ದುಬೈ: ಹಾಲಿ ಚಾಂಪಿಯನ್ ಭಾರತ ತಂಡ, ಮುಂದಿನ ವರ್ಷ ನಡೆಯಲಿರುವ 19 ವರ್ಷದೊಳಗಿನವರ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ತಂಡದ ವಿರುದ್ಧ ಆಡಲಿದೆ. ಶ್ರೀಲಂಕಾದಲ್ಲಿ ಜನವರಿ 13 ರಿಂದ ಫೆಬ್ರುವರಿ 4ರವರೆಗೆ ಈ ಟೂರ್ನಿ ನಡೆಯಲಿದೆ.
ಒಟ್ಟು 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಕೊಲಂಬೊದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ತಿಳಿಸಿದೆ.
ಕಳೆದ ವರ್ಷ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಸೇರಿದಂತೆ ಭಾರತ ಒಟ್ಟು ಐದು ಬಾರಿ ಚಾಂಪಿಯನ್ ಆಗಿದ್ದು ವಿಶ್ವಕಪ್‌ನ ಅತ್ಯಂತ ಯಶಸ್ವಿ ತಂಡ ಎನಿಸಿದೆ.
ಭಾರತ ತಂಡವು, ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಅಮೆರಿಕ ಜೊತೆ ‘ಎ’ ಗುಂಪಿನಲ್ಲಿದೆ. ಭಾರತ, ಜ. 18ರಂದು ಅಮೆರಿಕ ವಿರುದ್ಧ, 20ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಒಟ್ಟು ನಾಲ್ಕು ಗುಂಪುಗಳಿದ್ದು, ಮೊದಲ ಮೂರು ಸ್ಥಾನ ಪಡೆದ ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಏರಲಿವೆ. ಈ 12 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ‘ಎ’ ಮತ್ತು ‘ಡಿ’ ಗುಂಪಿನಲ್ಲಿ ಮೂರು ಸ್ಥಾನ ಪಡೆದ ತಂಡಗಳು ಒಂದನೇ ಗುಂಪಿನಲ್ಲಿದ್ದರೆ, ‘ಬಿ’ ಮತ್ತು ‘ಸಿ’ ಗಂಪಿನ ತಂಡಗಳು ಎರಡನೇ ಗುಂಪಿನಲ್ಲಿ ಇರುತ್ತವೆ.
ಗುಂಪು ಹಂತದಲ್ಲಿ ಪಡೆದ ಸ್ಥಾನಗಳನ್ನು ಆಧರಿಸಿ, ತಂಡಗಳು ಮುಖಾಮುಖಿ ಆಗಲಿವೆ. ಉದಾಹರಣೆಗೆ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡ, ಡಿ ಗುಂಪಿನಲ್ಲಿ ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎದುರು ಆಡಲಿದೆ. ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡ, ಡಿ ಗುಂಪಿನಲ್ಲಿ ಒಂದು ಮತ್ತು ಮೂರನೇ ಸ್ಥಾನ ಪಡೆದ ತಂಡಗಳನ್ನು ಎದುರಿಸುತ್ತದೆ ಎಂದು ಐಸಿಸಿ ಈ ಮಾದರಿಯನ್ನು ವಿವರಿಸಿದೆ.
ಈ ಎರಡು ಗುಂಪುಗಳಲ್ಲಿ ಪಂದ್ಯಗಳು ನಡೆದು ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲಿವೆ. ಫೈನಲ್ ಪಂದ್ಯ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಫೆಬ್ರುವರಿ 4ರಂದು ನಿಗದಿಯಾಗಿದೆ.
ಆತಿಥೇಯ ಶ್ರೀಲಂಕಾ, ಅಫ್ಗಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ನೇರವಾಗಿ ಅರ್ಹತೆ ಪಡೆದಿವೆ. ಪ್ರಾದೇಶಿಕ ಅರ್ಹತಾ ಸುತ್ತಿನ ಮೂಲಕ ಟೂರ್ನಿಗೆ ಅರ್ಹತೆ ಪಡೆದ ತಂಡಗಳು– ನಮೀಬಿಯಾ, ನೇಪಾಳ, ನ್ಯೂಜಿಲೆಂಡ್, ಸ್ಕಾಟ್ಲೆಂಡ್ ಮತ್ತು ಅಮೆರಿಕ. ಐದು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.