‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ರ ಸಂಭ್ರಮದಲ್ಲಿ ಜೀವಮಾನ ಸಾಧನೆಯ ಪುರಸ್ಕಾರ ಪಡೆದಿರುವ ಶ್ರೀನಾಥ್ ಅವರ ಜೀವನ–ಸಾಧನೆ, ಕನ್ನಡ ಚಿತ್ರರಂಗದ ಮೋಹಕ ಅಧ್ಯಾಯಗಳಲ್ಲೊಂದು.

ಮೈಸೂರಿನ ನಾರಾಯಣ ಸ್ವಾಮಿ ಎನ್ನುವ ಕನಸು ಕಂಗಳ ತರುಣ ಶ್ರೀನಾಥ್ ಹೆಸರಿನಲ್ಲಿ ಜನಪ್ರಿಯ ಕಲಾವಿದನಾಗಿ ರೂಪುಗೊಂಡಿದ್ದು ಕನ್ನಡ ಸಿನಿಮಾ ಚರಿತ್ರೆಯ ವಿಶೇಷ ಅಧ್ಯಾಯ. ಹವ್ಯಾಸಿ ರಂಗಭೂಮಿಯಲ್ಲಿ ಹುಮ್ಮಸ್ಸಿನಿಂದ ತೊಡಗಿಸಿಕೊಂಡಿದ್ದ ತರುಣ ನಟನಿಗೆ ‘ಲಗ್ನಪತ್ರಿಕೆ’ ಸಿನಿಮಾದ ಪುಟ್ಟ ಪಾತ್ರದ ಮೂಲಕ ಕನ್ನಡ ಚಿತ್ರರಂಗ ಬಾಗಿಲು ತೆರೆಯಿತು. ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಹಾಗೂ ಶ್ರೀನಾಥ್ ಎನ್ನುವ ಹೆಸರಿಗೆ ಕಾರಣವಾದ ‘ಮಧುರ ಮಿಲನ’ ಸಿನಿಮಾದ ಶೀರ್ಷಿಕೆ ಅವರ ಇಡೀ ವೃತ್ತಿಜೀವನಕ್ಕೂ ಅನ್ವಯಿಸುವಂತಹದ್ದು.

ಬೆಳ್ಳಿತೆರೆಯ ಬಣ್ಣದ ಓಣಿಗಳಲ್ಲಿ ಶ್ರೀನಾಥ್ ಅಳುಕಿನಿಂದ ಹೆಜ್ಜೆ ಹಾಕುತ್ತಿದ್ದ ಸಂದರ್ಭ, ಕನ್ನಡ ಚಿತ್ರರಂಗ ಹೊಸ ಹೊರಳಿಗೆ ತನ್ನನ್ನೊಡ್ಡಿಕೊಳ್ಳುತ್ತಿದ್ದ ಸಂದರ್ಭವೂ ಹೌದು. ಜನಪರತೆ ಮತ್ತು ಜನಪ್ರಿಯತೆಯ ಅಪೂರ್ವ ಸಮೀಕರಣದಂತೆ ರೂಪುಗೊಳ್ಳುತ್ತಿದ್ದ ಮುಖ್ಯವಾಹಿನಿ ಸಿನಿಮಾಗಳು ಸಹೃದಯರ ಮನಸ್ಸು ಗೆಲ್ಲುವುದರ ಜೊತೆಗೆ, ವ್ಯಾಪಾರಿ ಲೆಕ್ಕಾಚಾರದಲ್ಲೂ ಯಶಸ್ಸು ಕಾಣುತ್ತಿದ್ದವು. ಕಲಾತ್ಮಕ ಸಾಧ್ಯತೆಗಳ ಹುಡುಕಾಟವನ್ನೇ ಮುಖ್ಯವಾಗಿಸಿಕೊಂಡ ಪ್ರಯೋಗಶೀಲ ಸಿನಿಮಾಗಳೂ ಜನರ ಗಮನಸೆಳೆಯುತ್ತಿದ್ದವು. ಎಲ್ಲ ದೃಷ್ಟಿಯಿಂದಲೂ ಅದು ಕನ್ನಡ ಚಿತ್ರರಂಗಕ್ಕೆ ಉತ್ಕರ್ಷದ ಸಮಯ. ರಾಜ್ಕುಮಾರ್ ಮುಂಚೂಣಿಯಲ್ಲಿದ್ದ ಕಲಾವಿದರ ಬಳಗ ತಾರಾವರ್ಚಸ್ಸಿನ ಹೊಳಪು ಕುದುರಿಸಿಕೊಳ್ಳುತ್ತಿದ್ದ ದಿನಗಳಲ್ಲೇ ಎನ್. ಲಕ್ಷ್ಮೀನಾರಾಯಣ್, ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ ಅವರಂಥ ನಿರ್ದೇಶಕರೂ ಜನಮನ್ನಣೆ ಪಡೆದಿದ್ದರು. ಮುಖ್ಯವಾಹಿನಿ ಹಾಗೂ ಕಲಾತ್ಮಕ ಎರಡೂ ಬಗೆಗಳಲ್ಲಿ ಕನ್ನಡ ಚಿತ್ರರಂಗ ತನ್ನ ಅತ್ಯುತ್ತಮ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿದ್ದ ದಿನಗಳಲ್ಲಿ, ಶ್ರೀನಾಥ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ದಾರಿ ಕಂಡುಕೊಳ್ಳುವ ಪ್ರಯತ್ನ ನಡೆಸಿದರು, ಯಶಸ್ವಿಯೂ ಆದರು.

ಶ್ರೀನಾಥ್ ಅವರದ್ದು ತಾರೆಗಳ ತೋಟದಲ್ಲಿ ಪ್ರಖರವಾಗಿ ಕಾಣಿಸುವ ಮುಖವಲ್ಲ. ಆದರೆ, ಮಂದಸ್ಮಿತ ತಾರೆಯೊಂದು ತನ್ನ ತಂಪಿನ ಕಾರಣದಿಂದಲೇ ಸಹೃದಯರ ಗಮನಸೆಳೆಯುವಂತೆ, ಶ್ರೀನಾಥ್ ಚಿತ್ರರಸಿಕರ ಚಿತ್ತಭಿತ್ತಿಯಲ್ಲಿ ತಮ್ಮದೂ ಒಂದು ರುಜು ಮೂಡಿಸಿದರು.

ಪುರಾಣ ಇಲ್ಲವೇ ಐತಿಹಾಸಿಕ ಕಥನಗಳ ಗಡುಸು ಪಾತ್ರಗಳಿಗೆ ಅಹುದಹುದೆನ್ನುವ ಶರೀರ ಮತ್ತು ಶಾರೀರ ಎರಡೂ ಅವರದಾಗಿರಲಿಲ್ಲ. ತಾರಾವರ್ಚಸ್ಸಿನ ನಾಯಕನಟರು ಸಾಹಸಪ್ರಧಾನ ಪಾತ್ರಗಳಲ್ಲಿ ಮಿಂಚುತ್ತಿದ್ದಾಗ, ಶ್ರೀನಾಥರ ಸೌಮ್ಯ ವ್ಯಕ್ತಿತ್ವಕ್ಕೆ ಹೊಂದುವ ಪಾತ್ರಗಳು ಅವರನ್ನು ಹುಡುಕಿಕೊಂಡು ಬಂದವು. ಪ್ರೇಮಸೌಗಂಧಿಕಾ ಸ್ಪರ್ಶದ ಕಥನಗಳಿಗವರು ಜೀವತುಂಬಿದರು. ಅವರ ಕಣ್ಣುಗಳಲ್ಲಿನ ಆರ್ದ್ರತೆ ಮಾತಿನಲ್ಲೂ ತುಳುಕುವಂತಿದ್ದುದು ಚಿತ್ರರಸಿಕರಿಗೆ ಇಷ್ಟವಾಯಿತು. ಹಾಗೆ ಇಷ್ಟಪಟ್ಟವರು ಪ್ರೀತಿಯಿಂದ ‘ಪ್ರಣಯರಾಜ’ ಎಂದು ಕರೆದರು. ‘ಗರುಡರೇಖೆ’, ‘ರಾಮ ಪರಶುರಾಮ’, ‘ಮಾನಸ ಸರೋವರ’ದಂಥ ವಿಭಿನ್ನ ಕಥನಗಳ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದರೂ, ಶ್ರೀನಾಥ್ ಜನಮನದಲ್ಲಿ ನೆಲೆ ನಿಂತಿರುವುದು ಪ್ರಣಯ ಪ್ರಧಾನ ಪಾತ್ರಗಳಲ್ಲೇ.

ಸಿನಿಮಾ ಜೀವನದ ಷಷ್ಟ್ಯಬ್ದಿಯ ಹೊಸ್ತಿಲಲ್ಲಿ ನಿಂತಿರುವ ಶ್ರೀನಾಥ್ ಅವರ ಆರು ದಶಕಗಳ ಅವಧಿಯ ಸಾಧನೆ ನಿಬ್ಬೆರಗುಗೊಳಿಸುವಂತಹದ್ದು. ಮುನ್ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹಿರಿಮೆ ಅವರದು. ನಟನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಅವರು, ಅಕ್ಕರೆ ತುಂಬಿದ ಮೆಲು ಮಾತು ಹಾಗೂ ವಿನಯಕ್ಕೆ ಮಾದರಿ. ‘ಬೆಸುಗೆ’, ‘ಶುಭಮಂಗಳ’, ‘ಮಾನಸ ಸರೋವರ’, ‘ಗರುಡರೇಖೆ’, ‘ಪಾಯಿಂಟ್ ಪರಿಮಳ’, ‘ಯಾರಿವನು’, ‘ಶ್ರೀರಾಘವೇಂದ್ರ ವೈಭವ’, ‘ಬಂಗಾರದ ಮನುಷ್ಯ’, ‘ಶ್ರಾವಣ ಬಂತು’, ‘ಬಡ್ಡಿ ಬಂಗಾರಮ್ಮ’, ‘ಗಂಡ ಮನೆ ಮಕ್ಕಳು’, ‘ಪಟ್ಟಣಕ್ಕೆ ಬಂದ ಪತ್ನಿಯರು’, ‘ರಾಮ ಪರಶುರಾಮ’, ‘ಧರಣಿ ಮಂಡಲ ಮಧ್ಯದೊಳಗೆ’ – ಕನ್ನಡ ಚಿತ್ರರಸಿಕರ ಎದೆಯಂಗಳದಲ್ಲಿ ಶ್ರೀನಾಥ್ ನೆಟ್ಟ ಸೌಗಂಧಿಕಾಪುಷ್ಪಗಳು ಹಲವು. ‘ಮಾನಸ ಸರೋವರ’ ಚಿತ್ರದಲ್ಲಿನ ಹೃದಯವಂತ ಮನೋವೈದ್ಯ, ‘ಶುಭಮಂಗಳ’ದಲ್ಲಿ ನಾಯಕಿಗೆ ಬದುಕಿನ ಲೆಕ್ಕ ಹೇಳಿಕೊಟ್ಟ ನಾಯಕ, ‘ಶ್ರೀರಾಘವೇಂದ್ರ ವೈಭವ’ದಲ್ಲಿ ರಾಯರ ಪಾತ್ರ, ‘ರಾಮ ಪರಶುರಾಮ’ ಚಿತ್ರದಲ್ಲಿನ ಪುರಾಣಪ್ರಭೆಯ ಪರಶುಧಾರಿ – ಶ್ರೀನಾಥ್ ಪ್ರತಿಭಾವಿಲಾಸಕ್ಕೆ ಕೆಲವು ನಿದರ್ಶನಗಳಷ್ಟೇ.

‘ಶಿಕಾರಿ’, ‘ಬಾಳೊಂದು ಭಾವಗೀತೆ’ ಹಾಗೂ ‘ಮಾನಸ ಸರೋವರ’ ಶ್ರೀನಾಥ್ರಿಗೆ ನಿರ್ಮಾಪಕರಾಗಿ ಹೆಸರು ತಂದುಕೊಟ್ಟ ಸಿನಿಮಾಗಳು. ಪುಟ್ಟಣ್ಣ ಕಣಗಾಲ್ ಅವರಿಗೆ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬಿ, ಹೊಸ ಸಿನಿಮಾದ ನಿರ್ದೇಶನಕ್ಕೆ ಗುರುವಿಗೆ ಆಸರೆಯಾಗಿ ನಿಂತದ್ದು ಶ್ರೀನಾಥ್ರ ಸಿನಿಮಾ ಜೀವನದ ಸಾರ್ಥಕ ಕ್ಷಣಗಳಲ್ಲೊಂದು. ಶ್ರೀನಾಥ್ ಹಾಗೂ ಮಂಜುಳಾ ಅವರದು ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲೊಂದು.

‘ಶ್ರೀರಾಘವೇಂದ್ರ ವೈಭವ’ ಚಿತ್ರದಲ್ಲಿನ ನಟನೆಗಾಗಿ ಶ್ರೇಷ್ಠ ನಟ ರಾಜ್ಯ ಪ್ರಶಸ್ತಿ ಹಾಗೂ ಜೀವಮಾನ ಸಾಧನೆಗಾಗಿ ಕರ್ನಾಟಕ ಸರ್ಕಾರದ ‘ರಾಜ್ಕುಮಾರ್ ಪ್ರಶಸ್ತಿ’ ಶ್ರೀನಾಥ್ ಅವರಿಗೆ ಸಂದಿರುವ ಪ್ರಮುಖ ಗೌರವಗಳು. ಎಂಬತ್ತೆರಡು ವಸಂತಗಳ ಈ ಅನನ್ಯ ಕಲಾವಿದನಿಗೆ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ರ ಸಂಭ್ರಮದ ಸಂದರ್ಭದಲ್ಲಿ ಜೀವಮಾನ ಸಾಧನೆಯ ಪುರಸ್ಕಾರ.

ತೊಂಬತ್ತು ವರ್ಷಗಳನ್ನು ದಾಟಿ ನೂರನೇ ವರ್ಷದತ್ತ ಹೆಜ್ಜೆ ಇಟ್ಟಿರುವ ಚಿತ್ರೋದ್ಯಮ, ಬದಲಾದ ಕಾಲಘಟ್ಟಕ್ಕೆ ಹೊಂದಿಕೊಳ್ಳಲು ಏದುಸಿರುಪಡುತ್ತಿರುವ ದಿನಗಳಿವು. ಈ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಬತ್ತರ ಏರು ದಾಟಿ ಮುನ್ನಡೆದಿರುವ ಶ್ರೀನಾಥ್ ಅವರ ಜೀವನ–ಸಾಧನೆಯಲ್ಲಿ ಪ್ರೇರಣೆಯ ಬೀಜಗಳಿವೆ.

ಪ್ರೇಮಕಥೆಗಳಲ್ಲಿ ನಟಿಸಿ 'ಪ್ರಣಯರಾಜ’ರಾದ ಶ್ರೀನಾಥ್

‘ಪ್ರೇಮಕಥೆಗಳನ್ನು ಹೊಂದಿರುವ ಸಿನಿಮಾಗಳಲ್ಲಿಯೇ ಹೆಚ್ಚು ನಟಿಸಿರುವ ಕಾರಣಕ್ಕೆ ಶ್ರೀನಾಥ್ ಅವರಿಗೆ ‘ಪ್ರಣಯರಾಜ’ ಎಂಬ ಬಿರುದು ಬಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದಲ್ಲಿ ಶ್ರೀನಾಥ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ‘ಇಡೀ ಜೀವನವನ್ನು ಕಲಾಸೇವೆಯಲ್ಲಿಯೇ ಕಳೆದಿರುವ ಶ್ರೀನಾಥ್ ಅವರನ್ನು ಜೀವಮಾನದ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸರಿಯಾದ ವ್ಯಕ್ತಿಯನ್ನು ಈ ಪ್ರಶಸ್ತಿಗೆ ‘ಪ್ರಜಾವಾಣಿ’ ಆಯ್ಕೆ ಮಾಡಿದೆ’ ಎಂದು ಶ್ಲಾಘಿಸಿದರು.

‘ಸಿನಿಮಾ ಅಂದರೆ ಮನರಂಜನೆ ಒಂದೇ ಅಲ್ಲ. ಕನ್ನಡದ ಕಂಪು, ನಮ್ಮ ಸಂಸ್ಕೃತಿ, ಕನ್ನಡ ಭಾಷೆಯ ವೈಭವನ್ನು ಎತ್ತಿ ಹಿಡಿಯುವ ಕೆಲಸ. ಇದನ್ನು ಶ್ರೀನಾಥ್ ಆಸಕ್ತಿಯಿಂದ ಮಾಡಿಕೊಂಡು ಬಂದಿದ್ದಾರೆ. ಸಿನಿಮಾರಂಗಕ್ಕೆ ಒಮ್ಮೆ ಬಂದ ಮೇಲೆ ಬಿಡಲಾಗುವುದಿಲ್ಲ. ನೀವು ಶಕ್ತಿ ಇರುವವರೆಗೆ ನಟಿಸುತ್ತಲೇ ಇರಿ’ ಎಂದು ಹಾರೈಸಿದರು.

‘ನಾನು ವಿದ್ಯಾರ್ಥಿಯಾಗಿದ್ದಾಗ, ವಕೀಲನಾಗಿದ್ದಾಗ ಬಹಳ ಸಿನಿಮಾಗಳನ್ನು ನೋಡಿದ್ದೇನೆ. ರಾಜಕುಮಾರ್ ಅವರ ಚಿತ್ರಗಳು, ಶ್ರೀನಾಥ್ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಅದರಲ್ಲಿ ಮಂಜುಳಾ ಮತ್ತು ಶ್ರೀನಾಥ್ ಜೋಡಿಯ ಚಿತ್ರಗಳೇ ಹೆಚ್ಚು ಇದ್ದವು’ ಎಂದು ನೆನಪು ಮಾಡಿಕೊಂಡರು.

‘ಕಲಾವಿದರಿಗೆ ಕಲಾಸೇವೆ ಮುಖ್ಯ. ರಾಜಕೀಯದಲ್ಲಿ ಇರುವವರಿಗೆ ಜನಸೇವೆಯೇ ಮುಖ್ಯ. ಶ್ರೀನಾಥ್ ಅವರು ಒಂದು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿ ಜನಪರ ಧೋರಣೆ ಇಟ್ಟುಕೊಂಡು ಕೆಲಸ ಮಾಡಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.