ಮಂಗಳವಾರ, ಜೂನ್ 15, 2021
23 °C

ಚಿಕಿತ್ಸೆಗೆ ತೆರಳುವ ಮೊದಲು ‘ಸಡಕ್ 2’ ಡಬ್ಬಿಂಗ್ ಮುಗಿಸಲಿರುವ ಸಂಜಯ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಸಂಜಯ್ ದತ್ತ್‌ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಚಿಕಿತ್ಸೆಗೆ ಅಮೆರಿಕಗೆ ತೆರಳಲಿದ್ದಾರೆ. ಆದರೆ ತೆರಳುವ ಮೊದಲು ತಮ್ಮ ಮುಂದಿನ ’ಸಡಕ್ 2’ ಸಿನಿಮಾದ ಡಬ್ಬಿಂಗ್ ಕೆಲಸವನ್ನು ಮುಗಿಸಲಿದ್ದಾರಂತೆ. 61 ವರ್ಷದ ಈ ನಟ ಆರೋಗ್ಯ ಸಮಸ್ಯೆಯ ಕಾರಣಗಳಿಂದ ಕೆಲದಿನಗಳ ಕಾಲ ವಿರಾಮ ತೆಗೆದುಕೊಳ್ಳುವುದಾಗಿ ಕಳೆದ ವಾರ ಘೋಷಿಸಿದ್ದರು. ‌

‘ಸಂಜಯ್ ದತ್ತ್ ಚಿಕಿತ್ಸೆಗೆ ತೆರಳುವ ಮೊದಲು ಡಬ್ಬಿಂಗ್ ಕೆಲಸವನ್ನು ಮುಗಿಸಲಿದ್ದಾರೆ. ಸಿನಿಮಾದಲ್ಲಿ ಅವರ ಪಾಲಿನ ಸ್ವಲ್ಪ ಕೆಲಸವಷ್ಟೇ ಬಾಕಿ ಇದೆ. ಅದನ್ನು ಮುಗಿಸಿ ನಂತರ ಅವರು ಚಿಕಿತ್ಸೆಗೆ ತೆರಳುತ್ತಾರೆ’ ಎಂದು ‘ಸಡಕ್ 2’ ಸಿನಿಮಾ ಮೂಲಗಳು ತಿಳಿಸಿವೆ.

ಕಳೆದ ವಾರಾಂತ್ಯದಲ್ಲಿ ಸಂಜಯ್ ದತ್ತ್ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಅವರು ಬಿಡುಗಡೆಗೊಂಡಿದ್ದರು.

ಮನೆಗೆ ತೆರಳಿದ ಒಂದು ದಿನದ ನಂತರ ಕ್ಯಾನ್ಸರ್‌ನ ಬಗ್ಗೆ ಹಾಗೂ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳನ್ನು ಹಬ್ಬಿಸಬೇಡಿ ಎಂದು ತಮ್ಮ ಆತ್ಮೀಯರಿಗೆ ಸಾಮಾಜಿಕ ಜಾಲತಾಣದ ಮೂಲಕ ವಿನಂತಿ ಮಾಡಿಕೊಂಡಿದ್ದರು. ತಮಗಿರುವ ಕಾಯಿಲೆಯು ಕುರಿತು ದತ್ತ್ ಇನ್ನೂ ಅಧೀಕೃತವಾಗಿ ಹೇಳಿಕೊಂಡಿಲ್ಲ.

ಸಂಜಯ್ ಪತ್ನಿ, ನಿರ್ಮಾಪಕಿ ಮಾನ್ಯತಾ ದತ್‌ ’ಸಂಜಯ್ ನಿಜಕ್ಕೂ ಹೋರಾಟಗಾರ, ಅವರು ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಗೆದ್ದು ಬಂದಿದ್ದಾರೆ. ಅಭಿಮಾನಿಗಳು ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದಿದ್ದಾರೆ.

ಜೊತೆಗೆ ‘ಸಂಜಯ್ ಇದರಿಂದ ಹೊರ ಬರಲು ನಮಗೆ ಧೈರ್ಯ ಹಾಗೂ ನಿಮ್ಮೆಲ್ಲರ ಹಾರೈಕೆಗಳು ಬೇಕು. ಕಳೆದ ಕೆಲ ವರ್ಷಗಳಿಂದ ನಮ್ಮ ಕುಟುಂಬ ಅನೇಕ ತೊಂದರೆಗಳನ್ನು ಎದುರಿಸಿದೆ. ಆದರೆ ನನಗೆ ಆತ್ಮವಿಶ್ವಾಸವಿದೆ. ಇದು ಕೂಡ ಆ ಸಮಸ್ಯೆಗಳಂತೆ ಪರಿಹಾರವಾಗುತ್ತದೆ’ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ ಮಾನ್ಯತಾ. 

ಸದ್ಯ ಸಂಜಯ್ ನಟನೆಯ ‘ಸಡಕ್ 2’ ಹಾಗೂ ‘ಭುಜ್‌: ದಿ ಪ್ರೈಡ್ ಆಫ್’ ಇಂಡಿಯಾ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಇವು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿವೆ.

ಅಲ್ಲದೇ ‘ಕೆಜಿಎಫ್–2’, ರಣಬೀರ್ ಕಪೂರ್ ನಟನೆಯ ‘ಶಂಶೇರಾ’ ಸಿನಿಮಾದಲ್ಲೂ ಸಂಜಯ್ ನಟಿಸುತ್ತಿದ್ದಾರೆ.

2019ರಲ್ಲಿ ಅಶುತೋಷ್ ಗೋವಾರಿಕರ್ ಅವರ ‘ಪಾಣಿಪತ್’, ಕರಣ್ ಜೋಹರ್ ನಿರ್ಮಾಣದ ‘ಕಳಂಕ್’ ಹಾಗೂ ರಾಜಕೀಯ ಹಿನ್ನೆಲೆಯ ಕಥೆ ಹೊಂದಿದ್ದ ‘ಪ್ರಸ್ಥಾನಂ’ ಸಿನಿಮಾಗಳಲ್ಲಿ ಸಂಜಯ್ ನಟಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು