ಶುಕ್ರವಾರ, ನವೆಂಬರ್ 22, 2019
26 °C

ಕುತೂಹಲ ಕೆರಳಿಸುವ ‘ಶಿವಾಜಿ ಸುರತ್ಕಲ್’ ಟೀಸರ್

Published:
Updated:
Prajavani

ನಟ ರಮೇಶ್‌ ಅರವಿಂದ್ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್ –ದಿ ಕೇಸ್‌ ಆಫ್‌ ರಣಗಿರಿ ರಹಸ್ಯ’ದ ಟೀಸರ್‌ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಚಿತ್ರದ ಟ್ರೇಲರ್‌ ಶೀಘ್ರದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದು, ತ್ಯಾಗರಾಜರ ಹುಟ್ಟಹಬ್ಬದ ದಿನದಂದು ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ರಮೇಶ್‌ ಅರವಿಂದ್‌ ಜತೆಗೆ ‘ಆ್ಯಕ್ಸಿಡೆಂಟ್‌’ ಸಿನಿಮಾದಿಂದ ಸಹಾಯಕ ನಿರ್ದೇಶಕನಾಗಿ ನಿರ್ದೇಶನದ ಪಟ್ಟು ಕಲಿಯುತ್ತಿದ್ದ ಆಕಾಶ್‍ ಶ್ರೀವತ್ಸ ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರಕ್ಕೆ ಅಭಿಜಿತ್‌ ಸೇರಿಕೊಂಡು ಚಿತ್ರಕಥೆಯನ್ನೂ ಹೆಣೆದಿದ್ದಾರೆ.

ರಣಗಿರಿ ರಹಸ್ಯ ಪ್ರಕರಣ ಭೇದಿಸುವ ಪತ್ತೇದಾರಿ ಶಿವಾಜಿ ಪಾತ್ರವನ್ನು ಪರಿಚಯಸುವ ಮೂಲಕ ಕನ್ನಡಕ್ಕೊಬ್ಬ ಹೊಸ ಶೆರ್ಲಾಕ್‌ ಹೋಮ್ಸ್‌ನನ್ನು, ಹೊಸ ಗೆಟಪ್‌ನಲ್ಲಿ ರಮೇಶ್‌ ಅವರನ್ನು ತೋರಿಸಲು ಆಕಾಶ್‌ ಹೊರಟಿದ್ದಾರೆ. 

ಚಿತ್ರದ ಶೂಟಿಂಗ್ ಈಗಾಗಲೇ ಶೇ.80ರಷ್ಟು ಮುಗಿದಿದೆ. ಉಳಿದ ಭಾಗವನ್ನು ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದಿದ್ದಾರೆ ಆಕಾಶ್‌.

ಪಾತ್ರವೊಂದಕ್ಕೆ ಬಣ್ಣ ಹಚ್ಚಿರುವ ನಿರ್ಮಾಪಕ ಅನೂಪ್‍ಗೌಡ, ‘ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ದೃಶ್ಯವು ಚೆನ್ನಾಗಿ ಮೂಡಿಬರಲೆಂದು ಗುಣಮಟ್ಟದಲ್ಲಿ ಎಲ್ಲಿಯೂ ರಾಜಿಯಾಗಿಲ್ಲ’ ಎಂದು ತಿಳಿಸಿದ್ದಾರೆ.

ಚಿತ್ರದ ನಾಯಕ ಶಿವಾಜಿಯ ಪತ್ನಿ ವಕೀಲೆ ಪಾತ್ರದಲ್ಲಿ ರಾಧಿಕಾ ನಾರಾಯಣ್, ಸೈಕಿಯಾಟ್ರಿಕ್‌ ಪಾತ್ರದಲ್ಲಿ ಆರೋಹಿ ನಾರಾಯಣ್ ಕಾಣಿಸಿಕೊಂಡಿದ್ದಾರೆ.

ಛಾಯಾಗ್ರಹಣ ಎಂ.ಜಿ. ಗುರುಪ್ರಸಾದ್‌, ಸಂಗೀತ ಜುದಾಹ್‌ ಸ್ಯಾಂಡಿ, ಸಾಹಿತ್ಯ ಜಯಂತ್‌ ಕಾಯ್ಕಿಣಿ ಹಾಗೂ ಸಂಕಲನ ಶ್ರೀಕಾಂತ್‌ ಅವರದ್ದು.

 

ಪ್ರತಿಕ್ರಿಯಿಸಿ (+)