ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಿಷಬ್‌ ಶೆಟ್ಟಿ ನಿರ್ಮಾಣದ ಶಿವಮ್ಮ ಸಿನಿಮಾ ಜೂನ್‌ 14ಕ್ಕೆ ಬಿಡುಗಡೆ

ಬೂಸಾನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ನ್ಯೂ ಕರೆಂಟ್ಸ್‌’ ವಿಭಾಗದಲ್ಲಿ ಪ್ರಶಸ್ತಿ ಪಡೆದ, ರಿಷಬ್‌ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಸಿನಿಮಾ ಜೂನ್‌ 14ರಂದು ತೆರೆಕಾಣಲಿದೆ.
Published 3 ಜೂನ್ 2024, 13:24 IST
Last Updated 3 ಜೂನ್ 2024, 13:24 IST
ಅಕ್ಷರ ಗಾತ್ರ

ಬೂಸಾನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ನ್ಯೂ ಕರೆಂಟ್ಸ್‌’ ವಿಭಾಗದಲ್ಲಿ ಪ್ರಶಸ್ತಿ ಪಡೆದ, ರಿಷಬ್‌ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಸಿನಿಮಾ ಜೂನ್‌ 14ರಂದು ತೆರೆಕಾಣಲಿದೆ.

ಜೈಶಂಕರ್‌ ಆರ್ಯರ್‌ ನಿರ್ದೇಶನದ ಈ ಚಿತ್ರದಲ್ಲಿ ಯರೇಹಂಚಿನಹಾಳದ ಶರಣಮ್ಮ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ಸೋಮವಾರ(ಜೂನ್‌ 3) ನಡೆಯಿತು.

‘ಒಂದು ಕಿರುಚಿತ್ರೋತ್ಸವದ ಮೂಲಕ ನನಗೆ ದೊರೆತ ಪ್ರತಿಭೆ ಜೈಶಂಕರ್‌. ‘ಕಥಾಸಂಗಮ’ ಸಿನಿಮಾದಲ್ಲಿ ಏಳು ಕಥೆಗಳಲ್ಲಿ ಒಂದು ಕಥೆ ಇವರದ್ದು. ‘ಶಿವಮ್ಮ’ ಕೂಡಾ ಒಂದು ಕಮರ್ಷಿಯಲ್‌ ಸಿನಿಮಾ. ಇಡೀ ಊರಿನ ಜನರಿಗೆ ನಟನೆಯ ತರಬೇತಿ ನೀಡಿ ಮಾಡಿದ ಸಿನಿಮಾ ಇದು. ಖ್ಯಾತ ಚಲನಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಬೂಸಾನ್‌ ಚಿತ್ರೋತ್ಸವದಲ್ಲಿ ದೊರೆತ ಪ್ರಶಸ್ತಿಯ ಮೊತ್ತದಲ್ಲೇ ಸಿನಿಮಾದ ಅರ್ಧ ಖರ್ಚು ಬಂದಿದೆ. ನಾನು ಈ ಸಿನಿಮಾವನ್ನು ವ್ಯವಹಾರದ ದೃಷ್ಟಿಯಿಂದ ನೋಡುತ್ತಿಲ್ಲ. ಇಂತಹ ಸಿನಿಮಾ ಜನರಿಗೆ ತಲುಪಬೇಕು. ಹೆಚ್ಚಿನ ಜನರು ಈ ಸಿನಿಮಾವನ್ನು ವೀಕ್ಷಿಸಲು ಮುಂದಾದರೆ ಟಿಕೆಟ್‌ ದರ ಇಳಿಸಲೂ ನಾನು ಸಿದ್ಧ’ ಎನ್ನುತ್ತಾರೆ ರಿಷಬ್‌ ಶೆಟ್ಟಿ. 

‘ಒಂದು ಅಚ್ಚ ಕನ್ನಡದ ಸಿನಿಮಾ ಇದು. ದೊಡ್ಡ ಬಜೆಟ್‌ನ ಪ್ಯಾನ್‌ ಇಂಡಿಯಾ ಸಿನಿಮಾಗಳಷ್ಟೇ ಸಿನಿಮಾಗಳಲ್ಲ. ಇಂತಹ ಸಿನಿಮಾಗಳೂ ಜನರಿಗೆ ಮನರಂಜನೆ ನೀಡುತ್ತದೆ. ಸಮಾಜಕ್ಕೆ ಒಳ್ಳೆಯ ಸಂದೇಶವನ್ನೂ ನೀಡುತ್ತದೆ. ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿಲ್ಲ. ನಿಗದಿತ ಪ್ರದರ್ಶನಗಳಷ್ಟೇ ಇರಲಿದೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಕಡೆ ಏಕಪರದೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಕೆಆರ್‌ಜಿ ಸಿನಿಮಾವನ್ನು ವಿತರಣೆ ಮಾಡಲಿದೆ’ ಎಂದರು ರಿಷಬ್‌.   

‘ಚಿತ್ರೋತ್ಸವಗಳಿಗಷ್ಟೇ ಸಿನಿಮಾ ಮಾಡುವುದು ನಮ್ಮ ನಿರ್ಮಾಣ ಸಂಸ್ಥೆಯ ಉದ್ದೇಶವಲ್ಲ. ಅಲ್ಲಿಗೆ ನಮ್ಮ ಸಿನಿಮಾಗಳು ಹೋಗುವ ಬಗ್ಗೆ ನನಗೆ ಹೆಮ್ಮೆ ಇದೆ. ಜೊತೆಗೆ ನಮ್ಮ ಜನರಿಗೂ ಇದು ತಲುಪಬೇಕು ಎನ್ನುವ ಉದ್ದೇಶ ಹೊಂದಿದ್ದೇನೆ. ‘ಶಿವಮ್ಮ’ ಬಳಿಕ ‘ಪೆದ್ರೊ’, ಪ್ರಮೋದ್‌ ಶೆಟ್ಟಿ ನಟನೆಯ ‘ಲಾಫಿಂಗ್‌ ಬುದ್ಧ’ ಬಿಡುಗಡೆಯಾಗಲಿದೆ’ ಎಂದು ರಿಷಬ್‌ ಮಾಹಿತಿ ನೀಡಿದರು. 

ಕಳೆದ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ‘ಶಿವಮ್ಮ’ ಪ್ರದರ್ಶನ ಕಂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT