ಶನಿವಾರ, ಜನವರಿ 29, 2022
19 °C

ಮರೆಯಾದ ನಿಜ ‘ಪೋಷಕ‘ ಪಾತ್ರಧಾರಿ ಶಿವರಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಚಿತ್ರರಂಗದ ಮೂರು ತಲೆಮಾರುಗಳನ್ನು ಕಂಡು ಹಿರಿಯ ನಟನಾಗಿ ಮಾತ್ರವಲ್ಲ, ಸಿನಿಮಾ ಕುಟುಂಬಕ್ಕೆ ಹಿರಿಯರ ಸ್ಥಾನದಲ್ಲಿದ್ದು ಬಾಳಿದವರು ನಟ ಎಸ್‌. ಶಿವರಾಂ. 

ಇದನ್ನೂ ಓದಿ: 

ಕರ್ನಾಟಕ – ತಮಿಳುನಾಡು ಗಡಿಭಾಗದ ಪುಟ್ಟಹಳ್ಳಿ ಚೂಡಸಂದ್ರ. ಪ್ರಾಥಮಿಕ ಶಿಕ್ಷಣ ಮುಗಿದ ಬಳಿಕ ಅವರನ್ನು ಸೆಳೆದದ್ದು ಬೆಂಗಳೂರು. ಸಹೋದರನೊಂದಿಗೆ ಬೆಂಗಳೂರು ಸೇರಿದರು. ಅವರಿಗೆ ಪ್ರಭಾವ ಬೀರಿದ್ದು ಗುಬ್ಬಿ ವೀರಣ್ಣ ಅವರ ನಾಟಕಗಳು. ಮುಂದೆ ಇದೇ ಅವರ ಬದುಕಿನ ದಿಕ್ಕು ಬದಲಾಯಿಸಿ ಬೆಳ್ಳಿ ತೆರೆಯತ್ತ ಕರೆದೊಯ್ದಿತು. 1958 ಅವರ ಬಣ್ಣದ ಬದುಕಿಗೆ ತಿರುವು ನೀಡಿದ ವರ್ಷ. ಆ ವರ್ಷ ನಿರ್ದೇಶಕ ಕು.ರಾ. ಸೀತಾರಾಮಶಾಸ್ತ್ರಿ ಅವರ ಸಹಾಯಕರಾಗಿ ಶಿವರಾಂ ಕೆಲಸ ಮಾಡುತ್ತಿದ್ದರು. ಅವರದೇ ನಿರ್ದೇಶನ, ನಿರ್ಮಾಣದ ಚಿತ್ರ ‘ಬೆರೆತ ಜೀವ’ದಲ್ಲಿ ಬಣ್ಣ ಹಚ್ಚಿದರು. ಅಲ್ಲಿಂದ ಈವರೆಗೆ ಸುಮಾರು 6 ದಶಕಗಳು ಕಳೆದಿವೆ. 86 ಚಿತ್ರಗಳಲ್ಲಿ ಅವರ ನಟನೆಯಿದೆ. ಧಾರಾವಾಹಿಗಳೂ ಸಾಕಷ್ಟಿವೆ. ಕ್ಯಾಮೆರಾ ಸಹಾಯಕ, ಸಹಾಯಕ ನಿರ್ದೇಶಕ, ನಿರ್ದೇಶಕ, ನಟ, ನಿರ್ಮಾಪಕರಾಗಿ ಅವರು ಚಂದನವನದ ನಿಜ ಅರ್ಥದ ‘ಪೋಷಕ’ರಾಗಿಯೇ ಹಿರಿತನ ಮೆರೆದರು.

1990ರ ದಶಕವನ್ನೊಮ್ಮೆ ಇಲ್ಲಿ ನೆನಪಿಸಬಹುದು. ಅದು ಚಂದನದಲ್ಲಿ ಕನ್ನಡ ಧಾರಾವಾಹಿಗಳು ಒಂದೊಂದಾಗಿ ಮಿಂಚುತ್ತಿದ್ದ ಕಾಲಘಟ್ಟ. ಆ ಧಾರಾವಾಹಿಗಳ ಪೈಕಿ ‘ಡಿಸ್ಕೋ ರಾಗ– ಆದಿ ತಾಳ’ ಹೆಚ್ಚು ವೀಕ್ಷಕರನ್ನು ಸೆಳೆದಿತ್ತು. ಮನೆ ಮಾಲೀಕನ ಪಾತ್ರದಲ್ಲಿ ಬೋಳು ತಲೆಯ ಶಿವರಾಂ ಅವರ ಸಂಭಾಷಣೆ, ಭಾವಾಭಿನಯ ಇಂದಿಗೂ ನಗು ತರಿಸುತ್ತದೆ. ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ‘ಗೃಹಭಂಗ’, ರವಿಕಿರಣ್ ನಿರ್ದೇಶನದ ‘ಬದುಕು’ ಧಾರಾವಾಹಿಗಳಲ್ಲೂ ಅವರ ಅಭಿನಯ ನೆನಪಿನಲ್ಲಿ ಉಳಿಯುವಂಥದ್ದು. 86ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಅವರ ಪಾತ್ರಗಳು ವೀಕ್ಷಕನ ಮನಸ್ಸಿನಲ್ಲಿ ಒಮ್ಮೆ ಅಚ್ಚೊತ್ತಿದರೆ ಮುಗಿಯಿತು, ಬೇರೆ ಯಾವುದೇ ನಟರನ್ನು ಆ ಜಾಗದಲ್ಲಿ ಊಹಿಸುವಂತೆ ಇಲ್ಲ. ಚಿತ್ರರಂಗದ ಮೂರು ತಲೆಮಾರುಗಳ ಬಗ್ಗೆ ಗಟ್ಟಿತನದಿಂದ ಅಧಿಕೃತವಾಗಿ ಮಾತನಾಡಬಲ್ಲ ಛಾತಿ ಹೊಂದಿದ್ದವರು.

ಸಂಗೀತಂ ಶ್ರೀನಿವಾಸ ರಾವ್‌, ಕೆಎಎಸ್‌ಎಲ್ ಸ್ವಾಮಿ, ಗೀತಪ್ರಿಯ ತರಹದ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡುವರು ಶಿವರಾಂ. ಬೊಮನ್ ಡಿ. ಇರಾನಿ ಅವರೊಟ್ಟಿಗೆ ಕ್ಯಾಮೆರಾ ಸಹಾಯಕರಾಗಿ ಅನುಭವ ಪಡೆದುಕೊಂಡದ್ದೂ ಅವರಿಗೆ ತಾಂತ್ರಿಕ ಪಾಠ ಕಲಿಸಿತ್ತು. 'ಗುರು ಶಿಷ್ಯರು' ಚಿತ್ರದ ಅಸಂಖ್ಯ ಹಾಸ್ಯಪಾತ್ರಧಾರಿಗಳ ನಡುವೆಯೂ ಶಿವರಾಂ ತಮ್ಮ ಛಾಪು ಮೂಡಿಸಿದ್ದರು. 'ಬನಶಂಕರಿ' ಚಿತ್ರದಲ್ಲಿನ ಅವರ ನೃತ್ಯ ತಾದಾತ್ಮ್ಯ, 'ಡ್ರೈವರ್ ಹನುಮಂತು'ವಿನಲ್ಲಿನ ಆತ್ಮವಿಶ್ವಾಸ ಇವೆಲ್ಲವೂ ಈಗಲೂ ನೆನಪಿಸಿಕೊಳ್ಳುವಂಥವು. ಹಾಸ್ಯನಟನಾಗಿದ್ದೂ ಗಂಭೀರ ರಸ ಬಯಸಿದಾಗ ಅವರು ಅದನ್ನು ತುಳುಕಿಸಿದ ಬಗೆಗೂ ಉದಾಹರಣೆಗಳಿವೆ. 
ಕಳೆದ ಕೆಲವು ವರ್ಷಗಳಿಂದ ಅವರಿಗೆ ಮೈಕ್ ಸಿಕ್ಕಿತೆಂದರೆ ಸಾಕು, ಮುಕ್ತವಾಗಿ ಸುದೀರ್ಘಾವಧಿ ಮಾತಾಡುತ್ತಿದ್ದರು. ಹೇಳಿಕೊಳ್ಳುವುದು ಅವರಿಗೆ ಸಾಕಷ್ಟಿತ್ತೆನ್ನುವುದಕ್ಕೆ ಅದು ಸಾಕ್ಷಿಯೋ ಏನೋ?

ಪಾತ್ರಕ್ಕೆ ಹಾಸ್ಯ ಲೇಪನ

ಹಾಸ್ಯದ ಪಂಚ್‌ ನೀಡುವಲ್ಲಿ ಶಿವರಾಂ ಅವರ ಸಮಯಪ್ರಜ್ಞೆ ಸಾಂಪ್ರದಾಯಿಕವಾಗಿರಲಿಲ್ಲ ಎಂದು ಗುರುತಿಸುತ್ತಾರೆ ಸಿನಿಮಾ ವಿಶ್ಲೇಷಕ ಕೆ.ಪುಟ್ಟಸ್ವಾಮಿ. ‘ನರಸಿಂಹರಾಜು ಹಾಗೂ ಬಾಲಕೃಷ್ಣ ಅವರು ಹಾಸ್ಯಪಾತ್ರಗಳಲ್ಲಿ ಬಹಳ ಖ್ಯಾತಿ ಪಡೆದಿದ್ದರು. ದೃಶ್ಯ, ಪರಿಸ್ಥಿತಿಗೆ ತಕ್ಕಂತೆ ಹಾಸ್ಯ ಮಾಡುತ್ತಿದ್ದರು. ಆದರೆ ಶಿವರಾಂ ಅವರು ನಗಿಸಲೇಬೇಕು ಎನ್ನುವ ಪ್ರಯತ್ನ ಮಾಡುತ್ತಿರಲಿಲ್ಲ. ಅವರ ಪಾತ್ರಗಳು ಭಿನ್ನವಾಗಿರುತ್ತಿತ್ತು. ತಾವು ಮಾಡುತ್ತಿದ್ದ ಪಾತ್ರಕ್ಕೇ ಹಾಸ್ಯವನ್ನು ಲೇಪನ ಮಾಡುವ ಸಾಮರ್ಥ್ಯ ಅವರಿಗಿತ್ತು. ಉದಾಹರಣೆಗೆ ಶರಪಂಜರದಲ್ಲಿ ಅವರು ಮಾಡಿದ ‘ಅಡಿಗೆ ಭಟ್ಟ’ನ ಪಾತ್ರ. ಅಲ್ಲಿಯವರೆಗೂ ‘ಅಡಿಗೆ ಭಟ್ಟ’ನ ಪಾತ್ರದಲ್ಲಿ ಹಾಸ್ಯವೇ ಇರಲಿಲ್ಲ. ‘ನಾಗರಹಾವು’ ಸಿನಿಮಾದಲ್ಲಿ ‘ವರದ’ನಾಗಿ, ‘ಎಡಕಲ್ಲು ಗುಡ್ಡದ ಮೇಲೆ’, ‘ದೇವರ ಗುಡಿ’, ಶುಭಮಂಗಳ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳೇ ಅವರ ಸಿನಿ ಪಯಣದಲ್ಲಿದೆ’ ಎನ್ನುತ್ತಾರೆ ಪುಟ್ಟಸ್ವಾಮಿ.

‘ರಾಶಿ ಬ್ರದರ್ಸ್‌’ ನಿರ್ಮಾಣ ಸಂಸ್ಥೆ 

ಸಹೋದರ ಎಸ್.ರಾಮನಾಥನ್‍ರವರೊಂದಿಗೆ ಸೇರಿ ರಾಶಿ ಬ್ರದರ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ನಾಲ್ಕು ಚಿತ್ರಗಳನ್ನು ನಿರ್ಮಿಸಿದರು. ಗೆಜ್ಜೆಪೂಜೆ, ಉಪಾಸನೆ, ನಾನೊಬ್ಬ ಕಳ್ಳ, ಡ್ರೈವರ್‌ ಹನುಮಂತು ಆ ಚಿತ್ರಗಳು. 86 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. 2013ರಲ್ಲಿ ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದರು. ಪುಟ್ಟಣ್ಣ ಕಣಗಾಲ್‌ ಅವರಂಥ ದಿಗ್ಗಜರೊಂದಿಗೆ ಕೆಲಸ ಮಾಡಿದವರು. ಕಣಗಾಲ್‌ ನಿರ್ದೇಶನದ ಶರಪಂಜರ, ನಾಗರಹಾವು, ಶುಭಮಂಗಳದಲ್ಲಿ ಶಿವರಾಂ ಅಭಿನಯವನ್ನು ಪ್ರೇಕ್ಷಕರು ಮರೆತಿಲ್ಲ. ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು, ಸಿಂಹದಮರಿ ಸೈನ್ಯ, ಮಕ್ಕಳ ಸೈನ್ಯ ಚಿತ್ರದ ಪಾತ್ರಗಳೂ ಇದೇ ಸಾಲಿನಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು