ ಪ್ರಶಸ್ತಿ, ಗೌರವ ಏನಿದ್ದರೂ ಕಾಡನ್ನು ರಕ್ಷಿಸುತ್ತಿರುವ ಕರ್ನಾಟಕ ಅರಣ್ಯ ಇಲಾಖೆಗೆ ಸಲ್ಲಬೇಕು. ನಾವೇನಿದ್ದರೂ ನಮ್ಮ ಅರಣ್ಯದ ಸೌಂದರ್ಯವನ್ನಷ್ಟೇ ಚಿತ್ರಿಸಿಕೊಟ್ಟಿದ್ದೇವೆ’ ಎಂದು ಮುಗ್ದವಾಗಿ ನುಡಿದರು ಅಮೋಘವರ್ಷ ಮತ್ತು ಸಾಕ್ಷ್ಯಚಿತ್ರದ ಸಹ ನಿರ್ದೇಶಕ ಕಲ್ಯಾಣ್‌ ವರ್ಮಾ.

ಪ್ರಕೃತಿ ಇತಿಹಾಸ ತಜ್ಞ ಸರ್‌ ಡೇವಿಡ್‌ ಅಟೆನ್‌ಬರ್ಗ್‌ ಅವರನ್ನು ಈ ಸಾಕ್ಷ್ಯಚಿತ್ರದ ಉತ್ತಮ ನಿರೂ‍ಪಕ ಎಂದು ಘೋಷಿಸಲಾಗಿದೆ.

2019ರಲ್ಲಿ ಈ ಸಾಕ್ಷ್ಯಚಿತ್ರವು ಚಿತ್ರಮಂದಿರಗಳಲ್ಲಿ 50 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಿದೆ.

ತುಳು ಚಿತ್ರ ‘ಪಿಂಗಾರ’ಕ್ಕೆ ರಾಷ್ಟ್ರಪ್ರಶಸ್ತಿ ಒಲಿದಿದೆ. ‘ಈ ಪ್ರಶಸ್ತಿಯನ್ನು ತುಳು ಚಿತ್ರರಂಗಕ್ಕೆ ಅರ್ಪಿಸುತ್ತೇವೆ’ ಎಂದರು ಚಿತ್ರದ ನಿರ್ದೇಶಕ ಆರ್.ಪ್ರೀತಮ್ ಶೆಟ್ಟಿ. ಕನ್ನಡ ಮತ್ತು ತುಳು ಭಾಷೆಯಲ್ಲಿ ‘ಪಿಂಗಾರ’ ಇನ್ನಷ್ಟೇ ಚಿತ್ರಮಂದಿರಕ್ಕೆ ಬರಬೇಕಿದೆ.

‘ಕಲಾತ್ಮಕ ವಿಷಯವನ್ನು ಆಯ್ಕೆ ಮಾಡಿಕೊಂಡು ‘ಪಿಂಗಾರ’ ನಿರ್ದೇಶನ ಮಾಡಿದ್ದೇನೆ. ಅದೇ ನನ್ನ ಸ್ವತಂತ್ರ ನಿರ್ದೇಶನದ ಮೊದಲ ಚಿತ್ರವೂ ಆಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ’ ಎಂದು ಹೇಳಿದರು.

‘ಪಿಂಗಾರ’ ಸಿನಿಮಾವು ತುಳುನಾಡಿನ ದೈವಾರಾಧನೆ, ನಂಬಿಕೆ, ಆಚರಣೆ ಹಾಗೂ ಅದರ ಸುತ್ತ ಹೆಣೆದುಕೊಂಡಿರುವ ಜನರ ಸಂಸ್ಕೃತಿಗಳ ಬದುಕಿನ ಕಥೆಯನ್ನು ಒಳಗೊಂಡಿದೆ. ಭೂತ ಕೋಲ, ಸ್ತ್ರೀಯರ ಮೇಲಾಗುವ ದೌರ್ಜನ್ಯ, ಅಹಂ ಮತ್ತು ತಾರತಮ್ಯದ ಅಭ್ಯಾಸಗಳು ಹುಟ್ಟಿಕೊಂಡ ಬಗೆಯನ್ನು ಇಲ್ಲಿ ಬಿಂಬಿಸಲಾಗಿದೆ. ತುಳುವಿನಲ್ಲಿ ‘ಪಡ್ಡಾಯಿ’, ‘ಮದಿಪು’ ಚಿತ್ರಗಳಿಗೂ ರಾಷ್ಟ್ರಪ್ರಶಸ್ತಿ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT