ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ‘ಸಿಲ್ಲಿಲಲ್ಲಿ’ ಲಲಿತಾರ ಚೌಕಾಬಾರ

Last Updated 13 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

‘ಎಳೆಯರು ಗೆಳೆಯರು’ ಚಿತ್ರನಿರ್ದೇಶಿಸಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದ ನಟ, ನಿರ್ದೇಶಕ ವಿಕ್ರಮ್‌ ಸೂರಿ ಈಗ ಎರಡನೇ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದು ಮಣಿರಾವ್‌ ಅವರ ‘ಭಾವನಾ’ಕಾದಂಬರಿ ಆಧರಿಸಿದ ಚಿತ್ರ. ವಿಕ್ರಮ್‌ ಸೂರಿ ಅವರ ಪತ್ನಿ ನಮಿತಾ ರಾವ್‌ ಬಂಡವಾಳ ಹೂಡುತ್ತಿದ್ದು, ಜತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನಮಿತಾಗೂ ನಾಯಕಿಯಾಗಿ ಇದು ಎರಡನೇ ಚಿತ್ರ.

2014ರಲ್ಲಿ ತೆರೆಕಂಡ ವೆಂಕಟಾಚಲ ಅವರ ನಿರ್ದೇಶನದ ‘ಚಿತ್ರಮಂದಿರದಲ್ಲಿ’ ಚಿತ್ರದ ಮೂಲಕ ನಮಿತಾ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಕಾಲಿಟ್ಟರು. ನಮಿತಾ ಕಿರುತೆರೆ ಪ್ರೇಕ್ಷಕರಿಗಂತೂ ತುಂಬಾ ಚಿರಪರಿಚಿತ ಮುಖ. ‘ಸಿಲ್ಲಿಲಲ್ಲಿ’ ಧಾರಾವಾಹಿಯಲ್ಲಿ ಅವರು ನಿಭಾಯಿಸುತ್ತಿದ್ದ ‘ಎನ್‌ಎಂಎಲ್‌ ಅಲಿಯಾಸ್‌ ಲಲಿತಾ’ ಪಾತ್ರವನ್ನು ಇಂದಿಗೂ ಪ್ರೇಕ್ಷಕರು ಮರೆತಿರಲಾರರು. ಈಗ ನಿರ್ಮಾಪಕಿಯಾಗಿಯೂ ಹೊಸ ಇನಿಂಗ್ಸ್‌ ಶುರುಮಾಡಿದ್ದಾರೆ.

‘ಚೌಕಾಬಾರ’ ಚಿತ್ರದ ಬಗ್ಗೆ ನಮಿತಾ ರಾವ್‌ ಹಲವು ಮಾಹಿತಿಗಳನ್ನು ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

* ಕಾದಂಬರಿ ಚಿತ್ರ ಮಾಡುವ ಆಲೋಚನೆ ಬಂದಿದ್ದು ಹೇಗೆ?
ನಾವಿಬ್ಬರು ರಂಗಭೂಮಿಯಿಂದ ಬಂದವರು. ಹೊಸ ಪ್ರಯತ್ನ ಮಾಡೋಣ ಎನಿಸಿದಾಗ ನಮಗೆ ಹೊಳೆದಿದ್ದು‘ನವಿ ನಿರ್ಮಿತಿ’ ಬ್ಯಾನರ್‌. ಮೊದಲ ಪ್ರಯತ್ನಕ್ಕೆ ಒಳ್ಳೆಯ ಕಂಟೆಂಟ್‌ ಮತ್ತು ಸಿಂಪಲ್‌ ಸ್ಟೋರಿ ಅರಸುತ್ತಿದ್ದೆವು. ಆಗ ಕಾದಂಬರಿಗಾರ್ತಿ ಮಣಿರಾವ್‌ ಅವರ‘ಭಾವನಾ’ ಕಾದಂಬರಿ ಸಿಕ್ಕಿತು. ಮಣಿರಾವ್‌ ಅವರು ವಿಕ್ರಮ್‌ ಸೂರಿಯನ್ನು ಬಾಲ್ಯದಿಂದಲೂ ಎತ್ತಿ ಆಡಿಸಿದವರು. ಕಾದಂಬರಿ ಬಳಸಿಕೊಳ್ಳಲು ಅನುಮತಿ ಕೊಟ್ಟರು. ಈ ಕಾದಂಬರಿ ಇಂದಿನ ಯುವಪೀಳಿಗೆಯ ಮನಸ್ಥಿತಿಗೆ ತುಂಬಾ ಹತ್ತಿರವೂ ಆಗಿದೆ.

* ‘ಚೌಕಾಬಾರ’ ಶೀರ್ಷಿಕೆ ಹಿನ್ನೆಲೆ ಬಗ್ಗೆ ಹೇಳಿ...
ಈಗಿನ ಯುವಪೀಳಿಗೆ, ಮತ್ತವರ ಸ್ನೇಹ ಹಾಗೂ ಪ್ರೇಮದ ಪರಿಕಲ್ಪನೆಯ ಕಥಾವಸ್ತು ಇದರಲ್ಲಿದೆ.ನಾಲ್ವರು ಸ್ನೇಹಿತರ ನಡುವೆ ನಡೆಯುವ ಕಥೆ ಇದು. ಇದೊಂದು ಅಪ್ಪಟ ಕಂಟೆಂಟ್‌ ಪ್ರಧಾನ ಚಿತ್ರ. ಕಥಾವಸ್ತುವಿಗೆ ಮತ್ತು ಇದರಲ್ಲಿನ ಪಾತ್ರಗಳಿಗೆ ಹೊಂದಿಕೆಯಾಗುವಂತೆ ಚಿತ್ರದ ಶೀರ್ಷಿಕೆ ಇಟ್ಟಿದ್ದೇವೆ. ಚೌಕಾಬಾರ ಸಾಮಾನ್ಯವಾಗಿ ನಾಲ್ವರು ಕೂಡಿ ಆಡುವ ಆಟ,ಸಿನಿಮಾ ಕೂಡ ಒಂದು ಆಟವೇ ಅಲ್ಲವೇ!

* ಕಾದಂಬರಿಯನ್ನು ಚಿತ್ರಕ್ಕೆ ಯಾವ ರೀತಿ ಒಗ್ಗಿಸಲಾಗಿದೆ?
ಕಾದಂಬರಿ ಹುಟ್ಟಿದ ಕಾಲಕ್ಕೆ ಸಂಹವನ ಮಾಧ್ಯಮವಾಗಿ ಪತ್ರವ್ಯವಹಾರ ಚಾಲ್ತಿಯಲ್ಲಿತ್ತು. ಈಗ ಮೊಬೈಲ್‌ ಯುಗ. ಕಾದಂಬರಿಯನ್ನು ಯಥಾವತ್ತಾಗಿ ಚಿತ್ರಕಥೆಗೆ ಇಳಿಸಿಲ್ಲ, ಈಗಿನ ಕಾಲಮಾನಕ್ಕೆ ಮತ್ತು ಚಿತ್ರಕ್ಕೆ ಪೂರಕವಾಗುವಂತೆ ಬದಲಿಸಿದ್ದೇವೆ.

* ನಿಮ್ಮ ಪಾತ್ರದ ಬಗ್ಗೆ ಒಂದಿಷ್ಟು ಹೇಳಿ...
ಕಾದಂಬರಿಯ ಭಾವನಾ ಪಾತ್ರದಲ್ಲಿ ನಾನು ನಟಿಸುತ್ತಿರುವೆ. ತುಂಬಾ ಬೋಲ್ಡ್ ಮತ್ತು ಬ್ಯೂಟಿಫುಲ್‌ ಹುಡುಗಿ, ಜತೆಗೆಮನೆಯಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಹಾಗೆಯೇ ನೇರ ನಡೆನುಡಿಯ ಸ್ವಭಾವದವಳು ಈ ಭಾವನಾ.ರಂಗಭೂಮಿ ಕಲಾವಿದ ಪ್ರಭಂಜನ್ ವಿಹಾನ್ ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಎರಡನೇ ನಾಯಕಿಯಾಗಿ ಕಾವ್ಯ ರಮೇಶ್ ಮತ್ತುಎರಡನೇ ನಾಯಕನಾಗಿ ಸುಜಯ್ ಹೆಗಡೆ ಬಣ್ಣ ಹಚ್ಚಿದ್ದಾರೆ.

* ವಿಕ್ರಮ್‌ ಸೂರಿ ನಿರ್ದೇಶನ ಹೇಗಿತ್ತು?
ವಿಕ್ರಮ್‌ ಪತಿಯಾಗಿ ಏನೇ ಮಾಡಿದರೂ ನನಗೆ ಇಷ್ಟವೇ. ಅವರ ನಿರ್ದೇಶನ ಶೈಲಿ ತುಂಬಾ ಇಷ್ಟವಾಗಿದೆ.

*ಯಾವಾಗ ತೆರೆಗೆ ತರುವ ಯೋಜನೆ ಇದೆ?
ಹಿಂದಿನ ವರ್ಷದ ಡಿಸೆಂಬರ್‌ನಲ್ಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದೆವು. ಮಾತಿನ ಭಾಗ ಪೂರ್ಣಗೊಂಡಿದೆ. ಎಂಟು ದಿನಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಬಾಕಿ ಎರಡು ಹಾಡುಗಳ ಚಿತ್ರೀಕರಣದಾಂಡೇಲಿ, ಕಾರವಾರ ಸುತ್ತಮುತ್ತ ಮಾಡಬೇಕಿದ್ದು, ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಚಿತ್ರೀಕರಿಸಲಿದ್ದೇವೆ. ಸದ್ಯದಲ್ಲೇ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡಲುಆಲೋಚಿಸಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT